ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀಡಿಯೋ ಗೇಮ್ಸ್ ಆಟಕ್ಕೆ ಕಡಿವಾಣ ಹಾಕಿ

By Staff
|
Google Oneindia Kannada News

Kannada sainya protest
ವೀಡಿಯೋ ಗೇಮ್ಸ್ ಆಟಕ್ಕೆ ಕಡಿವಾಣ ಹಾಕಿ; ಎನ್‌ಎಸ್‌ಯುಐ

ಶಿವಮೊಗ್ಗ,ಜು.8: ರಿಕ್ರಿಯೇಷನ್ ಹೆಸರಿನಲ್ಲಿ ವೀಡಿಯೋ ಗೇಮ್ಸ್ ಕಂಪ್ಯೂಟರ್ ಮಾದರಿಯ ನಾಜೂಕು ಮನೆಹಾಳು ಆಟವನ್ನು ನಿಲ್ಲಿಸುವಂತೆ ಆಗ್ರಹಿಸಿ ಜಿಲ್ಲಾ ಎನ್‌ಎಸ್‌ಯುಐ ಕಾರ್ಯಕರ್ತರು ಇಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕುಣಿಗಲ್ ಶ್ರೀಕಂಠರವರಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗ ನಗರ ಮತ್ತು ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ವೀಡಿಯೋ ಗೇಮ್ಸ್ ಎಂಬ ಮನೆಹಾಳು ಆಟಗಳು ನಿರಂತರವಾಗಿ ನಡೆಯುತ್ತಿದ್ದು, ಜನರಿಂದ, ವಿದ್ಯಾರ್ಥಿಗಳಿಂದ, ಕೂಲಿಕೆಲಸಗಾರರಿಂದ ಮುಖ್ಯವಾಗಿ ರೈತರು ಇಂತಹ ಆಟಗಳಿಗೆ ಬಲಿಯಾಗುತ್ತಿದ್ದು, ಸಂಬಂಧಪಟ್ಟ ರಕ್ಷಣಾ ಇಲಾಖೆ ಈ ಬಗ್ಗೆ ಮೌನವಹಿಸಿರುವುದನ್ನು ಎನ್‌ಎಸ್‌ಯುಐ ತೀವ್ರವಾಗಿ ಖಂಡಿಸಿದೆ.

ಈ ರೀತಿಯ ವೀಡಿಯೋ ಗೇಮ್ಸ್‌ಗಳು ನಗರದ ಶಾಲಾ-ಕಾಲೇಜು, ಬಸ್‌ಸ್ಟ್ಯಾಂಡ್ ಹೀಗೆ, ಜನಸಂದಣಿ ಇರುವ ಜಾಗದಲ್ಲಿ ತಲೆಎತ್ತಿ ನಿಂತಿದ್ದು, ಇಂತಹ ವೀಡಿಯೋ ಗೇಮ್ಸ್ ದಂಧೆಯಿಂದ ವಿದ್ಯಾರ್ಥಿಗಳು ಶಾಲಾ ಶುಲ್ಕ ಹಣವನ್ನು, ರೈತರು ವ್ಯವಸಾಯದ ಬೀಜ-ಗೊಬ್ಬರಕ್ಕೆಂದು ತಂದ ಹಣವನ್ನು, ಕೂಲಿಕಾರ್ಮಿಕರು ಕಷ್ಟಪಟ್ಟು ದುಡಿದ ಹಣವನ್ನು ನೇರವಾಗಿ ಈ ಮನೆಹಾಳು ದಂಧೆಗೆ ಸುರಿಯುತ್ತಿದ್ದು, ತಮ್ಮ ಭವಿಷ್ಯದ ಜೊತೆಗೆ ಕುಟುಂಬಕ್ಕೆ ಮಾರಕವಾಗಿದ್ದು, ಕೂಡಲೇ ಇವುಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದೆ.

ಈಗಾಗಲೇ ಎಲ್ಲೆಂದರಲ್ಲಿ ಓಸಿ, ಇಸ್ಪೀಟ್ ದಂಧೆಗಳಿಗೆ ಬಲಿಯಾದ ಜನರು ಈಗ ಇಂತಹ ಅನಿಷ್ಟ ಅಡ್ಡೆಗಳಿಗೆ ಬಲಿಯಾಗುತ್ತಿದ್ದು, ಕೂಡಲೇ ರಕ್ಷಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಜಂಟಿಯಾಗಿ ಇಂತಹ ದಂಧೆಗಳಿಗೆ ಕಡಿವಾಣ ಹಾಕುವುದರ ಮೂಲಕ ಜಿಲ್ಲೆಯ ಲಕ್ಷಾಂತರ ಕುಟುಂಬಗಳು ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ, ಎನ್‌ಎಸ್‌ಯುಐ ವತಿಯಿಂದ ತೀವ್ರ ಹೋರಾಟ ನಡೆಸಬೇಕಾಗುವುದೆಂದು ತಿಳಿಸಿದೆ. ಮನವಿ ಸಲ್ಲಿಸುವಾಗ ಎನ್‌ಎಸ್‌ಯುಐ ನಗರಾಧ್ಯಕ್ಷ ಮಧುಸೂದನ್, ಚೇತನ್, ಮಧುಕುಮಾರ್, ಮೋಹನ್, ಶಂಕರ್, ಜಿತೇಂದ್ರ, ಶಿವಕುಮಾರ್ ಉಪಸ್ಥಿತರಿದ್ದರು.

*******

ಅಧ್ಯಕ್ಷರೇ, ಧ್ವಜ ತಗೊಳ್ಳಿ-ಲಾಂಛನ ಕೊಡಿ; ಕನ್ನಡ ಸೈನ್ಯ

ಶಿವಮೊಗ್ಗ: ನಗರಸಭೆ ಆವರಣದಲ್ಲಿ ಇಡಲಾಗಿದ್ದ ರಾಷ್ಟ್ರ ಲಾಂಛನದ ಧ್ವಜಸ್ತಂಭ ನಾಪತ್ತೆಯಾಗಿದ್ದು, ನಗರಾಡಳಿತದ ದುರಾಡಳಿತ ಕುರಿತು ಅಧ್ಯಕ್ಷರು ರಾಷ್ಟ್ರದ ಧ್ವಜ ಪಡೆದು, ರಾಷ್ಟ್ರದ ಗೌರವವಾಗಿರುವ ಲಾಂಛನ ಸ್ತಂಭವನ್ನು ಹುಡುಕಿಕೊಡಬೇಕೆಂದು ಒತ್ತಾಯಿಸಿ, ಕನ್ನಡ ಸೈನ್ಯ ಕಾರ್ಯಕರ್ತರು ಇಂದು ನಗರಸಭಾ ಅಧ್ಯಕ್ಷರಾದ ಎನ್.ಜೆ.ರಾಜಶೇಖರ್ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಸಿ.ಜಯ ಮಾತನಾಡಿ, ರಾಷ್ಟ್ರ ಲಾಂಛನದ ಧ್ವಜಸ್ತಂಭ ನಾಪತ್ತೆಯಾದ ಬಗ್ಗೆ ಸಂಘಟನೆ ಈಗಾಗಲೇ ರಕ್ಷಣಾಧಿಕಾರಿಗಳಿಗೆ ಧ್ವಜಸ್ತಂಭ ಹುಡುಕಿಸುವಂತೆ ದೂರನ್ನು ನೀಡಿದೆ. ಆದರೆ, ನಗರಸಭೆಯವರು ಇಲ್ಲಿಯವರೆಗೆ ಪೊಲೀಸ್ ಇಲಾಖೆಗೆ ದೂರನ್ನು ನೀಡದೆ ಇರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದರು.

ಈ ಧ್ವಜಸ್ತಂಭದ ನಾಪತ್ತೆಗೆ ಕಾರಣರಾದವರನ್ನು, ಅಧಿಕಾರಿಗಳು ಮೌನ ವಹಿಸಿರುವುದರ ಬಗ್ಗೆ ಕೂಡಲೇ ತನಿಖೆ ನಡೆಸಿ, ಸಂಬಂಧಿಸಿದವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ತಿಳಿಸಿದರು. ಹಾಗೆಯೇ, ಘಟನೆ ಬಗ್ಗೆ ಉದಾಸೀನ ತೋರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುವುದೆಂದು ತಿಳಿಸಿದರು. ಮನವಿ ಸಲ್ಲಿಸುವಾಗ ನಗರಾಧ್ಯಕ್ಷ ಎಸ್.ಕೆ.ಮನೋಜ್‌ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X