ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿವಾಸಿಗಳಿಗ್ಯಾಕೆ ಮಣೆ ಮುಖ್ಯಮಂತ್ರಿಗಳೆ ?

By Staff
|
Google Oneindia Kannada News

Ganesh Karnik
ಯಡಿಯೂರಪ್ಪ ನೇತೃತ್ವದ ಸರಕಾರ ಮತ್ತೊಂದು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಅದು ರಾಜ್ಯದಲ್ಲಿರುವ ಬಡಪಾಯಿ ಕನ್ನಡಿಗರಿಗಂತೂ ಅಲ್ಲ. ಬದಲಿಗೆ ತಾಯಿನೆಲದಿಂದ ದೂರದಲ್ಲಿದ್ದು ಪರದೇಶವನ್ನು ಉದ್ಧಾರ ಮಾಡುತ್ತಿರುವ ನಮ್ಮ ಅನಿವಾಸಿ ಭಾರತೀಯ ಕನ್ನಡಿಗರಿಗೆ ರಾಜ್ಯ ಸರಕಾರ ಭಾರೀ ಉಡುಗೂರೆ ನೀಡಲು ಸಿದ್ಧವಾಗಿದೆ.

*ಮೃತ್ಯುಂಜಯ ಕಲ್ಮಠ

ಇತ್ತೀಚೆಗೆ ಕೇರಳ ಮೂಲದ ರಿಯಲ್ ಎಸ್ಟೇಟ್ ಏಜಂಟ್ ಜೋಸೆಫ್ ಚಾಕೋ ಎಂಬ ಫಟಿಂಗ ಅನಿವಾಸಿ ಕನ್ನಡಿಗರಿಗೆ ನಿವೇಶನ ಕೊಡಿಸುತ್ತೇನೆಂದು ನಂಬಿಸಿ ಅವರಿಂದ ಕೋಟ್ಯಂತರ ರುಪಾಯಿಗಳನ್ನು ಪಡೆದು ವಂಚಿಸಿದ್ದು ಗೊತ್ತಿರುವ ಸಂಗತಿ. ಹೀಗೆ ಪ್ರಜ್ಞಾವಂತರು ಎನಿಸಿಕೊಂಡಿರುವ ಸಾಕಷ್ಟು ಓದಿಕೊಂಡು ಅನ್ಯ ದೇಶಗಳ ಅಭಿವೃದ್ಧಿಗೆ ಹಗಲು ರಾತ್ರಿ ಶ್ರಮಿಸುತ್ತಿರುವ ಅನಿವಾಸಿ ಕನ್ನಡಿಗರಿಗೆ ನಿವೇಶನ ಕೊಡಿಸುವ ಮಾತುಗಳನ್ನು ಯಡಿಯೂರಪ್ಪ ಆಡಿದ್ದಾರೆ. ಇದಕ್ಕೆ ನಗಬೇಕೋ, ಛೀಮಾರಿ ಹಾಕಬೇಕೋ ಗೊತ್ತಾಗುತ್ತಿಲ್ಲ.

ಸರಕಾರದ ಇತ್ತೀಚಿನ ನಿರ್ಧಾರಗಳು ಜನರಿಗೆ ಕಿರಿಕಿರಿಯಾಗುತ್ತಿವೆ. ರಿಯಲ್ ಎಸ್ಟೇಟ್ ಏಜಂಟ್ ಕೈಗೆ ಹಣವನ್ನು ನೀಡಿ ಮೋಸ ಹೋಗಿರುವ ಅನಿವಾಸಿ ಫಲಾನುಭವಿಗಳಿಗೆ ನಿವೇಶನ ನೀಡಲು ಮುಂದಾಗಿದ್ದರಲ್ಲ? ಕನ್ನಡಿಗರಿಗೆ ಅನ್ಯಾಯವಾದಾಗ ಸರಕಾರ ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕಿರುವುದು ಅದರ ಕರ್ತವ್ಯ. ಸಂವಿಧಾನದಲ್ಲಿಯೇ ಈ ಬಗ್ಗೆ ಪ್ರಸ್ತಾಪಿಸಲಾಗಿದೆ.

ಬೆಂಗಳೂರಿನಲ್ಲಿಯೇ ಇದ್ದ ವಿನಿವಿಂಕ್ ಶಾಸ್ತ್ರಿ ಎಂಬ ಭೂಪ ಸಾವಿರಾರು ಬಡಜನರ ರಕ್ತ ಹೀರಿದ. ನೂರಾರು ಕೋಟಿ ರುಪಾಯಿಗಳನ್ನು ನುಂಗಿದ ಹಾಕಿದ. ಆತ ಮಾಡಿದ ವಂಚನೆಯಿಂದ ಅನೇಕ ಜನ ಬೀದಿ ಪಾಲಾದರು. ಹಲವಾರು ಜನ ಅದೇ ಕೊರಗಿನಲ್ಲಿ ಪ್ರಾಣಬಿಟ್ಟರು. ಆವತ್ತು ಏಕೆ ನಿಮಗೆ ಇಂತಹ ಮಹೋನ್ನತವಾದ ಐಡಿಯಾ ಹೊಳೆಯಲಿಲ್ಲ? ರೊಕ್ಕ ಕಳೆದುಕೊಂಡ ಎಲ್ಲರಿಗೂ ಸರಕಾರ ಪಾವತಿಸುತ್ತಿದೆ ಎಂದು ಏಕೆ ಘೋಷಿಸಲಿಲ್ಲ? ಅದಕ್ಕಾಗಿ ಒಂದು ಸಮಿತಿ ರಚಿಸಲಿಲ್ಲ? ಅದೇ ಕಾರಣಕ್ಕೆ ಒಬ್ಬ ಸಂಪುಟ ದರ್ಜೆಯ ವ್ಯಕ್ತಿಯನ್ನು ನೇಮಿಸಲಿಲ್ಲ? ಇಂತಹ ಇಲ್ಲಗಳ ಸರಣಿಯನ್ನು ಇನ್ನಷ್ಟು ಮುಂದುವರಿಸಬಹುದಲ್ವೆ.

ಕನ್ನಡ ನಾಡು, ನುಡಿ, ಸಾಹಿತ್ಯ, ನಾಡಿನ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದ ಅನೇಕರು ಇನ್ನು ಬೆಂಗಳೂರಿನಂತಹ ಮಹಾನ್ ನಗರಿಯಲ್ಲಿ ಸೂರಿಲ್ಲದೇ ಬಾಡಿಗೆ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಸಾಹಿತಿಗಳು, ಕಲಾವಿದರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಸರಕಾರ ಗುರುತಿಸಿದೆಯಾ? ಅವರನ್ನು ಸನ್ಮಾನಿಸುವುದಿರಲಿ ಅವರ ಕಡೆ ಗಮನಹರಿಸಿದ್ದಿರಾ ಹೇಳಿ? ಅನಿವಾಸಿ ಭಾರತೀಯ ಮೋಸ ಹೋಗಿದ್ದಾರೆ ಎಂದ ಕೂಡಲೇ ರಾಜ್ಯದ ಮರ್ಯಾದೆ ಹೋಯಿತು ಅನ್ನುವ ಹಾಗೆ ಸರಕಾರ ವರ್ತಿಸುತ್ತಿದೆ. ಇದು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ ಅಂತ ಅನಿಸುತ್ತಿಲ್ಲವಾ?

ಸರಿ, ನಿಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಅನಿವಾಸಿ ಭಾರತೀಯ ಸಮಿತಿ ರಚಿಸಿ ಗಣೇಶ್ ಕಾರ್ಣಿಕ್ ಅವರನ್ನು ಅವರನ್ನು ಅಧ್ಯಕ್ಷರನ್ನಾಗಿಸಿದಿರಿ. ಅದರಿಂದ ಈ ವರೆಗೂ ಏನಾದರೂ ಪ್ರಯೋಜನವಾಗಿದೆಯೇ? ಆ ಸಮಿತಿಗೆ ಕೋಟ್ಯಂತರ ರುಪಾಯಿ ಹಣ ಬಿಡುಗಡೆ ಮಾಡಿ ದೊಡ್ಡ ಸಾಧನೆ ಮಾಡುವುದಾಗಿ ಜಂಭಕೊಚ್ಚಿಕೊಂಡಿರಿ. ಅದರಿಂದ ಆಗಿರುವ ಲಾಭವಾದರೂ ಏನು ಎನ್ನುವುದನ್ನು ಐದು ಕೋಟಿ ಕನ್ನಡಿಗರಿಗೆ ವಿವರಿಸುತ್ತೀರಾ. ಸಾವಿರಕ್ಕೂ ಹೆಚ್ಚು ಅನಿವಾಸಿ ಭಾರತೀಯರಿಗೆ ಮೋಸ ಮಾಡಿರುವ ಚಾಕೋ ಇತ್ತೀಚೆಗೆ ಬಂಧನಕ್ಕೆ ಒಳಗಾಗಿದ್ದಾನೆ. ಒತನಿಂದ ವಂಚನೆಗೆ ಒಳಾಗಾದವರಿಗೆ ನಿವೇಶನ ಕೊಡಿಸಲು ಶಾಸಕ ಗಣೇಶ್ ಕಾರ್ಣಿಕ್ ಅಧ್ಯಕ್ಷತೆಯಲ್ಲಿ ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು ಎಂದು ಅಪ್ಪಣೆ ಕೊಡಿಸಿದ್ದೀರಿ.

ಅನಿವಾಸಿ ಕನ್ನಡಿಗರ ಯೋಜನೆಗಳಿಗೆ ಸಹಕಾರ ನೀಡಲು ಬೇರೆ ಬೇರೆ ಇಲಾಖೆಗಳಲ್ಲಿ ಪ್ರತ್ಯೇಕ ಕೋಶ ರಚನೆ. ವೀಸಾ ಸಮಸ್ಯೆ ನಿವಾರಣೆ. ಬೆಂಗಳೂರು ನಗರಗಳಲ್ಲಿ ನಿವೇಶನಗಳ ಬೇಡಿಕೆ. ಅನಿವಾಸಿ ಭಾರತೀಯ ಮಕ್ಕಳಿಗೆ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯೆ ಮತ್ತು ಮೀಸಲು. ಅನಿವಾಸಿಗಳ ಮಕ್ಕಳಿಗೆ ಸಿಇಟಿಯಲ್ಲಿ ಪರೀಕ್ಷೆಯಲ್ಲಿ ಅವಕಾಶ. ಎನ್ ಆರ್ ಐ ಕಾಲೋನಿ ರಚಿಸಲು ಅನುಮತಿ ಮತ್ತು ಸ್ಥಳಾವಕಾಶ. ಉದ್ಯೋಗ ವಂಚಿತರಾಗಿರುವ ಅನಿವಾಸಿ ಜನರಿಗೆ ಸಹಾಯ. ಉದ್ಯೋಗಕ್ಕಾಗಿ ಹೋಗುತ್ತಿರುವ ಉದ್ಯೋಗಾಂಕ್ಷಿಗಳಿಗೆ ದೃಢೀಕರಣ ಪತ್ರ ನೀಡುವಲ್ಲಿ ವಿಳಂಬ ನೀತಿ ಇರುವುದರಿಂದ ಇದರ ವ್ಯವಸ್ಥೆ ಸರಳೀಕರಣ. ಇವು ಅನಿವಾಸಿ ಭಾರತೀಯರ ಬೇಡಿಕೆಗಳು. ಕೆಲವೊಂದು ಬೇಡಿಕೆಗಳಿಗೆ ಸಹಮತ ವ್ಯಕ್ತಪಡಿಸಬಹುದು.

ಆದರೆ, ಉನ್ನತ ಶಿಕ್ಷಣದಲ್ಲಿ ಮೀಸಲು, ಸಿಇಟಿ ಪರೀಕ್ಷೆಯಲ್ಲಿ ಅವರ ಮಕ್ಕಳಿಗೆ ಅವಕಾಶ ನೀಡುವುದು ಏಕೆ? ಅವರ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುವುದು. ಪರದೇಶ ಉದ್ಧಾರಕ್ಕೆ ಹೆಣಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅದನ್ನು ಬಿಟ್ಟು ಹಳ್ಳಿಯಲ್ಲಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗೆ ಇನ್ನಷ್ಟು ಸೌಲಭ್ಯ, ಸಹಾಯ ನೀಡಿ, ಹೀಗೆ ಮಾಡಿದರೆ ಜೀವನಪೂರ್ತಿ ಅವರು ನಿಮ್ಮ ಹೆಸರಿನ ಮೇಲೆ ಬದುಕುತ್ತಾರೆ. ಅದು ಬಿಟ್ಟು ಅನಿವಾಸಿಗಳ ಬಂಡವಾಳ ಎಂಬ ಬಿಸಿಲು ಕುದುರೆ ಏರಿ ರಾಜ್ಯದ ಬೊಕ್ಕಸಕ್ಕೆ ಏಟು ನೀಡುವ ಕೆಲಸ ಸರಿಯಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X