ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2000 ಕೋಟಿ ರು ಪರಿಹಾರಕ್ಕೆ ಸಿಎಂ ಆಗ್ರಹ

By Staff
|
Google Oneindia Kannada News

ನವದೆಹಲಿ, ಆ. 6 : ಕರ್ನಾಟಕ ಅತಿವೃಷ್ಠಿ ಹಾಗೂ ಅನಾವೃಷ್ಠಿಗೆ ಈಡಾಗಿದೆ. ರಾಜ್ಯದ ಸುಮಾರು 24 ಜಿಲ್ಲೆಗಳಲ್ಲಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಹಿಂದೆಂದಿಗಿಂತಲೂ 7 ಜಿಲ್ಲೆಗಳಲ್ಲಿ ಪ್ರವಾಹ ಹೆಚ್ಚಾಗಿದ್ದರಿಂದ ಆಸ್ತಿ-ಪಾಸ್ತಿಗೆ ಅಪಾರ ನಷ್ಟವಾಗಿದೆ. ಹೀಗಾಗಿ ಕೇಂದ್ರ ಸರಕಾರ ಕೂಡಲೇ ಪರಿಹಾರ ನೀಡಬೇಕು 2000 ಕೋಟಿ ರುಪಾಯಿಗಳ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ಕೆಲ ಮುಖ್ಯ ವಿಚಾರಗಳ ಬಗ್ಗೆ ಚರ್ಚಿಸಿ ಕೇಂದ್ರದಿಂದ ಆಗತ್ಯ ಅನುಮೋದನೆ ಮತ್ತು ಧನ ಸಹಾಯ ಪಡೆದುಕೊಳ್ಳಲು ರಾಜ್ಯದ ಎಲ್ಲಾ ಪಕ್ಷಗಳ ಸಂಸತ್ ಸದಸ್ಯರೊಂದಿಗೆ ಗುರುವಾರ ಮಧ್ಯಾಹ್ನ ನಡೆಸಿದ ಸಭೆ ಅವರು ಮಾತನಾಡುತ್ತಿದ್ದರು. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಪಕ್ಷಭೇದ ಮರೆತು ಎಲ್ಲಾ ಸಂಸತ್ ಸದಸ್ಯರು ಸಹಕರಿಸುತ್ತಿರುವುದು ಸಂತಸದ ಸಂಗತಿ ಎಂದರು.

ಪ್ರವಾಹ ಮತ್ತು ಬರ ಪರಿಸ್ಥಿತಿ ಆಧ್ಯಯನ:
ರಾಜ್ಯದ ಪ್ರವಾಹ ಮತ್ತು ಬರ ಪರಿಸ್ಥಿತಿ ಆಧ್ಯಯನ ಮಾಡಿ ವರದಿ ಸಲ್ಲಿಸಲು ಕೇಂದ್ರದ ಅಧಿಕಾರಿಗಳ ತಂಡವನ್ನು ಕೂಡಲೆ ಕಳುಹಿಸುವ ಭರವಸೆಯನ್ನು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ನೀಡಿದ್ದಾರೆ. ರಾಜ್ಯದ ಸುಮಾರು 24 ಜಿಲ್ಲೆಗಳಲ್ಲಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಹಿಂದೆಂದಿಗಿಂತಲೂ 7 ಜಿಲ್ಲೆಗಳಲ್ಲಿ ಪ್ರವಾಹ ಹೆಚ್ಚಾಗಿದ್ದು ಆಸ್ತಿ-ಪಾಸ್ತಿಗೆ ಅಪಾರ ನಷ್ಟವಾಗಿದೆ.

ಸುಮಾರು 160 ಮಂದಿ ಪ್ರವಾಹದಿಂದ ಸಾವಿಗೀಡಾಗಿದ್ದಾರೆ. ಸಾವಿರಾರು ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. 10 ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ಅಪಾರವಾಗಿ ಹಾಳಾಗಿವೆ. ರಾಜ್ಯ ಸರ್ಕಾರ ಸಂತ್ರಸ್ತರಿಗೆ ನೆರವು ಒದಗಿಸಲು ಕ್ರಮ ಕೈಗೊಂಡಿದೆ. 30 ಕಡೆಗಳಲ್ಲಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಿ ತೊಂದರೆಗೀಡಾದವರಿಗೆ ಆಹಾರ ಮತ್ತು ವಸತಿ ಒದಗಿಸಿದೆ ಎಂದರು.

ಈ ವರ್ಷದ ಪ್ರವಾಹದಿಂದಾಗಿ ಒಟ್ಟಾರೆ 516.96 ಕೋಟಿ ರೂ.ಗಳ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ನಾವು ಕೇಂದ್ರದಿಂದ 312.79 ಕೋಟಿ ರೂ.ಗಳ ಪರಿಹಾರವನ್ನು ಕೇಳಿದ್ದೇವೆ. ಹಿಂದಿನ ವರ್ಷ ನೆರೆ-ಬರ ಈ ಕಾರಣಗಳಿಗಾಗಿ ಸಂಭವಿಸಿದ್ದ ನಷ್ಟ ಪರಿಹಾರಕ್ಕಾಗಿ ಕೇಂದ್ರದಿಂದ ಸುಮಾರು 2 ಸಾವಿರ ಕೋಟಿ ರೂ.ಗಳ ನೆರವನ್ನು ಕೋರಲಾಗಿದೆ. ಆದರೆ ಇದಕ್ಕೆ ಕೇಂದ್ರ ಸೂಕ್ತವಾಗಿ ಪ್ರತಿಕ್ರಿಯೆ ನೀಡಿರಲಿಲ್ಲ. ಆ ಬಗ್ಗೆ ನಮ್ಮ ಪ್ರಯತ್ನ ಮುಂದುವರೆದಿದೆ ಎಂದು ಆರೋಪಿಸಿದರು.

ವಿದ್ಯುತ್ ಕೊರತೆ ತೊಂದರೆ:ಕರ್ನಾಟಕ ಈಗ ವಿದ್ಯುತ್ ಕೊರತೆಯಿಂದ ಬಹಳ ತೊಂದರೆಗೀಡಾಗಿದೆ. ನೈಸರ್ಗಿಕ ಸಂಪನ್ಮೂಲವಾದ ಕಲ್ಲಿದ್ದಲು ರಾಜ್ಯದಲ್ಲಿ ಲಭ್ಯವಿಲ್ಲ. ಆದ್ದರಿಂದ ವಿದ್ಯುತ್ ಉತ್ಪಾದನೆಗೆ ಅಗತ್ಯವಾದಷ್ಟು ಕಲ್ಲಿದ್ದಲು ಪೂರೈಕೆಯನ್ನು ಸಕಾಲದಲ್ಲಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕಕ್ಕೆ ಪ್ರತ್ಯೇಕ ಕೋಲ್ ಬ್ಲಾಕ್‌ಗಳನ್ನು ಹಂಚಿಕೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಲಾಗಿದೆ ಎಂದರು.

ಕೇಂದ್ರ ವಿದ್ಯುತ್ ಉತ್ಪಾದನಾ ಘಟಕಗಳಿಂದ (ಸಿಜಿಎಸ್) ಕರ್ನಾಟಕಕ್ಕೆ ಹಂಚಿಕೆ ಮಾಡಿರುವ ವಿದ್ಯುತ್ ಪ್ರಮಾಣ 1556 ಮೆಗಾವ್ಯಾಟ್. (ಒಟ್ಟಾರೆ ಉತ್ಪಾದನೆಯಲ್ಲಿ ಇದು ಶೇ. 20.5 ರಷ್ಟು) ಆದರೆ ಆಂಧ್ರಪ್ರದೇಶಕ್ಕೆ ಶೇ. 26.19 ರಷ್ಟು ಹಾಗೂ ತಮಿಳುನಾಡಿಗೆ ಶೇ.31.1ರಷ್ಟು ವಿದ್ಯುತ್‌ನ್ನು ಹಂಚಿಕೆ ಮಾಡಲಾಗಿದೆ. ಆದರೆ, ಕರ್ನಾಟರಕಕ್ಕೆ ಏಕೆ ತಾರತಮ್ಯ ಎಂದು ಪ್ರಶ್ನಿಸಿದರು.

ಕಳೆದ ವರ್ಷ ರಾಜ್ಯದಲ್ಲಿ ತೀವ್ರ ವಿದ್ಯುತ್ ಕ್ಷಾಮ ಉಂಟಾದ್ದರಿಂದ ದುಬಾರಿ ಬೆಲೆಯಲ್ಲಿ ವಿದ್ಯುತ್ ಖರೀದಿಸಿ (ಪ್ರತಿ ಯುನಿಟ್‌ಗೆ ರೂ.9.50 ರಿಂದ ರೂ.10 ವೆಚ್ಚಮಾಡಿ) ಬಳಕೆದಾರರಿಗೆ ನಿಯಮಿತವಾಗಿ ಸರಬರಾಜು ಮಾಡಲಾಗಿತ್ತು ಇದರಿಂದ ಹೆಚ್ಚುವರಿಯಾಗಿ 2750 ಕೋಟಿ ರೂ.ಗಳ ಭಾರ ಸರ್ಕಾರದ ಮೇಲೆ ಬಿದ್ದಿತ್ತು. ಕೇಂದ್ರದ ಗ್ರೀಡ್‌ನಿಂದ ರಾಜ್ಯದ ಪಾಲು ಸರಿಯಾಗಿ ಸರಬರಾಜಗಿದ್ದರೆ ಈ ಹೊರೆ ನಮ್ಮ ಮೇಲೆ ಬೀಳುತ್ತಿರಲಿಲ್ಲ. ಆದ್ದರಿಂದ ರಾಜ್ಯದ ಪಾಲನ್ನು ನೆರೆಯ ರಾಜ್ಯಗಳಿಗೆ ನೀಡಿರುವಂತೆ ಹೆಚ್ಚಿಸುವುದಲ್ಲದೇ ನಮ್ಮ ಪಾಲಿನ ವಿದ್ಯುತ್‌ನಲ್ಲಿ ಕೊರತೆ ಮಾಡದಂತೆ ಸಮರ್ಪಕ ಸರಬರಾಜು ಮಾಡಲು ಒತ್ತಾಯಿಸಿದ್ದೇವೆ ಎಂದು ಹೇಳಿದರು.

ಬಿಜಾಪುರ ಜಿಲ್ಲೆ ಕೂಡಗಿಯಲ್ಲಿ 4000 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಯೋಜನೆಯನ್ನು ಎನ್.ಟಿ.ಪಿ.ಸಿ. ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಅಲ್ಲದೆ ಗುಲ್ಬರ್ಗಾ ಜಿಲ್ಲೆ ಮತ್ತು ಘಟಪ್ರಭಾಗಳಲ್ಲಿ ತಲಾ 1320 ಮೆಗಾವ್ಯಾಟ್ ಹಾಗೂ ಬಳ್ಳಾರಿ ಥರ್ಮಲ್ ಪ್ಲಾಂಟ್‌ನಲ್ಲಿ 500 ಮೆಗಾವ್ಯಾಟ್ ಸಮಾರ್ಥ್ಯದ 3ನೇ ಹಂತದ ಯೋಜನೆ ಕೈಗೊಳ್ಳುತ್ತಿದ್ದೇವೆ. ಇವುಗಳಿಗೆ ಕೋಲ್ ಲಿಂಕೇಜ್ ದೊರಕಿಸಿಕೊಡುವಂತೆ ಮನವಿ ಮಾಡಲಾಗಿದೆ ಎಂದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X