ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇಂಟರ್‌ಸಿಟಿ : ವೇಳಾಪಟ್ಟಿ ನಿಗದಿಗೆ ರಾಘವೇಂದ್ರ ಒತ್ತಾಯ
ನವದೆಹಲಿ, ಜು. 23 : ಇದೇ ವರ್ಷದ ಆಗಸ್ಟ್ 14ರಿಂದ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಇಂಟರ್ ಸಿಟಿ ರೈಲು ಓಡಿಸಲು ಒಪ್ಪಿಕೊಂಡಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರನ್ನು ಅಭಿನಂದಿಸಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, ಬೆಳಿಗ್ಗೆ 6.30ಕ್ಕೆ ಶಿವಮೊಗ್ಗದಿಂದ ಹೊರಡುವಂತೆ ವೇಳಾಪಟ್ಟಿ ನಿಗದಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಕೇಂದ್ರದ ರೈಲ್ವೆ ಖಾತೆಯ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಪತ್ರ ಬರೆದಿರುವ ಸಂಸದರು, ವೇಳಾಪಟ್ಟಿಯನ್ನು ಶಿವಮೊಗ್ಗದಿಂದ ಬೆಳಿಗ್ಗೆ 6.30ಕ್ಕೆ ಇಂಟರ್‌ಸಿಟಿ ರೈಲು ಹೊರಟು ಬೆಳಿಗ್ಗೆ 11ಕ್ಕೆ ಬೆಂಗಳೂರು ತಲುಪಬೇಕು. ನಂತರ ಸಂಜೆ 4.30 ಅಥವಾ 5 ಘಂಟೆಗೆ ಬೆಂಗಳೂರಿನಿಂದ ಹೊರಟು ರಾತ್ರಿ 9 ಅಥವಾ 9.30ಕ್ಕೆ ಶಿವಮೊಗ್ಗ ತಲುಪಬೇಕು ಎಂದು ಕೋರಿದ್ದಾರೆ. ಈ ಸಂಬಂಧ ಸೂಕ್ತ ನಿರ್ದೇಶನಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹೊರಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರು ಶಿವಮೊಗ್ಗ- ಬೆಂಗಳೂರು ಇಂಟರ್ ಸಿಟಿ ರೈಲನ್ನು ಹೊಸದಾಗಿ ಮಂಜೂರು ಮಾಡಿದ್ದು, ಈ ಭಾಗದ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಇದೀಗ ಕೇವಲ ನಾಲ್ಕೂವರೆ ತಾಸುಗಳಲ್ಲಿ ಶಿವಮೊಗ್ಗದಿಂದ ರಾಜಧಾನಿ ತಲುಪಬಹುದು ಮತ್ತು ಅಷ್ಟೇ ಸಮಯದಲ್ಲಿ ರಾಜಧಾನಿಯಿಂದ ಶಿವಮೊಗ್ಗ ತಲುಪಬಹುದಾಗಿದೆ.
(ದಟ್ಸ್ ಕನ್ನಡ ವಾರ್ತೆ)