ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ ವಿವಿಗಾಗಿ ಕುವೆಂಪು ವಿವಿ ಬಲಿ!

By * ಶಿ.ಜು.ಪಾಶ, ಶಿವಮೊಗ್ಗ
|
Google Oneindia Kannada News

ಶಿವಮೊಗ್ಗ, ಜೂ. 29 : 22 ವರ್ಷದ ಯೌವನದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಈಗ ಕಷ್ಟಗಳನ್ನು ಎದುರಿಸುವ ಕಾಲ ಆರಂಭವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಶೇ.60ರಿಂದ 70ರಷ್ಟು ಆದಾಯ ತಂದುಕೊಡುವ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಕುವೆಂಪು ವಿವಿಯಿಂದ ಕತ್ತರಿಸಿ ಹೊಸದಾಗಿ ಆರಂಭವಾಗಲಿರುವ ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಗೊಳಿಸಲು ಹೊರಟಿರುವುದು ದಾವಣಗೆರೆ ಮತ್ತು ಚಿತ್ರದುರ್ಗದ ಮಟ್ಟಿಗೆ ಸಂತೋಷದ ಸುದ್ದಿಯಾಗಿದ್ದರೂ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿಗೆ ಇದೊಂದು ಬರಸಿಡಿಲು. ಮುಂದಿನ ಎರಡು ವರ್ಷಗಳು ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಅಂತಹ ತೊಂದರೆ ಎನಿಸದಿದ್ದರೂ ಆನಂತರದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಮೂಲ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಬೀಳುವುದರಲ್ಲಿ ಸಂದೇಹವಿಲ್ಲ.

ಮೂಲತಃ ಶಿವಮೊಗ್ಗ ಜಿಲ್ಲೆಯ ಮುಖ್ಯಮಂತ್ರಿಯೆಂದೇ ಕರೆಸಿಕೊಳ್ಳುತ್ತಿರುವ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ವಂತ ಜಿಲ್ಲೆಯಲ್ಲಿರುವ ನೂರೆಂಟು ಕನಸುಗಳನ್ನು ಕಟ್ಟಿಕೊಂಡು ಇದೀಗ ಒಂದು ಹಂತಕ್ಕೆ ತಲುಪಲಿದ್ದ ಕುವೆಂಪು ವಿಶ್ವವಿದ್ಯಾನಿಲಯವನ್ನು ಬೀದಿಗೆ ನಿಲ್ಲಿಸಲು ಹೊರಟಿರುವುದು ಸಾಕಷ್ಟು ಚರ್ಚೆಯ ವಿಷಯವಾಗಿದೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಶೈಕ್ಷಣಿಕ ಹೋರಾಟಗಾರರ ಬಹುವರ್ಷಗಳ ಕನಸಾದ ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಬೀಜ ಬಿತ್ತಿದ್ದಾರೆ. ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಸರ್ಕಾರದ ವತಿಯಿಂದ ವಿಶೇಷ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದ್ದು, 10 ಕೋಟಿ ರೂ.ಗಳ ಮೊದಲ ಹಂತದ ಕಾಮಗಾರಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ಒಂದೆರಡು ತಿಂಗಳಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಸರ್ಕಾರ ನೋಟಿಫಿಕೇಷನ್ ಹೊರಡಿಸಲಿದ್ದು, ಈ ನೋಟಿಫಿಕೇಷನ್ ಹೊರಬಿದ್ದ ಕ್ಷಣದಿಂದಲೇ ಕುವೆಂಪು ವಿಶ್ವವಿದ್ಯಾನಿಲಯದ ಸಮಸ್ಯೆಗಳು ಗರಿಬಿಚ್ಚಲಿವೆ.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಆಯಾ ವಿಶ್ವವಿದ್ಯಾನಿಲಯಗಳ ಆದಾಯದ ಮೂಲಗಳನ್ನೇ ಬಳಸಿಕೊಂಡು ತಮ್ಮ ಕಾಲೇಜುಗಳಿಗೆ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕು. ಈ ನೇಮಕಗೊಂಡ ಉಪನ್ಯಾಸಕರಿಗೆ ತಮ್ಮದೇ ಆದಾಯ ಮೂಲದ ಮೂಲಕ ಸಂಬಳ ಇನ್ನಿತರೆ ವೆಚ್ಚಗಳನ್ನು ಭರಿಸಬೇಕೆಂಬ ಆದೇಶ ಹೊರಡಿಸಿತ್ತು. ಈ ಆದೇಶದ ಪ್ರಕಾರ ಎಲ್ಲಾ ವಿಶ್ವವಿದ್ಯಾನಿಲಯಗಳಂತೆ ಕುವೆಂಪು ವಿಶ್ವವಿದ್ಯಾನಿಲಯವೂ ಸಹ ತನ್ನ ಆದಾಯದ ಮೂಲಗಳ ಆಧಾರದ ಮೇಲೆ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿನ ತನ್ನ ಕಾಲೇಜುಗಳಿಗೆ ಉಪನ್ಯಾಸಕರನ್ನು ನೇಮಿಸಿಕೊಂಡಿತ್ತು. ಈ ಧೈರ್ಯವನ್ನು ಕುವೆಂಪು ವಿಶ್ವವಿದ್ಯಾನಿಲಯ ಕೈಗೊಳ್ಳಲು ಕಾರಣವಿದ್ದುದು ದಾವಣಗೆರೆ ಮತ್ತು ಚಿತ್ರದುರ್ಗದಿಂದ ತನ್ನ ಹಣಕಾಸು ವಿಭಾಗಕ್ಕೆ ಪ್ರತಿವರ್ಷ ಹರಿದುಬರುವ ಶೇ.60ರಿಂದ 70ರಷ್ಟು ಹಣದ ಆಧಾರದ ಮೇಲೆ.

ಹೆಚ್ಚಾಗಿ ಕುವೆಂಪು ವಿಶ್ವವಿದ್ಯಾನಿಲಯ ತನ್ನ ಆದಾಯದ ಮೂಲವನ್ನಾಗಿ ನಂಬಿಕೊಂಡಿರುವ ಜಿಲ್ಲೆಗಳೆಂದರೆ, ದಾವಣಗೆರೆ ಮತ್ತು ಚಿತ್ರದುರ್ಗ. ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಾವಣಗೆರೆ ವಿಶ್ವವಿದ್ಯಾನಿಲಯವನ್ನೇ ಹೊಸದಾಗಿ ಘೋಷಿಸಿ ಸರ್ಕಾರದಿಂದ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಎರಡೂ ಜಿಲ್ಲೆಗಳ ಆದಾಯಕ್ಕೆ ಕಡಿವಾಣ ಬೀಳಲಿದೆ. ಸಹಜವಾಗಿ ಈ ಎರಡೂ ಜಿಲ್ಲೆಗಳನ್ನು ನಂಬಿಕೊಂಡಿರುವ ಕುವೆಂಪು ವಿಶ್ವವಿದ್ಯಾನಿಲಯ ತನ್ನ ಆರ್ಥಿಕ ಪ್ರಬಲತೆಯನ್ನು ಕಳೆದುಕೊಳ್ಳಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಾವಣಗೆರೆ ವಿಶ್ವವಿದ್ಯಾನಿಲಯದ ಆರಂಭಕ್ಕೆ ಮುನ್ನ ಬಹುಜನರ ಪ್ರೀತಿಯನ್ನು ಹೊಂದಿರುವ ಕುವೆಂಪು ವಿಶ್ವವಿದ್ಯಾನಿಲಯವನ್ನು ಆರ್ಥಿಕ ಸದೃಢತೆಯತ್ತ ಒಯ್ಯುವ ಜವಾಬ್ದಾರಿಯನ್ನೂ ನಿಭಾಯಿಸಬೇಕಿದೆ. ಆದರೆ, ಯಡಿಯೂರಪ್ಪ ಈವರೆಗೂ ಅಂತಹ ಘೋಷಣೆ ಮಾಡಿಲ್ಲ.

Prof. BS Sherigar
1987ರಲ್ಲಿ ಆರಂಭವಾದ ಕುವೆಂಪು ವಿಶ್ವವಿದ್ಯಾನಿಲಯ ತನ್ನ ವ್ಯಾಪ್ತಿಯಲ್ಲಿ 184 ಕಾಲೇಜುಗಳನ್ನು ಹೊಂದಿದ್ದು, ನಾಲ್ಕು ಜಿಲ್ಲೆಗಳಲ್ಲಿ ಶೈಕ್ಷಣಿಕವಾಗಿ ಪ್ರಸಿದ್ಧಿಗೊಂಡಿದೆ. ರಾಜ್ಯದ ಪ್ರಭಾವಿ ವಿಶ್ವವಿದ್ಯಾನಿಲಯವೆಂದೇ ಅತೀ ಸಣ್ಣ ವಯಸ್ಸಿನಲ್ಲಿ ಗುರುತಿಸಿಕೊಂಡ ಕುವೆಂಪು ವಿಶ್ವವಿದ್ಯಾನಿಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್ ಶಿವಮೊಗ್ಗದಿಂದ ಕೇವಲ 28 ಕಿ.ಮೀ. ದೂರದಲ್ಲಿದೆ. ಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ 230 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ, ಕೇವಲ 2 ಕಿ.ಮೀ.ನಷ್ಟು ಕ್ಯಾಂಪಸ್‌ನ್ನೇ ಹೊಂದಿರುವ ಕುವೆಂಪು ವಿಶ್ವವಿದ್ಯಾನಿಲಯ ಭಾರತದ ವಿಶ್ವವಿದ್ಯಾನಿಲಯಗಳಲ್ಲಿಯೇ ಅತೀ ಸುಂದರವಾದ ವಿಶ್ವವಿದ್ಯಾನಿಲಯವೆಂದು ಹೆಸರುವಾಸಿಯಾಗಿದೆ. ಈಗಷ್ಟೇ ಕುವೆಂಪು ಶತಮಾನೋತ್ಸವ ಭವನದ ಮೂಲಕ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿರುವ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿರುವ ಕೊಡಲಿ ಪೆಟ್ಟು ವಿಶ್ವವಿದ್ಯಾನಿಲಯಗಳ ಮಟ್ಟಿಗೆ ಹೊಸದು. ಮುಖ್ಯಮಂತ್ರಿಗಳ ಈ ನಿರ್ಧಾರದಿಂದ 22 ಜನರನ್ನು ಹೊಂದಿರುವ ಸಿಂಡಿಕೇಟ್ ಸಮಿತಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕುವೆಂಪು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿರುವ ಪ್ರೊ|.ಬಿ.ಎಸ್.ಶೇರಿಗಾರ್ ತಮ್ಮ ವಿವಿ ಬಗ್ಗೆ ಕಾಳಜಿ ವಹಿಸಿ ಹೋರಾಟ ಆರಂಭಿಸಿರುವುದು ಈವರೆಗೂ ಗುಪ್ತವಾಗಿಯೇ ನಡೆಯುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X