ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭರವಸೆ ನೀಡಿದಂತೆ ಕೆಲಸ ಮಾಡಿದ್ದೇನೆ; ಬಿ.ವೈ.ರಾಘವೇಂದ್ರ

By * ಶಿ.ಜು.ಪಾಶ, ಶಿವಮೊಗ್ಗ
|
Google Oneindia Kannada News

B Y Raghavendra
ಶಿವಮೊಗ್ಗ,ಜು.5: ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ರೈಲ್ವೆ ಅಭಿವೃದ್ಧಿ ಯೋಜನೆಗಳಲ್ಲಿ ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ರೈಲು, ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗ ಈ ಬಜೆಟ್‌ನಲ್ಲಿ ಘೋಷಣೆಗೊಂಡಿದ್ದು, ಈ ಬಜೆಟ್ ಸಂಸದನಾದ ನನ್ನ ಮಟ್ಟಿಗೆ ಸಂತೋಷದಾಯಕವಾಗಿದೆ ಎಂದು ನೂತನ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಇಂದು ಬೆಳಿಗ್ಗೆ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮೂರು ಬಾರಿ ರೈಲ್ವೆ ಸಚಿವರನ್ನು ಭೇಟಿ ಮಾಡಿದ್ದೆ. ಮನವಿಗಳನ್ನೂ ಸಲ್ಲಿಸಿದ್ದೆ. ಇದರ ಪರಿಣಾಮವಾಗಿ ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ರೈಲು ಹಾಗೂ ಶಿವಮೊಗ್ಗ-ಹರಿಹರ ಹೊಸ ಮಾರ್ಗದ ಸರ್ವೇ ಕುರಿತು ಬಜೆಟ್‌ನಲ್ಲಿ ಭರವಸೆ ಸಿಕ್ಕಿದೆ. ಮುಂದಿನ ಒಂದುವರೆ ತಿಂಗಳುಗಳಲ್ಲಿ ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ರೈಲಿನ ಉದ್ಘಾಟನೆಯನ್ನು ಸಚಿವ ಮುನಿಯಪ್ಪರವರಿಂದ ಕೈಗೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ವಿವರಿಸಿದರು.

ಶಿವಮೊಗ್ಗ-ಹರಿಹರ ರೈಲ್ವೆ ಹೊಸ ಮಾರ್ಗ ಮುಂದಿನ ಒಂದು ವರ್ಷದಲ್ಲಿ ಸರ್ವೇ ಪೂರ್ಣಗೊಳಿಸಲು ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ. ಈ ವರ್ಷದಲ್ಲಿ ಸರ್ವೇ ಮುಗಿದರೆ, ಮುಂದಿನ ಬಜೆಟ್‌ನಲ್ಲಿ ಈ ಮಾರ್ಗದ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಣ ಬಿಡುಗಡೆಗೊಳಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ ರಾಘವೇಂದ್ರ, ಮುಂದಿನ ಬಾರಿಯಾದರೂ ತಾಳಗುಪ್ಪ-ಹೊನ್ನಾವರದ ಮೂಲಕ ಕೊಂಕಣ ರೈಲ್ವೆಗೆ ಮಲೆನಾಡನ್ನು ಜೋಡಿಸುವ ಪ್ರಾಮಾಣಿಕ ಪ್ರಯತ್ನ ನನ್ನದು. ಈ ಯೋಜನೆ ಅಂದಾಜು 800 ಕೋಟಿ ರೂ.ಗಳು ಖರ್ಚಾಗಲಿದ್ದು, ರಾಜ್ಯಕ್ಕೆ ಕೇಂದ್ರದ ರೈಲ್ವೆ ಬಜೆಟ್‌ನಲ್ಲಿ ಈ ವರ್ಷ ದಕ್ಕಿರುವುದೇ ಕೇವಲ 850 ಕೋಟಿ ರೂ.ಗಳು ಎಂದರು.

ಕೊಂಕಣ ರೈಲ್ವೆಗೆ ಮಲೆನಾಡಿನ ರೈಲು ಮಾರ್ಗವನ್ನು ಜೋಡಿಸುವ ಪ್ರಯತ್ನಕ್ಕಿಂತ ಮುಂಚೆ ಈ ದಾರಿಯಲ್ಲಿ ಬರುವ ಅರಣ್ಯದ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಈ ಬಗ್ಗೆ ಕೇಂದ್ರದ ಸಚಿವ ಜಯರಾಂ ರಮೇಶ್‌ರವರೊಂದಿಗೆ ಮಾತುಕತೆ ಮಾಡಿದ್ದೇನೆ. ಸಮಸ್ಯೆ ಬಗೆಹರಿಸುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಗಿರೀಶ್ ಪಟೇಲ್, ನಗರಸಭೆ ಅಧ್ಯಕ್ಷ ಎನ್.ಜೆ.ರಾಜಶೇಖರ್, ಬಿಜೆಪಿ ಮುಖಂಡರಾದ ಎಸ್.ಎಸ್.ಜ್ಯೋತಿಪ್ರಕಾಶ್, ಎಸ್.ದತ್ತಾತ್ರಿ, ಅನಂತರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X