ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳರಿಗೆ ಒಳ್ಳೆ ಬುದ್ದಿ ಕೊಡೋ ಸರ್ವಜ್ಞನೇ

By Staff
|
Google Oneindia Kannada News

ಚೆನ್ನೈ, ಆ. 13: ಕನ್ನಡದ ತ್ರಿಪದಿಗಳ ಬ್ರಹ್ಮ ಸರ್ವಜ್ಞನ ಪ್ರತಿಮೆಯನ್ನು ನಗರದ ಅಯನಾವರಂನಲ್ಲಿರುವ ಜೀವಾ ಪಾರ್ಕ್ ನಲ್ಲಿ ಅನಾವರಣಗೊಳಿಸಲಾಯಿತು. ಜೀವಾ ಪಾರ್ಕ್ ನಲ್ಲಿ ಕನ್ನಡಿಗರ ಕಲರವ, ಕನ್ನಡ ಭಾಷೆಯ ಕಂಪಿನೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರಿಮೋಟ್ ಕಂಟ್ರೋಲ್ ಮೂಲಕ ಸರ್ವಜ್ಞರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಮೂಲಕ ಉಭಯ ರಾಜ್ಯಗಳ ನಡುವೆ ಉತ್ತಮ ಬಾಂಧವ್ಯ ಬೆಸೆಯುವ ಮುಂದುವರೆದ ಕೈಂಕರ್ಯಕ್ಕೆ ಛಲವಾದಿ ಯಡಿಯೂರಪ್ಪ ಹೊಸ ಟಿಪ್ಪಣಿ ಬರೆದರು.

ವರದಿ : ಅರಿವಳಗನ್, ಚೆನ್ನೈ

ಸರ್ವಜ್ಞರ ಪ್ರತಿಮೆ ಅನಾವರಣಗೊಳಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭಾವುಕದಿಂದಲೇ ತಮ್ಮ ಉದ್ಘಾಟನಾ ಭಾಷಣ ಆರಂಭಿಸಿದರು. ಕೃಷ್ಣ ಜನ್ಮಾಷ್ಠಮಿಯ ಈ ಶುಭ ದಿನದಂದು ಚೆನ್ನೈದ ನಗರದಲ್ಲಿ ಕನ್ನಡದ ತತ್ವಜ್ಞಾನಿ ಹಾಗೂ ತ್ರಿಪದಿಗಳು ಭೀಷ್ಮ ಎಂದೇ ಖ್ಯಾತರಾದ ಸರ್ವಜ್ಞರ ಪ್ರತಿಮೆಯನ್ನು ಅನಾವರಣಗೊಳಿಸಲು ಸಹಕರಿಸಿದ ಹಿರಿಯಣ್ಣ ತಮಿಳುನಾಡಿನ ಮುಖ್ಯಮಂತ್ರಿ ಎಂ ಕರುಣಾನಿಧಿ ಅಭಿನಂದನೆ ಎಂದು ತಮ್ಮ ಆರಂಭಿಕ ಮಾತು ಶುರು ಮಾಡಿದರು.

ಭಾಷೆ ಎರಡು, ಭಾವ ಒಂದೇ, ನಾವೆಲ್ಲಾ ಭಾರತೀಯರು ಎಂಬುದು ಇಂದು ನಡೆದ ಅದ್ಧೂರಿ ಸಮಾರಂಭವೇ ಸಾಕ್ಷಿ. ತತ್ವಜ್ಞಾನಿ, ವಚನಕಾರ ಸರ್ವಜ್ಞ ಹಾಗೂ ತಮಿಳು ದಾರ್ಶನಿಕ ತಿರುವಳ್ಳುವರ್ ಅವರು ಪ್ರತಿಮೆ ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಅನಾವರಣ ಮಾಡಿರುವುದು ಈ ರಾಜ್ಯಗಳ ಸ್ನೇಹ ಸಂಬಂಧ ವೃದ್ಧಿಯಾಗುವ ಜೊತೆಗೆ ಹೊಸ ಮಾರ್ಗ, ಹೊಸ ಪಯಣದ ಕಡೆಗೆ ನಾವೆಲ್ಲರೂ ಸಾಗೋಣ ಎಂದರು.

ತಮಿಳುನಾಡು ಮತ್ತು ಕರ್ನಾಟಕದ ವಿವೇಕಯುತ ತೀರ್ಮಾನದಿಂದ ಉಭಯ ರಾಜ್ಯಗಳಲ್ಲಿ ಸ್ನೇಹ ಉತ್ತಮಗೊಳ್ಳಲಿದೆ. ನಮ್ಮ ನಡುವೆ ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಚರ್ಚೆ ಮೂಲಕ ಬಗೆಹರಿಸಿಕೊಳ್ಳೋಣ. ಚೆನ್ನೈನಲ್ಲಿ ಸರ್ವಜ್ಞರ ಪ್ರತಿಮೆ ಅನಾವರಣ ಮಾಡುವುದಕ್ಕೆ ಕರುಣಾನಿಧಿ ಅವರು ನಿರ್ಧರಿಸಿದ್ದು, ಮಹತ್ವದ ತೀರ್ಮಾನ ಮತ್ತು ಅತ್ಯಂತ ಬದ್ಧತೆ ಕೆಲಸವಾಗಿದೆ ಎಂದರು.

ಒಂದೇ ತಾಯಿಯ ಮಕ್ಕಳಾದ ನಮ್ಮಲ್ಲಿ ಭಿನ್ನ ನಿಲುವು, ಬೇರೆ ಬೇರೆ ವಿಚಾರಗಳು ಇರುವುದು ಸಹಜ, ಅದು ಪ್ರಕೃತಿಯ ನಿಯಮವೂ ಕೂಡಾ. ಆದರೆ, ಅವುಗಳನ್ನ ನಾವುಗಳು ಸ್ನೇಹ ಮತ್ತು ಪ್ರೀತಿಯಿಂದ ಬಗೆಹರಿಸಿಕೊಳ್ಳೋಣ. ದಕ್ಷಿಣ ನಾಲ್ಕು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ರಾಜ್ಯದ ಮುಖ್ಯಮಂತ್ರಿಗಳು ಒಂದಡೆ ಕುಳಿತುಕೊಂಡು ಸಮಸ್ಯೆಗಳ ನಿವಾರಣೆ ನಾಂದಿ ಹಾಡೋಣ. ಇದಕ್ಕಾಗಿ ಅರಿವು ಕಮ್ಮಟಗಳನ್ನು ಆಯೋಜಿಸೋಣ. ಇದಕ್ಕೆ ಕರ್ನಾಟಕ ಉತ್ಸುಕವಾಗಿದ್ದು, ನನ್ನ ಹಿರಿಯಣ್ಣ ಕಲೈಂಜರ್ ಕರುಣಾನಿಧಿ ಸಮ್ಮತಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಭಾನುವಾರ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಆನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರುಣಾನಿಧಿ ಅವರು ನನ್ನನ್ನು ಚಿನ್ನ ತಂಬಿ ಎಂದು ಕರೆದು ತಮ್ಮ ಹೃದಯದಲ್ಲಿ ನನಗೆ ಸ್ಥಾನ ಕೊಟ್ಟರು. ಕಳೆದ ಎರಡು ವರ್ಷಗಳ ಹಿಂದೆ ನನ್ನ ಸ್ವಂತ ಅಣ್ಣನನ್ನು ಕಳೆದುಕೊಂಡ ನನಗೆ ಇನ್ನೊಬ್ಬ ದೊಡ್ಡಣ್ಣ ಸಿಕ್ಕಂತಾಗಿದೆ ಎಂದರು. ಸರ್ವಜ್ಞ ಮಹಾನ್ ಕವಿ. ತಿರುವಳ್ಳುವರ್ ವಿಶ್ವ ಕಂಡ ಶ್ರೇಷ್ಠ ದಾರ್ಶನಿಕ. ಈ ಇಬ್ಬರ ಪ್ರತಿಮೆಗಳು ಉಭಯ ರಾಜ್ಯಗಳು ಅನಾವರಣಗೊಂಡಿದ್ದು, ಸ್ನೇಹ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಯಡಿಯೂರಪ್ಪ ಹೇಳಿದರು.

ಜೀವಾ ಪಾರ್ಕ್ ಅಭಿವೃದ್ಧಿಗೆ ಕರ್ನಾಟಕ ಸರಕಾರ 60 ಲಕ್ಷ ರುಪಾಯಿ ಸಹಾಯ ನೀಡಿದೆ. ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರು ಯಡಿಯೂರಪ್ಪ ಅವರಿಗೆ ಗಿನ್ನಿಸ್ ದಾಖಲೆ ಬರೆದ ತಿರುವಾರು ರಥ ಹಾಗೂ ತಮ್ಮ ಹಸ್ತಾಕ್ಷರ ಹೊಂದಿದ ಸರ್ವಜ್ಞರ ಮತ್ತು ಯಡಿಯೂರಪ್ಪ ಅವರ ಭಾವಚಿತ್ರ ಇರುವ ಕಾಣಿಕೆಯನ್ನು ನೀಡಿ ಸನ್ಮಾನಿಸಿದರು. ಚೆನ್ನೈ ಕನ್ನಡ ಸಂಘದ ಅಧ್ಯಕ್ಷ ಅತ್ತಾವರ ರಾಮದಾಸ್ ಸ್ವಾಗತ ಭಾಷಣ ಮಾಡಿದರು. ಗೃಹ ಸಚಿವ ವಿ ಎಸ್ ಆಚಾರ್ಯ ಆಶಯ ಭಾಷಣ ಮಾಡಿದರು. ತಮಿಳುನಾಡಿನ ಹಣಕಾಸು ಸಚಿವ ಪ್ರೊ ಅನ್ಬಂಗಮ್ ಅವನರು ಪ್ರಾಸ್ತಾವಿಕ ಭಾಷಣ ಮಾಡಿದರು. ಮತ್ತೂರು ಕೃಷ್ಣಮೂರ್ತಿ ಅವರು ಯಡಿಯೂರಪ್ಪ ಅವರ ಭಾಷಣವನ್ನು ಸಂಕ್ಷಿಪ್ತವಾಗಿ ತಮಿಳಿಗೆ ಭಾಷಾಂತರಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಕರುಣಾನಿಧಿ ಅವರು, ಯಡಿಯೂರಪ್ಪ ಅವರ ಕಾರ್ಯವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಅನೇಕ ದಿನಗಳ ತಮಿಳರ ಕನಸನ್ನು ನನಸು ಮಾಡಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲಬೇಕು. ನನಗೆ ತಮ್ಮ ಇಲ್ಲದಿರುವ ಕೊರಗಿತ್ತು. ಅದೀಗ ಕರ್ನಾಟಕದಲ್ಲೊಬ್ಬ ತಮ್ಮ ಸಿಕ್ಕಿದ್ದಾನೆ. ಆತನೇ ಈ ಯಡಿಯೂರಪ್ಪ ಎಂದು ಹಾಡಿಹರಸಿದರು. ಈ ಸಂದರ್ಭದಲ್ಲಿ ತಮಿಳರು ಹಾಗೂ ಕನ್ನಡಿಗರು ಕುಣಿದು ಕುಪ್ಪಳಿಸಿದರು. ಸರ್ವಜ್ಞ ಮತ್ತು ತಿರುವಳ್ಳುವರ್ ಪ್ರತಿಮೆ ಅನಾವರಣ ಮಾಡುವ ಮೂಲಕ ಸಮಾಜಕ್ಕೆ ಸ್ಪಷ್ಟವಾದ ಸಂದೇಶ ರವಾನೆ ಮಾಡಿದಂತಾಗಿದ್ದು, ನಮ್ಮಲ್ಲಿನ ಏಕತೆಯನ್ನು ಪ್ರದರ್ಶಿಸಿದಂತಾಯಿತು. ಇದನ್ನು ಮುಂದುವರೆಸಿಕೊಂಡು ಹೋಗೋಣ ಎಂದು ಕರುಣಾನಿಧಿ ಹೇಳಿದರು. ಯಡಿಯೂರಪ್ಪ ಅವರು ಕರುಣಾನಿಧಿ ಅವರಿಗೆ ಚಿನ್ನದ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು.

ಕರ್ನಾಟದ ಸಚಿವರಾದ ಕರುಣಾಕರರೆಡ್ಡಿ, ರಾಮಚಂದ್ರೇಗೌಡ, ಆರ್ ಅಶೋಕ್, ಸಂಸದ ಅನಂತ್ ಕಮಾರ್, ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್, ಸಂಸದ ಪಿ ಸಿ ಮೋಹನ್, ಚಿತ್ರನಟರಾದ ಕಮಲಹಾಸನ್, ರಜಿನಿಕಾಂತ್, ತಾರಾ, ಜಯಾಮಾಲಾ, ಪ್ರಕಾಶ ರೈ, ಪೂಜಾ ಗಾಂಧಿ ಉಪಸ್ಥಿತರಿದ್ದರು. ಅಲ್ಲದೇ ತಮಿಳುನಾಡು ಹಾಗಾ ಕರ್ನಾಟಕದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಚೆನ್ನೈ ಕನ್ನಡ ಸಂಘ ಪದಾಧಿಕಾರಿಗಳು ಕರುಣಾನಿಧಿ ಅವರಿಗೆ ಕನ್ನಡಿಗರ ತಮಿಳು ಕಣ್ಮಣಿ ಎಂಬ ಬಿರುದು ನೀಡಿ ಸನ್ಮಾನಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X