ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ಸಂಸದೆ ಶಾಂತಾ ಸಂಸತ್ ಭಾಷಣ

By Staff
|
Google Oneindia Kannada News

MP J Shantha
ನವದೆಹಲಿ, ಜುಲೈ. 24: ಭಾಗ್ಯಲಕ್ಷ್ಮೀ, ಜನನೀ ಸುರಕ್ಷಾ ಮುಂತಾದ ಕ್ರಾಂತಿಕಾರಿ ಯೋಜನೆಗಳನ್ನು ರೂಪಿಸಿರುವ ಬಿ.ಜೆ.ಪಿ ನೇತೃತ್ವದ ಕರ್ನಾಟಕ ಸರ್ಕಾರದ ಮಹಿಳಾ ಅಭಿವೃದ್ಧಿ ಮಾದರಿಯನ್ನು ಕೇಂದ್ರ ಸರ್ಕಾರವು ದೇಶಾದ್ಯಂತ ಜಾರಿಗೆ ತರಬೇಕು ಎಂದು ಬಳ್ಳಾರಿ ಸಂಸದೆ ಜೆ. ಶಾಂತಾರವರು ಗುರುವಾರ ಸಂಸತ್ತಿನಲ್ಲಿ ಒತ್ತಾಯಿಸಿದರು.ಬಜೆಟ್ ಮೇಲಿನ ಚರ್ಚೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಷಯವಾಗಿ ಕನ್ನಡದಲ್ಲಿ ಮಾತನಾಡಿದ ಅವರು ಕರ್ನಾಟಕ ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ಏಳ್ಗೆಗಾಗಿ ಜಾರಿಗೊಳಿಸಿದ ಹಲವಾರು ಯೋಜನೆಗಳನ್ನು ಪ್ರಸ್ತಾಪಿಸಿದರು.

ಮೊದಲು ಹೆಣ್ಣುಮಗು ಜನನವಾದರೆ ಮನೆಮಾರಿ ಎಂದು ತಿಳಿದು ಭ್ರೂಣ ಹತ್ಯೆಗೆ ಮುಂದಾಗುತ್ತಿದ್ದರು. ಇವಳು ಕುಟುಂಬಕ್ಕೆ ಹೊರೆಯಾಗುತ್ತಾಳೆ ಎಂದು ಹೆತ್ತವರೇ ಚಿಂತಿತವಾಗುವ ಕಾಲವಿತ್ತು. ಆದರೆ ಇಂದು ಕರ್ನಾಟಕದಲ್ಲಿ ಹೆಣ್ಣುಮಗು ಜನಿಸಿದರೆ ಲಕ್ಷ್ಮೀಪುತ್ರಿ ಜನನವಾಯಿತು, ಭಾಗ್ಯದ-ಬಾಗಿಲು ತೆರೆಯಿತು ಎಂದು ಮನೆಮಂದಿಯೆಲ್ಲ ಸಂತಸ ಪಡುವ ವಾತಾವರಣ ನೆಲೆಸಿದೆ.

ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪರ ಸರ್ಕಾರ ಜಾರಿಗೊಳಿಸಿರುವ ಭಾಗ್ಯಲಕ್ಚ್ಮಿ ಯೋಜನೆ ಕಾರಣವಾಗಿದೆ. ಕರ್ನಾಟಕ ಸರ್ಕಾರದ ಮತ್ತೊಂದು ಕೊಡುಗೆ ಏನಂದರೆ ಬಡ ಶಾಲಾ ಮಕ್ಕಳ ವಿದ್ಯಾರ್ಜನೆಗೆ ಅನುಕೂಲವಾಗಲೆಂದು ವಿತರಿಸಿರುವ ಉಚಿತ-ಸೈಕಲ್. ಅದೇರೀತಿ ರಾಜ್ಯ ಸರ್ಕಾರವು ಆರಂಭಿಸಿರುವ ತುರ್ತು ಅಂಬ್ಯುಲನ್ಸ್ ಸೇವೆ ಬಡವರಿಗೆ ವರದಾನವಾಗಿ ಪರಿಣಮಿಸಿದೆ. ಸುಸಜ್ಜಿತವಾದ ಈ ಅಂಬ್ಯುಲೆನ್ಸಗಳಲ್ಲಿ ತುರ್ತು ಹೆರಿಗೆ ಮಾಡಿಸಿ ಅನೇಕ ಸ್ತ್ರೀಯರ ಪ್ರಾಣವನ್ನು ಉಳಿಸಲಾಗಿದೆ. ಕೇಂದ್ರ ಸರ್ಕಾರವು ಇಂತಹ ಜನೋಪಯೋಗಿ ಯೋಜನೆಗಳನ್ನು ಎಲ್ಲಾ ರಾಜ್ಯಗಳಲ್ಲಿಯೂ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೆಕೇಂದು ಒತ್ತಾಯಿಸಿದರು.

ಯತ್ರ ನಾರ್ಯತ್ಸು ಪೂಜ್ಯಂತೇ ರಮಂತೇ ತತ್ರ ದೇವತಾ (ಎಲ್ಲಿ ಮಹಿಳೆಯರು ಪೂಜನೀಯರಾಗಿರುತ್ತಾರೋ ಅಲ್ಲಿ ದೇವತೆಗಳೂ ನೆಲೆಸುತ್ತಾರೆ) ಎಂಬ ಸಂಸ್ಕೃತ ಶ್ಲೋಕದೊಂದಿಗೆ ತಮ್ಮ ಭಾಷಣವನ್ನು ಆರಂಭಿಸಿದ ಬಿ.ಜೆ.ಪಿಯ ಸಂಸತ್ ಸದಸ್ಯೆ ಮಹಿಳೆಯರನ್ನು ಗೌರವಿಸುವ ಭಾರತೀಯ ಸಂಸ್ಕೃತಿಯನ್ನು ಪ್ರಸ್ತಾಪಿಸಿ ಕರ್ನಾಟಕದಿಂದ ಆಯ್ಕೆಯಾಗಿ ಬಂದಿರುವ ಏಕೈಕ ಮಹಿಳಾ ಸದಸ್ಯೆಯಾದ ತಮಗೆ ಇಂತಹ ಮಹಾನ್ ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡಿರುವುದಕ್ಕಾಗಿ ಸಭಾಧ್ಯಕ್ಷರಿಗೂ ಪಕ್ಷದ ಹಿರಿಯ ಮುಖಂಡರಿಗೂ ಋಣಿಯಾಗಿರುವುದಾಗಿ ಹೇಳಿದರು.

ಭಾರತವು ಇಂತಹ ಉಚ್ಚ ಪರಂಪರೆಯ ಪುಣ್ಯಭೂಮಿಯಾಗಿದ್ದರೂ ಮಹಿಳೆಯು ಸಂಕಷ್ಟ, ಶೋಷಣೆಯಿಂದ ಮುಕ್ತವಾಗಿಲ್ಲ. ಕೌಟುಂಬಿಕ ಹಿಂಸೆ, ಅತ್ಯಾಚಾರ, ದೌರ್ಜನ್ಯ ಮುಂತಾದ ಅನಿಷ್ಠಗಳು ಅವಳನ್ನು ಕಿತ್ತು ತಿನ್ನುತ್ತಿವೆ. ಸದಾ ಅವಳು ಅಭದ್ರತೆಯನ್ನು ಎದುರಿಸುತ್ತಿದ್ದಾಳೆ. ಮಹಿಳೆಯರ ಉದ್ದಾರಕ್ಕಾಗಿ ತೋರಿಕೆಯ ಯೋಜನೆಗಳನ್ನು ಪ್ರಕಟಿಸಿದರೆ ಸಾಲದು. ಮಹಿಳೆಯರಿಗೆ ರೈಲುಗಳಲ್ಲಿ, ಬಸ್ಸುಗಳಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿದರೆ ಸಾಲದು. ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಆಗ ಮಾತ್ರ ಅವಳ ಸಬಲೀಕರಣವಾಗುತ್ತದೆ. ಹಾಗೆಯೇ ಅವಳಿಗೆ ರಾಜಕೀಯ ಅಧಿಕಾರದಲ್ಲಿ ನ್ಯಾಯಯುತ ಪಾಲು ದೊರೆಯಬೇಕು. ಇದಕ್ಕಾಗಿ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಅಗತ್ಯವಾಗಿದೆ. ಈ ಹಿಂದೆ ಅಟಲ ಬಿಹಾರಿ ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಮುಂದಾಗಿತ್ತು. ಈಗಲಾದರೂ ಮಸೂದೆಯನ್ನು ಅಂಗೀಕರಿಸಿ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X