ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚನ್ನಪಟ್ಟಣ : ಜೆಡಿಎಸ್ ಕಾರ್ಯಕರ್ತರ ಮೇಲೆರಗಿದ ಲಾಠಿ

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

Police lathicharge JDS party workers in Channapattana
ಚನ್ನಪಟ್ಟಣ, ಆ. 19 : ಉಪಚುನಾವಣೆಯ ಹಿಂದಿನ ದಿನ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತಿತರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಜೆಡಿಎಸ್ ಕಾರ್ಯಕರ್ತರನ್ನು ಬುಧವಾರ ಪೊಲೀಸರು ಬಂಧಿಸಲು ಮುಂದಾದಾಗ ಪೋಲೀಸರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದು ರೊಚ್ಚಿಗೆದ್ದ ಕಾರ್ಯಕರ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಲಾಗಿದೆ.

ಚುನಾವಣಾ ಮುನ್ನಾದಿನ ಚನ್ನಪಟ್ಟಣದಲ್ಲಿ ಬಿಜೆಪಿ ಸಚಿವರಾದ ಕಟ್ಟಾಸುಬ್ರಮಣ್ಯನಾಯ್ಡು, ವೆಂಕಟರಮಣಪ್ಪ ಮತ್ತು ಶಾಸಕ ಮುನಿರಾಜುರವರು ಚುನಾವಣಾ ಪ್ರಚಾರದ ವೇಳೆ ಮುಗಿದಿದ್ದರೂ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಮತದಾರರಿಗೆ ಹಣಹಂಚುತ್ತಿದ್ದರೆಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿ ಸಚಿವರ ಕಾರನ್ನ ಅಡ್ಡಗಟ್ಟಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಬಿಜೆಪಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಜೆಡಿಎಸ್ ಕಾರ್ಯಕರ್ತರು ಸಚಿವರು ಮತ್ತು ಬೆಂಬಲಿಗರಿಗೆ 'ಗೂಸಾ' ನೀಡಿದ್ದರೆಂದು ಸಚಿವರು ದೂರು ದಾಖಲಿಸಿದ್ದರು. ಈ ಸಂದರ್ಭದಲ್ಲಿ ಸಚಿವರು ಮತ್ತು ಬೆಂಬಲಿಗರು ಜೆಡಿಎಸ್ ಕಾರ್ಯಕರ್ತರಿಗೂ ಪ್ರಾಣ ಬೆದರಿಕೆ ಹಾಕಿದ್ದರೆಂದು ಜೆಡಿಎಸ್ ಕಾರ್ಯಕರ್ತರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಘಟನೆಯ ಬಗ್ಗೆ ದೂರು ದಾಖಲಾಗಿದ್ದರು 2 ದಿನಗಳ ಕಾಲ ಸುಮ್ಮನಿದ್ದ ಪೋಲೀಸರು, ಇದ್ದಕ್ಕಿದ್ದಂತೆ ಚುನಾವಣೆ ಮುಗಿಯುತ್ತಿದ್ದಂತೆ ಜೆಡಿಎಸ್ ಹುರಿಯಾಳು ಎಂ.ಸಿ.ಅಶ್ವಥ್‌ರವರ ಸಹೋದರ ಕರಿಯಪ್ಪ, ಸತ್ಯನಾರಾಯಣ, ಮೂಲು, ರವಿಕೂರಣಗೆರೆ, ಉದಯ್‌ರನ್ನ ಬಂಧಿಸಲು ಎಂ.ಸಿ.ಅಶ್ವಥ್‌ರ ಮನೆಯ ಸುತ್ತಲೂ ನೂರಾರು ಪೋಲೀಸರೊಂದಿಗೆ ಹಿರಿಯ ಅಧಿಕಾರಿಗಳು ಆಗಮಿಸಿದ್ದರು. ಈ ಸಂದರ್ಭದಲ್ಲಿ ಪೋಲೀಸರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತು. ಇದನ್ನು ವಿರೋಧಿಸಿ ನೆರೆದಿದ್ದ ಜೆಡಿಎಸ್ ಕಾರ್ಯಕರ್ತರನ್ನ ಚದುರಿಸಲು ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದರು.

ಇದರಿಂದ ರೊಚ್ಚಿಗೆದ್ದ ಜೆಡಿಎಸ್ ಕಾರ್ಯಕರ್ತರು ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆ ತಡೆ ನಡೆಸಿ ಪೋಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸಚಿವರು ನೀತಿ ಸಂಹಿತೆ ಉಲ್ಲಂಘಿಸಿ ಗೂಂಡಾಪಡೆಯೊಂದಿಗೆ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಯತ್ನ ನಡೆಸಿದ್ದರೂ ಸಚಿವರ ವಿರುದ್ದ ಕ್ರಮಕೈಗೊಳ್ಳದೇ ಅಮಾಯಕರಾದ ಕಿರಣ್ ಮತ್ತು ದರ್ಶನ್‌ಎಂಬುವವರನ್ನ ಬಂಧಿಸಲಾಗಿದೆ. ಬಿಜೆಪಿ ಸರ್ಕಾರದ ಸಚಿವರುಗಳ ಅಣತಿಯಂತೆ ಪೋಲೀಸರು ಜೆಡಿಎಸ್ ಕಾರ್ಯಕರ್ತರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆಂದು ಜೆಡಿಎಸ್ ಅಭ್ಯರ್ಥಿ ಎಂ.ಸಿ.ಅಶ್ವಥ್ ಪೋಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಮುಗಿದ ನಂತರ ಎಲೆಕ್ಟ್ರಾನಿಕ್ ಮತಯಂತ್ರಗಳನ್ನ ಸ್ಟ್ರಾಂಗ್‌ರೂಮ್‌ಗೆ ಸಾಗಿಸುವ ಮೊದಲೇ ಹಿರಿಯ ಪೋಲೀಸ್ ಅಧಿಕಾರಿಗಳು ನೂರಾರು ಪೋಲೀಸರೊಂದಿಗೆ ಜೆಡಿಎಸ್ ಕಾರ್ಯಕರ್ತರನ್ನ ಬಂಧಿಸಲು ಮುಂದಾಗಿದ್ದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮುಖ್ಯವಾಗಿ ಹಿರಿಯ ಅಧಿಕಾರಿಗಳು ಇ.ವಿ.ಎಂ.ಗಳನ್ನ ರಕ್ಷಣೆ ಮಾಡಬೇಕಾಗಿತ್ತು. ಆದರೆ ಇದ್ದಕ್ಕಿದ್ದಂತೆ ಜೆಡಿಎಸ್ ಕಾರ್ಯಕರ್ತರನ್ನ ಬಂಧಿಸಲು ಮುಂದಾಗಿದ್ದರ ಹಿಂದೆ ಬಿಜೆಪಿ ಅಭ್ಯರ್ಥಿ ಯೋಗೀಶ್ವರ್ ಮತ್ತು ಸಚಿವರುಗಳ ಒತ್ತಡ ಕೆಲಸ ಮಾಡಿದೆ ಎಂದು ಅಶ್ವಥ್ ಆರೋಪಿಸಿದರು.

ಬಾಲಕೃಷ್ಣ ಪ್ರವೇಶ : ಜೆಡಿಎಸ್ ಕಾರ್ಯಕರ್ತರ ಮೇಲೆ ಲಾಠಿಪ್ರಹಾರವಾದ ವಿಚಾರ ತಿಳಿಯುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ದೂರವಾಣಿಯ ಮೂಲಕವೇ ಪೋಲೀಸರಿಗೆ ತರಾಟೆಗೆ ತೆಗೆದುಕೊಂಡರು. ಸಚಿವರು ಮತ್ತು ಜನಸಾಮಾನ್ಯರಿಗೂ ಒಂದೇ ಕಾನೂನು ಆದ್ದರಿಂದ ಮೊದಲು ದೌರ್ಜನ್ಯ ನಡೆಸಿದ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡುರವರನ್ನ ಬಂಧಿಸಿ ನಂತರ ಜೆಡಿಎಸ್ ಕಾರ್ಯಕರ್ತರನ್ನ ಬಂಧಿಸಲು ಮುಂದಾಗಿ ಎಂದು ಪೋಲೀಸರಿಗೆ ಹೇಳಿದರು. ಅಷ್ಟರಲ್ಲಿ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರವೇಶ ಮಾಡಿದರು.

ಮೊದಲು ಸಚಿವರನ್ನ ಬಂಧಿಸಿ ನಂತರ ಜೆಡಿಎಸ್ ಕಾರ್ಯಕರ್ತರನ್ನ ಬಂಧಿಸಲು ಮುಂದಾಗಿ ಇಲ್ಲವಾದರೆ ಮುಂದಾಗುವ ಅನಾಹುತಕ್ಕೆ ಪೋಲೀಸ್ ಇಲಾಖೆಯೇ ನೇರ ಹೊಣೆಗಾರಿಕೆಯನ್ನ ಹೊರಬೇಕಾಗುತ್ತದೆ ಎಂದು ಬಾಲಕೃಷ್ಣ ಎಚ್ಚರಿಸಿದರು. ಪರಿಸ್ಥಿತಿಯ ಗಂಭೀರತೆಯನ್ನ ಅರಿತ ಡಿ.ವೈ.ಎಸ್.ಪಿ ದೇವರಾಜ್ ಬಹಳ ಜಾಣ್ಮೆಯಿಂದ ವಶಕ್ಕೆ ತೆಗೆದುಕೊಂಡಿದ್ದ ದರ್ಶನ್ ಮತ್ತು ಕಿರಣ್ ಎಂಬುವವರನ್ನ ಬಿಡುಗಡೆಗೊಳಿಸಿದರು. ಮತ್ತು ಶಾಸಕ ಬಾಲಕೃಷ್ಣರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ಶಾಂತಗೊಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X