ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರ ಕನ್ನಡ ನಿಜವಾದ ಕನ್ನಡ : ಸಿದ್ದಲಿಂಗಯ್ಯ

By * ಕೆ.ಆರ್. ಸೋಮ್‌ನಾಥ್
|
Google Oneindia Kannada News

Prof Siddalingaiah and others
ಶಿವಮೊಗ್ಗ, ಸೆ. 11 : ಯಾವುದೇ ಭಾಷೆ ಜೀವಂತವಾಗಿರಲು ಆಡು ಮಾತುಗಳೇ ಕಾರಣವಾಗುತ್ತವೆ. ಶಿಷ್ಟರಾಗುತ್ತಾ ಹೋದ ಹಾಗೆ ಭಾಷೆ ದುರ್ಬಲವಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ, ಕವಿ ಪ್ರೊ: ಸಿದ್ದಲಿಂಗಯ್ಯ ಹೇಳಿದ್ದಾರೆ.

ಅವರು ನಗರದ ಹೊರ ವಲಯದಲ್ಲಿರುವ ಪಿಇಎಸ್ ಕಾಲೇಜಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಕನ್ನಡ ಸೊಗಡಿನ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು. ಕನ್ನಡ ಉಳಿದು ಬೆಳೆಯುತ್ತಿರುವುದು ನಮ್ಮ ಜಾನಪದರಿಂದ. ನಮ್ಮ ಗ್ರಾಮೀಣ ಮಹಿಳೆಯರು, ಹಳ್ಳಿಯ ರೈತರು, ಕಾರ್ಮಿಕರು ಕನ್ನಡವನ್ನು ಬೆಳೆಸುತ್ತಿದ್ದಾರೆ. ಅವರ ಆಡು ಮಾತುಗಳೇ ನಿಜವಾದ ಕನ್ನಡ ಭಾಷೆ. ತಾಯಂದಿರು ಬಳಸುವ ನುಡಿಗಟ್ಟುಗಳು, ರೂಪಕಗಳು ಕನ್ನಡದ ಆಸ್ತಿ. ಪಂಡಿತರಿಂದ ಕನ್ನಡ ಉಳಿಯಲಾರದು ಮತ್ತು ಬೆಳೆಯಲಾರದು ಕೂಡ. ಭಾಷೆ ಶ್ರೀಮಂತವಾಗುವುದು ಬಡವರ ಮಾತುಗಳಿಂದ ಹಾಗಾಗಿಯೇ ಬಡವರ ಕನ್ನಡ ನಿಜವಾದ ಕನ್ನಡ ಎಂದರು.

ಜಾನಪದರಿಂದ ಭಾಷೆ ಗಟ್ಟಿಯಾಗುತ್ತದೆ. ಕಳೆದುಕೊಂಡ ಧ್ವನಿಗಳನ್ನು ಸೊಗಡನ್ನು ನಾವು ಅವರಿಂದಲೇ ಪಡೆಯಬೇಕು. ಶಿಷ್ಟತೆ ಭಾಷೆಯನ್ನು ದುರ್ಬಲಗೊಳಿಸುತ್ತದೆ. ಈ ಶಿಷ್ಟಾಚಾರದ ಪರಿಣಾಮವಾಗಿಯೇ ನಾವು ಕನ್ನಡವನ್ನು ಬಿಟ್ಟುಕೊಡುತ್ತಿದ್ದೇವೆ. ಉಪಸಂಸ್ಕೃತಿಗಳ ಅವಸಾನಕ್ಕೂ ಕೂಡ ಇದೇ ಕಾರಣವಾಗುತ್ತದೆ ಎಂದ ಅವರು ನಿಜವಾದ ಕನ್ನಡ ಉಳಿದಿರುವುದೇ ಆಡು ಮಾತುಗಳಲ್ಲಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಾಗರದ ಸಾಹಿತಿ ನಾ.ಡಿಸೋಜ, ಭಾಷೆ ಬೆಳೆಯಲು ಅದರಲ್ಲಿರುವ ನುಡಿಗಟ್ಟುಗಳನ್ನು ಹೊರತೆಗೆಯಬೇಕು. ಗ್ರಾಮೀಣರು ಆಡುವ ಭಾಷೆ ಇಂದು ತಾತ್ಸರಕ್ಕೆ ಒಳಗಾಗಿದೆ. ನುಡಿಗಟ್ಟುಗಳು ಕೂಡ ತಿರಸ್ಕಾರಕ್ಕೆ ಒಳಗಾಗಿವೆ, ಇದು ಸರಿಯಲ್ಲ ಎಂದರು.

ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ: ಎಂ.ಎಸ್.ಕೃಷ್ಣಯ್ಯ, ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಬೆಳೆಸುವುದೇ ಇಂತಹ ಕಾರ್ಯಕ್ರಮಗಳ ಉದ್ದೇಶ. ಯಾವುದೇ ಮಗು ಲಿಪಿಯನ್ನು ನೋಡಿ ಭಾಷೆಯನ್ನು ಕಲಿಯುವುದಿಲ್ಲ. ಮಗು ಕಲಿಯುವ ಭಾಷೆಯೇ ನಿಜವಾದ ಭಾಷೆ. ಭಾಷೆ ಎನ್ನುವುದು ಸಾಮಾಜಿಕ ಒಡನಾಟ, ಅದೊಂದು ಆಲೋಚನೆ, ಭಾಷೆ ನಮ್ಮನ್ನು ತಿದ್ದುತ್ತದೆ ಮತ್ತು ನಿಯಂತ್ರಿಸುತ್ತದೆ. ಯಾವ ಭಾಷೆಯೂ ಮೇಲೂ ಅಲ್ಲ, ಕೀಳೂ ಅಲ್ಲ. ಅದು ನಮ್ಮ ಅಗತ್ಯತೆಗಳನ್ನು ಪೂರೈಸುವುದರಿಂದ ಅದು ಮಹತ್ವವಾಗಿಯೇ ಉಳಿದು ಕೊಳ್ಳುತ್ತದೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಮಾತನಾಡಿ, ಕನ್ನಡದಲ್ಲಿ ಏನಿದೆ ಎಂಬ ಪ್ರಶ್ನೆಗೆ ಉತ್ತರ ಕೊಡುವುದೆ ಈ ಸಮಾವೇಶದ ಉದ್ದೇಶ. ಭಾಷೆಗೆ ಪೋಷಣೆ ಅಗತ್ಯ, ಕಂಠಸ್ಥವೇ ನಿಜವಾದ ಭಾಷೆ. ಗ್ರಂಥಸ್ಥ ಅದೇನಿದ್ದರೂ ಸಾಹಿತ್ಯವಾಗುತ್ತದೆ ಎಂದ ಅವರು ಕನ್ನಡಿಗರಿಗೆ ಉದ್ಯೋಗ, ಆಡಳಿತದಲ್ಲಿ ಕನ್ನಡ ಜಾರಿಯಾಗದಿರುವುದು ವಿಷಾದನೀಯ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಪಿಇಎಸ್ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ್ ಪಿ.ಬಳಿಗಾರ್, ಬಿ.ವೈ.ಅರುಣಾದೇವಿ, ಶಾಂತರಸ ಸೇರಿದಂತೆ ಹಲವರು ಹಾಜರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X