ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲಾ ಮಕ್ಕಳಿಗೆ ಪಾಠ ಹೇಳಿದ ಪ್ರೊ. ಸಿಎನ್ ಆರ್ ರಾವ್

By Staff
|
Google Oneindia Kannada News

CNR Rao
ಬೆಂಗಳೂರು, ಜು. 31 : ವಿಜ್ಞಾನ ಕಲಿಯೋಣ ಎಂಬ ವಿಷಯದಡಿ ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಾದ ಜೆ.ಸಿ. ಬೋಸ್, ಮಾರ್ಕೋನಿ, ಜಾನ್ ಬಾರ್ಡಿನ್, ಚಾರ್ಲ್ಸ್ ಡಾರ್ವಿನ್, ಗೆಲಿಲಿಯೋ, ಲೈನಸ್ ಪೌಲಿಂಗ್, ಸಿ.ವಿ. ರಾಮನ್, ರಾಮಾನುಜಂ ಮತ್ತು ಅವರ ಆವಿಷ್ಕಾರಗಳ ಬಗ್ಗೆ ಮಕ್ಕಳಿಗೆ ವಿವರಿಸುತ್ತ ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಪಾಠ ಹೇಳುವ ಮೇಷ್ಟ್ರಾದರು.

ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್. ಟಾಟಾ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ ಹಾಗೂ ಕರ್ನಾಟಕ ವಿಜ್ಞಾನ ವಿದ್ಯಾ ಜಾಗೃತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಮಕ್ಕಳಿಗೆ ಬೇಸರ ತರಿಸದೆ, ಕನ್ನಡ ಪದಗಳಿಗೆ ತಡಕಾಡದೆ, ಅಚ್ಚ ಕನ್ನಡದಲ್ಲಿ ನಿರರ್ಗಳವಾಗಿ ಮಹಾಸ್ಫೋಟ, ಬ್ಯಾಕ್ಟೀರಿಯಾ ಜನನ, ಭೂಮಿಯ ಹುಟ್ಟು ಮುಂತಾದ ವಿಷಯಗಳನ್ನು ಅವರು ಸರಳವಾಗಿ ಮನಮುಟ್ಟುವಂತೆ ಮಕ್ಕಳಿಗೆ ಪಾಠ ಹೇಳಿದರು.

ಕರ್ನಾಟಕ ವಿಜ್ಞಾನ ಕ್ಷೇತ್ರದಲ್ಲಿ ಬಹಳ ಮುಂದುವರಿಯಬೇಕಾದರೆ ಶಾಲಾ ಮಕ್ಕಳು ಅದರಲ್ಲೂ ಹಳ್ಳಿಯ ಮಕ್ಕಳಿಗೆ ಪ್ರೋತ್ಸಾಹ ಸಿಗಬೇಕು. ಬೆಂಗಳೂರು ಬಿಟ್ಟು ಹೊರಗೆ ಹೋದರೆ ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಇದೆ. ಒಬ್ಬಿಬ್ಬರು ವಿಜ್ಞಾನಿಗಳಾದರೆ ಸಾಲದು. ಅವಿಷ್ಕಾರಗಳ ಬದಲು ಅನ್ವಯಿಕಶಾಸ್ತ್ರಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಿಸುತ್ತಿದಾರೆ. ಮಾನವನ ಸಂತೋಷಕ್ಕೆ ಹಣ ಗಳಿಸುವುದೇ ಮುಖ್ಯವಲ್ಲ ಎಂದು ಅಭಿಪ್ರಾಯಪಟ್ಟರು.

ನೂರು ವರ್ಷಗಳ ಹಿಂದೆ ಪರಮಾಣು, ರಾಸಾಯನಿಕ ಬಂಧ, ಕ್ಷ-ಕಿರಣಗಳು, ಡಿಎನ್‌ಎಗಳ ಬಗ್ಗೆ ಅರಿವಿರಲಿಲ್ಲ. ಈಗ ವಿಜ್ಞಾನ ಕ್ಷೇತ್ರದಲ್ಲಿ ನಿರಂತರ ಪ್ರಗತಿಯಾಗುತ್ತಿದೆ. ವಿಜ್ಞಾನ, ಕಲೆ, ಆಧ್ಯಾತ್ಮ ಯಾವುದೇ ಇರಲಿ, ಮಕ್ಕಳು ತಮಗೆ ಆಸಕ್ತಿ ಇರುವ ಕ್ಷೇತ್ರವನ್ನು ತಾವೇ ಆರಿಸಿಕೊಂಡು ಶ್ರೇಷ್ಠತೆಯನ್ನು ಸಾಧಿಸಲು ಶ್ರಮ ಪಡಬೇಕು ಎಂದು ಅವರು ಸಲಹೆ ನೀಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಅಶೋಕ್ ಕುಮಾರ್ ಸಿ. ಮನೋಳಿ ಅವರು ಮಾತನಾಡಿ ಪರಿಣಾಮಕಾರಿ ವಿಜ್ಞಾನ ಕಲಿಕೆ ಹಾಗೂ ಸಂಶೋಧನೆಗೆ ಪ್ರೋತ್ಸಾಹ ನೀಡುವ ದೂರದೃಷ್ಟಿಯಿಂದ ದಾರ್ಶನಿಕ ಸಮೂಹವು ವಿಜ್ಞಾನ ಶಿಕ್ಷಣ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಪೂರಕವಾದ 17 ಕಾರ್ಯಕ್ರಮಗಳನ್ನು ವಿವಿಧ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಪ್ರೊ. ರೊದ್ದಂ ನರಸಿಂಹ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಡಾ. ಹೆಚ್.ಎಸ್. ನಿರಂಜನಾರಾಧ್ಯ ಮತ್ತಿತರ ಹಿರಿಯ ವಿಜ್ಞಾನಿಗಳ ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X