ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ : 'ಗುಪ್ತಗಾಮಿನಿ' ಮಂಜು

By * ಶಿ.ಜು.ಪಾಶ, ಶಿವಮೊಗ್ಗ
|
Google Oneindia Kannada News

Guptagamini fame Manjunath Hegade
ಶಿವಮೊಗ್ಗ, ಆ. 4 : "ಪ್ರಶಸ್ತಿ ತಕ್ಷಣಕ್ಕೆ ಖುಷಿ ನೀಡಿದೆ. ಇನ್ನೂ ರಂಗಭೂಮಿಯಲ್ಲಿ ಹೆಚ್ಚಿನ ಕೆಲಸ ಮಾಡಬೇಕಿತ್ತು. ಆನಂತರದಲ್ಲಿ ಈ ಪ್ರಶಸ್ತಿ ನನಗೆ ಬರಬೇಕಿತ್ತು ಎಂದು ಎನಿಸುತ್ತಿದೆ. ಪ್ರಶಸ್ತಿ ಬಂದ ನಂತರದಲ್ಲಾದರೂ ಮತ್ತೆ ರಂಗಭೂಮಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕೆಂಬ ಆಸೆ ಮೂಡಿದೆ. ಇಲ್ಲದಿದ್ದರೆ, ಪ್ರಶಸ್ತಿಗೆ ನಾನೇ ಮರ್ಯಾದೆ ನೀಡಿದಂತಾಗುವುದಿಲ್ಲ." ಹೀಗೆಂದವರು, ಕರ್ನಾಟಕ ನಾಟಕ ಅಕಾಡೆಮಿಯ 2008-09ನೇ ಸಾಲಿನ ವಾರ್ಷಿಕ ರಂಗಪ್ರಶಸ್ತಿಗೆ ಆಯ್ಕೆಗೊಂಡ ಕಿರುತೆರೆ ಕಲಾವಿದ ಮಂಜುನಾಥ ಹೆಗಡೆ.

ಆಗಸ್ಟ್ 16ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯು 2008-09ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಇಬ್ಬರಿಗೆ ವಾರ್ಷಿಕ ಪ್ರಶಸ್ತಿ ದೊರೆತಿರುವುದು ರಂಗಭೂಮಿ ಪ್ರಿಯರಿಗೆ ಸಾಕಷ್ಟು ಹರ್ಷ ಮೂಡಿಸಿದೆ. ಶಿವಮೊಗ್ಗದ ರಂಗಭೂಮಿಯಲ್ಲಿ ಹೆಸರು ಮಾಡಿದ ಮಂಜುನಾಥ ಹೆಗಡೆ ಇದೀಗ ಬೆಂಗಳೂರಿನಲ್ಲಿ ಧಾರವಾಹಿಗಳು, ಸಿನಿಮಾದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಇವರೊಂದಿಗೆ ಶಿವಮೊಗ್ಗದಲ್ಲಿಯೇ ವಾಸವಾಗಿರುವ ಹಾಗೂ ಹಿರಿಯ ರಂಗಕರ್ಮಿ ಕಾಂತೇಶ್ ಕದರಮಂಡಲಗಿಯವರಿಗೂ ಸಹ ಪ್ರಶಸ್ತಿ ದೊರೆತಿದೆ. ಈ ಇಬ್ಬರು ರಂಗಭೂಮಿ ಸಾಧಕರಿಗೂ ಅಭಿನಂದನೆಗಳು.

ಪ್ರಶಸ್ತಿಯ ಸಂತಸ ಹಂಚಿಕೊಂಡ ಮಂಜುನಾಥ ಹೆಗಡೆ ಹೇಳಿದ್ದಿಷ್ಟು : ನಾನು ಹೆಚ್ಚಾಗಿ ಶಿವಮೊಗ್ಗದಲ್ಲಿಯೇ ನಾಟಕಗಳನ್ನು ನಿರ್ದೇಶಿಸಿದ್ದು ಮತ್ತು ನಾಟಕಗಳಲ್ಲಿ ನಟಿಸಿದ್ದು. ಪ್ರಶಸ್ತಿ ಬಂದ ಈ ಸಂದರ್ಭದಲ್ಲಿ ಒಂದು ಕಡೆ ಖುಷಿ ಇದೆ. ಇನ್ನೊಂದು ಕಡೆ ನಾಟಕಗಳಲ್ಲಿ ಅಷ್ಟಾಗಿ ತೊಡಗಿಸಿಕೊಂಡಿಲ್ಲದ ದುಃಖವೂ ಇದೆ. ಈಗಲಾದರೂ ಪ್ರಶಸ್ತಿಗೆ ಗೌರವ ಕೊಡುವ ಹಿನ್ನೆಲೆಯಲ್ಲಿ ಮತ್ತೆ ರಂಗಭೂಮಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕಾಗಿದೆ.

ನಾನು ಯಾವಾಗಲೂ ನಟಿಸುತ್ತಲೇ ಇರಬೇಕು. ಅದು ನನ್ನ ಕನಸು. ನನಗೆ ನಟನೆ ಬಿಟ್ಟರೆ ಬೇರೆ ಏನೂ ಬರುವುದಿಲ್ಲ. ಈಗ ಬೆಂಗಳೂರಿನಲ್ಲಿ ಜೀವನಕ್ಕಾಗಿ ಧಾರವಾಹಿಗಳಲ್ಲಿ, ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಸಂತೋಷಕ್ಕೆಂದು ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದೆ. ಅದೇ ನನ್ನ ಬದುಕಾಯಿತು. ಈಗ ಅದೇ ಸಂತೋಷಕ್ಕೆ ಪ್ರಶಸ್ತಿಯೂ ಬಂದಿದೆ.

ಮೊದಲಿಂದಲೂ ನಾಟಕಗಳನ್ನು ನಿರ್ದೇಶಿಸಬೇಕು ಮತ್ತು ನಾಟಕಗಳಲ್ಲಿ ಅಭಿನಯಿಸಬೇಕು ಎಂಬ ಆಸೆ. ಈ ಆಸೆಯ ಜೊತೆ ತುಡಿತವೂ ಹೆಚ್ಚಾಗಿದೆ. ಒಂದು ಕಡೆ ಧಾರವಾಹಿಗಳಲ್ಲಿ ನಟಿಸುತ್ತಿದ್ದೇನೆ. ಅದು ನನ್ನ ಹೊಟ್ಟೆಪಾಡು. ಈಗ ಹೊಟ್ಟೆಪಾಡೇ ಹೆಚ್ಚಾಗಿಬಿಟ್ಟಿದೆ. ಒಂದು ಕಡೆ ಧಾರವಾಹಿಗಳಲ್ಲಿ, ಇನ್ನೊಂದು ಕಡೆ ನಾಟಕಗಳಲ್ಲಿ ನಟಿಸುವುದೆಂದರೆ ಅದೊಂದು ದ್ವಿಪಾತ್ರದ ಕಷ್ಟ. ಧಾರವಾಹಿಗಳಲ್ಲಿ ನಟಿಸುವುದೆಂದರೆ ಸುಲಭ ಎನ್ನುವವರಿದ್ದಾರೆ. ಆದರೆ, ಅದು ಬಹಳ ಕಷ್ಟದ ಕೆಲಸ. ಸೀರಿಯಲ್ ಆಕ್ಟಿಂಗೇ ಬೇರೆ. ನಾಟಕದ ಆಕ್ಟಿಂಗೇ ಬೇರೆ. ಆದರೆ, ನಾಟಕದ ಖುಷಿ, ನಾಟಕದ ರಿಹರ್ಸಲ್‌ಗಳಲ್ಲಿ ಸಿಗುವ ಸಂತೋಷ ಸೀರಿಯಲ್‌ಗಳಲ್ಲಿ ಸಿಗುವುದಿಲ್ಲ.

ಶಿವಮೊಗ್ಗದಲ್ಲಿ ಹೊಸದೊಂದು ನಾಟಕ ಸಿದ್ಧಪಡಿಸಬೇಕೆಂಬ ಆಸೆ ಹುಟ್ಟಿಕೊಂಡಿದೆ. ಒಳ್ಳೆಯದೊಂದು ನಾಟಕ ಕೃತಿ ಸಿಗಬೇಕು. ಆದರೆ, ಸಮಯದ ಅಭಾವ ಸಾಕಷ್ಟಿದೆ. ನಿನ್ನೆಯಿಂದಲೇ ಈ ಬಗ್ಗೆ ಯೋಚಿಸುತ್ತಿದ್ದೇನೆ. ವಾರಕ್ಕೆ 2 ದಿನವಾದರೂ ಶಿವಮೊಗ್ಗಕ್ಕೆ ಬಂದು ಕಲಾವಿದರನ್ನು ಸಿದ್ಧಪಡಿಸಿ ಒಂದು ಒಳ್ಳೆಯ ನಾಟಕವನ್ನು ಶಿವಮೊಗ್ಗದ ಜನಕ್ಕೆ ನೀಡಬೇಕೆಂದು ಬಯಸಿದ್ದೇನೆ. ಹೇಗಾದರಾಗಲೀ ಈ ಕೆಲಸ ಮಾಡುತ್ತೇನೆ.

ಹೀಗೆ ತಮ್ಮ ಮನಸ್ಸಿನ ಮಾತುಗಳನ್ನು ಹೇಳಿಕೊಂಡ ಕಲಾವಿದ ಮಂಜು ಹೆಗಡೆ ಮೂಲತಃ ಸಿರ್ಸಿಯವರು. ಅಲ್ಲಿಂದ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಹೋಗಿ ಕಲಾ ಗಂಗೋತ್ರಿ ತಂಡದೊಂದಿಗೆ ಗುರುತಿಸಿಕೊಂಡವರು. ಮುಖ್ಯಮಂತ್ರಿ ನಾಟಕದೊಂದಿಗೆ ರಂಗಭೂಮಿಯಲ್ಲಿ ಹೆಜ್ಜೆಯೂರಲು ಆರಂಭಿಸಿದರು. ಆನಂತರದಲ್ಲಿ ಶಿವಮೊಗ್ಗಕ್ಕೆ ಬಂದ ಮಂಜು ಹೆಗಡೆಯವರು ಕೋಟೆರಸ್ತೆಯಲ್ಲಿ ವಾಲ್ಮೀಕಿ ಪ್ರಿಂಟರ್‍ಸ್ ಆರಂಭಿಸಿದರು. ಶಿವಮೊಗ್ಗದಲ್ಲಿ ಸುಣ್ಣ ಹಚ್ಚಿದ ಸಮಾಧಿಗಳು, ಹುಲಿಯ ನೆರಳು, ಅದರೇಶಿ ಪರದೇಶಿಯಾದ, ಸ್ರೀಕೃಸ್ಣ ಸಂಧಾನ ಸೇರಿದಂತೆ ಹಲವಾರು ಜನಮನ ಗೆದ್ದ ನಾಟಕಗಳನ್ನು ನಿರ್ದೇಶಿಸಿದರು. ನಂತರದಲ್ಲಿ ಬೆಂಗಳೂರಿಗೆ ಹೋದ ಮಂಜು ಹೆಗಡೆ ಹೆಚ್ಚಾಗಿ ಧಾರವಾಹಿಗಳಲ್ಲಿ ನಟಿಸತೊಡಗಿದ್ದಾರೆ. ವಾತ್ಸಲ್ಯ, ಸೀತೆ, ಬಂದೇ ಬರುತಾವ ಕಾಲ, ಗುಪ್ತಗಾಮಿನಿ, ಮನೆಯೊಂದು ಮೂರು ಬಾಗಿಲು, ಜೋಗುಳ, ಪ್ರೀತಿ ಇಲ್ಲದ ಮೇಲೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕುರುಬನ ರಾಣಿ, ಹಬ್ಬ, ಗಂಡುಗಲಿ, ಯಾರೇ ನೀ ಅಭಿಮಾನಿ ಸೇರಿದಂತೆ ಹಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X