ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಜನೂರು ತುಂಗಾ ಡ್ಯಾಂನಿಂದ ನೀರು ಬಿಡುಗಡೆ

By * ಶಿ.ಜು.ಪಾಶ, ಶಿವಮೊಗ್ಗ
|
Google Oneindia Kannada News

Gajanuru dam near Teerthahalli
ಶಿವಮೊಗ್ಗ, ಜು. 8 : ಶಿವಮೊಗ್ಗದಿಂದ ತೀರ್ಥಹಳ್ಳಿಯ ದಾರಿಯಲ್ಲಿ 10 ಕಿ.ಮೀ. ಸಾಗಿದರೆ ಗಾಜನೂರು ಎಂಬ ಹಳ್ಳಿ ಸಿಗುತ್ತದೆ. ತುಂಗಾ ಅಣೆಕಟ್ಟಿನಿಂದ ಈ ಗಾಜನೂರು ಪ್ರಖ್ಯಾತಿ ಗಳಿಸಿದೆ. ಕರ್ನಾಟಕದ ಅಪರೂಪದ ಪಿಕ್‌ನಿಕ್ ಸ್ಪಾಟ್ ಎಂದೇ ಕರೆಸಿಕೊಳ್ಳುವ ಗಾಜನೂರು ಅಣೆಕಟ್ಟೆ ತೀರ್ಥಹಳ್ಳಿ, ಆಗುಂಬೆಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮೈದುಂಬಿಕೊಂಡಿದ್ದು, ಮಂಗಳವಾರದಂದು ಡ್ಯಾಂನ 22 ಗೇಟ್‌ಗಳನ್ನು ತೆರೆದು ಸಾರ್ವಜನಿಕರಲ್ಲಿ ರೋಮಾಂಚನ ಮೂಡಿಸಿತ್ತು.

ತುಂಗಾ ಡ್ಯಾಂ ಸುತ್ತಮುತ್ತ ಅಡಿಕೆ ಮರಗಳ ತೂಗುಯ್ಯಾಲೆ ಪ್ರವಾಸಿಗರ ಮನಸೆಳೆದರೆ, 22 ಗೇಟ್‌ಗಳಲ್ಲಿ ಧುಮುಕುವ ನೀರಿನ ಪ್ರವಾಹ ಒಂದು ಕ್ಷಣ ಮೈಮರೆಸುವಂತಿರುತ್ತದೆ. ಇತ್ತೀಚೆಗಷ್ಟೇ ಈ ಡ್ಯಾಂನ ಎತ್ತರವನ್ನೂ ಏರಿಸಲಾಗಿದೆ. ಡ್ಯಾಂ ಎತ್ತರಗೊಂಡಿದ್ದರಿಂದ ಕಾಡಿನ ಒಂದಿಷ್ಟು ಭಾಗ ನೀರಿನಲ್ಲಿ ಮುಳುಗಿದಂತಾಗಿದೆ. ಜೊತೆಗೆ ಮಂಡಗದ್ದೆ ಸೇರಿದಂತೆ ಕೆಲವೊಂದು ಹಳ್ಳಿಗಳು ಮಳೆಗಾಲದಲ್ಲಿ ಜಾಲಾವೃತ ಭೀತಿಯಲ್ಲಿರುತ್ತವೆ. ಒಂದು ತಿಂಗಳ ಕಾಲ ತಡವಾಗಿ ಆರಂಭವಾದ ಮುಂಗಾರು ಈಗ ಕಾಣಿಸಿಕೊಂಡಿದೆ. ಬರದ ಭಯದಲ್ಲಿದ್ದ ಮಲೆನಾಡಿನ ಜನರ ಮನಸ್ಸು ಮಳೆಯಿಂದ ಹದಗೊಂಡಿದೆ.

100 ಮೀಟರ್ ಎತ್ತರದೊಂದಿಗೆ ಕಟ್ಟಲಾಗಿರುವ ಹೊಸ ತುಂಗಾ ಅಣೆಕಟ್ಟು ಶಿವಮೊಗ್ಗ ಜಿಲ್ಲೆಯ 80,494 ಹೆಕ್ಟೇರ್‌ಗಳಿಗೆ ನೀರುಣಿಸುತ್ತದೆ. ಹೊನ್ನಾಳಿ, ಹಾವೇರಿ, ಹರಿಹರ, ಹಿರೆಕೆರೂರು, ರಾಣೆಬೆನ್ನೂರು ಮತ್ತು ಹಾನಗಲ್ ತಾಲ್ಲೂಕುಗಳು ಈ ಅಣೆಕಟ್ಟನ್ನು ನಂಬಿಕೊಂಡಿವೆ. ಈ ತಾಲ್ಲೂಕುಗಳಿಗೆಲ್ಲಾ ತುಂಗಾ ನದಿ ನೀರುಣಿಸಬೇಕಾದರೆ, ತುಂಗಾ ಮೇಲ್ದಂಡೆಯ ಚಾನಲ್ ಮೂಲಕ 329.5 ಕಿ.ಮೀ. ನಷ್ಟು ದಾರಿ ಸವೆಸಬೇಕು. ಈ ಅಣೆಕಟ್ಟಿಗೆ 11 ಕೆವಿಎ ಪವರ್‌ಲೈನ್ ಅಳವಡಿಸಿರುವುದರಿಂದ ಅಣೆಕಟ್ಟಿನ ಶಕ್ತಿ ಹೆಚ್ಚಿದಂತಾಗಿದೆ. ಸಣ್ಣ ಹೈಡಾಲ್ ವಿದ್ಯುತ್ ಯೋಜನೆ ಇಲ್ಲಿ ಮುಂದಿನ ದಿನಗಳಲ್ಲಿ ಗಮನಸೆಳೆಯಲಿದೆ.

ಒಂದು ದಿನದ ಮಟ್ಟಿಗೆ ಪ್ರವಾಸಿಗರು ಆನಂದದಿಂದ ಕಾಲ ಕಳೆಯಲು ತುಂಗಾ ಅಣೆಕಟ್ಟು ಹೇಳಿ ಮಾಡಿಸಿದ ಸ್ಥಳ. ದೇಶದ ಎಲ್ಲಾ ಸ್ಥಳಗಳಿಂದಲೂ ಶಿವಮೊಗ್ಗಕ್ಕೆ ಆಗಮಿಸಬಹುದು. ಶಿವಮೊಗ್ಗದಲ್ಲಿ ಒಂದಿಷ್ಟು ಹೊತ್ತು ಸಂತೋಷದಿಂದ ಕಳೆಯಲು ಬಯಸುವವರು ತುಂಗಾ ಅಣೆಕಟ್ಟೆಯ ದಾರಿಯಲ್ಲಿ ಸಾಗಬಹುದು. ಡ್ಯಾಂ ಬಳಿಯಲ್ಲಿ ಪ್ರವಾಸಿ ಮಂದಿರವೂ ಇದ್ದು, ಪ್ರವಾಸಿಗರು ಉಳಿಯುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಈ ಬಗ್ಗೆ ಪ್ರವಾಸಿಗರು ಶಿವಮೊಗ್ಗದ ತುಂಗಾ ಮೇಲ್ದಂಡೆ ಯೋಜನೆಯ ಎಕ್ಸಿಕ್ಯುಟಿವ್ ಇಂಜಿನಿಯರ್‌ರವರನ್ನು 08182-222972ಗೆ ಸಂಪರ್ಕಿಸಬಹುದು.

ಹೊಸ ತುಂಗಾ ಅಣೆಕಟ್ಟನ್ನು ಆಕರ್ಷಣೀಯ 22 ಕ್ರಸ್ಟ್ ಗೇಟ್‌ಗಳ ಮೂಲಕ ನಿರ್ಮಿಸಲಾಗಿದೆ. ಒಂದೊಂದು ಕ್ರಸ್ಟ್ ಗೇಟ್‌ನ ಎತ್ತರ 4.75 ಮೀ. 1997ರಲ್ಲಿ ಈ ಅಣೆಕಟ್ಟು ನಿರ್ಮಾಣ ಪ್ರಾರಂಭಿಸಲಾಗಿ 2 ವರ್ಷಗಳ ಹಿಂದೆ ಇದನ್ನು ಪೂರ್ಣಗೊಳಿಸಲಾಯಿತು. 100ಮೀ. ಎತ್ತರದ ಈ ನೂತನ ಅಣೆಕಟ್ಟಿನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅಂದಾಜು 1 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದೆ.

ಚಿತ್ರ : ಕೆ.ಆರ್. ಸೋಮನಾಥ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X