ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೀನ್-ಇನ್-ಲಾ ಕಾನೂನು ಸಾಕ್ಷರತಾ ಆಂದೋಲನ

By * ಬೇದ್ರೆ ಮಂಜುನಾಥ, ಚಿತ್ರದುರ್ಗ
|
Google Oneindia Kannada News

Teen in law, legal literacy program inaugurated
ಹದಿಹರೆಯದ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕೇ? ಬೇಡವೇ? ಎನ್ನುವ ಬಿಸಿಬಿಸಿಯಾದ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ದೇಶದಲ್ಲಿಯೇ ಪ್ರಥಮಬಾರಿಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮಾರ್ಗದರ್ಶನದಲ್ಲಿ, ಕಾನೂನು ಸಾಕ್ಷರತಾ ಆಂದೋಲನದ ಅಂಗವಾಗಿ, ಚಿತ್ರದುರ್ಗ ಜಿಲ್ಲೆಯ ಎಲ್ಲ ಪೌಢಶಾಲಾ ಹಾಗೂ ಪದವಿಪೂರ್ವ ಶಿಕ್ಷಣದ ವಿದ್ಯಾರ್ಥಿಗಳಿಗೆ ಟೀನ್ ಇನ್ ಲಾ ಎಂಬ ಹದಿವಯಸ್ಸಿಗೆ ಕಾನೂನು ಆಡಳಿತವನ್ನು ಮನದಟ್ಟು ಮಾಡಿಕೊಡುವ ವಿನೂತನ ಶೈಕ್ಷಣಿಕ ಕಾರ್ಯಕ್ರಮವನ್ನು, ಚಿತ್ರದುರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು, ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಇವರ ಸಹಯೋಗದೊಂದಿಗೆ ಕೈಗೆತ್ತಿಕೊಂಡಿದೆ.

ಪ್ರಾರಂಭಿಕ ಸಮೀಕ್ಷೆ, ಜಾರಿಯ ರೂಪುರೇಷೆಗಳನ್ನು ಪೂರ್ಣಗೊಳಿಸಿ, ಕಳೆದ ಜುಲೈ 11ರಂದು ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಪೋಷಕರಾದ ನ್ಯಾಯಮೂರ್ತಿ ಪಿ. ಡಿ. ದಿನಕರನ್‌ರವರು ಈ ಯೋಜನೆಯನ್ನು ಉದ್ಫಾಟಿಸಿದರು. ಉಚ್ಚನ್ಯಾಯಾಲಯದ ನ್ಯಾಯಾಧೀಶರುಗಳಾದ ಅಶೋಕ್ ಬಿ. ಹಿಂಚಿಗೇರಿ, ಎಚ್. ಭಿಲ್ಲಪ್ಪ, ಎಲ್. ನಾರಾಯಣಸ್ವಾಮಿಯವರು ಮತ್ತು ಚಿತ್ರದುರ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕಾನೂನು ಸೇವೆಗಳ ಪ್ರಾಧಿಕಾರದ ಆಧ್ಯಕ್ಷೆ ಎಂ.ಎ. ಶಶಿಕಲಾ ಅವರು ಈ ಕಾನೂನು ಸಾಕ್ಷರತಾ ಆಂದೋಲನದ ಮಹತ್ವವನ್ನು ತಿಳಿಸಿಕೊಟ್ಟರು.

ಹದಿಹರೆಯದ ಸಮೂಹಕ್ಕೆ ನಾಗರಿಕ ಹೊಣೆಗಾರಿಕೆಯನ್ನು ತುಂಬುವ, ಕಾನೂನಿನ ಅರಿವು ಮಾಡಿಕೊಡುವ ನಿಟ್ಟಿನಲ್ಲಿ ಸಂವಿಧಾನದ ಅಣತಿ, ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ, ರಾಜ್ಯ ಉಚ್ಚ ನ್ಯಾಯಾಲಯದ ಮಾರ್ಗದರ್ಶನದಲ್ಲಿ, ಚಿತ್ರದುರ್ಗ ಜಿಲ್ಲೆಯ 318 ಪ್ರೌಢಶಾಲೆಗಳು ಮತ್ತು 108 ಪದವಿ ಪೂರ್ವಕಾಲೇಜುಗಳ ಒಟ್ಟು 78,794 ಮಕ್ಕಳಿಗೆ ಈ ಕಾನೂನಿನ ತಿಳಿವಳಿಕೆ ದೊರೆಯಲಿದೆ. ಶಾಲೆಗಳಲ್ಲಿ Intensive Legal Literacy Campaign (ಇಂಟೆನ್ಸಿವ್ ಲೀಗಲ್ ಲಿಟರಸಿ ಕ್ಯಾಂಪೇನ್) ಎಂಬ ಯೋಜನೆಯ ಅಡಿ, ಇದೇ ಆಗಸ್ಟ್ 17ರಿಂದ ಸೆಪ್ಟೆಂಬರ್ 16ರವರೆಗೆ ಒಂದು ತಿಂಗಳ ಕಾಲ, ಪ್ರತಿದಿನ 45 ನಿಮಿಷಗಳ ಅವಧಿಯ, ಒಟ್ಟು 10 ಕಾನೂನು ವಿಷಯಗಳನ್ನು, ಸರಳವಾಗಿ, ಬೋಧನೆಯ ಮೂಲಕ ಪರಿಚಯಿಸುವ ಕಾರ್ಯಕ್ರಮ ಇದಾಗಿದೆ.

ಟೀನ್-ಇನ್-ಲಾ ಕಾರ್ಯಕ್ರಮದ ತರಬೇತಿಯನ್ನು ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯಲ್ಲಿ ಜೂನ್ 27ರಂದು ಆರಂಭಿಸಲಾಗಿದ್ದು, ಇದೇ ಆಗಸ್ಟ್ 4ರಂದು ಜಿಲ್ಲೆಯ 22 ಹೋಬಳಿಗಳಲ್ಲಿ ಪೌಢಶಾಲಾ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ ಒಂದು ದಿನದ ತರಬೇತಿ ಹಮ್ಮಿಕೊಳ್ಳಲಾಗಿತ್ತು.

ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು, ಮಹಿಳೆ - ದೌರ್ಜನ್ಯ, ದುಡಿಯುವ ಮಹಿಳೆ, ಬಾಲ ಕಾರ್ಮಿಕರು, ಹಿಂದು ಮಹಿಳೆ - ಆಸ್ತಿ ಹಕ್ಕು, ಹಿಂದುಗಳಲ್ಲಿ ವಿವಾಹ ಮತ್ತು ವಿಚ್ಛೇದನ, ಮುಸ್ಲಿಮರಲ್ಲಿ ವಿವಾಹ ಮತ್ತು ವಿಚ್ಛೇದನ, ಕ್ರಿಶ್ಚಿಯನ್ನರಲ್ಲಿ ವಿವಾಹ ಮತ್ತು ವಿಚ್ಛೇದನ, ಮೋಟಾರು ವಾಹನಗಳ ಚಾಲನೆ, ನೊಂದಣಿ ಮತ್ತು ವಿಮೆ, ಮುಷ್ಕರ, ದಸ್ತಗಿರಿ ಬಗ್ಗೆ ಪೊಲೀಸ್ ನಿಯಮಗಳು, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ-ಕರ್ನಾಟಕ ಇವೇ ಮೊದಲಾದ ವಿಷಯಗಳನ್ನು ಈ ಟೀನ್-ಇನ್-ಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುತ್ತಿದೆ.

ಈ ಸಂಬಂಧವಾದ ಪುಟ್ಟ ಕೈಪಿಡಿಯನ್ನು ಕೂಡ ಹೊರತರಲಾಗಿದೆ. ಆಗಸ್ಟ್ 17ರಂದು ಪೂರ್ವ ಪರೀಕ್ಷೆ (ಪ್ರಿ ಟೆಸ್ಟ್), ನಂತರ ಒಂದು ತಿಂಗಳು ಬೋಧನೆ, ಸೆಪ್ಟೆಂಬರ್ 16ರಂದು ಕಲಿಕಾ ಖಾತ್ರಿಯ ಪೋಸ್ಟ್ ಟೆಸ್ಟ್ ನಡೆಸಲಾಗುವುದು.

ಟೀನ್-ಇನ್-ಲಾ ದಂತಹ ವಿನೂತನ ಕಾರ್ಯಕ್ರಮದಿಂದ ವಿದ್ಯಾರ್ಥಿಗಳ ಸಾಮಾನ್ಯಜ್ಞಾನ ಮತ್ತು ಕಾನೂನಿನ ಜ್ಞಾನ ಹೆಚ್ಚುವುದಷ್ಟೇ ಅಲ್ಲ ಇವೇ ವಿಷಯಗಳು ಅವರ ಪಠ್ಯದಲ್ಲಿ ಬಂದಾಗ, ಸಾರ್ವಜನಿಕ ಜೀವನದಲ್ಲಿ ತೊಂದರೆಗಳು ಎದುರಾದಾಗ, ಕಾನೂನು ತೊಡಕುಗಳು ತಲೆದೋರಿದಾಗ ಸುಲಭವಾಗಿ ಕಾನೂನಿನ ನೆರವು ಪಡೆಯಲು ಸಹಾಯವಾಗುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಟೀನ್-ಇನ್-ಲಾ ಪ್ರಯೋಗ ಯಶಸ್ವಿಯಾಗಿ ರಾಜ್ಯದ ಮತ್ತು ರಾಷ್ಟ್ರದ ಎಲ್ಲಾ ಯುವಜನರಿಗೆ ತಲುಪುವಂತಾಗಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X