ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಶಸ್ತಿಗೆ ನನಗಿಂತ ಹಿರಿಯರಿದ್ದಾರೆ : ಕಾಂತೇಶ್

By * ಶಿ.ಜು.ಪಾಶ, ಶಿವಮೊಗ್ಗ
|
Google Oneindia Kannada News

Kantesh Kadaramandalagi
ಶಿವಮೊಗ್ಗ, ಆ. 4 : ಪ್ರಶಸ್ತಿಯನ್ನು ತಕ್ಷಣಕ್ಕೆ ಬಯಸಿರಲಿಲ್ಲ. ರಂಗಭೂಮಿಯಲ್ಲಿ ನನಗಿಂತ ಹಿರಿಯರಿದ್ದಾರೆ. ಅವರಿಗೆ ಈ ಪ್ರಶಸ್ತಿ ಬರಬೇಕಿತ್ತು. ಆದರೂ ನನಗೆ ಹುಡುಕಿ ಕೊಟ್ಟಿದ್ದಾರೆ. ಇದರಿಂದ ಸಾಕಷ್ಟು ಸಂತೋಷಗೊಂಡಿದ್ದೇನೆ. ಈ ಪ್ರಶಸ್ತಿ ಸಹ್ಯಾದ್ರಿ ರಂಗತರಂಗಕ್ಕೆ ದಕ್ಕಿದ ಪ್ರಶಸ್ತಿ ಎಂದು ಪ್ರಶಸ್ತಿ ವಿಜೇತ ಕಾಂತೇಶ್ ಕದರಮಂಡಲಗಿ ತಮ್ಮ ಸಂತೋಷವನ್ನು ಪತ್ರಿಕೆಯ ಜೊತೆ ಹಂಚಿಕೊಂಡರು.

ನಾಟಕ ಅಕಾಡೆಮಿ ನೀಡುವ 2008-09ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿವಮೊಗ್ಗದ ಕಾಂತೇಶ್ ಕದರಮಂಡಲಗಿ ಶಾಲಾ ದಿನಗಳಿಂದಲೇ ರಂಗಭೂಮಿಯ ನಂಟು ಬೆಳೆಸಿಕೊಂಡವರು. ಇವರು ನಗರದಲ್ಲಿ ಭಾರತ್ ಸಂಚಾರ್ ನಿಗಮದ ಉದ್ಯೋಗಿ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಸವಣೂರಿನಲ್ಲಿ. ಹನುಮಂತಪ್ಪ ಕದರಮಂಡಲಗಿ ಮತ್ತು ಚಿನ್ನಮ್ಮರವರ ಪುತ್ರರಾಗಿದ್ದಾರೆ.

ನಟ, ನಿರ್ದೇಶಕ, ಹಾಡುಗಾರರಾಗಿ ಹಾಗೂ 1981ರಲ್ಲಿ ಹೊನ್ನಾಳಿಯ ಅಭಿವ್ಯಕ್ತಿ ತಂಡದಲ್ಲಿ ಸೇರ್ಪಡೆಗೊಂಡು ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ನಂತರ ಶಿವಮೊಗ್ಗದ ಸಹ್ಯಾದ್ರಿ ರಂಗತರಂಗದಲ್ಲಿ ತೊಡಗಿಸಿಕೊಂಡವರು. ಹಾವು ಹರಿದಾಡ್ತಾವ, ಇತಿಹಾಸ ಚಕ್ರ, ಶೋಕ ಚಕ್ರ, ಸಿರಿಸಂಪಿಗೆ, ಸಂಕ್ರಾಂತಿ, ಗುಣಮುಖ, ಹಯವದನ, ಕಾನೀನ, ರಾವಿನದಿಯ ದಂಡೆಯಲ್ಲಿ, ಚಂದ್ರಹಾಸ, ಜಿಪುಣಾಗ್ರೇಸರ, ಚೋರಪುರಾಣ ನಾಟಕಗಳನ್ನು ನಿರ್ದೇಶಿಸಿದ್ದಾರೆ.

2007ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯು ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ದೇಶಿ ನಾಟಕೋತ್ಸವದಲ್ಲಿ ಡಾ| ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಜೀವನ ಕುರಿತ ನಾಟಕ ಗಂಗಾವತರಣ, 2008ರಲ್ಲಿ ಉತ್ಪಲ್‌ದತ್‌ರ ಸೂರ್ಯಶಿಕಾರಿ, 2009ರಲ್ಲಿ ಕಾನೀನ ನಾಟಕ ನಿರ್ದೇಶಿಸಿದ್ದಾರೆ. 2009ರಲ್ಲಿ ಮುಂಬಯಿಯಲ್ಲಿ ನಡೆದ ಕುವೆಂಪು ನಾಟಕೋತ್ಸವದಲ್ಲಿ ಇವರ ನಿರ್ದೇಶನದ ಕಾನೀನ ನಾಟಕ ಪ್ರದರ್ಶನ ಕಂಡಿದೆ. ವಿಶಾಖ ಪಟ್ಟಣದಲ್ಲಿ ಸಂಕ್ರಾಂತಿ ಪ್ರದರ್ಶನಗೊಂಡಿದೆ. ಇವರ ನಿರ್ದೇಶನದಲ್ಲಿ ಉಡುಪಿಯ ನಾಟಕ ಸ್ಪರ್ಧೆಗಳಲ್ಲಿ ಹಲವು ನಾಟಕಗಳು ಪ್ರಶಸ್ತಿ ಗಳಿಸಿವೆ.

ಆಕಾಶವಾಣಿ ಭದ್ರಾವತಿಯಲ್ಲಿ ಮುಕ್ತಿ ಪಥ, ಮೊದಲ ಮೆಟ್ಟಿಲು ಮತ್ತಿತರೆ ನಾಟಕಗಳನ್ನು ರಚಿಸಿ ಬಿತ್ತರಿಸಿದ್ದಾರೆ. ಇವರ ಬೀದಿ ನಾಟಕಗಳಾದ ಅಕ್ಷರ, ಭೂ ತಾಯಿ, ಕುಡಿತ ಬಿಡಿ, ಏಡ್ಸ್ ಸೇರಿದಂತೆ ಹಲವು ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದಾರೆ. ಸಿನಿಮಾಗಳಲ್ಲಿಯೂ ಇವರು ಕಾರ್ಯನಿರ್ವಹಿಸಿದ್ದು, ಕೃಷ್ಣ ಮಾಸಡಿಯವರ ನಿರ್ದೇಶನದ ಅವಸ್ಥೆ, ಪಟ್ಟಾಭಿರಾಮರೆಡ್ಡಿ ನಿರ್ದೇಶನದ ದೇವರಕಾಡು ಚಿತ್ರಗಳಲ್ಲಿ ನಟಿಸಿದ್ದಾರೆ.

ಸ್ವಂತ ನಿರ್ಮಾಣ ನಿರ್ದೇಶನದಲ್ಲಿ ಏಸೂರ ಕೊಟ್ಟರೂ ಈಸೂರ ಕೊಡೆವು ಕಿರುಚಿತ್ರವನ್ನು ತಯಾರಿಸಿ, 1997ರಲ್ಲಿ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರ ಮಾಡಿದ್ದಾರೆ. ಕುವೆಂಪುರವರ ಬಲಿದಾನ ಕಿರುಚಿತ್ರ ನಿರ್ದೇಶಿಸಿದ್ದಾರೆ. ಹುಲಿ ಚಂದ್ರಶೇಖರರವರ ಅಂದು ಇಂದು ಕಿರುಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ಕುವೆಂಪು ಕುರಿತ ಸಾಕ್ಷ್ಯಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ನೇತೃತ್ವದ ಸಹ್ಯಾದ್ರಿ ರಂಗತರಂಗ ತಂಡವು ಸತತವಾಗಿ ನಾಟಕಗಳನ್ನು ಶಿವಮೊಗ್ಗದಲ್ಲಿ ನೀಡುತ್ತಲೇ ಬಂದಿದೆ. ಇತ್ತೀಚೆಗಷ್ಟೆ ಸೂರ್ಯಶಿಕಾರಿ ನಾಟಕ ಶಿವಮೊಗ್ಗದಲ್ಲಿ ಪ್ರದರ್ಶನ ಕಂಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X