ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಳವೆ ಬಾವಿಯಿಂದ ಬಿಸಿನೀರು : ಏನಿದರ ರಹಸ್ಯ?

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

Hot water oozing out of borewell in Magadi
ರಾಮನಗರ, ಜು. 30 : ಪ್ರಕೃತಿಯಲ್ಲಿ ಹಲವು ವಿಸ್ಮಯಕಾರಿ ವಿಚಿತ್ರ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಗಣೇಶ ಹಾಲು ಕುಡಿಯುವುದು, ಕಲ್ಕಿ ಫೋಟೋದಿಂದ ಜೇನುತುಪ್ಪ ಸುರಿದಿದ್ದು, ಸಾಯಿಬಾಬಾರ ವಿಗ್ರಹ ಕಣ್ಣು ಬಿಟ್ಟಿದ್ದನ್ನ ಕಂಡು ಜನ ಮರುಳೋ ಜಾತ್ರೆ ಮರಳು ಎಂಬಂತೆ ಜನಜಾತ್ರೆ ಸೇರಿ ದೈವೀ ಕಲ್ಪನೆ ಮೂಡಿಸಿದ್ದನ್ನ ನಾವು ಕಂಡಿದ್ದೇವೆ, ಇನ್ನೂ ಮರೆತಿಲ್ಲ. ಇವೆಲ್ಲ ಘಟನೆಗಳಿಗೆ ವೈಜ್ಞಾನಿಕ ಕಾರಣಗಳಿವೆ ಎಂಬುದನ್ನ ವಿಚಾರವಾದಿಗಳು ಬಹಿರಂಗಗೊಳಿಸಿದ್ದಾರೆ.

ಈ ನಡುವೆ ಪ್ರಕೃತಿಯ ಭೂಗರ್ಭದಿಂದ ಬರುವ ಜಲ ಬೋರ್‌ವೆಲ್ ಕೊಳವೆಯ ಮೂಲಕ ಬಿಸಿನೀರಾಗಿ ಹೊರಬರುವುದರ ಮೂಲಕ ಜನತೆಯಲ್ಲಿ ಕುತೂಹಲ ಕೆರಳಿಸುವಂತೆ ಮಾಡಿದೆ. ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ಕೆಂಪೇಗೌಡನಗರ ಬಡಾವಣೆಯ ಮನೆಯೊಂದರಲ್ಲಿ ದಿನನಿತ್ಯ ಕಳೆದ ಒಂದು ವಾರದಿಂದ ಕೊಳವೆಬಾವಿಯಲ್ಲಿ ಬಿಸಿನೀರು ಬರುತ್ತಿದ್ದು, ವಿಸ್ಮಯಗಳ ಪಟ್ಟಿಗೆ ತನ್ನನ್ನೂ ಸೇರಿಸಿಕೊಂಡಿದೆ.

ಪ್ರಕೃತಿ ತನ್ನ ಒಡಲಿನಲ್ಲಿ ಹಲವಾರು ರೀತಿಯ ವಿಚಿತ್ರಗಳನ್ನಿಟ್ಟುಕೊಂಡು ಆಸ್ತಿಕರಲ್ಲಿ ದೈವೀಭಾವನೆ ಮೂಡಿಸಿದರೆ, ನಾಸ್ತಿಕರಲ್ಲಿರುವ ವೈಜ್ಞಾನಿಕ ಚಿಂತನೆಯನ್ನ ಎಚ್ಚರಗೊಳಿಸುತ್ತದೆ. ಪ್ರಕೃತಿಯಲ್ಲಿ ವಿಜ್ಞಾನಕ್ಕೆ ಸವಾಲಾಗುವಂತಹ ಇಂತಹ ಹಲವಾರು ಘಟನೆಗಳು ನಡೆಯುತ್ತಲೇ ಇವೆ. ಈಗ ಶಾಲಾ ಶಿಕ್ಷಕ ಶ್ರೀಧರ್‌ರವರ ಮನೆಯಲ್ಲಿ ನಾಲ್ಕು ವರ್ಷದ ಹಿಂದೆ ಕೊರೆಸಿದ್ದ ಕೊಳವೆ ಬಾವಿಯಲ್ಲಿ ಕಳೆದೊಂದು ವಾರದಿಂದ ಮೋಟಾರ್ ಆನ್ ಮಾಡಿದಾಕ್ಷಣ ಬಿಸಿನೀರು ಬೀಳುತ್ತಿದೆ.

ನಾಲ್ಕು ವರ್ಷದ ಹಿಂದೆ ಕೊಳವೆ ಬಾವಿ ಕೊರೆಸುವಾಗ ಭೂಗರ್ಭದಲ್ಲಿ ಬಂಡೆಗಲ್ಲುಗಳು ಸಿಕ್ಕಿದ ನಂತರ ಅಂತರ್ಜಲ ಚಿಮ್ಮಿತ್ತು. ಅಂದಿನಿಂದ ಇಂದಿನವರೆಗೂ ಸಹಜ ರೀತಿಯಲ್ಲೇ ಕೊಳವೆ ಬಾವಿಯಲ್ಲಿ ತಣ್ಣನೆಯ ನೀರು ಬರುತ್ತಿತ್ತು. ಆದರೆ ವಾರದಿಂದ ಬಿಸಿನೀರು ಬರುವುದನ್ನ ಕಂಡು ಆತಂಕಗೊಂಡ ಕುಟುಂಬ ಶಾರ್ಟ್‌ಸರ್ಕ್ಯೂಟ್ ಆಗುತ್ತಿದೆಯೆಂದು ಅನುಮಾನದ ಮೇಲೆ ಮೆಕ್ಯಾನಿಕ್‌ಗೆ ವಿಷಯ ತಿಳಿಸಿದ್ದಾರೆ. ಮೆಕ್ಯಾನಿಕ್ ಪರೀಕ್ಷೆ ನಡೆಸಿದ ನಂತರ ಎಲ್ಲವೂ ಸರಿಯಿದ್ದರೂ ಬಿಸಿನೀರು ಬೀಳುತ್ತಲೇ ಇದೆ. ಇದರಿಂದ ಬಿಸಿನೀರಿನ ಕೊಳವೆ ಬಾವಿಯ ಬಗ್ಗೆ ಭೂಗರ್ಭ ತಜ್ಞರಿಗೆ ವಿಷಯ ತಿಳಿಸಿ ಆತಂಕವನ್ನ ದೂರಮಾಡಿಕೊಳ್ಳಬೇಕೆಂಬುದು ಕುಟುಂಬದ ಅಭಿಪ್ರಾಯವಾಗಿದೆ.

ಶ್ರೀಧರ್‌ರವರ ಮನೆಯ ಕೊಳವೆ ಬಾವಿಯಲ್ಲಿ ಕಳೆದ ಅಮಾವಸ್ಯೆಯ ದಿನದಿಂದ ಬಿಸಿನೀರು ಬೀಳುತ್ತಿರುವುದರಿಂದ ಕೆಲವರಲ್ಲಿ ದೈವಿಕ ಭಾವನೆ ಜಾಗೃತವಾಗಿದೆ. ಈ ಬಡಾವಣೆಯಲ್ಲಿರುವ ಕೊಳವೆಬಾವಿಗಳ ನೀರು ಉಪ್ಪುನೀರಾಗಿದೆ, ಆದರೆ ಶ್ರೀಧರ್‌ರವರ ಮನೆಯಲ್ಲಿ ಮಾತ್ರ ಸಿಹಿನೀರು ಸಿಕ್ಕಿದೆ. ಆದ್ದರಿಂದ ಈ ಬಡಾವಣೆಯ ಅರ್ಧದಷ್ಟು ಮನೆಗಳಿಗೆ ಈ ಕೊಳವೆಬಾವಿಯಿಂದಲೇ ನೀರು ಪೂರೈಕೆಯಾಗುತ್ತಿದೆ.

ಆದರೆ ಇದ್ದಕ್ಕಿದ್ದಂತೆ ಈಗ ಬಿಸಿನೀರು ಅಮಾವಸ್ಯೆಯ ದಿನದಿಂದ ಬೀಳುತ್ತಿರುವುದಕ್ಕೆ ದೈವಮಹಾತ್ಮೆಯೋ, ವೈಜ್ಞಾನಿಕ ಕಾರಣವಿದೆಯೆ ಎಂಬುದು ಜನರ ಕುತೂಹಲವಾಗಿದೆ. ಕೊಳವೆ ಬಾವಿಯ ಬಿಸಿನೀರು ಜನರಲ್ಲಿ ಒಂದು ರೀತಿ ಕುತೂಹಲ, ದೈವಿಕಭಾವನೆ ಮೂಡಿಸಿರುವುದರಿಂದ ಪೂಜೆ ಪುನಸ್ಕಾರಗಳೆಲ್ಲವೂ ನಡೆದಿವೆ. ವಿದ್ಯುತ್ ಇಲ್ಲದ ಈ ಸಮಯದಲ್ಲಿ ಭೂಗರ್ಭದಿಂದಲೇ ಬಿಸಿನೀರು ಬರುತ್ತಿರುವುದರಿಂದ ಭೂತಾಯಿಗೂ ವಿದ್ಯುತ್ ಬಿಸಿ ತಟ್ಟಿರಬಹುದೆಂಬುದು ಜನತೆ ತಮಾಷೆಯಿಂದ ಮಾಡುತ್ತಿದ್ದಾರೆ.

ಒಟ್ಟಾರೆ ಕೊಳವೆ ಬಾವಿಯ ಬಿಸಿನೀರಿನ ಬಗ್ಗೆ ಜನರಲ್ಲೆ ಹಲವಾರು ರೀತಿಯ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಭೂಮಿಯ ಒಳಪದರದಲ್ಲಿನ ಉಷ್ಣಾಂಶದಿಂದ ಭೂಮಿಯಲ್ಲಿರುವ ಖನಿಜಾಂಶ ಕೂಡ ಬಿಸಿಯಾಗಿ ಬೋರ್‌ವೆಲ್ ಆನ್ ಮಾಡಿದ 15ರಿಂದ 20 ನಿಮಿಷಗಳ ಕಾಲ ಕೆಲವೊಮ್ಮೆ ಬಿಸಿನೀರು ಬರುವ ಸಾಧ್ಯತೆಯಿದೆ. ಭೂತಾಪ ಜಾಸ್ತಿಯಾಗುತ್ತಿರುವುದರ ಪರಿಣಾಮ ಇದಾಗಿರಬಹುದೆ? ಎಂಬ ಮಾತುಗಳೂ ಕೇಳಿಬರುತ್ತಿವೆ. ಮತ್ತು ಬಂಡೆಗಲ್ಲಿನ ನಡುವೆ ಕೊಳವೆ ಬಾವಿ ಕೊರೆದಿರುವುದರಿಂದ ಭೂಮಿಯ ಉಷ್ಣಾಂಶದಿಂದ ಬಿಸಿನೀರು ಬರುವ ಸಾಧ್ಯತೆಯೂ ಇದೆ ಎಂಬುದು ಭೂತಜ್ಞರ ಅಭಿಪ್ರಾಯವಾಗಿದೆ. ಆದರೆ ಸ್ಥಳ ಪರಿಶೀಲನೆ ನಡೆಸಿದ ನಂತರ ಕೊಳವೆ ಬಾವಿಯ ಬಿಸಿನೀರು ಬರಲು ಕಾರಣವೇನೆಂಬುದು ತಿಳಿಯುತ್ತದೆಂಬುದು ತಜ್ಞರ ಅಭಿಪ್ರಾಯವಾಗಿದೆ. ಒಟ್ಟಾರೆ ಬಿಸಿನೀರಿನ ಕೊಳವೆ ಬಾವಿಯ ರಹಸ್ಯದ ಬಗ್ಗೆ ಜನತೆಯಲ್ಲಿ ಕುತೂಹಲ ಮೂಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X