ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಮಲೆನಾಡಿನ ಕಾಡಿಗೆ ನುಗ್ಗಲಿದೆ ಕೋಬ್ರಾ

By * ಶಿ.ಜು.ಪಾಶ, ಶಿವಮೊಗ್ಗ
|
Google Oneindia Kannada News

COBRA to combat against naxalites in Karnataka
ಶಿವಮೊಗ್ಗ, ಜೂ. 22 : ನಕ್ಸಲ್ ಪೀಡಿತ ರಾಜ್ಯಗಳಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿರುವ ಕರ್ನಾಟಕದಲ್ಲಿ ಇದೀಗ ಕೋಬ್ರಾ ಬುಸುಗುಡಲಿದೆ. ಈಗಾಗಲೇ ಛತ್ತೀಸ್‌ಗಡ್ ಹಾಗೂ ಒರಿಸ್ಸಾಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಬ್ರಾ ಕರ್ನಾಟಕ ಸರ್ಕಾರವೂ ಸಹ ನಮ್ಮ ನಕ್ಸಲ್ ಪೀಡಿತ ಪ್ರದೇಶಗಳಿಗೆ ಕೋಬ್ರಾ ಕರೆತರುವ ಸಿದ್ಧತೆ ನಡೆಸಿಕೊಂಡಿದೆ. ಸದ್ಯದಲ್ಲಿಯೇ ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಕೋಲಾರ, ರಾಯಚೂರು ಜಿಲ್ಲೆಗಳಲ್ಲಿ ಕೋಬ್ರಾದ ಹೆಜ್ಜೆ ಗುರುತುಗಳು ಕಾಣಸಿಗಲಿವೆ.

ಏನದು ಕೋಬ್ರಾ?

ನಕ್ಸಲರನ್ನು ಸಂಪೂರ್ಣವಾಗಿ ನಾಶಪಡಿಸುವ ಅಥವಾ ನಕ್ಸಲ್ ರಹಿತ ರಾಜ್ಯಗಳನ್ನು ನಿರ್ಮಿಸುವ ಏಕೈಕ ಉದ್ದೇಶ ಹೊಂದಿರುವ ಹಾಗೂ ನಕ್ಸಲ್ ದಮನಕ್ಕೋಸ್ಕರವೆಂದೇ ಸಂಪೂರ್ಣವಾಗಿ ಸಿದ್ಧಗೊಂಡಿರುವ ಕೋಬ್ರಾಪಡೆಯನ್ನು ಕಂಬ್ಯಾಟ್ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್(COBRA) ಎಂದೇ ವಿಸ್ತರಿಸಿ ಕರೆಯಲಾಗುತ್ತದೆ. ಈ ಪಡೆ ಈಗಾಗಲೇ ದೇಶದಾದ್ಯಂತ ಸುದ್ದಿ ಮಾಡಿದ್ದು, ನಕ್ಸಲರಲ್ಲಿ ಸಾಕಷ್ಟು ನಡುಕವನ್ನುಂಟು ಮಾಡಿದೆ. ಈ ಕೋಬ್ರಾಪಡೆಯಲ್ಲಿರುವ ಕಮಾಂಡೋಗಳು ಕೊಯಮತ್ತೂರ್ ಹಾಗೂ ಸಿಲ್ಚಾರ್‌ನ ಜಂಗಲ್ ವಾರ್ ಫೇರ್ ಟ್ರೈನಿಂಗ್ ಸ್ಕೂಲ್‌ನಲ್ಲಿ ಅರಣ್ಯ ಯುದ್ಧದ ತರಬೇತಿ ಪಡೆದು ಸಿದ್ಧವಾದವರು.

ಕೋಬ್ರಾ ಪಡೆಯ ವಿಶೇಷತೆ ಎಂದರೆ, ಇದು ತನ್ನದೇ ಆದ ರಹಸ್ಯ ವಿಭಾಗವನ್ನು ಹೊಂದಿರುವುದು. ವಿಶೇಷವಾದ ಗುಪ್ತಚರ ಇಲಾಖೆಯನ್ನೇ ಹೊಂದಿರುವ ಈ ಕೋಬ್ರಾ ಪಡೆ ಗುಪ್ತ ಮಾಹಿತಿಗಳನ್ನು ತನ್ನದೇ ರೀತಿಯಲ್ಲಿ ಗುಪ್ತ ಕಾರ್ಯಾಚರಣೆಗಳಿಗೆ ವಿಶೇಷವಾಗಿ ಬಳಸಿಕೊಳ್ಳುತ್ತದೆ. ಈ ಕೋಬ್ರಾ ಪಡೆಯಿಂದ ಸಣ್ಣದೊಂದು ಮಾಹಿತಿಯೂ ಹೊರಕ್ಕೆ ಈವರೆಗೆ ಬಿದ್ದ ಉದಾಹರಣೆ ಇಲ್ಲ. 19ಕ್ಕಿಂತ ಹೆಚ್ಚಿನ ವಿನೂತನ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಈ ಕೋಬ್ರಾ ಪಡೆಯ ಒಂದು ಬೆಟಾಲಿಯನ್‌ನಲ್ಲಿ ಕನಿಷ್ಠ 2 ಸಾವಿರ ಕಮಾಂಡೋಗಳಿರುತ್ತಾರೆ. ಈ ಕಮಾಂಡೋಗಳು ಅತ್ಯುತ್ತಮ ಆರೋಗ್ಯ ಹಾಗೂ ಕನಿಷ್ಠ 5 ವರ್ಷದ ಅರಣ್ಯ ಯುದ್ಧದ ಅನುಭವ ಹೊಂದಿರುತ್ತಾರೆ.

ನಕ್ಸಲ್ ಯುವತಿ ಪಾರ್ವತಿ ಎನ್‌ಕೌಂಟರ್‌ನಿಂದ ಹಿಡಿದು, ಮೊನ್ನೆ ಪೊಲೀಸ್ ಬಲೆಗೆ ಬಿದ್ದ ನಕ್ಸಲ್ ಯುವತಿ ವಿಜಯಾಬಾಯಿವರೆಗೆ ಆಂಟಿ ನಕ್ಸಲ್ ಸ್ಕ್ವಾಡ್ ಸಾಧಿಸಿದ್ದು ಕಡಿಮೆಯೇ. ಈ ಆಂಟಿ ನಕ್ಸಲ್ ಸ್ಕ್ವಾಡ್‌ನಲ್ಲಿ ನುರಿತ ಸಿಬ್ಬಂದಿಗಳ ಸಂಖ್ಯೆ ಕಡಿಮೆ. ಡಿವೈಎಸ್‌ಪಿ ನೇತೃತ್ವದಲ್ಲಿ ಈ ಆಂಟಿ ನಕ್ಸಲ್ ಸ್ಕ್ವಾಡ್ ನಿರ್ಮಿಸಿದ್ದರೂ ಸಹ ಪ್ರತಿಯೊಂದು ಮಾಹಿತಿಯನ್ನು ಎಸ್‌ಪಿ ಪಡೆದುಕೊಳ್ಳಬೇಕು. ಈ ಮಾಹಿತಿ ಸೋರದಂತೆ ನಿಗಾವಹಿಸಬೇಕು. ಆದರೆ, ಈ ಆಂಟಿ ನಕ್ಸಲ್ ಸ್ಕ್ವಾಡ್‌ಗೆ ಮಾಹಿತಿ ಸೋರಿಕೆಯೇ ದೊಡ್ಡ ಸಮಸ್ಯೆಯಾಗಿ ಕಾಡಿದೆ. ಮಾಹಿತಿ ಸೋರಿಕೆಯಿಂದ ನಕ್ಸಲರು ಸಹ ಕೈಯಿಂದ ತಪ್ಪಿಸಿಕೊಳ್ಳುವ, ತಮ್ಮ ಸ್ಥಳವನ್ನು ತಕ್ಷಣಕ್ಕೆ ಬದಲಾಯಿಸುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಆಂಟಿ ನಕ್ಸಲ್ ಸ್ಕ್ವಾಡ್‌ನಲ್ಲಿರುವವರಿಗೆ ಯಾವ ನಕ್ಸಲರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಸಿಕ್ಕಿರುವುದಿಲ್ಲ. ಅಷ್ಟರಲ್ಲಾಗಲೇ ಜಗತ್ತಿಗೆ ಈ ಮಾಹಿತಿ ರವಾನೆಯಾಗಿರುತ್ತದೆ. ಈ ಅಂಶವನ್ನು ಮುಂದಿಟ್ಟುಕೊಂಡು ಆಂಟಿ ನಕ್ಸಲ್ ಸ್ಕ್ವಾಡ್ ಎಷ್ಟರ ಮಟ್ಟಿಗೆ ಮಾಹಿತಿ ಗೌಪ್ಯತೆಯನ್ನು ಕಾಪಾಡುತ್ತದೆ ಮತ್ತು ಇದರ ಗುಪ್ತಚರ ಇಲಾಖೆ ಎಷ್ಟರ ಮಟ್ಟಿಗೆ ಗಟ್ಟಿಯಾಗಿದೆ ಎಂಬುದನ್ನು ಸ್ವತಃ ಅಧಿಕಾರಿಗಳೇ ತಿಳಿದುಕೊಳ್ಳಬೇಕಾಗಿದೆ.

ದೇಶದ ಅತೀ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ನಕ್ಸಲೀಯರನ್ನು ಸರ್ವನಾಶ ಮಾಡುವ ನಿರ್ಧಾರ ತೆಗೆದುಕೊಳ್ಳುವ ಆಯಾ ರಾಜ್ಯದ ಸರ್ಕಾರಗಳು ಅದೇ ಸಂದರ್ಭಗಳಲ್ಲಿ ನಕ್ಸಲೀಯರ ಶರಣಾಗತಿಯ ಮಾತನಾಡುತ್ತವೆ. ಇದೆರಡೂ ವಿರುದ್ಧ ದಿಕ್ಕಿನ ನಿರ್ಧಾರಗಳೆಂಬುದು ಮಾತ್ರ ಅಷ್ಟೇ ಸತ್ಯ.

ಇಡೀ ಭಾರತದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ರಾಯಚೂರು ಸೇರಿದಂತೆ 70 ಜಿಲ್ಲೆಗಳು ನಕ್ಸಲೀಯರ ಹಿಡಿತದಲ್ಲಿವೆ. ಈ ನಕ್ಸಲೀಯರನ್ನು ಪ್ರಧಾನಿ ಮನಮೋಹನ್ ಸಿಂಗ್ ಬಣ್ಣಿಸುವುದು-ಭಾರತದ ಅತೀ ದೊಡ್ಡ ವೈರಸ್ ಎಂದು. ಕೇಂದ್ರ ಸರ್ಕಾರ ಈ ಹಿನ್ನೆಲೆಯಲ್ಲಿ 10 ಸಾವಿರ ಕೋಬ್ರಾ ಕಮಾಂಡೋಗಳನ್ನು ದೇಶದಾದ್ಯಂತ ನೀಡಲಿದೆ. ಕೋಬ್ರಾ ಪಡೆ ನೇರವಾಗಿ ಕೇಂದ್ರ ಸರ್ಕಾರದ ಹಿಡಿತದಲ್ಲಿದ್ದು, ಈಗಾಗಲೇ ನಕ್ಸಲರ ವಿರುದ್ಧ ಹೋರಾಟ ಮಾಡುತ್ತಿರುವ ರಾಜ್ಯದ ಪೊಲೀಸರು ಮತ್ತು ಆಂಟಿ ನಕ್ಸಲ್ ಸ್ಕ್ವಾಡ್‌ಗಳಂತೆ ರಾಜ್ಯ ಸರ್ಕಾರದ ಹಿಡಿತದಲ್ಲಿರುವುದಿಲ್ಲ. ನಕ್ಸಲರ ವಿರುದ್ಧ ಏನೇ ಕಾರ್ಯಾಚರಣೆ ನಡೆಸುವುದಾದರೂ ಪೊಲೀಸ್ ಇಲಾಖೆ ಮತ್ತು ಆಂಟಿ ನಕ್ಸಲ್ ಸ್ಕ್ವಾಡ್‌ಗೆ ರಾಜ್ಯ ಸರ್ಕಾರದ ಅನುಮತಿ ಅತ್ಯಗತ್ಯ. ಆದರೆ, ಕೋಬ್ರಾ ಕಮಾಂಡೋಗಳಿಗೆ ರಾಜ್ಯ ಸರ್ಕಾರ ಲೆಕ್ಕಕ್ಕಿಲ್ಲ. ಕೋಬ್ರಾ ಪಡೆ ತನ್ನದೇ ಆದ ರೀತಿಯಲ್ಲಿ ನಕ್ಸಲ್ ವಿರುದ್ಧ ಕೆಲಸ ಮಾಡಲಿದೆ.

ಕೋಬ್ರಾ ಪಡೆಗೆ ವಿರೋಧ

ಪಶ್ಚಿಮ ಬಂಗಾಳ ನಕ್ಸಲ್ ದಾಳಿಗೆ ತುತ್ತಾಗುತ್ತಿರುವ ಪ್ರಮುಖ ರಾಜ್ಯ. ಈ ರಾಜ್ಯದಲ್ಲಿ ನಕ್ಸಲ್ ರಾದ್ಧಾಂತಕ್ಕೆ ಇಡೀ ರಾಜ್ಯವೇ ಘಾಸಿಗೊಂಡಿದೆ. ಈಗ ಈ ರಾಜ್ಯದಲ್ಲಿಯೂ ಸಹ ಕೋಬ್ರಾ ಕಮಾಂಡೋಗಳನ್ನು ಕಳಿಸಲು ಹಾಗೂ ಅಲ್ಲಿನ ನಕ್ಸಲ್ ಚಳವಳಿಯನ್ನು ಸರ್ವನಾಶಗೊಳಿಸಲು ಯೋಜಿಸಿದ್ದ ಕೇಂದ್ರ ಸರ್ಕಾರಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೇ ಅಡ್ಡಗಾಲು ಹಾಕಿದ್ದಾರೆ. ನಕ್ಸಲರನ್ನು ಎದುರಿಸಲು ರಾಜ್ಯ ಸರ್ಕಾರವೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೋಬ್ರಾದ ಅವಶ್ಯಕತೆ ಇಲ್ಲ ಎಂಬ ನಿರ್ಣಯ ತೆಗೆದುಕೊಂಡಿದೆ. ಕೋಬ್ರಾಕ್ಕೆ ಎದುರಾದ ದೊಡ್ಡ ವಿರೋಧವಿದು. ಕರ್ನಾಟಕದಲ್ಲಿಯೂ ಸಹ ಈಗಾಗಲೇ ಪ್ರಗತಿಪರ ಸಂಘಟನೆಗಳು ಕೋಬ್ರಾದ ವಿರುದ್ಧ ಧ್ವನಿಯೆತ್ತಲು ಸಿದ್ಧತೆ ನಡೆಸಿಕೊಂಡಿದೆ. ಕೋಬ್ರಾ ಎಂದರೆ, ಅದು ಯಾರಿಗೆ ಬೇಕಾದರೂ, ಯಾವಾಗ ಬೇಕಾದರೂ ಕಚ್ಚಬಹುದಾದ ಸರ್ವನಾಶಿ ಕಮಾಂಡೋ ಪಡೆ ಎಂದೇ ಬಣ್ಣಿಸಲಾಗುತ್ತಿದೆ.

ಮಲೆನಾಡಿನ ಕಾಡುಗಳಲ್ಲಿ ನಕ್ಸಲರು ಮತ್ತು ಪೊಲೀಸರ ಗುಂಡಿನ ದಾಳಿಗಳು ಸಾಕಷ್ಟು ವಿವಾದವನ್ನೇ ಎಬ್ಬಿಸಿವೆ. ನೆಮ್ಮದಿಯಿಂದಿದ್ದ ಮಲೆನಾಡಿನ ಕಾಡಿನ ಜನ ಈಗ ಗುಂಡಿನ ಸದ್ದಿಲ್ಲದೆ, ಪೊಲೀಸರು ಮತ್ತು ನಕ್ಸಲರ ಹಿಂಸೆಯಿಲ್ಲದೆ ಒಂದು ದಿನವನ್ನೂ ಕಳೆಯುವಂತಿಲ್ಲ. ಇಷ್ಟರ ನಡುವೆ ಇದೀಗ ಕೋಬ್ರಾ ಕಮಾಂಡೋ ಪಡೆ ಮಲೆನಾಡಿನ ಕಾಡುಗಳಲ್ಲಿ ನಾಗರ ಹಾವಿನಂತೆ ಬುಸುಗುಡಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X