ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗಸ್ಟ್ ನಿಂದ ರಾಜಾಜಿನಗರ ಕಾರಿಡಾರ್ ಆರಂಭ

By Staff
|
Google Oneindia Kannada News

ಬೆಂಗಳೂರು, ಜೂ. 25 : ಬಹುನಿರೀಕ್ಷಿತ ರಾಜಾಜಿನಗರ ಕಾರಿಡಾರ್ ಯೋಜನೆಯ ಕಾಮಗಾರಿ ಬರುವ ಆಗಸ್ಟ್‌ನಲ್ಲಿ ಆರಂಭವಾಗಲಿದೆ. ಮೊದಲ ಹಂತದಲ್ಲಿ ಫೌಂಟೇನ್ ಸರ್ಕಲ್‌ನಿಂದ ಓಕಳಿಪುರಂವರೆಗಿನ ಎಂಟು ಪಥದ ಸ್ಕೈ ನಿರ್ಮಾಣವನ್ನು ಕೈಗೊಳ್ಳಲಾಗುವುದು. ಈ ಸಂಬಂಧ ಟೆಂಡರ್ ಕರೆಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು ಜುಲೈನಲ್ಲಿ ಅದು ಪೂರ್ಣಗೊಳ್ಳಲಿದೆ ಎಂದು ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಸ್.ಸುರೇಶ್‌ಕುಮಾರ ಹೇಳಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿದ ನಂತರ ಈ ವಿಚಾರವನ್ನು ಪ್ರಕಟಿಸಿದ್ದರು. ಕಾರಿಡಾರ್ ನಿರ್ಮಾಣದ ಬಗ್ಗೆ ರೂಪಿಸಲಾಗಿದ್ದ ಪ್ರಾತ್ಯಕ್ಷಿಕೆಯನ್ನು ಬಿ.ಬಿ.ಎಂ.ಪಿ. ಆಯುಕ್ತ ಭರತ್‌ಲಾಲ್ ಮೀನಾ ಅವರೊಂದಿಗೆ ವೀಕ್ಷಿಸಿದ ಅವರು ಮಾಧ್ಯಮದೊಂದಿಗೆ ಮಾತನಾಡಿ ಈ ಯೋಜನೆಯಿಂದಾಗಿ ಕೆ.ಆರ್.ಸರ್ಕಲ್, ಆನಂದರಾವ್ ಸರ್ಕಲ್, ಮಧ್ಯ ಬೆಂಗಳೂರು ಪ್ರದೇಶಗಳಿಂದ ರಾಜಾಜಿನಗರಕ್ಕೆ ಬರುವ ವಾಹನಗಳಿಗೆ ಅನುಕೂಲವಾಗುತ್ತದೆ. 46 ಕೋಟಿ ರೂಪಾಯಿಗಳನ್ನು ಈ ಯೋಜನೆಗಾಗಿ ಖರ್ಚು ಮಾಡಲಾಗುತ್ತದೆ. ಕಾಮಗಾರಿಯನ್ನು ಕಡ್ಡಾಯವಾಗಿ 6 ತಿಂಗಳ ಒಳಗೆ ಮುಗಿಸುವಂತೆ ಸೂಚನೆ ನೀಡಲಾಗುತ್ತದೆ ಎಂದು ಹೇಳಿದರು.

ಈ ಯೋಜನೆಯ ಅನುಷ್ಠಾನಕ್ಕೆ ಓಕಳಿಪುರಂ ಬಳಿ ರೈಲ್ವೆ ಇಲಾಖೆಗೆ ಸೇರಿದ 12818 ಚದರ ಮೀಟರ್ ಭೂಮಿ ಅಗತ್ಯವಾಗಿದ್ದು, ಈ ಸಂಬಂಧ ರೈಲ್ವೆ ಇಲಾಖೆಯ ಮುಖ್ಯಸ್ಥರ ಜೊತೆ ಪತ್ರ ವ್ಯವಹಾರ ನಡೆಸಲಾಗುತ್ತಿದೆ. ಅಲ್ಲಿಂದ ನಮಗೆ ಸಕಾರಾತ್ಮಕ ಉತ್ತರ ಬಂದಿದ್ದು ಬದಲೀ ಭೂಮಿಯನ್ನು ನೀಡುವಂತೆ ಅವರು ಕೋರಿದ್ದಾರೆ ಎಂದು ಸಚಿವರು ತಿಳಿಸಿದರು.

ರಾಜಾಜಿನಗರ ಕಾರಿಡಾರ್ ಯೋಜನೆಯ ವ್ಯಾಪ್ತಿಯಲ್ಲಿ ಡಾ.ರಾಜ್‌ಕುಮಾರ್ ರಸ್ತೆಯ ನಾಲ್ಕು ಜಂಕ್ಷನ್‌ಗಳಲ್ಲಿ ಅಂಡರ್ ಪಾಸ್‌ಗಳ ನಿರ್ಮಾಣ ಮಾಡಲಾಗುತ್ತದೆ. ಮಂಜುನಾಥನಗರ ಮುಖ್ಯ ರಸ್ತೆ ಜಂಕ್ಷನ್, ಶಿವನಗರದ ಮೊದಲನೇ ಮುಖ್ಯ ರಸ್ತೆ ಜಂಕ್ಷನ್, ಶಿವನಗರದ 8ನೇ ಮುಖ್ಯರಸ್ತೆ ಜಂಕ್ಷನ್ ಹಾಗೂ ಬಸವೇಶ್ವರನಗರ ಮೊದಲನೇ ಮುಖ್ಯರಸ್ತೆ ಜಂಕ್ಷನ್‌ನಲ್ಲಿ ಈ ಅಂಡರ್ ಪಾಸ್‌ಗಳನ್ನು ನಿರ್ಮಿಸಲಾಗುತ್ತಿದೆ. ಈ ಮೂಲಕ ಅದನ್ನು ಸಿಗ್ನಲ್ ಫ್ರೀ ರಸ್ತೆಗಳನ್ನಾಗಿ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಡಾ.ರಾಜ್‌ಕುಮಾರ್ ರಸ್ತೆ ಹಾಗೂ ಸಿದ್ಧಯ್ಯ ಪುರಾಣಿಕ್ ರಸ್ತೆಗಳನ್ನೂ ಸಹ ಸಿಗ್ನಲ್ ಫ್ರೀ ರಸ್ತೆಗಳನ್ನಾಗಿ ಮಾಡಲಾಗುತ್ತದೆ. ಈ ಕಾರಿಡಾರ್ ಗಾಗಿ ಮೂರು ರೀತಿಯ ವಿವಿಧ ವಿನ್ಯಾಸಗಳನ್ನು ರೂಪಿಸಲಾಗಿದ್ದು ಫ್ಲೈಓವರ್, ಅಂಡರ್ ಪಾಸ್ ಹಾಗೂ ಮೇಲ್ಮೈ ರಸ್ತೆ ಮೂರನ್ನೂ ಒಳಗೊಂಡಿರುತ್ತದೆ. ಈ ಕಾಮಗಾರಿ ಸುಗಮವಾಗಿ ಮುಗಿಯಲು ಅನುಕೂಲವಾಗುವಂತೆ ಮುಂದಿನವಾರದಲ್ಲಿ ರೈಲ್ವೆ ಇಲಾಖೆ ಹಾಗೂ ಮೆಟ್ರೋ ಅಧಿಕಾರಿಗಳ ಜೊತೆ ಸಭೆ ಕರೆದು ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X