ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದೀಯರ ದಕ್ಷತೆಯ ಮೇಲೆ ಲಕ್ಷ್ಯವಿಡಲಿದೆ 'ದಕ್ಷ'

By Staff
|
Google Oneindia Kannada News

Daksh, an NGO, to keep a watch on Karnataka MPs
ಬೆಂಗಳೂರು, ಜೂ. 2 : 15ನೇ ಲೋಕಸಭೆಯಲ್ಲಿ 28 ಜನ ಜನಪ್ರತಿನಿಧಿಗಳನ್ನು ಆರಿಸಿ ಸಂಸತ್ತಿಗೆ ಕಳಿಸಿದ್ದಾಗಿದೆ. ಆದರೆ, ಅವರು ರಾಜ್ಯದ ಪರವಾಗಿ ಎಷ್ಟು ಕೆಲಸ ಮಾಡುತ್ತಾರೆ, ಎಷ್ಟು ಬಾರಿ ಜನಪರವಾಗಿ ದನಿ ಎತ್ತುತ್ತಾರೆ, ಎಷ್ಟು ದಿನ ಸಂಸತ್ತಿನಲ್ಲಿ ಭಾಗವಹಿಸುತ್ತಾರೆ, ನಿಧಿಯನ್ನು ಹೇಗೆ ಬಳಕೆ ಅಥವಾ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಲಕ್ಷ್ಯ ಇಡುವವರು ಯಾರು?

ಸಂಸದೀಯರ ಕಾರ್ಯವೈಖರಿಯ ದಕ್ಷತೆಯ ಬಗ್ಗೆ ದಕ್ಷತೆಯಿಂದ ಲಕ್ಷ್ಯವಿಡಲಿದೆ 'ದಕ್ಷ' ಎಂಬ ಸರಕಾರೇತರ ಸಂಘಟನೆ. ಆರಂಭದಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವ ಬಿಜೆಪಿಯ 19, ಕಾಂಗ್ರೆಸ್ಸಿನ 6 ಮತ್ತು ಜೆಡಿಎಸ್ ಪಕ್ಷದ 3 ಸಂಸದರ ಮೇಲೆ ಹದ್ದಿನ ಕಣ್ಣಿಡಲಿದೆ. ನಂತರದ ಹಂತದಲ್ಲಿ ಎಲ್ಲ 543 ಕ್ಷೇತ್ರದ ಪ್ರತಿನಿಧಿಗಳ ಕಾರ್ಯಕ್ಷಮತೆಯನ್ನು ಮಾಪನ ಮಾಡಲಿದೆ ದಕ್ಷ.

ದಕ್ಷ ಸಂಘಟನೆಯ ನಾಲ್ವರು ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಹರೀಶ್ ನರಸಪ್ಪಾ ಅವರು 'ದಕ್ಷ'ದ ಕಾರ್ಯವಿಧಾನದ ಬಗ್ಗೆ ವಿವರಿಸಿದ್ದಾರೆ. ಕರ್ನಾಟಕದ ಸಂಸದೀಯರು ಈಗಾಗಲೆ ತಮ್ಮ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದು, ಈಗಿಂದಲೇ ಅವರು ಕೈಗೊಳ್ಳುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ನಿಗಾ ವಹಿಸಲಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಮತ್ತು ರಾಷ್ಟ್ರದಲ್ಲಿ ರಚಿತವಾಗಿರುವ ಸರಕಾರದ ಸಾಧನೆ ಮತ್ತು ಶಾಸಕ ಹಾಗೂ ಸಂಸದೀಯರ ಕಾರ್ಯಕ್ಷಮತೆಯನ್ನು ಅಳೆಯುವ ಮೂಲ ಉದ್ದೇಶದಿಂದ 'ದಕ್ಷ' ಸಂಘಟನೆಯನ್ನು ಹುಟ್ಟುಹಾಕಲಾಗಿದೆ. ಪ್ರಾದೇಶಿಕ ಸಮಸ್ಯೆ ಮತ್ತು ಆಡಳಿತದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಹೆಚ್ಚಿಸುವುದು ನಮ್ಮ ಉದ್ದೇಶ ಎಂದು ವಕೀಲರೂ ಆಗಿರುವ ಹರೀಶ್ ವಿವರಿಸಿದ್ದಾರೆ.

ರಾಜಕಾರಣಿಗಳ ಮತ್ತು ಸರಕಾರದ ಜವಾಬ್ದಾರಿಗಳ ಬಗ್ಗೆ ಎಚ್ಚರಿಸುವ ಉದ್ದೇಶದಿಂದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗರಿಕರು ಸೇರಿ 'ದಕ್ಷ'ವನ್ನು 2006ರಲ್ಲಿ ಸ್ಥಾಪಿಸಿದ್ದಾರೆ. ಈ ಸಂಘಟನೆಯಲ್ಲಿ ಶಿಕ್ಷಣ, ಉದ್ಯಮ, ರಾಜಕಾರಣ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ನಾಗರಿಕರಿದ್ದಾರೆ. ದಕ್ಷ ಸಂಘಟನೆ ಜನಪ್ರತಿನಿಧಿಗಳ ಮಾಹಿತಿ ಸಂಗ್ರಹಿಸಲಿದೆ. 15ನೇ ಲೋಕಸಭೆ ಒಂದು ವರ್ಷ ಪೂರೈಸಿದ ನಂತರ ಕರ್ನಾಟಕದ ಸಂಸದೀಯರ ಸಾಧನೆಯ ಅಳತೆಗೋಲನ್ನು ಜನರ ಮುಂದಿಡಲಿದೆ.

ಇದಲ್ಲದೆ, ಕಾನೂನು ಮತ್ತು ಸುವ್ಯವಸ್ಥೆ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ವೈದ್ಯಕೀಯ ಮತ್ತು ವಿದ್ಯುತ್ ಮುಂತಾದ ರಾಜ್ಯ ಸರಕಾರದ ಪ್ರಮುಖ ಇಲಾಖೆಗಳ ಮೇಲೆ ಕೂಡ ಕಣ್ಣಿಟ್ಟಿದ್ದು ಅವುಗಳ ಸಾಧನೆಯ ಬಗ್ಗೆ ಉಪಯುಕ್ತ ಮಾಹಿತಿಯನ್ನು ಕಲೆಹಾಕುತ್ತಿದೆ. ನಂತರ ಆಯಾ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವವರು ತಯಾರಿಸಿದ ವರದಿಯನ್ನು ಜುಲೈ ತಿಂಗಳಲ್ಲಿ ಪ್ರಕಟಿಸಲಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X