ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧ್ವಜ ವಿವಾದ : ಸುತ್ತೋಲೆ ವಾಪಸ್ಸಿಗೆ ಕರವೇ ಆಗ್ರಹ

By Staff
|
Google Oneindia Kannada News

Karave protest
ಬೆಂಗಳೂರು, ಜೂ. 7 : ಕನ್ನಡ ರಾಜ್ಯೋತ್ಸವ ಸೇರಿದಂತೆ ಸರಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಧ್ವಜ ಹಾರಿಸಬಾರದು ಎಂಬ ಸರಕಾರಿ ಆದೇಶಕ್ಕೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. 24 ಗಂಟೆಯೊಳಗೆ ಆದೇಶ ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಈ ನಡುವೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಈ ಸುತ್ತೋಲೆಯನ್ನು ಹಿಂತೆಗೆದುಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆಗಳು ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸತೊಡಗಿವೆ. ಕನ್ನಡಿಗರ ಸ್ವಾಭಿಮಾನ ಸಂಕೇತವಾಗಿರುವ ಕನ್ನಡ ಧ್ವಜ ಸರಕಾರಿ ಕಾರ್ಯಕ್ರಮಗಳಲ್ಲಿ ಹಾರಿಸದಂತೆ ಶನಿವಾರ ಕರ್ನಾಟಕ ಸರಕಾರ ಹೊರಡಿಸಿತ್ತು. ಸರಕಾರ ಹೊರಡಿಸಿರುವ ಕನ್ನಡ ವಿರೋಧಿ ಆದೇಶವನ್ನು 24 ಗಂಟೆಯಲ್ಲಿ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಸರಕಾರವೇ ಹೊಣೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಆದೇಶ ಹಿಂಪಡೆಯದಿದ್ದರೆ ಸರಕಾರ ನಡೆಸುವ ಎಲ್ಲ ಕಾರ್ಯಕ್ರಮಗಳಲ್ಲಿ ಕಪ್ಪು ಬಟ್ಟೆ ಬಾವುಟ ಪ್ರದರ್ಶಿಸಲಾಗುವುದು. 2002 ರ ಧ್ವಜ ಸಂಹಿತೆ ಕಾಯ್ದೆ ಪ್ರಕಾರ, ರಾಷ್ಟ್ರ ಧ್ವಜಕ್ಕಿಂತ ಎತ್ತರದಲ್ಲಿ, ಸಮನಾಗಿ, ಅಥವಾ ರಾಷ್ಟ್ರ ಧ್ವಜಕ್ಕಿಂತ ದೊಡ್ಡದಾದ ಯಾವುದೇ ಧ್ವಜವನ್ನು ಹಾರಿಸಬಾರದು. ಆದರೆ, ರಾಷ್ಟ್ರ ಧ್ವಜಕ್ಕಿಂತ ಕೆಳಗೆ ಹಾರಿಸುವಂತಿಲ್ಲ ಎಂದು ಈ ನಿಯಮ ಹೇಳುವುದಿಲ್ಲ. ಸುತ್ತೋಲೆಯಲ್ಲಿ ರಾಜ್ಯೋತ್ಸವ ಎಂಬುದನ್ನು ಉಲ್ಲೇಖಿಸುವ ಅಗತ್ಯವೂ ಇರಲಿಲ್ಲ. 2002 ರ ನಂತರ ಕಾಯ್ದೆಗೆ ತಿದ್ದುಪಡಿಯಾಗಿದೆಯೇ ಎಂಬ ವಿವರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಜೂನ್ 8ರ ವರೆಗೆ ಸಮಯಾವಕಾಶ ಕೋರಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ಬೆಂಗಳೂರಿನ ಎಂ ಜಿ ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದ ಕರವೇ (ನಾರಾಯಣಗೌಡ ಬಣ)ದ ಕಾರ್ಯಕರ್ತರು ರಾಜ್ಯದ ಮುಖ್ಯ ಕಾರ್ಯದರ್ಶಿ ಸುಧಾಕರರಾವ್ ಅವರಿಗೆ ಮನವಿ ಸಲ್ಲಿಸಿದರು. ಈವರಗೆ ಯಾವ ಸರಕಾರವೂ ಹೊರಡಿಸದಂಥ ಆದೇಶವನ್ನು ಈ ಸರಕಾರ ಹೊರಡಿಸಿದ್ದು, ಕನ್ನಡ ವಿರೋಧಿ ಕ್ರಮವಾಗಿದೆ ಎಂದು ಕರವೇ ಅಸಮಾಧಾನ ವ್ಯಕ್ತಪಡಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X