ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ ಸರ್ಕಾರಿ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ

By Staff
|
Google Oneindia Kannada News

Shivamogga govt medical college employees protest
ಶಿವಮೊಗ್ಗ, ಮೇ 28 : ಶಿವಮೊಗ್ಗ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತಮ್ಮನ್ನು ಕೂಲಿ ಕಾರ್ಮಿಕರಂತೆ ದುಡಿಸಿಕೊಳ್ಳುತ್ತಿದ್ದು, ಕೂಡಲೇ ತಾತ್ಕಾಲಿಕ ನೇಮಕಾತಿಯನ್ನು ರದ್ದುಗೊಳಿಸಿ ಖಾಯಮಾತಿ ಆದೇಶವನ್ನು ನೀಡಬೇಕೆಂದು ಹಾಗೂ ಸರ್ಕಾರದಿಂದ ಸಿಗುತ್ತಿರುವ ಎಲ್ಲಾ ಸವಲತ್ತುಗಳನ್ನು ಕೊಡಬೇಕೆಂದು ಒತ್ತಾಯಿಸಿ ಕಾಲೇಜಿನ ವೈದ್ಯರು, ಲ್ಯಾಬ್‌ಟೆಕ್ನೀಷಿಯನ್‌ಗಳು ಹಾಗೂ ಸ್ಟಾಫ್ ನರ್ಸ್‌ಗಳು ಸೇರಿದಂತೆ ಹಲವರು ಕಪ್ಪು ಪಟ್ಟಿ ಧರಿಸಿ ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ದೆಹಲಿ, ಬಾಂಬೆ ಮತ್ತು ಆಂಧ್ರದಿಂದ ಸಿಮ್ಸ್ ಕಾಲೇಜಿಗೆ ಆಗಮಿಸಿರುವ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ತಂಡದ ಎದುರು ಪ್ರತಿಭಟನೆ ಆರಂಭಿಸಿದ ಪ್ರತಿಭಟನಾಕಾರರು, ಕಳೆದ 2-3 ವರ್ಷಗಳಿಂದ ತಾತ್ಕಾಲಿಕ ನೇಮಕಾತಿಯ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ಬಾರಿ ಎಮ್‌ಸಿಐ ತಂಡ ಆಗಮಿಸಿದಾಗ ಕಾಲೇಜಿನ ಪ್ರಾಂಶುಪಾಲರು ನೀಡಿದ್ದ ಖಾಯಮಾತಿ ಆದೇಶದ ಭರವಸೆ ಈವರೆಗೂ ಈಡೇರಿಲ್ಲ.

ಕೂಲಿ ಕಾರ್ಮಿಕರಂತೆ ಕೆಲಸ ನಿರ್ವಹಿಸುತ್ತಿದ್ದೇವೆ. ಆಡಳಿತ ಮಂಡಳಿ ತಮ್ಮನ್ನು ಯಾವಾಗ ಬೇಕಾದರೂ ಕೆಲಸದಿಂದ ತೆಗೆದು ಹಾಕಬಹುದು. ನೆಮ್ಮದಿ ಕಳೆದುಕೊಂಡು ಸೇವೆ ಸಲ್ಲಿಸುತ್ತಿದ್ಧೇವೆ. ಬೇಡಿಕೆಗಳನ್ನು ಮುಂದಿಟ್ಟರೆ ಸೂಕ್ತ ಉತ್ತರ ಸಿಗುತ್ತಿಲ್ಲ. ಕಾಲೇಜಿನಲ್ಲಿಯೂ ರಾಜಕೀಯ ವಾತಾವರಣವಿದ್ದು, ಕೆಲವರಿಗೆ ಮಾತ್ರ 3 ವರ್ಷದ ನೇಮಕಾತಿಯನ್ನು ಪರಿಗಣಿಸಿ ಸಂಬಳ ಹೆಚ್ಚಿಸಲಾಗಿದೆ. ಇದನ್ನು ಕೇಳಲು ಹೋದರೆ ಅವರಿಂದ ಫೋನ್ ಮಾಡಿಸಿ, ಇವರಿಂದ ಪ್ರಭಾವ ತನ್ನಿ ಎಂದು ಆಡಳಿತ ಮಂಡಳಿಯವರು ಹೇಳುತ್ತಾರೆ. ತೀರಾ ಕೆಳ ಮಟ್ಟದಲ್ಲಿ ಸಂಬಳ ನೀಡುತ್ತಿದ್ದು, ಕಾಲೇಜಿನ ಪ್ರಾಂಶುಪಾಲರು ಭರವಸೆಗಳನ್ನಷ್ಟೇ ನೀಡುತ್ತಿದ್ದಾರೆಯೇ ಹೊರತು ಬೇರೆ ಯಾವುದೇ ಬೇಡಿಕೆಗಳು ಈವರೆಗೂ ಈಡೇರಿಲ್ಲ ಎಂದು ದೂರಿದರು.

ಯಾರಿಗೂ ಅನ್ಯಾಯ ಮಾಡುವುದಿಲ್ಲ : ಯಾರಿಗೂ ಅನ್ಯಾಯ ಮಾಡುವುದಿಲ್ಲ. ಪ್ರತಿಭಟನೆಯನ್ನು ಕೈಬಿಡಿ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ತಂಡದೊಂದಿಗೆ ಈ ಬಗ್ಗೆ ಚರ್ಚಿಸಿ, ನಂತರದಲ್ಲಿ ಸರ್ಕಾರದ ಜೊತೆ ಮಾತನಾಡುತ್ತೇನೆ ಎಂದು ಶಿವಮೊಗ್ಗ ಸರ್ಕಾರಿ ಮೆಡಿಕಲ್ ಕಾಲೇಜಿನ ನಿರ್ದೇಶಕರೂ ಪ್ರಾಂಶುಪಾಲರೂ ಆಗಿರುವ ಡಾ. ಶಂಕರೇಗೌಡ ಹೇಳಿದರು.

ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡುತ್ತಿದ್ದ ತಾತ್ಕಾಲಿಕ ಸಿಬ್ಬಂದಿಗಳ ಬಳಿ ಬಂದ ಅವರು, ನಾವು ಸರ್ಕಾರ ಹೇಳಿದ್ದನ್ನು ಮಾಡುತ್ತೇವೆ. ಸರ್ಕಾರದ ಜೊತೆ ಮಾತುಕತೆ ಮಾಡಿದ ತರುವಾಯ ಸಿಬ್ಬಂದಿಯ ಖಾಯಮಾತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ವಿವರಿಸಿದರು. ಆದರೂ, ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಕೈಬಿಡದಿದ್ದಾಗ ಪ್ರಾಂಶುಪಾಲರು ಅಲ್ಲಿಂದ ತೆರಳಿದರು.

ಒಂದು ಕಡೆ ಪ್ರತಿಭಟನೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಎಮ್‌ಸಿಐ ತಂಡದ ಬಾಂಬೆಯ ಸರ್ಜರಿ ವಿಭಾಗದ ಮುಖ್ಯಸ್ಥ ಹರ್ಡೀಕರ್, ಆಂಧ್ರಪ್ರದೇಶ ಒರಾಂಗಲ್‌ನ ಸುರೇಂದರ್ ಹಾಗೂ ದೆಹಲಿಯ ಮಹೇಶ್ ಗುಪ್ತಾ ಕಾಲೇಜಿನಲ್ಲಿ ದಾಖಲೆಗಳನ್ನು ಪರಿಶೀಲಿಸಿ ನಂತರದಲ್ಲಿ ಮೆಗ್ಗಾನ್ ಆಸ್ಪತ್ರೆಯ ತಪಾಸಣೆ ಕೈಗೊಂಡರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X