ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲು ಕುಡಿದವರು ವಿಷ ಕುಡಿಯುವಂತಾಗಿದೆ : ಈಶ್ವರಪ್ಪ

By * ಶಿ.ಜು.ಪಾಶ, ಶಿವಮೊಗ್ಗ
|
Google Oneindia Kannada News

KS Eshwarappa
ಶಿವಮೊಗ್ಗ, ಜೂ. 13 : ಪಕ್ಷದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಸದ್ಯದಲ್ಲೇ ಸರ್ಕಾರ ಬಿದ್ದುಹೋಗುತ್ತದೆ ಎಂಬ ನಿರೀಕ್ಷೆಯಲ್ಲಿ ಹಾಲು ಕುಡಿದವರು ಈಗ ವಿಷ ಕುಡಿಯುವ ಸಂದರ್ಭ ಬಂದಿದೆ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.

ಶನಿವಾರ ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಮತದಾರರಿಗೆ ಕೃತಜ್ಞತೆ ಹಾಗೂ ಸಂಸದ ಬಿ.ವೈ.ರಾಘವೇಂದ್ರ, ನಗರಸಭಾ ಅಧ್ಯಕ್ಷ ಎನ್.ಜೆ.ರಾಜಶೇಖರ್, ಸೂಡಾ ಅಧ್ಯಕ್ಷ ಜ್ಞಾನೇಶ್ವರ್‌ರ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಬಿಜೆಪಿಯಲ್ಲಿ ಭಿನ್ನಮತದ ಬಿರುಗಾಳಿ ಎಬ್ಬಿಸಿದ್ದ ಈಶ್ವರಪ್ಪ ಮಾತನಾಡುತ್ತಿದ್ದರು.

ಬಿ.ವೈ.ರಾಘವೇಂದ್ರರವರು ಲೋಕಸಭಾ ಚುನಾವಣೆಯಲ್ಲಿ ಒಬ್ಬ ಹಳೆಯ ಹುಲಿಯನ್ನು ಹೊಡೆದು ಸಂಸತ್ ಪ್ರವೇಶಿಸಿದ್ದಾರೆ. ಸಿಕ್ಕಿರುವ ಸ್ಥಾನ ಪಕ್ಷದ ಕಾರ್ಯಕರ್ತರ ಶ್ರಮದಿಂದ ಸಿಕ್ಕಿದ್ದು, ಮುಂದೆಯೂ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಇನ್ನೂ ಉತ್ತಮ ಸ್ಥಾನ ಪಡೆಯಬೇಕು. ಚುನಾವಣಾ ಸಂದರ್ಭದಲ್ಲಿಯೇ ಹೇಳಿದ್ದೆ. ನನ್ನ ಮಗನಂತೆಯೇ ರಾಘವೇಂದ್ರ ಕೂಡ ನನ್ನ ಎರಡನೇ ಮಗ ಎಂದು ಹೇಳಿದರು.

ಬಿಜೆಪಿಯಲ್ಲಿ ಸಣ್ಣ ಪ್ರಮಾಣದ ಬಿಕ್ಕಟ್ಟು ಸೃಷ್ಟಿಯಾಗಿತ್ತು, ಅದೀಗ ಬಗೆಹರಿದಿದೆ. ಬಿಜೆಪಿಯಲ್ಲಿ ಏನೇ ಚರ್ಚೆಯಾದರು ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿತ್ತು. ಆದರೆ ಈ ಬಾರಿ ಮಾಧ್ಯಮದ ಮುಖಾಂತರ ಹೊರಜಗತ್ತಿಗೆ ತಿಳಿಯುವಂತಾಗಿದೆ. ಇದೇ ಬಿಕ್ಕಟ್ಟು ಬೇರೆ ಪಕ್ಷದಲ್ಲಿ ಉಂಟಾಗಿದ್ದರೆ ಹೊಡೆದಾಡುವ ಮಟ್ಟಕ್ಕೆ ಹೋಗುತ್ತಿತ್ತು. ಆದರೆ ನಮ್ಮ ಪಕ್ಷದಲ್ಲಿ ಈ ರೀತಿಯ ಘಟನೆ ನಡೆಯುವುದಿಲ್ಲ ಎಂದರು. ಉಂಟಾಗಿದ್ದ ಗೊಂದಲ ಬಗೆಹರಿದಿದ್ದು, ಮುಂದಿನ ನಾಲ್ಕು ವರ್ಷಗಳ ಕಾಲ ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಜೊತೆಗೆ ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿದ್ದು, ಆ ಸಾಧನೆಯನ್ನು ಯಡಿಯೂರಪ್ಪ ಮಾಡಿತೋರಿಸುತ್ತಾರೆ ಎಂದು ಹೆಮ್ಮೆಯಿಂದ ನುಡಿದರು.

ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ತಪ್ಪು ಅಭಿಪ್ರಾಯ ಸೃಷ್ಟಿಯಾಗಿದೆ. ಆದರೆ 20 ವರ್ಷಗಳಲ್ಲಿ ಹಣ, ಹೆಂಡ ಹಂಚದೆ ಮತಪಡೆದಿದ್ದೇವೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾನು ಪಡೆದ ಮತಕ್ಕಿಂತ ನಗರ ಪ್ರದೇಶದಲ್ಲಿ ರಾಘವೇಂದ್ರರವರಿಗೆ ಬಂದಿದೆ ಎಂದು ಹರ್ಷಿಸಿದರು.

ರಾಜ್ಯದ ಯಾವುದೇ ನಗರಕ್ಕೂ ಬಿಡುಗಡೆಯಾಗದಷ್ಟು ಹಣ ಜಿಲ್ಲೆಗೆ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಹಣವನ್ನು ಸರಿಯಾಗಿ ಅಭಿವೃದ್ಧಿ ಕಾರ್ಯಕ್ಕೆ ಬಳಸಬೇಕೆಂದು ನಗರಸಭಾ ಅಧ್ಯಕ್ಷರಿಗೆ ಈಶ್ವರಪ್ಪ ಸೂಚಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X