ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕಲಾಂಗ ಮಕ್ಕಳಿಗೆ ಉದ್ಯಾನವನ : ಸುರೇಶ್‌ಕುಮಾರ್

By Staff
|
Google Oneindia Kannada News

ಬೆಂಗಳೂರು, ಆ. 27 : ಬಿಬಿಎಂಪಿ ವ್ಯಾಪ್ತಿಗೆ ಬರುವ ಬೆಂಗಳೂರಿನ ಎಲ್ಲಾ ಬೃಹತ್ ಉದ್ಯಾನವನಗಳಲ್ಲಿ ವಿಕಲಚೇತನ ಮಕ್ಕಳಿಗಾಗಿ ವಿಶೇಷ ಆಟೋಪಕರಣಗಳನ್ನು ಅಳವಡಿಸಿ ವಿಶೇಷ ಉದ್ಯಾನವನ ನಿರ್ಮಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಬಿಬಿಎಂಪಿ ಗೆ ಸೂಚಿಸಲಾಗುವುದು ಎಂದು ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದ್ದಾರೆ.

ರಾಜಾಜಿನಗರದ ಗಾಯತ್ರಿದೇವಿ ಉದ್ಯಾನವನದಲ್ಲಿ ವಿಕಲಚೇತನ ಮಕ್ಕಳಿಗಾಗಿ ಹೊಸದಾಗಿ ನಿರ್ಮಿಸಲಾದ ವಿಶೇಷ ಉದ್ಯಾನವನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿಕಲಚೇತನ ಮಕ್ಕಳು ಸಮಾಜದ ಮುಖ್ಯವಾಹಿನಿಯಲ್ಲಿ ಇತರ ಮಕ್ಕಳಂತೆಯೇ ಸಹಜ ಆಟೋಟಗಳಲ್ಲಿ ಭಾಗಿಯಾಗಬೇಕು ಎಂಬ ಉದ್ದೇಶದಿಂದ 25 ಲಕ್ಷ ರೂ.ಗಳ ವೆಚ್ಚದಲ್ಲಿ ಈ ಮಕ್ಕಳಿಗಾಗಿ ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾದ ಆಟೋಪಕರಣಗಳನ್ನು ಇಲ್ಲಿ ಅಳವಡಿಸಲಾಗಿದೆ. ಅವರಿಗಾಗಿಯೇ ವಿಶೇಷ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.

ಇಂತಹ ವಿಶೇಷ ಉದ್ಯಾನವನ ನಗರದ ಕೋಲ್ಸ್ ಪಾರ್ಕಿನ ಉದ್ಯಾನವನದಲ್ಲಿ ಮಾತ್ರ ಇತ್ತು. ಈಗ ಇಂತಹ ಸೌಲಭ್ಯ ಇರುವ ಎರಡನೆಯ ಪಾರ್ಕ್ ಎಂಬ ಹೆಗ್ಗಳಿಕೆ ಗಾಯತ್ರಿದೇವಿ ಉದ್ಯಾನವನದ್ದಾಗಿದೆ ಎಂದು ಸಚಿವ ಸುರೇಶ್‌ಕುಮಾರ್ ಹೇಳಿದರು. ಇಂತಹ ಉದ್ಯಾನವನಗಳು ಹೆಚ್ಚು ಅಗತ್ಯವಿದೆ. ಏಕೆಂದರೆ ವಿಕಲಚೇತನ ಮಕ್ಕಳು ಇತರ ಮಕ್ಕಳಂತೆ ಸಹಜ ಉಲ್ಲಾಸದಿಂದ ಆಟ ಪಾಠಗಳಲ್ಲಿ ಭಾಗಿಯಾಗಬೇಕು. ಇದರಿಂದ ಅವರ ಮನೋವಿಕಾಸವು ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದರು.

ಈ ವಿಶೇಷ ಮಕ್ಕಳ ಉದ್ಯಾನವನವನ್ನು ರಕ್ಷಿಸಿ, ಆ ಮಕ್ಕಳಿಗಾಗಿಯೇ ಉಪಯೋಗವಾಗುವಂತೆ ನೋಡಿಕೊಳ್ಳುವುದು ಇಲ್ಲಿಗೆ ಬರುವ ಹಿರಿಯರ ಕರ್ತವ್ಯ. ಈ ಉದ್ಯಾನವನವನ್ನು ದುರುಪಯೋಗವಾಗದಂತೆ ತಡೆಯುವುದು ನಾಗರಿಕರ ಕೈಯಲ್ಲಿಯೇ ಇದೆ ಎಂದು ಸಚಿವರು ಹೇಳಿದರು. ಯುವಕರಿಗಾಗಿ ಜಿಮ್
ಇದೇ ಸಂದರ್ಭದಲ್ಲಿ ಇದೇ ಉದ್ಯಾನವನದ ಆವರಣದಲ್ಲಿ ಈ ಪ್ರದೇಶದ ಯುವಕರ ಬಹುದಿನದ ಬೇಡಿಕೆಯಾಗಿದ್ದ ಆಧುನಿಕ ಜಿಮ್ ಕೇಂದ್ರವನ್ನು ಸಹ ಸಚಿವ ಸುರೇಶ್‌ಕುಮಾರ್ ಉದ್ಘಾಟಿಸಿದರು.

ಈ ಜಿಮ್ ಕೆಂದ್ರದಲ್ಲಿ ಆಧುನಿಕ ಜಿಮ್ ಉಪಕರಣಗಳನ್ನು ಸುಮಾರು ರೂ.5 ಲಕ್ಷ ವೆಚ್ಚದಲ್ಲಿ ಅಳವಡಿಸಲಾಗಿದೆ. ಜಿಮ್ ಕೇಂದ್ರ ಉದ್ಘಾಟಿಸಿದ ಸಚಿವ ಸುರೇಶ್‌ಕುಮಾರ್ ಈ ಜಿಮ್ ಕೇಂದ್ರದಿಂದ ಯುವಕರ ಶಾರೀರಿಕ ಆರೋಗ್ಯ ಉತ್ತಮಗೊಳ್ಳುವುದರ ಜೊತೆಗೆ ಸಮಾಜದ ಆರೋಗ್ಯವೂ ಉತ್ತಮಗೊಳ್ಳಲು ಪೂರಕವಾಗಲಿ ಎಂದು ಹಾರೈಸಿದರು. ಈಗ ಮೊದಲನೇ ಕಂತಾಗಿ ಕೆಲವು ಜಿಮ್ ಉಪಕರಣಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌಲಭ್ಯವನ್ನು ಅಳವಡಿಸಲಾಗುವುದು ಎಂದು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X