ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹಿರಂಗದಲ್ಲಿ ನಗುಮುಖಿ ಅಂತರಂಗದಲ್ಲಿ ಜ್ವಾಲಾಮುಖಿ

By Staff
|
Google Oneindia Kannada News

BS Yeddyurappa
ಯಡಿಯೂರಪ್ಪ ಸರಕಾರದ ಪತನಕ್ಕೆ ಬಳ್ಳಾರಿಯ ಗಣಿಧಣಿಗಳೇ ಮುಹೂರ್ತ ರೆಡಿ ಮಾಡಿದ್ದಾರೆ. ಯಡಿಯೂರಪ್ಪನವರ ಮುಖಭಾವವೇ ಎಲ್ಲ ಹೇಳುತ್ತಿದೆ. ಮೊದಲಿನಿಂದ ಮುಖ್ಯಮಂತ್ರಿಯನ್ನು ಧಿಕ್ಕರಿಸಿಕೊಂಡೇ ಬಂದಿರುವ ಈಶ್ವರಪ್ಪ ಕೂಡ ತಾಂಡವ ನೃತ್ಯ ಶುರುಮಾಡಿದ್ದಾರೆ. ಅವರಿಗೆ ಬೆಂಬಲವಾಗಿ ಜಗದೀಶ್ ಶೆಟ್ಟರ್ ಕೂಡ ಹೆಗಲು ಕೊಟ್ಟರೆ ಅಚ್ಚರಿಯಿಲ್ಲ. ಅತಿಯಾದ ಆತ್ಮವಿಶ್ವಾಸ, ದುರಹಂಕಾರಿ ಸ್ವಭಾವ ಯಡಿಯೂರಪ್ಪನವರಿಗೆ ಮುಳುವಾಗಲಿದೆಯೇ? ಉತ್ತರ ಸದ್ಯಕ್ಕೇ ದೊರೆಯಲಿದೆ. ಈ ಎಲ್ಲ ಬೆಳವಣಿಗೆ ನೋಡಿ ಕಾಂಗ್ರೆಸ್ ಒಳಒಳಗೇ ಮುಸಿಮುಸಿ ನಗುತ್ತಿದೆ.

* ಚಿದಂಬರ ಬೈಕಂಪಾಡಿ, ಮಂಗಳೂರು

ದಕ್ಷಿಣ ಭಾರತದ ಮೊಟ್ಟಮೊದಲ ಬಿಜೆಪಿ ಸರ್ಕಾರಕ್ಕೆ ಮುನ್ನೂರ ಅರತ್ತೈದು ದಿನಗಳ ಸಂಭ್ರಮದಲ್ಲಿರುವುದೇನೋ ನಿಜ, ಆದರೆ ಬಿಜೆಪಿ ಪಾಳೆಯದಲ್ಲಿರುವ ಒಬ್ಬರ ಮುಖದಲ್ಲೂ ಇಂಥ ಛಾಯೆಯನ್ನು ಯಾರೂ ಕಂಡಿಲ್ಲ, ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಖದಲ್ಲೂ ನಗೆಯ ಸುಳಿವಿರಲಿಲ್ಲ. ಭಾನುವಾರದ ಬಿಜೆಪಿಯ ಶೋ ಒಂಥರಾ ಔಪಚಾರಿಕವಾಗಿತ್ತು. ಇದಕ್ಕಿಂತ ವಿ.ಸೋಮಣ್ಣ ಅವರ ಬಾಡೂಟದ ಗೆಟ್ಟಪ್ಪೇ ಸೂಪರ್.

ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿ ಪಾಳೆಯದ ಡೇರೆಯೊಳಗೆ ಬೆಂಕಿ ಹೊಗೆಯಾಡುತ್ತಿತ್ತು. ಯಡಿಯೂರಪ್ಪ ಅವರು ತುಂಬಾ ಇಮೋಷನಲ್ ಆಗಿ ಕೆಲವರಿಗೆ ಅತಿಯಾದ ಇಂಪಾರ್‍ಟೆನ್ಸ್ ಕೊಟ್ಟರು. ಇದೇ ಯಡಿಯೂರಪ್ಪ ಅವರ ಪಾಲಿಗೆ ಮುಳ್ಳಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕುಮಾರಸ್ವಾಮಿ ಮೊದಲ ಕಾರಣವಾದರೆ ಆನಂತರದ ಬೆಳವಣಿಗೆಗಳಲ್ಲಿ ಗಣಿಧಣಿಗಳ ಪಾತ್ರ ಮಹತ್ವದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಸತ್ಯವನ್ನು ಯಡಿಯೂರಪ್ಪ ಬಲ್ಲರು, ಆದರೆ ಮುಕ್ತವಾಗಿ ಹೇಳುವ ಸ್ಥಿತಿಯಲ್ಲಿ ಅವರಿಲ್ಲ. ಇದು ರಾಜಕೀಯದ ದುರಂತವೂ ಹೌದು.

ಕರ್ನಾಟಕದ ಎಂಟು ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದಾಗಲೇ ಯಡಿಯೂರಪ್ಪ ಅವರ ಬೆಳವಣಿಗೆಯ ಮೇಲೆ ಕೆಲವರಿಗೆ (ಅವರ ಪಕ್ಷದವರಿಗೆ) ಕಣ್ಣುಬಿತ್ತು. ಒಳಗಿಂದೊಳಗೇ ಕತ್ತಿಮಸೆಯಲು ಆರಂಭಿಸಿದರು. ಇದೆಲ್ಲವೂ ಯಡಿಯೂರಪ್ಪ ಅವರಿಗೆ ಗೊತ್ತು, ಆದರೆ ಗೊತ್ತುಪಡಿಸಲಿಲ್ಲ ಅಷ್ಟೇ. ಯಡಿಯೂರಪ್ಪ ಭದ್ರವಾಗಿ ನೆಲೆಗೊಂಡರೆ ತಮಗೆ ಸಧ್ಯಕ್ಕಂತೂ ಸಿಎಂ ಪಟ್ಟಸಿಗುವುದಿಲ್ಲವೆಂಬುವುದು ಖಾತ್ರಿಯಾದ ಮೇಲೆ ವರಸೆಗಳು ಆರಂಭವಾದವು. ಈಗ ತಾರಕಕ್ಕೇರಿದೆ ಅಷ್ಟೇ.

ಬೆಂಗಳೂರಲ್ಲಿ ಬಿಜೆಪಿ ಸರ್ಕಾರದ ಒಂದು ವರುಷದ ಸಂತಸದ ಹೊನಲು ಹರಿಯುತ್ತಿದ್ದರೆ ಬಳ್ಳಾರಿಯಲ್ಲಿ ರೆಡ್ಡಿ ಬ್ರದರ್ಸ್, ಶಿವಮೊಗ್ಗದಲ್ಲಿ ಕಂಟೆಂಡರ್ ಕೆ.ಎಸ್.ಈಶ್ವರಪ್ಪ ತುಂಬಾ ಬಿಜಿಯಾಗಿದ್ದರು. ರಾಜಕೀಯದಲ್ಲಿ. ಏನೇ ಆದರೂ ರೆಡ್ಡಿ ಸ್ಕ್ವಾಡ್ ಮುನಿಸಲ್ಲದಿದ್ದರೆ ಬೆಂಗಳೂರು ಸಮಾವೇಶವನ್ನು ಖಂಡಿತಕ್ಕೂ ತಪ್ಪಿಸುತ್ತಿರಲಿಲ್ಲ. ಸಬೂಬು ಹೇಳಿದ್ದಾರೆ, ಯಡಿಯೂರಪ್ಪ ಅವರೂ ರೆಡ್ಡಿ ಬ್ರದರ್ಸ್ ಗೈರುಹಾಜರಿ ಬಗ್ಗೆ ನೋ ಕಮೆಂಟ್ಸ್ ಅಂದಿದ್ದಾರೆ, ಅರ್ಥ ಮಾಡಿಕೊಳ್ಳಿ ಸಾಕು.

ಯಡಿಯೂರಪ್ಪ ಕನಸುಗಾರ ರಾಜಕಾರಣಿ. ಮೂರು-ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಕನಸು ಕಾಣುವುದು ಅಪರಾಧವಲ್ಲ, ಆದರೆ ಅವರ ಕನಸುಗಳಿಗೆ ಅವರ ಪಕ್ಷದವರಿಂದಲೇ ಒಳ್ಳೆ ಸಾಥ್ ಸಿಗುತ್ತಿಲ್ಲ. ಯಾರು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದರೋ ಅವರಿಂದಲೇ ಹಿನ್ನಡೆ ಕೂಡಾ ಸಾಧ್ಯವಿದೆ. ಸಂಡೆ ಚಿಕನ್ ತಿನ್ನುವುದರಲ್ಲಿ ನೋ ರಿಲಾಕ್ಷೇಷನ್ ಅಂದಹಾಗೆಯೇ ಯಡಿಯೂರಪ್ಪ ಅವರಿಗೆ ಪ್ರತೀಕ್ಷಣವೂ ಅತೀ ಮುಖ್ಯ. ಯಾರು ಯಾವಕ್ಷಣದಲ್ಲೂ ಡಿಫರೆಂಟ್ ಆಗಿ ಕಂಡುಬರಬಹುದು.

ರೆಡ್ಡಿ ಬ್ರದರ್ಸ್ ಕವಾಯತು ಆರಂಭಿಸಿದ್ದಾರೆ. ಏಕಕಾಲದಲ್ಲಿ ಅನುಷ್ಠಾನಕ್ಕೆ ಬರಬಹುದಾದ ಸ್ಥಳ ಎಲ್ಲಿ ಎನ್ನುವ ಕುತೂಹಲದ ಪ್ರಶ್ನೆಗೆ ಉತ್ತರ ಕೊಡಲೇ ಬೇಕಾಗಿಲ್ಲ. ಗೊತ್ತಿರುವ ಭಾಷೆಯಲ್ಲಿ ಅರ್ಥ ಮಾಡಿಕೊಂಡು ಗೊತ್ತಿರುವ ಸುಂದರ ಭಾಷೆಯಲ್ಲಿ ಹೇಳಿದರೆ ಸಾಕು. ರೆಡ್ಡಿ ಬ್ರದರ್ಸ್ ರಿಯಲೀ ಸ್ಟ್ರಾಂಗ್. ಸರ್ಕಾರ ಭದ್ರಪಡಿಸುವುದೂ ಗೊತ್ತು, ನಟ್ಟು ಬೋಲ್ಟ್ ಸಡಿಲಿಸುವುದೂ ಗೊತ್ತು, ಆದ್ದರಿಂದ ಯಾವಾಗ ಸ್ಪಾನರ್ ಸೆಟ್ ಕೈಗೆ ತೆಗೆದುಕೊಳ್ಳುತ್ತಾರೆ ಎನ್ನುವುದು ಮಾತ್ರ ಸದ್ಯಕ್ಕೆ ಉಳಿದಿರುವ ಪ್ರಶ್ನೆ. ಉತ್ತರ ಸಿಗುವ ದಿನವೂ ದೂರವಿಲ್ಲ.

ಬಸವನಗೌಡ ಪಾಟೀಲ್ ಯತ್ನಾಳ್ ಗುಟುರು ಹಾಕಿರುವುದು ಕೂಡಾ ಸುಮ್ಮನೆ ಅಲ್ಲ. ಕೇಂದ್ರದಲ್ಲಿ ಮಂತ್ರಿಯಾಗಿದ್ದ ಪಾಟೀಲ್ ಸೀನಿಯರ್. ಅವರಿಗೂ ದೆಹಲಿಯಲ್ಲಿ ಸಿಂಪಥೈಸರ್ ಇದ್ದೇ ಇರುತ್ತಾರೆ. ಯಡಿಯೂರಪ್ಪ ಅಧಿಕಾರ ಕೈಗೆತ್ತಿಕೊಳ್ಳುವಾಗಲೇ ಒಂದಷ್ಟು ಮಂದಿಯ ವಿರೋಧ ಕಟ್ಟಿಕೊಂಡಿದ್ದಾರೆ. ಒಳಗಿರುವ ವಿರೋಧಿಗಳಷ್ಟೇ ಪವರ್‌ಫುಲ್ ಹೊರಗಿರುವವರು. ಮಡಿಲಲ್ಲಿ ಕೆಂಡಕಟ್ಟಿಕೊಂಡಿರುವ ಯಡಿಯೂರಪ್ಪ ಅವರ ಬಗ್ಗೆ ಅವರ ಪಕ್ಷದಲ್ಲೂ ಸಿಂಪಥಿ ಇದೆ, ಆದರೆ ಅದು ಯಡಿಯೂರಪ್ಪ ಅವರನ್ನು ಬಚಾವ್ ಮಾಡುವಷ್ಟು ಶಕ್ತಿಶಾಲಿ ಅಲ್ಲ.

ಅಧಿಕಾರ ಇದ್ದಾಗ ಬೇಡವೆಂದರೂ ಜನ ಬೆಂಬಲಕ್ಕೆ ನಿಲ್ಲುತ್ತಾರೆ, ಅಧಿಕಾರಕ್ಕೆ ಕುತ್ತು ಬರುತ್ತಿದೆ ಅನ್ನುವ ಸುಳಿವು ಸಿಕ್ಕಿದರೂ ಸಾಕು ಕಟ್ಟಾ ಹಿಂಬಾಲಕರೇ ಮೊದಲು ಕೈಕೊಡುತ್ತಾರೆ. ಈ ಮಾತಿಗೆ ಉದಾಹರಣೆಯಾಗಿ ದೇವರಾಜ ಅರಸು ಅವರ ಕೊನೆಯ ದಿನಗಳ ಬದುಕನ್ನೇ ನೆನಪಿಸಿಕೊಳ್ಳಿ. ಅವರಿಂದಾಗಿಯೇ ರಾಜಕೀಯ ಕಲಿತವರು ಹೇಗೆ ನಡೆದುಕೊಂಡರು. ಕರಾವಳಿಗೆ ಬಂದರೆ ಟಿ.ಎ.ಪೈ ಅವರ ಕೊನೆಯ ಚುನಾವಣೆಯನ್ನು ನೆನಪಿಸಿಕೊಳ್ಳಿ, ಅರ್ಥವಾಗಿಬಿಡುತ್ತೆ ಅಧಿಕಾರದ ಕರಾಮತ್ತು.

ಆದ್ದರಿಂದಲೇ ಯಡಿಯೂರಪ್ಪ ಅವರ ಈಗಿನ ಸ್ಥಿತಿ ಅಷ್ಟು ಸುಭದ್ರವಾಗಿಲ್ಲ. ಅಡಿಗಡಿಗೂ ತಪ್ಪುಗಳನ್ನೇ ಹುಡುಕುವ ಯತ್ನಗಳಾಗುತ್ತಿದ್ದು ಯಾವುದೇ ಕ್ಷಣದಲ್ಲೂ ಆತಂಕದ ಸ್ಥಿತಿಗೆ ಬೀಳಬಹುದು. ಅಧಿಕಾರಕ್ಕೆ ಏರಿಸಿದವರಿಗೆ ಸಹಜವಾಗಿಯೇ ಏಣಿಯನ್ನು ಕದಲಿಸಲು ಗೊತ್ತಿರುತ್ತದೆ. ಇಂಥ ಸಂದರ್ಭದಲ್ಲಿ ಅವರ ರಾಜಕೀಯ ಚಾಣಾಕ್ಷತೆಯೇ ನೆರವಿಗೆ ಬರಬೇಕು. ಈಗ ಕಾದುನೋಡುವ ಸರದಿ ಮುಂದೇನು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X