ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗದಲ್ಲಿ ಎರಡು ಮೊಗದ ಹಾವಿಗೆ ಹುಡುಕಾಟ!

By * ಶಿ.ಜು.ಪಾಶ
|
Google Oneindia Kannada News

Two headed snake
ಶಿವಮೊಗ್ಗ, ಮೇ 30 : ಎರಡು ತಲೆ ಹಾವನ್ನು ನೋಡಿದ್ದೀರಾ?! ಅಂತಹ ಹಾವು ಕಂಡ ಕೂಡಲೇ ಹಿಡಿದುಕೊಳ್ಳಿ. ಲಕ್ಷಾಂತರ ರೂಪಾಯಿ ನಿಮ್ಮದಾಗಿಸಿಕೊಳ್ಳಿ...

ಹೀಗೊಂದು ಜಾಹೀರಾತನ್ನು ಯಾರಾದರು ಕೊಟ್ಟರೆ ಅದೊಂದು ದೊಡ್ಡ ಸುದ್ದಿಯಾದೀತು. ಆದರೆ, ಜಾಹೀರಾತು ಕೊಡದೆಯೇ ಮನೆಮನೆಯಲ್ಲಿ ಪ್ರಚಾರ ಪಡೆದಿರುವ ಎರಡು ತಲೆ ಹಾವಿನ ವಿಷಯದ ಹಿಂದೆ ಇದೀಗ ಪೊಲೀಸರು ಹಗಲು ರಾತ್ರಿಯೆನ್ನದೇ ಬಿದ್ದಿದ್ದಾರೆ.

ಶಿವಮೊಗ್ಗದಲ್ಲಿ ಒಂದು ತಂಡ ಹಲವು ದಿನಗಳಿಂದ ಎರಡು ತಲೆ ಹಾವನ್ನು ಹುಡುಕುತ್ತಿದೆ. ಶಿವಮೊಗ್ಗದ ಹಲವಾರು ಲಾಡ್ಜ್‌ಗಳಲ್ಲಿ ಉಳಿದು, ಒಂದಿಷ್ಟು ದಿನವಿದ್ದು ಮತ್ತೆ ಎಲ್ಲೋ ಮಾಯವಾಗುವ ಈ ತಂಡ ಮತ್ತೆ ಮತ್ತೆ ಬೇರೆ ಬೇರೆ ಲಾಡ್ಜುಗಳಲ್ಲಿ ಬಂದು ಉಳಿದುಕೊಳ್ಳುತ್ತದೆ. ಸುದ್ದಿ ಗೊತ್ತಾಗುತ್ತಿದ್ದಂತೆ ಅಲ್ಲಿಂದ ಮತ್ತೆ ಮಾಯವಾಗುತ್ತದೆ. ತಮಿಳುನಾಡು ಮೂಲದ ಐದು ಜನರ ತಂಡದ ಜೊತೆಗೆ ಶಿವಮೊಗ್ಗದ ಮೂರು ಜನ ಸೇರಿಕೊಂಡಿದ್ದಾರೆ ಮತ್ತು ಎರಡು ತಲೆ ಹಾವಿನ ಹುಡುಕಾಟದಲ್ಲಿ ತಮಿಳುನಾಡಿನಿಂದ ಬಂದ ತಂಡಕ್ಕೆ ಸಹಕರಿಸುತ್ತಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಎಂಟು ಜನರ ತಂಡ ಕಳೆದ 2-3 ತಿಂಗಳುಗಳಿಂದ ಹಾವುಗಳೇ ಹೆಚ್ಚಾಗಿರುವ ಕೆಲವೊಂದು ಪ್ರದೇಶಗಳಲ್ಲಿ ಎರಡು ತಲೆ ಹಾವನ್ನು ಹುಡುಕಾಡುತ್ತಿದ್ದು, ಎರಡು ತಲೆ ಹಾವು ಸಿಗದಿದ್ದಾಗ ಶಿವಮೊಗ್ಗದ ಯಾವುದೋ ಒಂದು ಲಾಡ್ಜಿನಲ್ಲಿ ಒಂದು ರಾತ್ರಿಯ ಮಟ್ಟಿಗೆ ಉಳಿದು, ಮತ್ತೆ ಸೂರ್ಯ ಮೂಡುವ ಮುನ್ನವೇ ಹಾವಿನ ಹುಡುಕಾಟದಲ್ಲಿ ಮತ್ಯಾವುದೋ ಪ್ರದೇಶಕ್ಕೆ ಹೊರಟು ಹೋಗಿರುತ್ತದೆ.

ಏನದರ ಮರ್ಮ? : ಎರಡು ತಲೆ ಹಾವಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅತೀ ಹೆಚ್ಚು ಬೇಡಿಕೆ ಇದೆಯೆಂದು ಹೇಳಲಾಗುತ್ತಿದ್ದು, ಕೇಳಿದಷ್ಟು ಹಣವನ್ನು ನೀಡುವ ದೊಡ್ಡ ಜಾಲವೇ ಇರುವ ಮಾಹಿತಿಗಳು ಹರಿದಾಡುತ್ತಿವೆ. ಹಾಗೆ ನೋಡಿದರೆ, ಎರಡು ತಲೆ ಹಾವು ನಿಜವಾಗಿಯೂ ಸಿಗುವುದು ಕಷ್ಟಕರವೇ. ಅಪರೂಪವಾಗಿ ಈ ರೀತಿಯ ಎರಡು ತಲೆ ಹಾವನ್ನು ಕಂಡವರಿದ್ದಾರೆ. ಅದರ ಬಗ್ಗೆ ಅಧ್ಯಯನ ನಡೆಸಿದವರೂ ಇದ್ದಾರೆ.

ಸ್ಪೇನ್ ಪ್ರದೇಶದಲ್ಲಿ ಅದೊಮ್ಮೆ ಎರಡು ತಲೆ ಹಾವು ಬುಡಕಟ್ಟು ಜನಾಂಗದ ಕೆಲವರಿಗೆ ಸಿಕ್ಕಿತ್ತು. ಅಲ್ಲಿನ ಸರ್ಕಾರ ಶ್ರಮವಹಿಸಿ, ಎರಡು ತಲೆ ಹಾವನ್ನು ವಶಕ್ಕೆ ಪಡೆದು ವಿಜ್ಞಾನಿಗಳ ಸುಪರ್ದಿಗೆ ಒಪ್ಪಿಸಿ ಹೆಚ್ಚಿನ ಸಂಶೋಧನೆ ಕೈಗೊಳ್ಳಲು ವಾತಾವರಣ ನಿರ್ಮಿಸಿಕೊಟ್ಟಿತ್ತು. ಆದರೆ, ಅಂತಿಮವಾಗಿ ವಿಜ್ಞಾನಿಗಳು ಕೊಟ್ಟ ವರದಿಯಾದರೂ ಏನು ಗೊತ್ತೆ? - ಈ ತರಹದ ಹಾವನ್ನು ಕಾಣಬೇಕಾದರೆ ಅದೆಷ್ಟೋ ವರ್ಷ ಕಾಯಲೇಬೇಕು. ಇಂತಹ ಹಾವು ಶತಮಾನಕ್ಕೊಮ್ಮೆ ನೋಡಲು ಸಿಗಬಹುದಷ್ಟೇ. ಇದೊಂದು ಪರಿಸರದ ಆಟ.

ಸ್ಪೇನ್‌ನ ಪಿನೋಸೋ ಗ್ರಾಮದಲ್ಲಿ ಸಿಕ್ಕ ಎರಡು ತಿಂಗಳು ವಯೋಮಾನದ ಎರಡು ತಲೆಯ ಹಾವು 20 ಸೆ.ಮೀ. ಉದ್ದವಿದ್ದು, ಈ ಹಾವಿನ ಜಾತಿ ಇಲಾಫೆ ಸ್ಕ್ಯಾಲರೀಸ್ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದರು. ಈ ಹಾವು ಸಿಕ್ಕ ನಂತರದಲ್ಲಿ ಈ ಹಾವಿನ ಬಗ್ಗೆಯೇ ಸಾಕಷ್ಟು ವಿಚಿತ್ರ ಸುದ್ದಿಗಳನ್ನು ಹಾರಿಬಿಡಲಾಯಿತು. ಇದನ್ನು ಕಂಡವರು ಮತ್ತು ಹಿಡಿದವರು ಅದೃಷ್ಟವಂತರು ಎಂಬಂತೆ ಸುದ್ದಿ ಹಬ್ಬಿಸಲಾಯಿತು. ವಿಜ್ಞಾನಿಗಳು ಈ ಹಾವಿನ ಬಗ್ಗೆ ಸಂಶೋಧನೆ ಆರಂಭಿಸಿದಾಗ ಈ ಎರಡು ತಲೆ ಹಾವು ಆಹಾರ ಸೇವನೆ ಹೇಗೆ ಮಾಡುತ್ತದೆಂಬ ಕುತೂಹಲದಲ್ಲಿದ್ದರು. ಹಾವಿನ ಮುಂದೆ ಪುಟ್ಟದೊಂದು ಇಲಿಯನ್ನು ಬಿಟ್ಟರು. ಇಲಿಯನ್ನು ಕಾಣುತ್ತಲೇ ಎರಡು ತಲೆ ಹಾವು ಅದರ ಮೇಲೆ ಶಿಕಾರಿಗೆ ಹೊರಟಿತು. ತನ್ನ ಒಂದು ತಲೆಯಲ್ಲಿದ್ದ ಬಾಯಿಯಿಂದ ಇಲಿಯನ್ನು ಹಿಡಿಯಿತು. ಆ ಸಂದರ್ಭದಲ್ಲಿ ಮತ್ತೊಂದು ತಲೆ ಯಾವುದೋ ಧ್ಯಾನದಲ್ಲಿದ್ದಂತೆ ಕಣ್ಣುಮುಚ್ಚಿ ಮೌನವಹಿಸಿತ್ತು. ನಂತರದ ದಿನಗಳಲ್ಲಿ ಈ ಹಾವು ಕೆಲವೊಂದು ಸಮಸ್ಯೆಗಳನ್ನು ಅನುಭವಿಸಲು ಆರಂಭಿಸಿತು. ತಾನು ಎತ್ತ ಹೋಗಬೇಕೆಂಬ ನಿರ್ಧಾರಕ್ಕೆ ಬರುವಲ್ಲಿ ಈ ಹಾವಿಗೆ ಸಾಕಷ್ಟು ಕಷ್ಟ ಎದುರಾಗುತ್ತಿದ್ದುದನ್ನು ವಿಜ್ಞಾನಿಗಳು ಗಮನಿಸಿದರು. ಎತ್ತ ಹೋಗಬೇಕೆಂಬ ನಿರ್ಧಾರವನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಹಾವು ಮೌನದಲ್ಲಿಯೇ ಎರಡೂ ತಲೆಯಿಂದ ಬುಸುಗುಡುತ್ತಿತ್ತು. ಇದು ಬೇಟೆಗಾರನಿಗೆ ಬಹುಸುಲಭವಾಗಿ ತುತ್ತಾಗುವ ಕ್ಷಣವಾಗಿರುತ್ತದೆ. ಹಾಗಾಗಿ ಇಂತಹ ಎರಡು ತಲೆ ಹಾವಿಗೆ ಬದುಕಿನ ಆಯಸ್ಸು ಕಡಿಮೆಯೇ.

ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯ ಜೇಮ್ಸ್ ಬಾಡ್‌ಮನ್ ಸಹ ಎರಡು ತಲೆ ಹಾವಿನ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದಾರೆ. ಇವರ ಪ್ರಕಾರ ಅರಿಜೋನಾ ಸ್ಟೇಟ್ ಎರಡು ತಲೆ ಹಾವಿನ ತವರು ಮನೆ. ಅತೀ ಹೆಚ್ಚು ಎರಡು ತಲೆ ಹಾವುಗಳನ್ನು ಜಗತ್ತು ಕಂಡಿದ್ದು ಈ ಅರಿಜೋನಾ ಸ್ಟೇಟ್‌ನಲ್ಲಿಯೇ. ಜೇಮ್ಸ್ ಬಾಡ್‌ಮನ್ ಬಳಿ ಮರಿ ಎರಡು ತಲೆ ಹಾವು ಕನಿಷ್ಠ 17 ವರ್ಷಗಳ ಕಾಲ ಇತ್ತು. ಈ 17 ವರ್ಷಗಳ ಕಾಲವೂ ಜೇಮ್ಸ್ ಬಾಡ್‌ಮನ್ ಎರಡು ತಲೆ ಹಾವಿನ ಸಂಶೋಧನೆಯಲ್ಲಿಯೇ ಕಳೆದ. ಈತನ ಪ್ರಕಾರ, ಎರಡು ತಲೆ ಹಾವಿಗೆ ಅತೀ ಹೆಚ್ಚಿನ ವಾಸನಾಶಕ್ತಿ ಇರುತ್ತದೆ. ಈ ಹಾವಿನ ಒಂದು ತಲೆಯು ಇಂತಹ ವಾಸನಾಶಕ್ತಿಯಲ್ಲಿ ತಲ್ಲೀನವಾಗಿರುತ್ತದೆ. ಇನ್ನೊಂದು ತಲೆಯು ಈ ವಾಸನಾಶಕ್ತಿಯ ಹಿನ್ನೆಲೆಯನ್ನು ಅರಿತು ಆ ಜೀವಿಯ ಮೇಲೆ ಬೇಟೆಯಾಡಲು ತಯಾರಾಗುತ್ತದೆ.

ಹಾರ್ವರ್ಡ್ ಯೂನಿವರ್ಸಿಟಿಯ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧಕ ವಾನ್ ವಲ್ಲಾಕ್ ಹೇಳುವ ಪ್ರಕಾರ, ಈ ಎರಡು ತಲೆ ಹಾವುಗಳು ಇಡೀ ಜಗತ್ತಿನಲ್ಲಿ ಎಲ್ಲೆಲ್ಲಿ ಎಷ್ಟೆಷ್ಟಿವೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ, ಈ ಹಾವುಗಳು ಸಹಜವಾಗಿ ಇರುವ ಆಯಸ್ಸನ್ನು ಪೂರೈಸುವುದಿಲ್ಲ ಎಂಬುದು ಮಾತ್ರ ಸತ್ಯ. ಎರಡು ತಲೆ ಹಾವುಗಳ ಮೇಲೆ ಸಂಶೋಧನೆ ಮಾಡುವ ಹುಚ್ಚು ಇಡೀ ಜಗತ್ತಿನಲ್ಲಿ ಬಹಳಷ್ಟು ಜನಕ್ಕಿದೆ. ಈ ಎರಡು ತಲೆಯ ಹಾವು ಯಾವುದೋ ವ್ಯವಹಾರಕ್ಕೆ ಬಳಸಲ್ಪಡುತ್ತವೆ ಎಂಬುದಕ್ಕಿಂತ ಹೆಚ್ಚಾಗಿ ಸಂಶೋಧನೆಗಾಗಿ ಈ ಎರಡು ತಲೆ ಹಾವಿಗೆ ಅತೀ ಹೆಚ್ಚಿನ ಬೇಡಿಕೆಯಿದೆ.

ಈಗಾಗಲೇ ಶಿವಮೊಗ್ಗ ಜಿಲ್ಲಾದ್ಯಂತ ಕುತೂಹಲ ಕೆರಳಿಸಿರುವ ಎರಡು ತಲೆಯ ಹಾವು ಅದ್ಯಾರಿಗೆ ಕಾಣಿಸಿಕೊಂಡಿದೆಯೋ ಗೊತ್ತಿಲ್ಲ. ಆದರೆ, ಹುಡುಕಾಟ ಮಾತ್ರ ನಿರಂತರವಾಗಿ ನಡೆಯುತ್ತಲೇ ಇದೆ. ತಮಿಳುನಾಡಿನ ಐದು ಮಂದಿಯ ಜೊತೆ ಶಿವಮೊಗ್ಗದ ಮೂರು ಜನ ಸೇರಿ ಎರಡು ತಲೆ ಹಾವನ್ನು ಹುಡುಕಾಡುತ್ತಾರಾ? ಈ ಎರಡು ತಲೆ ಹಾವನ್ನು ಹುಡುಕುತ್ತಿರುವ ತಂಡವನ್ನು ಪೊಲೀಸರು ಹಿಡಿದುಕೊಳ್ಳುತ್ತಾರಾ? ಕುತೂಹಲ ಮಾತ್ರ ಹಾಗೆಯೇ ಉಳಿದುಕೊಂಡಿದೆ. ಹುಡುಕಾಟ ಮಾತ್ರ ನಿರಂತರವಾಗಿ ನಡೆದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X