ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಪ್ರತಿಮೆಯಲ್ಲ,ಸಾಮರಸ್ಯಕ್ಕೆ ಎರಕ

By Staff
|
Google Oneindia Kannada News

Tiruvalluvar
ಬೆಂಗಳೂರು, ಆ. 9 : ಹದಿನೆಂಟು ವರ್ಷಗಳ ಕಾಲ ಕತ್ತಲೆಯ ಕೋಣೆಯಲ್ಲಿ ಕೊಳೆಯುತ್ತ ಬಿದ್ದಿದ್ದ ಜ್ಞಾನಮೂರ್ತಿ ತಿರುವಳ್ಳವರ್ ಅವರ ಪ್ಲಾಸ್ಟರ್ ಆಫ್ ಪ್ಯಾರಿಸ್ ಕಂ ಕಂಚಿನ ಪ್ರತಿಮೆಗೆ ಇಂದು ಬೆಂಗಳೂರಿನಲ್ಲಿ ಬೆಳಕು ತೋರಿಸಲಾಯಿತು. ತನ್ಮೂಲಕ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಸಂಬಂಧಕ್ಕೆ ಹೊಸ ಭಾಷ್ಯ ಬರೆಯಲಾಯಿತು. ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಪ್ರತಿಮೆಯ ಅನಾವರಣವನ್ನು ಭಾನುವಾರ ಬೆಳಗ್ಗೆ 11.30ಗೆ ವಿದ್ಯುಕ್ತವಾಗಿ ನೆರವೇರಿಸಿದರು.

ಈ ಮೂಲಕ ಕರ್ನಾಟಕದ ಸಮಕಾಲೀನ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲು ನೆಡಲಾಯಿತು.ಪೂರ್ವ ಬೆಂಗಳೂರಿನ ಹಲಸೂರು ಬಡಾವಣೆಯಲ್ಲಿರುವ ಆರ್ ಬಿ ಎ ಎನ್ ಎಂ ಎಸ್ ಮೈದಾನದಲ್ಲಿ ಜರುಗಿದ ಅನಾವರಣ ಕಾರ್ಯಕ್ರಮ ಎಲ್ಲ ಸರಕಾರಿ ಶಿಷ್ಟೋಪಚಾರ ಮತ್ತು ಬಿಗಿಭದ್ರತೆಯ ನಡುವೆ ಸಾಕಾರಗೊಂಡಿತು.

ಭಾಷೆ,ಪ್ರಾಂತ್ಯದ ಮಿತಿಗಳನ್ನು ಮೀರಿ ಬೆಳೆದ ದಾರ್ಶನಿಕ ತಿರುವಳ್ಳುವರ್ ಎಂದು ಯಡಿಯೂರಪ್ಪ ತಮ್ಮ ಭಾಷಣದಲ್ಲಿ ನುಡಿದರು. ಉಭಯ ರಾಜ್ಯಗಳ ಸಾಹಿತಿಗಳು, ಪ್ರತಿಪಕ್ಷಗಳು ಈ ಕಾರ್ಯಕ್ರಮಕ್ಕೆ ಪೂರ್ಣ ಬೆಂಬಲ ನೀಡಿದ್ದಾರೆ ಎಂದರು. ತಿರುವಳ್ಳುವರ್ ಅವರ ಕೃತಿ ತಿರುಕ್ಕುರಳ್ ವೇದ ಉಪನಿಷತ್ತಿಗೆ ಸಮ. ಮಾನವೀಯ ಮೌಲ್ಯ ಮತ್ತು ಆದರ್ಶಗಳನ್ನು ಸರ್ವಕಾಲಕ್ಕೆ ಸಲ್ಲುವಂತೆ ಬರೆದ ಹೆಗ್ಗಳಿಕೆ ಅವರ 1300 ತ್ರಿಪದಿಗಳಲ್ಲಿ ಅಡಗಿದೆ ಎಂದು ಯಡ್ಡಿ ವಿವರಿಸಿದರು. ಇದು ಕೇವಲ ಪ್ರತಿಮೆಗಳ ಅನಾವರಣವಲ್ಲ, ತಮಿಳುನಾಡು ಮತ್ತು ಕರ್ನಾಟಕದ ನಡುವೆ ಸುಮಧುರ ಬಾಂಧವ್ಯಕ್ಕೆ ಹೊಯ್ಯುತ್ತಿರುವ ಎರಕ ಎಂದು ಯಡ್ಡಿಯೂರಪ್ಪ ಬಣ್ಣಿಸಿದರು.

ಅಂತೆಯೇ, ಸರ್ವಜ್ಞಮೂರ್ತಿ ಕೂಡ ತಮ್ಮ ತ್ರಿಪದಿಗಳ ಮೂಲಕ ಮನುಷ್ಯ ವಿವೇಕಕ್ಕೆ ಭಾಷ್ಯ ಬರೆದವರು ಎಂದು ಹೇಳಲು ಅವರು ಮರೆಯಲಿಲ್ಲ. ಭಾರತದ ಅನೇಕ ರಾಜ್ಯಗಳಲ್ಲಿ ಗಡಿನಾಡಲ್ಲಿ ಭಿನ್ನಾಭಿಪ್ರಾಯಗಳು ಇವೆ. ಸಾಮರಸ್ಯ ಮತ್ತು ಉದಾತ್ತ ಭಾವನೆಯಿಂದ ಇವೆಲ್ಲ ಪರಿಹಾರಗೊಳ್ಳಬೇಕು. ಈ ದಿಸೆಯಲ್ಲಿ ಪ್ರತಿಮೆಗಳ ಅನಾವರಣ ಮೂಲಕ ತಮಿಳುನಾಡು ಮತ್ತು ಕರ್ನಾಟಕ ಇಡೀ ಭಾರತಕ್ಕೆ ಮಾದರಿ ಎನಿಸಿದೆ. ಸ್ನೇಹ ಮತ್ತು ಹೊಂದಾಣಿಕೆಯ ಬದುಕಿಗೆ ನಾಂದಿ ಹಾಡಿದೆ ಎಂದು ಯಡ್ಡಿ ಹೇಳಿದರು.

ಕರ್ನಾಟಕದಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಬೇಕೆನ್ನುನುವುದು ನನ್ನ 18 ವರ್ಷಗಳ ಕನಸಾಗಿತ್ತು. ಆದರೆ ಅದು ಈಡೇರಿರಲಿಲ್ಲ. ಇವತ್ತು ಈಡೇರಿತು. ಇದಕ್ಕೆ ಕಾರಣ ಯಡಿಯೂರಪ್ಪ ಅವರ ಸ್ನೇಹ ಮತ್ತು ರಚನಾತ್ಮಕ ನಿಲವು ಎಂದು ಪ್ರತಿಮೆ ಅನಾವರಣದ ನಂತರ ಎಂ. ಕರುಣಾನಿಧಿ ತಮ್ಮ ಭಾಷಣದಲ್ಲಿ ಹೇಳಿದರು. ಅವರು ತಮಿಳಿನಲ್ಲಿ ಭಾಷಣ ಮಾಡಿದರು. ರಾಜಕೀಯ, ಪ್ರಾಂತೀಯ ಭಾವನೆಗಳ ಎಲ್ಲೆಗಳನ್ನು ಮೀರಿ, ಹೃದಯ ಹೃದಯಗಳನ್ನು ಬೆಸೆಯುವುದಕ್ಕೆ ಪ್ರತಿಮೆ ಅನಾವರಣ ಸಾಕ್ಷಿಯಾಗಿದೆ. ನನಗೆ 89 ವರ್ಷ, ಯಡಿಯೂರಪ್ಪನವರಿಗೆ 67 ವರ್ಷ. ನನಗಿಂತ ಚಿಕ್ಕವರು. ಅವರನ್ನು ತಂಬಿ ಎಂದು ಸಂಭೋಧಿಸುವುದಕ್ಕೆ ತಮಗೆ ಹೆಮ್ಮೆ ಎನಿಸುತ್ತದೆ ಎಂದರು. ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪನೆ ಕಾರ್ಯಕ್ರಮ ಅತ್ಯಂತ ಸಂಭ್ರಮ ಮತ್ತು ಗೌರವದಿಂದ ನಡೆಯುತ್ತದೆ ಎಂದು ಭರವಸೆ ನೀಡಿದರು. ಆಡುಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಿವೇಕದ ಮಾತಿಲ್ಲ ಎಂದೂ ಈ ಸಂದರ್ಭದಲ್ಲಿ ಕರುಣಾ ನುಡಿದರು. ಅಂತಿಮವಾಗಿ ಕನ್ನಡಿಗರನ್ನು ಅಭಿನಂದಿಸಿದರು. ಕರುಣಾನಿಧಿ ಅವರ ಮಡದಿ ದಯಾಳು ಅಮ್ಮಾಳ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಲ್ಲೇಶ್ವರಂನಲ್ಲಿ ಸುಮಾರು 50 ಮಂದಿ ಕರವೇ ಕಾರ್ಯಕರ್ತರನ್ನು ಭಾನುವಾರ ಬೆಳಗ್ಗೆ ಬಂಧಿಸಿದ ಪ್ರಕರಣ ಹಾಗೂ ಮೂಡಲಪಾಳ್ಯದಲ್ಲಿ ರಸ್ತೆ ತಡೆ ಘಟನೆ ಹೊರತುಪಡಿಸಿದರೆ ನಗರ ಬಹುತೇಕ ಶಾಂತವಾಗಿತ್ತು. ಗಣ್ಯರು, ಅತಿಗಣ್ಯರು, ಜೆಡ್ ಸೆಕ್ಯುರಿಟಿ ಭದ್ರತೆಯಲ್ಲಿ ಸಂಚರಿಸುವವರ ಹಾದಿ ಬೀದಿಗಳಲ್ಲಿ ಸಂಚಾರ ನಿಯಂತ್ರಣ ವ್ಯವಸ್ಥೆ ಕಣ್ಣುಕುಕ್ಕುವಂತಿತ್ತು. ಮೋಡ ಮುಸುಕಿದ ವಾತಾವರಣ, ರಭಸದ ಮೇಲ್ಮೈ ಗಾಳಿಯ ವಾತಾವರಣದಲ್ಲಿ ಬೆಂಗಳೂರು ಈ ಭಾನುವಾರವನ್ನು ಕಳೆಯಿತು.
(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X