ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿಗೆ ಕೊಲೆ ಬೆದರಿಕೆ: ಇಬ್ಬರ ಬಂಧನ

By Staff
|
Google Oneindia Kannada News

Yeddyurappa
ಶಿವಮೊಗ್ಗ, ಆ. 8: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಪ್ತ ಸಹಾಯಕ ಚಂದ್ರಶೇಖರ ಮೂಲಕ ಕೊಲೆ ಬೆದರಿಕೆ ಹಾಕಿ ರು.15 ಕೋಟಿಗೆ ಬೇಡಿಕೆ ಇಟ್ಟಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ಜಿಲ್ಲೆಯ ಆನೆಕಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೆಂಕಟೇಶ್(35) ಹಾಗೂ ಬೆಂಗಳೂರಿನ ಎಎಸ್‌ಐ ಒಬ್ಬರ ಪುತ್ರ ವರ್ತೂರಿನ ನಿವಾಸಿ ರಾಘವೇಂದ್ರ(25) ಎಂಬುವವರೇ ಬಂಧಿತ ಆರೋಪಿಗಳು. ಇವರು ಚಂದ್ರಶೇಖರ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಕಳೆದ ನಾಲ್ಕು ಐದು ದಿನಗಳಿಂದ ಬೆದರಿಕೆ ಒಡ್ಡುತ್ತಿದ್ದರು. ಈ ದೂರವಾಣಿ ಕರೆಯನ್ನು ಬೆನ್ನು ಹತ್ತಿದ ಪೊಲೀಸರು ಭದ್ರಾವತಿಯಲ್ಲಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ಬಲೆಗೆ ಬಿದ್ದ ಬಗೆ?
ಕಳೆದ ಕೆಲ ದಿನಗಳಿಂದ ಶಿವಮೊಗ್ಗದಲ್ಲಿದ್ದ ಮುಖ್ಯಮಂತ್ರಿಗಳ ಆಪ್ತ ಸಹಾಯಕ ಚಂದ್ರಶೇಖರ್ ಮೊಬೈಲ್‌ಗೆ ರಾಜ್ಯದ ವಿವಿಧ ಭಾಗಗಳಿಂದ ದೂರವಾಣಿ ಮೂಲಕ ಕರೆ ಮಾಡುತ್ತಿದ್ದರು.
'ಮುಖ್ಯಮಂತ್ರಿಗಳ ವೈಯಕ್ತಿಕ ಬದುಕಿಗೆ ಸಂಬಂಧಿಸಿದ ಅನೇಕ ಮಾಹಿತಿಗಳು, ದಾಖಲೆಗಳು ಮತ್ತು ಸಿಡಿಗಳು ತಮ್ಮ ಬಳಿಯಿದ್ದು, ತಮಗೆ ರು.15 ಕೋಟಿ ನೀಡಿದರೆ ಈ ದಾಖಲೆಗಳನ್ನು ಬಹಿರಂಗಪಡಿಸುವುದಿಲ್ಲ. ಇಲ್ಲದಿದ್ದರೆ ವಿರೋಧ ಪಕ್ಷದ ನಾಯಕರಿಗೆ ಈ ಮಾಹಿತಿಯನ್ನು ನೀಡಿ ಮುಖ್ಯಮಂತ್ರಿಗಳ ಮಾನ ಹರಾಜು ಮಾಡಲಾಗುವುದು. ಹಣ ನೀಡದೆ ಪೊಲೀಸರಿಗೆ ತಿಳಿಸಿದರೆ ಮುಖ್ಯಮಂತ್ರಿಗಳನ್ನು ಹಾಗೂ ನಿನ್ನನ್ನು ಕೊಲೆ ಮಾಡುತ್ತೇವೆ" ಎಂದು ಆರೋಪಿಗಳು ಬೆದರಿಕೆ ಹಾಕುತ್ತಿದ್ದರು.

ಹಣ ಎಲ್ಲಿಗೆ ತಲುಪಿಸಬೇಕು ಎಂದು ಕೇಳಿದಾಗ ಸ್ಥಳಗಳನ್ನು ಸೂಚಿಸುತಿದ್ದ ಆರೋಪಿಗಳು ಕೆಲ ಹೊತ್ತಿನಲ್ಲಿಯೇ ಇದನ್ನು ಬದಲಿಸುತ್ತಿದ್ದರು. 'ವಾಹನ ಒಂದರಲ್ಲಿ ಒಬ್ಬರೇ ಬರಬೇಕು. ಒಂದೇ ಮೂಟೆಯಲ್ಲಿ ಅಷ್ಟೂ ಹಣ ಇರಬೇಕು. ಹೊರಡುವ ಮುನ್ನ ತಮಗೆ ಕಾರಿನ ನಂಬರ್‌ತಿಳಿಸಬೇಕು". ಎಂದು ಆರೋಪಿಗಳು ತಿಳಿಸಿದ್ದರು.

ನಿನ್ನೆ ಚಂದ್ರಶೇಖರ್ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರು. ದೂರು ದಾಖಲಿಸಿಕೊಂಡ ಪೊಲೀಸರು ಜಿಲ್ಲಾ ರಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚಿಸಿದರು. ಇಂದು ಬೆಳಗ್ಗೆ ಪುನಃ ಭದ್ರಾವತಿಯಿಂದ ಕರೆ ಬಂದಿತು. ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ಕರೆ ಬಂದ ಸ್ಥಳವನ್ನು ಪತ್ತೆಹಚ್ಚಿದರು. ಭದ್ರಾವತಿಯ ಯಾವ ಸ್ಥಳದಿಂದ ಕರೆ ಬಂದಿದೆ ಎಂದು ಖಚಿತ ಪಡಿಸಿಕೊಂಡ ಪೊಲೀಸರು ಚಂದ್ರಶೇಖರ ಅವರಿಗೆ ಭದ್ರಾವತಿಗೆ ಹೊರಡಲು ಸೂಚಿಸಿದರು.

ಕಾರಿನಲ್ಲಿ ಭದ್ರಾವತಿಗೆ ಹೊರಟ ಚಂದ್ರಶೇಖರ್‌ಗೆ ಮತ್ತೆ ಕರೆ ಬಂದಾಗ ಕರೆಯನ್ನು ತುಂಡರಿಸದೆ ನಿಧಾನವಾಗಿ ಮಾತನಾಡುತ್ತಾ ಹೋದರು. ಅತ್ತ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ತಮ್ಮ ಬಲೆಗೆ ಬೀಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X