ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ವರ್ತನೆ ವಿರುದ್ಧ ಈಶ್ವರಪ್ಪ ತಿರುಗೇಟು

By Staff
|
Google Oneindia Kannada News

ಶಿವಮೊಗ್ಗ, ಜೂ.2 : ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಒಂದು ಸಾವಿರಕ್ಕಿಂತ ಹೆಚ್ಚಿನ ಮತಗಳು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಂದಿವೆ. ಆದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹನುಮ ಜಯಂತಿಯಂತಹ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಕಡಿಮೆ ಮತಗಳ ಟೀಕೆ ಮಾಡಿರುವುದು ಕೆಲಸ ಮಾಡಿದ ಕಾರ್ಯಕರ್ತರಿಗೆ ನೋವುಂಟುಮಾಡಿದೆ. ಮುಖ್ಯಮಂತ್ರಿಗಳು ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಕುರಿತು ಮಾಡಿರುವ ಆರೋಪ ಸರಿಯಲ್ಲ ಎಂದು ರಾಜ್ಯ ಇಂಧನ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹನುಮ ಜಯಂತಿಯ ಸಂದರ್ಭದಲ್ಲಿ ಆಡಿರುವ ಮಾತು ನನ್ನಲ್ಲೂ ಗೊಂದಲ ಹುಟ್ಟುಹಾಕಿದೆ. ಅನೇಕ ಕಾರ್ಯಕರ್ತರಿಗೆ ಇದರಿಂದ ನೋವಾಗಿದೆ. ಶಿವಮೊಗ್ಗ ನಗರದಲ್ಲಿ ಬಿದ್ದ ಮತಗಳನ್ನು ಹೋಲಿಸಿದರೆ ಸಾವಿರಕ್ಕಿಂತ ಹೆಚ್ಚಿನ ಮತಗಳು ಬಂದಿವೆ. ಆದರೂ ಮುಖ್ಯಮಂತ್ರಿಗಳು ಮಾತನಾಡಿರುವುದರ ಹಿನ್ನೆಲೆಯಲ್ಲಿ ಈ ವಿಷಯವನ್ನು ನಾನು ಬಹಿರಂಗಪಡಿಸಬೇಕಾದ ಅನಿವಾರ್ಯತೆ ಬಂದಿದೆ ಎಂದು ವಿವರಿಸಿದರು.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯ ಮತ್ತು ಬಿಜೆಪಿ ನೀತಿ ಸಿದ್ಧಾಂತ ಕುರಿತ ಚರ್ಚೆಗಳ ಬದಲು ಹಣ, ಹೆಂಡದ ಚರ್ಚೆಗಳೇ ಹೆಚ್ಚಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಮತಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಬಿಜೆಪಿಯ ರಾಜ್ಯಾಧ್ಯಕ್ಷರು ತನಿಖೆ ಮಾಡಲಿ. ತನಿಖೆಯನ್ನು ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದಿಂದಲೇ ಆರಂಭಿಸಬೇಕೆಂದು ನಾನು ಅವರಲ್ಲಿ ಕೋರಿಕೊಳ್ಳುತ್ತೇನೆ. ಬಿಜೆಪಿ ರಾಜ್ಯದಲ್ಲಿ 19 ಸ್ಥಾನಗಳನ್ನು ಪಡೆದುಕೊಂಡಿರುವುದಕ್ಕೆ ಸಂತೋಷಪಟ್ಟಿದ್ದೇನೆ ಎಂದರು.

ನಾನು ಯಾವತ್ತೂ ಹಣ ಮತ್ತು ಹೆಂಡ ಹಂಚಿದವನಲ್ಲ. ಹೆಂಡ ಹಂಚಿ ಚುನಾವಣೆ ಮಾಡುವುದು ನನಗೆ ಗೊತ್ತಿಲ್ಲ. ಅದನ್ನು ಕುಡಿದೂ ಅಭ್ಯಾಸ ಮಾಡಿಕೊಂಡಿಲ್ಲ ಎಂದು ಸೂಕ್ಷ್ಮವಾಗಿ ನುಡಿದ ಸಚಿವ ಕೆ.ಎಸ್.ಈಶ್ವರಪ್ಪ, ಈ ಗೊಂದಲಗಳ ಬಗ್ಗೆ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲರೂ ಚರ್ಚೆ ಮಾಡಬೇಕಿತ್ತು. ಚುನಾವಣೆಯ ಸಂದರ್ಭದಲ್ಲಿ ಅನೇಕ ಸಭೆಗಳನ್ನು ನೋಡಿದ್ದೇನೆ. ಅಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಪುತ್ರ ರಾಘವೇಂದ್ರ ಕುರಿತು ಅಭಿಪ್ರಾಯಗಳನ್ನು ಕೇಳಿದ್ದೇನೆ. ಹಲವು ಸಭೆಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಎಸ್.ಎಸ್.ಜ್ಯೋತಿಪ್ರಕಾಶ್, ಆಯನೂರು ಮಂಜುನಾಥ್, ಸಿದ್ದರಾಮಣ್ಣ, ಭಾನುಪ್ರಕಾಶ್‌ರವರಂತಹ ಅಭ್ಯರ್ಥಿಗಳಿದ್ದರೂ ರಾಘವೇಂದ್ರರಿಗೆ ಸ್ಥಾನ ಕೊಟ್ಟಿದ್ದನ್ನು ಹಲವರು ಟೀಕಿಸಿಯೇ ಮಾತನಾಡಿದ್ದರು ಎಂದು ಎಳೆಎಳೆಯಾಗಿ ವಿವರಣೆ ನೀಡಿದರು.

ಇದೆಲ್ಲಾ ಸುದ್ದಿಗೋಷ್ಠಿಯಲ್ಲಿ ನಾನು ಮಾತನಾಡುತ್ತಿರುವುದು ಎಷ್ಟು ಸರಿ? ಎಷ್ಟು ತಪ್ಪು? ಎಂಬುದನ್ನು ತಿಳಿದೇ ಮಾತನಾಡುತ್ತಿದ್ದೇನೆ. ನಾವು ಕಾಂಗ್ರೆಸ್ ಮತ್ತು ಜೆಡಿಎಸ್‌ನ್ನು ಅಪ್ಪ-ಮಕ್ಕಳ ಪಕ್ಷವೆಂದು ಟೀಕಿಸುತ್ತಿದ್ದೆವು. ಈಗ ನಿಮ್ಮ ಪಕ್ಷದಲ್ಲೂ ಕುಟುಂಬ ರಾಜಕಾರಣ ಆರಂಭವಾಗಿದೆಯಲ್ಲಾ ಎಂದು ಎಷ್ಟೋ ಜನ ನನ್ನ ಬಳಿ ಕೇಳಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಧಾರ್ಮಿಕ ಸಭೆಯಲ್ಲಿ ಹೇಳಿದ್ದಕ್ಕೆ ಈ ಮಾತನ್ನು ನಾನು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದೇನೆ. ಪಕ್ಷ ಮತ್ತು ಸಂಘಟನೆಯು ಯಾವ ಕಾರಣಕ್ಕೂ ತೊಂದರೆಯಾಗಬಾರದು ಎಂದು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X