ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗದಲ್ಲಿ ವಿವಿಧ ಕಾಮಗಾರಿಗಳಿಗೆ ಸಿಎಂ ಚಾಲನೆ

By * ಕೆ ಮೋಹನ್, ಶಿವಮೊಗ್ಗ
|
Google Oneindia Kannada News

Yeddyurappa in Shivamogga
ಶಿವಮೊಗ್ಗ, ಆ. 24 : ಜೈಲು ಸ್ಥಳಾಂತರ, ಶಿವಪ್ಪಮಾರುಕಟ್ಟೆ ಸ್ಥಾಪನೆಗೆ ಒತ್ತು, ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ, ಖಾಸಗೀ ಮತ್ತು ಸರ್ಕಾರಿ ಬಸ್ ನಿಲ್ದಾಣ ಕಾಮಗಾರಿ ಚುರುಕು, ಬಿ.ಹೆಚ್. ರಸ್ತೆಗೆ ವಿಶೇಷ ಗಮನ, ಜಿಲ್ಲಾ ಪಂಚಾಯ್ತಿಯಲ್ಲಿ ಸಮಗ್ರ ಅಭಿವೃದ್ಧಿ ಬಗ್ಗೆ ಸಭೆ ಮುಂತಾದ ಹಲವು ಅಭಿವೃದ್ಧಿ ಕಾರ್ಯಕ್ರಮಗಳತ್ತ ಗಮನಹರಿಸಿದರು ನಮ್ಮ ಮುಖ್ಯಮಂತ್ರಿಗಳು.

ಸೋಮವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿವಮೊಗ್ಗದ ಈಗಿರುವ ಜೈಲನ್ನು ಸ್ಥಳಾಂತರಗೊಳಿಸಲು ಈಗಾಗಲೇ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಸೋಗಾನೆ ಬಳಿ 50 ಎಕರೆ ಜಮೀನನ್ನು ಖರೀದಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲಿನ ಬಗರ್ ಹುಕುಂ ಸಾಗುವಳಿದಾರರಿಗೆ ಪರಿಹಾರ ನೀಡಿ, ಜಮೀನು ಖರೀದಿಸಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳು ಮಾತುಕತೆ ನಡೆಸುವರು ಎಂದರು. ಶಿವಪ್ಪ ನಾಯಕ ಮಾರುಕಟ್ಟೆ ನಿರ್ಮಾಣ ತಡವಾಗುತ್ತಿದೆ. ನಗರಸಭೆ ಈಗಾಗಲೇ ಅನುಮತಿ ನೀಡಿದ್ದರೂ ಸಹ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು ಎಂದ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಲ್ಲಿ ಲೋಪದೋಷ ಅಥವಾ ವಿಳಂಬ ಕಂಡುಬಂದರೆ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಖಾಸಗಿ ಬಸ್ ನಿಲ್ದಾಣ ಮತ್ತು ಸರ್ಕಾರಿ ಬಸ್ ನಿಲ್ದಾಣದ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದ ಮುಖ್ಯಮಂತ್ರಿಗಳು ಬಿ.ಹೆಚ್.ರಸ್ತೆ ಕಾಮಗಾರಿ ತಡವಾಗುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರಲ್ಲದೆ, ತಕ್ಷಣ ವಿಶೇಷ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್‌ನಲ್ಲಿ ಅಭಿವೃದ್ಧಿ ಸಭೆಯನ್ನು ಕರೆಯಲಾಗಿದೆ. ಅಲ್ಲಿ ಮತ್ತಷ್ಟು ಮಾಹಿತಿ ಪಡೆದು ಅಭಿವೃದ್ಧಿಯನ್ನು ಚುರುಕುಗೊಳಿಸಲಾಗುವುದು. ಈಗಾಗಲೇ ವಿಮಾನ ನಿಲ್ದಾಣದ ಪ್ರಥಮ ಹಂತದ ಕಾಮಗಾರಿ ಆರಂಭವಾಗಿದೆ. ಇದರ ಜೊತೆಗೆ ಜವಳಿ ಉದ್ಯಮವನ್ನು ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಉದ್ಯಮಿಗಳು ಮುಂದೆ ಬಂದಿದ್ದಾರೆ. ಇದರಿಂದ ಸುಮಾರು 15 ಸಾವಿರ ಜನರಿಗೆ ಉದ್ಯೋಗ ಸಿಕ್ಕಂತಾಗುತ್ತದೆ. ಮುಂದಿನ 2 ವರ್ಷಗಳಲ್ಲಿ ಇದು ಪೂರ್ಣಗೊಳ್ಳಲಿದೆ ಎಂದ ಅವರು, ಜಿಲ್ಲೆಯ ಪ್ರವಾಹ ಪೀಡಿತರಿಗೆ ಪರಿಹಾರ ನೀಡಲಾಗುವುದು ಎಂದರು.

ರಾಜ್ಯದ 20 ಜಿಲ್ಲೆಗಳಲ್ಲಿ ಬರಗಾಲವಿದೆ. ಯಾರೂ ಗುಳೆ ಹೋಗದಂತೆ ನೋಡಿಕೊಳ್ಳಲಾಗುವುದು. ಈಗಾಗಲೇ ಕೇಂದ್ರದ 3 ತಂಡಗಳು ರಾಜ್ಯಕ್ಕೆ ಆಗಮಿಸಿದ್ದು, ತಂಡಕ್ಕೆ ಅಗತ್ಯ ಮಾಹಿತಿ ನೀಡಲಾಗುವುದು ಎಂದ ಅವರು, ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ಸೆಪ್ಟೆಂಬರ್ 3ರಿಂದ ಮೂರು ದಿನಗಳ ವಿಶೇಷ ಅಧಿವೇಶನವನ್ನು ನಡೆಸಲಾಗುವುದು ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾಧಿಕಾರಿ ಪಂಕಜ್‌ಕುಮಾರ್ ಪಾಂಡೆ ಮತ್ತು ದಿವಾಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X