ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಬಿಜೆಪಿ ಬಂಡಾಯದ ಹಿಂದೆ ಆಂಧ್ರ ಸಿಎಂ?

By Staff
|
Google Oneindia Kannada News

Y S Rajashekara Reddy
ಬೆಂಗಳೂರು, ಜೂ.3: ಯಾವಾಗ ಮುಖ್ಯಮಂತ್ರಿ ಯಡಿಯೂರಪ್ಪ ಬಳ್ಳಾರಿಯಲ್ಲಿ ಗಡಿ ಒತ್ತುವರಿ ಮಾಡಿಕೊಂಡಿರುವುದನ್ನು ಜಂಟಿ ಸಮೀಕ್ಷೆ ನಡೆಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದರೋ ಅವಾಗಲೇ ಅವರ ಕುರ್ಚಿಗೆ ಸಂಚಕಾರ ಬಂದಿತ್ತೆ? ಪಕ್ಷದ ಕೆಲವೊಂದು ನಾಯಕರ ಪ್ರಕಾರ ಹೌದು. ಕಳೆದ ಒಂದು ವರ್ಷದಿಂದ ಭಿನ್ನಮತದಲ್ಲೂ ಒಗ್ಗಟ್ಟಿದೆ ಎಂಬುದನ್ನು ತೋರಿಸಿಕೊಳ್ಳುತ್ತಲೇ ಬಂದ ಬಿಜೆಪಿಯಲ್ಲಿ ದಿಢೀರನೇ ಬೆಂಕಿ ಹತ್ತಿಕೊಳ್ಳಲು ಇದೇ ಪ್ರಬಲ ಕಾರಣ ಎನ್ನಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತು ಆನಂತರ ನಡೆದ ಆಪರೇಷನ್ ಕಮಲದಲ್ಲಿ ಬಳ್ಳಾರಿ ತ್ರಿಮೂರ್ತಿ ಗಣಿ ರೆಡ್ಡಿ ಸಹೋದರರು ತನು, ಮನ, ಧನ ಅರ್ಪಿಸಿ ಕೆಲಸಮಾಡಿದರು ಎನ್ನುವುದು ಸುಳ್ಳಲ್ಲ. ಜಂಟಿ ಸಮೀಕ್ಷೆಯ ಮೂಲಕ ಮುಖ್ಯಮಂತ್ರಿಗಳು ತಮ್ಮ ಬುಡಕ್ಕೇ ಸಂಚಕಾರ ತರಲು ಯತ್ನಿಸುತ್ತಿದ್ದಾರೆಂದು ಅರಿತ ಗಣಿಧಣಿಗಳು ನೇರ ಸಹಾಯಹಸ್ತ ಬೇಡಲು ಹೋಗಿದ್ದು ತಮ್ಮ ಗಣಿ ವ್ಯವಹಾರಕ್ಕೆ ಆಧಾರಸ್ತಂಭವಾಗಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿಯ ಬಳಿಗೆ. ಆಂಧ್ರ ಮುಖ್ಯಮಂತ್ರಿಯ ಮಗ, ಪ್ರಸಕ್ತ ಕಾಂಗ್ರೆಸ್ ಪಕ್ಷದ ಕಡಪ ಕ್ಷೇತ್ರದ ಸಂಸದ ಜಗಮೋಹನ್ ರೆಡ್ಡಿ ಬಳ್ಳಾರಿ ಗಣಿ ವ್ಯವಹಾರದಲ್ಲಿ ನೇರ ಪಾಲುದಾರರು.

ಒಂದು ವೇಳೆ ಮೀಸಲು ಅರಣ್ಯ ಪ್ರದೇಶದಲ್ಲಿ ಗಣಿ ಒತ್ತುವರಿಯಾಗಿದೆ ಎಂದು ಸಾಬೀತಾದರೆ ರೆಡ್ಡಿ ಸಹೋದರರ ರಾಜಕೀಯ ಭವಿಷ್ಯಕ್ಕೆ ತೊಂದರೆ ಬರುವುದರಲ್ಲಿ ಸಂಶಯವಿಲ್ಲ. ಹೇಗಿದ್ದರೂ ಆಂಧ್ರದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆಂಧ್ರ ಸಿಎಂ ಅವರನ್ನು ಭೇಟಿ ಮಾಡಿದ ಜನಾರ್ದನ ರೆಡ್ಡಿ, ಯಡಿಯೂರಪ್ಪ ತಮ್ಮ ಬುಡಕ್ಕೆ ಎಳ್ಳುನೀರು ಬಿಡುತ್ತಿರುವುದು ಮತ್ತು ಪಕ್ಷದಲ್ಲಿ ಆದ್ಯತೆ ನೀಡದಿರುವುದನ್ನು ಆಂಧ್ರ ಮುಖ್ಯಮಂತ್ರಿ ಬಳಿ ಹೇಳಿ ಕೊಂಡಿದ್ದಾರೆ ಎನ್ನಲಾಗಿದೆ .(ರಾಜಶೇಖರ್ ರೆಡ್ಡಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಜನಾರ್ಧನ ರೆಡ್ಡಿ ಪಾಲ್ಗೊಂಡಿದ್ದರು).

ಪಕ್ಷಾಂತರ ನಿಷೇಧ ಕಾಯಿದೆ ಅನ್ವಯವಾಗದ ರೀತಿಯಲ್ಲಿ ಶಾಸಕರನ್ನು ಬುಟ್ಟಿಗೆ ಹಾಕಿಕೊಂಡು ಬರುವಂತೆ ಆಹ್ವಾನ ನೀಡಿದರು ಎನ್ನಲಾಗಿದೆ. ಬಳ್ಳಾರಿ ಗಣಿಧಣಿಗಳ ಬಳಿ ಸುಮಾರು 35 ಶಾಸಕರು ಇದ್ದಾರೆ, ಹಾಗೆ ರೇಣುಕಾಚಾರ್ಯ, ಜಾರಕೀಹೊಳೆ ಸೇರಿದಂತೆ ಇನ್ನೂ 10 ಶಾಸಕರು ರೆಡ್ಡಿ ಸಹೋದರರಿಗೆ ಕೈಜೋಡಿಸುವ ಸಾಧ್ಯತೆ ಇದೆ. ಇದನ್ನೇ ಆಧಾರವಾಗಿಟ್ಟು ಕೊಂಡು ತ್ರಿಮೂರ್ತಿ ರೆಡ್ಡಿ ಸಹೋದರರು "ಯಡಿಯೂರಪ್ಪ ಹಠಾವೋ, ಬಿಜೆಪಿ ಬಚಾವೋ" ಕಾರ್ಯಾಚರಣೆಗೆ ಮುಂದಾಗಿದ್ದು ಎನ್ನುತ್ತವೆ ನಂಬಲರ್ಹ ಮೂಲಗಳು.

ಒಟ್ಟಿನಲ್ಲಿ ಎಲ್ಲವೂ ತ್ರಿಮೂರ್ತಿ ರೆಡ್ಡಿ ಸಹೋದರರ ನಿರೀಕ್ಷೆಯಂತೆ ನಡೆದರೆ, ಕಾಂಗ್ರೆಸ್ ಹೈಕಮಾಂಡ್ ಈ ಕಾರ್ಯಾಚರಣೆಗೆ ಅನುಮತಿ ನೀಡಿದರೆ 2006 ರಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದರೂ ನಡೆಯಬಹುದು ಅನ್ನುತ್ತದೆ ಬಿಜೆಪಿ ಮೂಲಗಳು ಅಥವಾ ಬಳ್ಳಾರಿ ಗಣಿ ವಿವಾದ ಸರಿಪಡಿಸಿದರೆ ಮತ್ತು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆಯಿಟ್ಟು ಅದು ಈಡೇರಿದರೆ ಗಣಿಧಣಿಗಳು ಸುಮ್ಮನಾಗಬಹುದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X