ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್ಪಸಂಖ್ಯಾತರ ಅಭಿವೃದ್ಧಿಗೆ 62 ಕೋಟಿ ಮೀಸಲು

By * ಶಿ.ಜು.ಪಾಶ, ಶಿವಮೊಗ್ಗ
|
Google Oneindia Kannada News

ಶಿವಮೊಗ್ಗ, ಜೂ. 14 : ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ 2009-10ನೇ ಸಾಲಿನ ಒಟ್ಟು ಬಜೆಟ್‌ನಲ್ಲಿ 49.20ಕೋಟಿ ರೂ. ಅನುದಾನ ಮತ್ತು ವಿಶೇಷ ಅಭಿವೃದ್ಧಿ ಕಾರ್ಯಕ್ರಮ(ಎಸ್‌ಡಿಪಿ)ದಲ್ಲಿ 17ಕೋಟಿ ರೂ. ಸೇರಿದಂತೆ ಒಟ್ಟು 66.20ಕೋಟಿ ರೂ.ಗಳನ್ನು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆ ಎಂದು ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳ ಅಲ್ಪಸಂಖ್ಯಾತರ ಜನಸಂಖ್ಯೆ ಆಧಾರದಲ್ಲಿ ವಿವಿಧ ಯೋಜನೆಗಳಿಗೆ ಗುರಿಯನ್ನು ನಿಗದಿಪಡಿಸಲಾಗಿದೆ. 2009-10ನೇ ಸಾಲಿನಲ್ಲಿ ಸ್ವಾವಲಂಬನಾ ಯೋಜನೆಯಡಿ 4ಸಾವಿರ ಫಲಾನುಭವಿಗಳಿಗೆ 600ಲಕ್ಷ ರೂ., ಅರಿವು ಸಾಲ ಯೋಜನೆಯಡಿ 9,300 ಫಲಾನುಭವಿಗಳಿಗೆ 1,400ಲಕ್ಷ ರೂ.ಗಳು ಶ್ರಮ ಶಕ್ತಿ ಯೋಜನೆಯಡಿ 4,800 ಫಲಾನುಭವಿಗಳಿಗೆ 720 ಲಕ್ಷ ರೂ.ಗಳು, ಮೈಕ್ರೋ ಸಹಾಯಧನ ಸಾಲ ಯೋಜನೆಯಡಿ 10 ಸಾವಿರ ಫಲಾನುಭವಿಗಳಿಗೆ 1200ಲಕ್ಷ ರೂ.ಗಳು, ಗಂಗಾ ಕಲ್ಯಾಣ ಯೋಜನೆಯಡಿ 1ಸಾವಿರ ಫಲಾನುಭವಿಗಳಿಗೆ 1 ಸಾವಿರ ಲಕ್ಷ ರೂ.ಗಳು ಸೇರಿದಂತೆ ಒಟ್ಟು 31,100 ಫಲಾನುಭವಿಗಳಿಗೆ ರೂ. 4920 ಲಕ್ಷ ರೂ.ಗಳನ್ನು ವಿನಿಯೋಗಿಸಲಾಗುವುದು ಎಂದು ಹೇಳಿದರು.

ಎಸ್‌ಡಿಪಿ ಯೋಜನೆಯಲ್ಲಿ ಸುಮಾರು 17ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದ್ದು, ಮನೆ ಕಟ್ಟುವವರಿಗೆ ಸಾಲ ಹಾಗೂ ವಾಸದ ನಿವೇಶನ ಖರೀದಿಗೂ ಸಾಲ ನೀಡಲಾಗುವುದು, ಹೀಗೆ ಒಟ್ಟು 66.20ಕೋಟಿ ರೂ.ಗಳನ್ನು ವಿವಿಧ ಯೋಜನೆಗಳಿಗೆ ಸಮರ್ಪಕವಾಗಿ ವಿನಿಯೋಗಿಸುವ ಗುರಿಯನ್ನು ಹೊಂದಲಾಗಿದೆ. ಅಲ್ಲದೆ, ಹೊಸ ಯೋಜನೆ ಎಂಬಂತೆ ಅರಿವು ಯೋಜನೆಯಡಿ ಉನ್ನತ ವ್ಯಾಸಂಗಕ್ಕೆ ಅರಿವು ಸಾಲ ನೀಡಲಾಗುವುದು, ಜೊತೆಗೆ ಎನ್‌ಎಮ್‌ಡಿಎಫ್‌ಸಿ ಯಿಂದ ಸಾಲ ಪಡೆದು ವಿವಿಧ ಹೊಸ ಕೋರ್ಸ್‌ಗಳನ್ನು ಕ್ಲಸ್ಟರ್, ನೇರಸಾಲ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಕಳೆದ ಬಾರಿ ಸರ್ಕಾರದಿಂದ ಬಿಡುಗಡೆಯಾದ 49.20ಕೋಟಿ ರೂ.ಗಳಲ್ಲಿ ಒಟ್ಟು 34,140 ಫಲಾನುಭವಿಗಳಿಗೆ 4,202 ಲಕ್ಷ ರೂ.ಗಳನ್ನು ವಿವಿಧ ಯೋಜನೆಗಳಿಗೆ ನೀಡಲಾಗಿದೆ ಎಂದು ತಿಳಿಸಿದ ಅವರು, ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ರಾಜ್ಯದ 29 ಜಿಲ್ಲೆಗಳಲ್ಲಿ ಸುಸಜ್ಜಿತ ಕಛೇರಿಗಳನ್ನು 2.23ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲು ಯೋಜಿಸಲಾಗಿದ್ದು, ನಿಗಮವೇ ಇದರ ಖರ್ಚು ವೆಚ್ಚವನ್ನು ಭರಿಸಲಿದೆ ಎಂದು ಹೇಳಿದರು.

ವಿವಿಧ ಯೋಜನೆಗಳಡಿ ಸಾಲ ಪಡೆದ ಫಲಾನುಭವಿಗಳು ಸಾಲ ಮನ್ನಾ ಆಗುತ್ತದೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆದರೆ, 1996-2004ರ ಸಾಲಿನಲ್ಲಿ ಪಡೆದ ಸಾಲಗಳ ಬಡ್ಡಿ ಮಾತ್ರ ಮನ್ನವಾಗುತ್ತದೇ ಹೊರತು ಸಾಲ ಮನ್ನಾ ಇಲ್ಲ ಎಂದು ಸ್ಪಷ್ಟಪಡಿಸಿದರು. ಈ ಹಿಂದೆ ಫಲಾನುಭವಿಗಳು ಪಡೆದ ಸಾಲವನ್ನು ಮರುಪಾವತಿ ಮಾಡಿಸುವಲ್ಲಿ ಅಧಿಕಾರಿಗಳು ಹಿಂದುಳಿದಿದ್ದಾರೆ. ಇದಕ್ಕೆ ಅವರ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದ ಅವರು, ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮೂಲಕ ಸಾಲ ಮರುಪಾವತಿ ಮಾಡಿಸಬೇಕೆಂದು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ತಲ್ಕೀನ್ ಅಹಮದ್,ಬಿಜೆಪಿ ರಾಜ್ಯಕಾರ್ಯದರ್ಶಿ ಮುಕ್ತಿಯಾರ್ ಅಹಮದ್ ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X