ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕಾಂಗ್ರೆಸ್ ಎಡವುತ್ತಿರುವುದೆಲ್ಲಿ?

By Staff
|
Google Oneindia Kannada News

Dharam, Krishna and Kharge
ಕರ್ನಾಟಕದಲ್ಲಿ ಧರಂ, ಖರ್ಗೆ, ಬಂಗಾರಪ್ಪ, ದೇಶಪಾಂಡೆ, ಪೂಜಾರಿ, ಕೃಷ್ಣ ಅವರಂಥ ಹಿರಿತಲೆಗಳೇ ಕಾಣುತ್ತಿವೆಯೇ ಹೊರತು ಯುವ ನಾಯಕರು ಬೆರಳೆಣಿಕೆಯಷ್ಟೂ ಕಂಡುಬರುವುದಿಲ್ಲ. ಯುವಕರನ್ನು ಬೆಳೆಯಲು ಬಿಡದ ಕಾರಣಕ್ಕೇ ರಾಜ್ಯದಲ್ಲಿ ಕಾಂಗ್ರೆಸ್ ತಳದಲ್ಲಿ ಕುಳಿತಿದೆ ಎಂಬುದು ಕೂಡ ಲೋಕಸಭೆ ಚುನಾವಣೆಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಕಾಂಗ್ರೆಸ್ ಈ ಹಂತದಲ್ಲಿ ಮಾಡಬೇಕಾದ್ದೇನು?

* ಚಿದಂಬರ ಬೈಕಂಪಾಡಿ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಕುರಿತು ಸಾಮೂಹಿಕವಾದ ಚಿಂತನೆ ಆಗಿಲ್ಲ. ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬಂದಿರುವುದರಿಂದ ಅಲ್ಲಿ ಯಾರಿಗೆಲ್ಲ ಪಟ್ಟಾಭಿಷೇಕ ಎನ್ನುವುದರಲ್ಲೇ ಕಾಂಗ್ರೆಸಿಗರು ಮುಳುಗಿದ್ದಾರೆ. ಸೋನಿಯಾ ಗಾಂಧಿ ಕೂಡಾ ಹಿನ್ನೆಡೆ ಆಗಿರುವುದಕ್ಕೆ ಸೂಚ್ಯವಾಗಿ ವಿವರಣೆ ಕೇಳಿರುವುದನ್ನು ಬಿಟ್ಟರೆ ಖಡಕ್ಕಾಗಿ ಕಾರಣ ಕೇಳಿಲ್ಲ.

ಆದರೆ ಕಾಂಗ್ರೆಸ್ ಪಕ್ಷದ ಸೋಲಿನ ಹೊಣೆಯನ್ನು ತಾವು ಹೊರುವುದಾಗಿ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶ್‌ಪಾಂಡೆ ಮತ್ತು ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಮಾತನ್ನು ಹೇಳುತ್ತಲೇ ಅವರು ಕಳೆದ ಚುನಾವಣೆಗಿಂತ ಈಬಾರಿ ಶೇ.2ರಷ್ಟು ಮತಗಳು ಹೆಚ್ಚಿಗೆ ಬಂದಿವೆ ಎಂದು ಹೇಳಿ ಸಂತಸಪಟ್ಟುಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿನ್ನೆಡೆಗೆ ಮತ್ತು ಬಿಜೆಪಿಯ ಮುನ್ನಡೆಗೆ ಸ್ಪಷ್ಟವಾದ ಕಾರಣಗಳು ಗೋಚರಿಸುತ್ತಿವೆ. ಕಾಂಗ್ರೆಸ್ ಪಕ್ಷಕ್ಕೆ ಶತಮಾನದ ಇತಿಹಾಸವಿದೆ ಮತ್ತು ಬಿಜೆಪಿಗೆ ಕೆಲವೇ ದಶಕಗಳ ಇತಿಹಾಸ ಮಾತ್ರ ಇದೆ(ಸಂಘಪರಿವಾರವನ್ನು ಹೊರತುಪಡಿಸಿ ಈ ಮಾತು). ಕೇಡರ್‌ಬೇಸ್ ಮತ್ತು ಕೇಡರ್‌ಲೆಸ್ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕಿರುವ ಬಹುಮುಖ್ಯ ವ್ಯತ್ಯಾಸ.

ಕಾಂಗ್ರೆಸ್ ಪಕ್ಷ ನಾಯಕರೇ ಮುಖ್ಯವೆಂದು ನಂಬಿದೆ. ಆದ್ದರಿಂದಲೇ ನಾಯಕರನ್ನು ರಕ್ಷಿಸುತ್ತಲೇ ಬಂದಿದೆ ಹೊರತು ನಾಯಕರನ್ನು ತಳಮಟ್ಟದಿಂದ ಹುಟ್ಟು ಹಾಕುವ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಎರಡನೇ ಹಂತದ ನಾಯಕರನ್ನು ಬೆಳೆಸಿದ ಅನುಭವ ಇಲ್ಲ. ಏನಿದ್ದರೂ ಇಲ್ಲಿ ನಾಯಕರು ಮತ್ತು ಕಾರ್ಯಕರ್ತರು ಮಾತ್ರ. ನಾಯಕರು ಮುಂದೆ, ಕಾರ್ಯಕರ್ತರು ಹಿಂದೆ ಒಂಥರಾ ಕುರಿಮಂದೆಯಂತೆ ಅಂದುಕೊಳ್ಳಿ. ಆದರೆ ಈಗ ಕುರಿಗಳಿಗೆ ಬುದ್ದಿಬಂದಿದೆ ಎನ್ನುವುದು ನಾಯಕರ ಅರಿವಿಗೆ ಬಂದಿರಲಿಲ್ಲ, ಈಗ ನಿಧಾನವಾಗಿ ಬರತೊಡಗಿದೆ ಸೋತು ಸುಣ್ಣವಾದ ಮೇಲೆ.

ಪಂಚಾಯತ್ ಮಟ್ಟದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಯುವಕರು ಕಾಣುವುದಿಲ್ಲ. ಅಲ್ಲೂ ತಾಲೂಕಿಗೆ ಏರಲಾಗದ ನಾಯಕರಿಗೆ ಮೀಸಲು. ತಾಲೂಕಿನವರಿಗೆ ಹೆಚ್ಚೆಂದರೆ ಜಿಲ್ಲಾಪಂಚಾಯತ್‌ಗೆ ಮಾತ್ರ ಭಡ್ತಿ. ಅಲ್ಲಿಂದ ಮುಂದೆಹೋದವರು ಬಹಳ ವಿರಳ. ಕಾಂಗ್ರೆಸ್ ಪಕ್ಷದ ಎನ್‌ಎಸ್‌ಯುಐ, ಯುವ ಕಾಂಗ್ರೆಸ್ ಎಂಬುದು ಸಂಜಯ್ ಗಾಂಧಿ, ರಾಜೀವ್ ಗಾಂಧಿ ಯುವಕರಾಗಿದ್ದಾಗ ಪಡೆದಷ್ಟು ಮಹತ್ವವನ್ನು ರಾಹುಲ್ ರಾಜಕೀಯ ಪ್ರವೇಶ ಮಾಡುವವರೆಗೂ ಪಡೆದಿಲ್ಲ.

ಎನ್‌ಎಸ್‌ಯುಐ ಮತ್ತು ಎಬಿವಿಪಿಯನ್ನು ಒಂದು ದಶಕದಷ್ಟು ಅಧ್ಯಯನ ಮಾಡಿದರೆ ಒಂದಷ್ಟು ಒಳಸುಳಿಗಳು ಸಿಗುತ್ತವೆ. ಎಬಿವಿಪಿ ಮೂಲಕವೇ ಬಿಜೆಪಿಯಲ್ಲಿರುವ ಈಗಿನ ಪ್ರಮುಖರು ಮಂತ್ರಿಗಳಾಗಿರುವುದು ಮಾತ್ರವಲ್ಲ ಆ ಪಕ್ಷದಲ್ಲಿ ನಿರ್ಣಾಯಕರೆನಿಸಿದ್ದಾರೆ, ಇದು ಬೆಳವಣಿಗೆ. ಆದರೆ ಕಾಂಗ್ರೆಸ್ ಪಕ್ಷದ ಎನ್‌ಎಸ್‌ಯುಐ ಅವಲೋಕಿಸಿದರೆ ಈ ಹಂತದಿಂದ ಯುವ ಕಾಂಗ್ರೆಸ್ ಮಟ್ಟಕ್ಕೂ ಬೆಳೆಯಲಾಗಿಲ್ಲ. ಅಂದರೆ ಕಾಂಗ್ರೆಸ್ ಪಕ್ಷದಲ್ಲಿ ತಳಮಟ್ಟದಿಂದ ನಾಯಕರು ಬೆಳೆಯುತ್ತಿಲ್ಲ.

ಯುವಕರಿಗೆ ಅಧಿಕಾರದಲ್ಲಿ ಅಥವಾ ನಿರ್ಣಯಿಸುವಲ್ಲಿ ಅವಕಾಶಕೊಡದಿದ್ದರೆ ಹತಾಶೆಗೆ ಒಳಗಾಗುತ್ತಾರೆ. ಮೊದಲಾದರೆ ಬ್ಯಾನರ್, ಪೋಸ್ಟರ್ ಅಂಟಿಸಿಯಾದರೂ ಯುವಕರು ಖುಷಿಪಡುತ್ತಿದ್ದರು, ಆದರೆ ಈಗ ಚುನಾವಣಾ ಆಯೋಗ ಬ್ಯಾನರ್-ಪೋಸ್ಟರ್ ಬ್ಯಾನ್ ಮಾಡಿ ಯುವಕರಿಗೆ ಕೆಲಸವಿಲ್ಲದಂತೆ ಮಾಡಿದೆ! ಇದಕ್ಕಾಗಿ ಆಯೋಗಕ್ಕೆ ಯುವಕರಪರವಾಗಿ ಥ್ಯಾಂಕ್ಸ್.

ಕಾಂಗ್ರೆಸ್ ಅಥವಾ ಬಿಜೆಪಿ ಯುವ ಪಡೆಯನ್ನು ಕಡೆಗಣಿಸುವಂತಿಲ್ಲ, ಇವರು ನಿರ್ಣಾಯಕರು. ಉತ್ತರಪ್ರದೇಶದಲ್ಲಿ ಈ ಚುನಾವಣೆಯಲ್ಲಿ ರಾಹುಲ್ ಉರುಳಿಸಿದ ಯುವಪಡೆಯ ದಾಳ ಫಲಕೊಟ್ಟಿದೆ. ಆದ್ದರಿಂದಲೇ ಆ ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ಪಡೆಯುವಲ್ಲಿ ಸಫಲವಾಗಿದೆ. ಈಗ ಆಯ್ಕೆಯಾಗಿರುವವರಲ್ಲಿ 70ಕ್ಕೂ ಹೆಚ್ಚು ಮಂದಿ ಯುವಕರೇ ಆಗಿರುವುದು ಕೂಡಾ ಇದೇ ಕಾರಣಕ್ಕೆ.

ಇದೇ ಸೂತ್ರವನ್ನು ರಾಹುಲ್ ಕೇಂದ್ರ ಮಂತ್ರಿ ಮಂಡಲ ರಚನೆಯಲ್ಲೂ ಬಳಕೆ ಮಾಡಬೇಕು. ಕನಿಷ್ಠ ಹತ್ತು ಮಂದಿಯಾದರೂ ಕೇಂದ್ರ ಸಂಪುಟದಲ್ಲಿ ಯುವಪಡೆ ಸ್ಥಾನಪಡೆದರೆ ಕಾಂಗ್ರೆಸ್ ಪಾಳೆಯದಲ್ಲಿ ಹೊಸಶಖೆಯ ಆರಂಭ ಆಗಬಹುದು ಮತ್ತು ಉಳಿದ ಪಕ್ಷಗಳಿಗೂ ಇದು ಹೊಸದಿಕ್ಕು ತೋರಿಸಬಹುದು. ಕಾಂಗ್ರೆಸ್ ಪಕ್ಷಕ್ಕೆ ಹೋಲಿಸಿದರೆ ಬಿಜೆಪಿ ಯುವಪಡೆಗೆ ಆದ್ಯತೆ ಕೊಡುತ್ತಿದೆ, ಆದ್ದರಿಂದಲೇ ಫಲಿತಾಂಶವೂ ಕಾಣುತ್ತಿದೆ.

ಅಬ್ದುಲ್ ಕಲಾಂ ಅವರ ಕಲ್ಪನೆ ಕೇವಲ ಸೈನ್ಸ್‌ಗೆ ಮಾತ್ರ ಸೀಮಿತವಲ್ಲ, ರಾಜಕೀಯಕ್ಕೂ ಅನ್ವಯ. ರಾಹುಲ್ ಸ್ಲೋಗನ್ ಭಾರತ್ ನಿರ್ಮಾಣ್ ಕೂಡಾ ಯುವಕರ ನಿರ್ಮಾಣ್‌ನಲ್ಲಿ ಅಡಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X