ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್.ಕೆ. ಜಂಕ್ಷನ್‌ನಲ್ಲಿ ಜಾರುಬಂಡೆಯಾಗಿರುವ ರಸ್ತೆಗಳು!

By * ಶಿ.ಜು.ಪಾಶ, ಶಿವಮೊಗ್ಗ
|
Google Oneindia Kannada News

Bus owners protest against pathetic road condition in Shivamogga
ಶಿವಮೊಗ್ಗ, ಜು.6 : ನಗರದಿಂದ ಬಿ.ಆರ್.ಪಿ. ಹಾಗೂ ಕುವೆಂಪು ವಿಶ್ವ ವಿದ್ಯಾನಿಲಯಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಹುಣಸೇಕಟ್ಟೆ ಜಂಕ್ಷನ್ ಗ್ರಾಮದ ರಂಗನಾಥಪುರ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯನ್ನು ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿ ಸೋಮವಾರ ಬಸ್ ಮಾಲೀಕರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಕಳೆದ ಹಲವು ತಿಂಗಳಿನಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಆ ಮಾರ್ಗದ ರಂಗನಾಥಪುರದಿಂದ ಲಕ್ಕಿನಕೊಪ್ಪತನಕ ಸುಮಾರು 5 ಕಿ.ಮೀ. ರಸ್ತೆ ಅಗೆದು ಮಣ್ಣನ್ನು ಹಾಕಿರುವ ಕಾರಣ ವಾಹನ ಸಂಚರಿಸಲು ಹರಸಾಹಸ ಪಡಬೇಕಾದ ವಾತಾವರಣ ಏರ್ಪಟ್ಟಿದೆ. ಬೆಳಗಿನ ಜಾವದಿಂದಲೇ ಬಸ್ ಮಾಲೀಕರು ಪ್ರತಿಭಟನೆ ನಡೆಸಿದ್ದರಿಂದ ಆ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರು, ಕುವೆಂಪು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಹಾಗೂ ನೌಕರರು ತೊಂದರೆ ಅನುಭವಿಸಬೇಕಾಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಸ್ ಮಾಲೀಕರಾದ ಸತೀಶ್ ಗೌಡ ಮಾತನಾಡಿ, ದಿನನಿತ್ಯ ನಗರದಿಂದ ಕುವೆಂಪು ವಿವಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿರುತ್ತಾರೆ. ಹಾಗೆಯೇ ಸ್ಥಳೀಯರು ಕೆಲಸ ಕಾರ್ಯಗಳಿಗಾಗಿ ನಗರಕ್ಕೆ ಬರಬೇಕಾಗಿದ್ದು, ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಈ ಭಾಗದಲ್ಲಿ ಓಡಾಡಲು ಸಾಧ್ಯವಿಲ್ಲದಂತಾಗಿದೆ ಎಂದರು.

ರಸ್ತೆಯನ್ನು ಅಗೆದು ಮಣ್ಣನ್ನು ಹಾಕಿರುವುದರಿಂದ ಹಾಗೂ ಮಳೆ ಹೆಚ್ಚಾಗಿರುವ ಕಾರಣ ರಸ್ತೆ ಪೂರ್ಣವಾಗಿ ಕೆಸರುಮಯವಾಗಿದ್ದು, ದಿನನಿತ್ಯ ವಾಹನ ಸವಾರರು ಅಪಘಾತ ಮಾಡಿಕೊಂಡು ಆಸ್ಪತ್ರೆ ಸೇರುತ್ತಿರುವುದು ಸಾಮಾನ್ಯವಾಗಿದೆ. ಬಸ್ಸುಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಕಾಮಗಾರಿಯೂ ಕಳಪೆಯಾಗಿದೆ. ಬೆಳಗ್ಗಿನಿಂದಲೇ ಪ್ರತಿಭಟನೆ ನಡೆಸಿದರೂ ಯಾವೊಬ್ಬ ಅಧಿಕಾರಿಯೂ, ಗುತ್ತಿಗೆದಾರರು ಇತ್ತ ಸುಳಿಯದೇ ನಿರ್ಲಕ್ಷ್ಯ ತೋರಿರುವುದರಿಂದ ಅವರ ವಿರುದ್ಧ ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದರಲ್ಲದೆ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು.

ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಕೂಡಲೇ ಮುಖ್ಯಮಂತ್ರಿಗಳು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಗಮನಹರಿಸಿ, ಆಗಿರುವ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಬಸ್ ಚಾಲಕ ಭೈರೇಶ್ ಮಾತನಾಡಿ, ರಸ್ತೆಯು ಸಂಪೂರ್ಣ ಕೆಸರಿನಿಂದ ಕೂಡಿದ್ದು, ಬಸ್ಸನ್ನು ಓಡಿಸುವುದು ಕಷ್ಟವಾಗಿದೆ. ಸ್ವಲ್ಪ ಹೆಚ್ಚೂ ಕಡಿಮೆ ಆದರೆ ಅಪಘಾತ ಸಂಭವಿಸುವುದು ಗ್ಯಾರಂಟಿ. ಅಪಘಾತವಾದರೆ ನಾವೇ ಜವಾಬ್ದಾರರಾಗಬೇಕೆ ಹೊರತು, ಬೇರೆ ಯಾರನ್ನು ದೂರುವಂತಿಲ್ಲ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ವಾಹನಗಳನ್ನು ಇಲ್ಲಿಂದ ತೆಗೆಯುವುದಿಲ್ಲ ಎಂದರು. ಪ್ರತಿಭಟನೆಯಲ್ಲಿ ಬಸ್ ಮಾಲೀಕರಾದ ಬಿ.ಆರ್.ಪಿ.ಗಿರೀಶ್, ಬಿ.ಆರ್.ಪಿ.ಪ್ರಕಾಶ್, ಚಂದ್ರಣ್ಣ ಸೇರಿದಂತೆ ಸ್ಥಳೀಯ ಜನರು ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X