ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈನ್ ನೀತಿ ತಿದ್ದುಪಡಿಗೆ ಸಹಕಾರ : ಉಮೇಶ್ ಕತ್ತಿ

By Staff
|
Google Oneindia Kannada News

Horticulture minister Umesh Katti
ಬೆಂಗಳೂರು, ಜು. 11 : ರೈತರ ಅನುಕೂಲಕ್ಕಾಗಿ ವೈನ್ ನೀತಿಯನ್ನು ತಿದ್ದುಪಡಿ ಮಾಡುವುದಾದಲ್ಲಿ ತಮ್ಮ ಸಹಕಾರ ಎಂದಿಗೂ ಇರುತ್ತದೆ ಎಂದು ತೋಟಗಾರಿಕಾ ಮತ್ತು ಬಂದೀಖಾನೆ ಸಚಿವ ಉಮೇಶ್ ವಿ ಕತ್ತಿ ಅವರು ತಿಳಿಸಿದ್ದಾರೆ.

ಕರ್ನಾಟಕ ದ್ರಾಕ್ಷಾರಸ ಮಂಡಳಿಯು ಲಾಲ್‌ಬಾಗ್ ಡಾ ಎಂ.ಹೆಚ್. ಮರೀಗೌಡ ಸಭಾಂಗಣದಲ್ಲಿ ಏರ್ಪಡಿಸಿದ್ದ ದ್ರಾಕ್ಷಾರಸ ಮೇಳ ಮತ್ತು ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಫಾಟಿಸಿ ಮಾತನಾಡುತ್ತಿದ್ದ ಅವರು, ವೈನ್ ನೀತಿಯ ಸರಳೀಕರಣದಿಂದಾಗಿ 600 ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ದ್ರಾಕ್ಷಿ ಬೆಳೆಯು 1800 ಎಕರೆಗೆ ವಿಸ್ತಾರಗೊಂಡಿರುವುದು ದ್ರಾಕ್ಷಿ ಬೆಳೆಗಾರರ ಉತ್ಸಾಹವನ್ನು ಹೆಚ್ಚಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ ಡಿ. ಹೇಮಚಂದ್ರಸಾಗರ್ ಅವರು ಮಾತನಾಡಿ, ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ದ್ರಾಕ್ಷಾರಸ ಮೇಳ ನಡೆಯುತ್ತಿರುವುದು ಸಂತೋಷದ ವಿಷಯ. ವೈನ್ ನೀತಿಯು ರೈತರಿಗೆ ಮತ್ತು ಯುವಕರಿಗೆ ಉದ್ಯೋಗ ಕಲ್ಪಿಸುವಲ್ಲಿ ಮತ್ತು ಆದಾಯವನ್ನು ನೀಡುವಲ್ಲಿ ಸಹಕಾರಿಯಾಗಿದೆ ಎಂದರು.

ಅಪರ ಮುಖ್ಯ ಕಾರ್ಯದರ್ಶಿಗಳು, ಅಭಿವೃದ್ಧಿ ಆಯುಕ್ತರು ಮತ್ತು ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷರಾದ ಡಾ ಎಲ್. ಶಾಂತಕುಮಾರಿ ಸುಂದರ್ ಅವರು, ಈ ಹಿಂದೆ ದ್ರಾಕ್ಷರಸ ಘಟಕಗಳನ್ನು ಸ್ಥಾಪಿಸಲು ಅಬಕಾರಿ ಆಯುಕ್ತರಿಂದ ಪಡೆಯಬೇಕಾಗಿದ್ದ ಪರವಾನಗಿಯನ್ನು ಈಗ ಜಿಲ್ಲಾಧಿಕಾರಿಗಳಿಂದಲೇ ಪಡೆಯುವಂತೆ ಸರಳೀಕರಿಸಲಾಗಿದೆ. ವೈನ್ ಟ್ಯಾವರಿನ್ ತೆರೆಯಲು ವಾರ್ಷಿಕ ರೂ 1000 ಶುಲ್ಕವನ್ನು ಬಿಗ್‌ಬಜಾರ್, ನಂತಹ ಮಾಲ್‌ಗಳಲ್ಲಿ ರೂ 5000 ಪರವಾನಗಿ ಶುಲ್ಕ ಪಾವತಿಸಿ ವೈನ್ ಮಾರಾಟ ಮಾಡಲು ಅನುವು ಮಾಡಿಕೊಡಲಾಗಿದೆ ಎಂದರು.

ಹಾಗೆಯೇ ಬಿಜಾಪುರ ಜಿಲ್ಲೆಯ ತೊರವಿ ಗ್ರಾಮದಲ್ಲಿ 140 ಎಕರೆ ಪ್ರದೇಶವನ್ನು ವೈನ್‌ಪಾರ್ಕ್ ಸ್ಥಾಪಿಸುವ ಉದ್ದೇಶದಿಂದ ಪಡೆಯಲಾಗಿದ್ದು, ಈ ವೈನ್ ಪಾರ್ಕ್‌ನಲ್ಲಿ ನಿರುದ್ಯೋಗಿಗಳಿಗೆ ವೈನ್ ತಯಾರಿಕೆಯ ಬಗ್ಗೆ 6 ತಿಂಗಳ ತರಬೇತಿಯನ್ನು ನೀಡುವ ಜೊತೆಗೆ ವೈನ್ ತಯಾರಿಕೆಗೆ ಬೇಕಾಗುವ ದ್ರಾಕ್ಷಿ ತಳಿಗಳನ್ನು ಬೆಳೆಸುವ ಸಲುವಾಗಿ ನರ್ಸರಿಯನ್ನು ಮಾಡಲಾಗುವುದು ಎಂದು ತಿಳಿಸಿದರು.

ಆಡಳಿತ ಮಂಡಳಿ ಸದಸ್ಯರಾದ ಬಿ.ಎನ್. ನಂಜುಂಡಯ್ಯ, ಕಪಿಲ್ ಗ್ರೋವರ್, ಬಿ.ಎಂ. ಕೋಕರೆ ಹಾಗು ಲೋಕೇಶ್ ಗೌಡ ಸೇರಿದಂತೆ ಮತ್ತಿತರ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X