ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಗಲಭೆ : ಜು. 8ರ ವರೆಗೆ ಕರ್ಫ್ಯೂ

By Staff
|
Google Oneindia Kannada News

V S Acharya
ಮೈಸೂರು, ಜು. 5 : ಮೈಸೂರಿನಲ್ಲಿ ಗಲಭೆಗೆ ಸಂಬಂಧಿಸಿ ಅಪರಾಧಿಗಳು ಯಾರೇ ಇರಲಿ, ಅಂಥವರನ್ನು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಕ್ಕೆ ಒಳಪಡಿಸುತ್ತೇವೆ ಎಂದು ಗೃಹ ಸಚಿವ ಡಾ.ವಿ ಎಸ್ ಆಚಾರ್ಯ ಇಂದಿಲ್ಲಿ ಹೇಳಿದ್ದಾರೆ.

ಮೈಸೂರು ನಗರದ ಗಲಭೆಗಳಲ್ಲಿ ಗಾಯಗೊಂಡವರು ಹಾಗೂ ಸಂತ್ರಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.ಗಲಭೆಗಳ ಬಗ್ಗೆ ಪೋಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ನ್ಯಾಯಾಂಗ ತನಿಖೆಯು ಸದ್ಯಕ್ಕೆ ಅವಶ್ಯಕತೆ ಇಲ್ಲ ಎಂದ ಅವರು ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೋಲೀಸ್ ಹಾಗೂ ಜಿಲ್ಲಾಡಳಿತದ ಜತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ನಾಲ್ಕು ವಿವಿಧ ಆಸ್ಪತ್ರೆಗಳಲ್ಲಿ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ತಾವು ಅವರೆಲ್ಲರನ್ನೂ ಭೇಟಿ ಮಾಡಿದ್ದಾಗಿ ಹೇಳಿದ ಅವರು ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು , ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದರು. ಗಲಭೆಗಳಿಗೆ ಸಂಬಂಧಿಸಿ ಈಗಾಗಲೇ 43 ಜನರನ್ನು ಬಂಧಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದವರನ್ನು ಸೇರಿದಂತೆ 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಸಚಿವರು ಹೇಳಿದರು.

ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದು , ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಇಂತಹ ಗಲಭೆಗಳು ಸಂಭವಿಸಬಾರದಿತ್ತು ಎಂದು ವಿಷಾಧಿಸಿದ ಅವರು ಜನರು ಶಾಂತಿ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ರಾಜ್ಯ ಪೋಲೀಸ್ ಮಹಾನಿರ್ದೇಶಕರು, ಮೈಸೂರು ನಗರ ಪೋಲೀಸ್ ಆಯುಕ್ತರು, ಮೈಸೂರು ಜಿಲ್ಲಾಧಿಕಾರಿಗಳು, ಸಚಿವರ ಜತೆಗೆ ಇದ್ದರು.

ಉದಯಗಿರಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ
ಮೈಸೂರು ನಗರದ ಉದಯಗಿರಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕ್ಯಾತಮಾರನಹಳ್ಳಿಯಲ್ಲಿ ಕೋಮು ಗಲಭೆ ನಡೆದು ಪ್ರಕ್ಷುಬ್ದ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಜುಲೈ 8ರ ವರೆಗೆ ವಿಸ್ತರರಿಸಲಾಗಿದೆ ಮೈಸೂರು ನಗರ ಪೋಲೀಸ್ ಆಯುಕ್ತರು ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಗಳಾದ ಸುನೀಲ್ ಅಗರವಾಲ್ ಅವರು ಆದೇಶ ಹೊರಡಿಸಿದ್ದಾರೆ.

ಕರ್ಫ್ಯೂ ಜಾರಿಯಲ್ಲಿರುವ ಅವಧಿ ಹಾಗೂ ಪ್ರದೇಶದಲ್ಲಿ ಯಾರೊಬ್ಬರು ತನ್ನ ವಾಸದ ಮನೆಯಿಂದ ಹೊರ ಬರುವುದನ್ನು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದನ್ನು, ಶಸ್ತ್ರ , ಕುಡುಗೋಲು, ಖಡ್ಗ, ಚೂರಿ, ಬಂದೂಕು, ಕೋಲು ಅಥವಾ ದೇಹಕ್ಕೆ ಅಪಾಯ ಉಂಟುಮಾಡಬಹುದಾದ ಮಾರಕಾಸ್ತ್ರಗಳನ್ನು ಒಯ್ಯುವುದನ್ನು ನಿಷೇಧಿಸಿದೆ.

ಯಾವುದೇ ವಿನಾಶಕಾರಿ ದಾಹಕ ವಸ್ತು ಇಲ್ಲವೇ ಸ್ಪೋಟಕ ವಸ್ತು ಒಯ್ಯುವುದನ್ನು, ಕಲ್ಲು ಅಥವಾ ಎಸೆಯುವ ವಸ್ತು ಅಥವಾ ಅಂತಹ ವಸ್ತುಗಳನ್ನು ಎಸೆಯುವ ಅಥವಾ ಚಲಿಸುವ ಅಸ್ತ್ರಗಳನ್ನು ಅಥವಾ ಸಾಧನಗಳನ್ನು ಒಯ್ಯುವುದನ್ನು ಸಂಗ್ರಹಿಸುವುದನ್ನು ಮತ್ತು ತಯಾರಿಸುವುದನ್ನು ನಿಷೇಧಿಸಿದೆ. ಯಾವುದೇ ವ್ಯಕ್ತಿ ನಿಷೇಧಿತ ಮಾರಕಾಸ್ತ್ರ , ಸ್ಫೋಟಕ ವಸ್ತುಗಳನ್ನು ವಿನಾಶಕಾರಿ ವಸ್ತುಗಳನ್ನು , ಬಂದೂಕುಗಳನ್ನು ಹೊಂದಿದಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲು ಪೋಲೀಸ್ ಅಧಿಕಾರಿಗಳಿಗೆ ಅಧಿಕಾರವಿದ್ದು, ಮತ್ತು ಅಂತಹ ವ್ಯಕ್ತಿಯ ಬಳಿ ಇರುವ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X