ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರ್ಯಾಸ್ತ ಸೊಬಗ ನೋಡಲು ಮರವಂತೆಗೆ ಬನ್ನಿ

By Super
|
Google Oneindia Kannada News

Beautiful sun set at Maravanthe
ಸೂರ್ಯಾಸ್ತಮಾನವನ್ನು ಕಾಣಬೇಕಾದರೆ ಆಗುಂಬೆಗೆ ಹೋಗಬೇಕು ನಿಜ. ಆದರೆ ಸಮುದ್ರ ತೀರದಲ್ಲೂ ಸೂರ್ಯಾಸ್ತಮಾನವನ್ನು ನಿಂತು ಕಣ್ತುಂಬಿಕೊಳ್ಳಬಹುದು. ಇದಕ್ಕೆ ಸೂಕ್ತವಾದ ಸ್ಥಳ ಎಲ್ಲಿ ಅಂತೀರಾ? ಅದು ಮರವಂತೆ. ಒಂದು ಬದಿಯಲ್ಲಿ ಅರಬ್ಬಿ ಸಮುದ್ರದ ಉಪ್ಪು ನೀರು, ಇನ್ನೊಂದು ಬದಿಯಲ್ಲಿ ಸೌಪರ್ಣಿಕಾ ನದಿಯ ಸಿಹಿನೀರು. ಎರಡರ ಸೌಂದರ್ಯವನ್ನು ತುಂಬಿಕೊಳ್ಳಲು ನೂರು ಕಣ್ಣು ಸಾಲದು.

* ಚಿದಂಬರ ಬೈಕಂಪಾಡಿ, ಮಂಗಳೂರು

ಮಂಗಳೂರಿನಿಂದ ಸುಮಾರು 115 ಕಿ.ಮೀ, ಉಡುಪಿಯಿಂದ ಸುಮಾರು 55 ಕಿ.ಮೀ ದೂರದಲ್ಲಿದೆ. ಮಂಗಳೂರು-ಗೋವಾ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಸಿಗುವುದು ಮರವಂತೆ. ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲ್ಲಿ ಸೌಪರ್ಣಿಕಾ ನದಿ ಇಲ್ಲಿನ ಬ್ಯೂಟಿ. ಸಮುದ್ರ ಮತ್ತು ನದಿಗೆ ಅಡ್ಡಲಾಗಿ ಹೆದ್ದಾರಿ ಮಲಗಿದೆ. ಈ ಹೆದ್ದಾರಿ ಇಲ್ಲದಿದ್ದರೆ ಸಮುದ್ರ ಮತ್ತು ನದಿಯ ಸಮಾಗಮ ಆಗುತ್ತಿತ್ತು. ಇದು ಮರವಂತೆಯ ನೋಟ, ನೀವು ಕಂಡಿರದ ಸುಂದರ ತಾಣಗಳಲ್ಲಿ ಒಂದು ಎನ್ನುವುದನ್ನು ಇಲ್ಲಿಗೆ ಬಂದು ನೋಡಿಯೇ ಅನುಭವಿಸಬೇಕು.

ಸಮುದ್ರದ ಅಲೆಗಳ ನರ್ತನ ವಿಶಿಷ್ಟ ಅನುಭವಕೊಡುತ್ತದೆ. ಯಾಕೆಂದರೆ ಮರವಂತೆಯಲ್ಲಿ ಸಮುದ್ರದ ಆರ್ಭಟವಿದೆ. ಹೆದ್ದಾರಿಯನ್ನು ಸಮುದ್ರಕೊರೆಯದಂತೆ ಬಂಡೆಕಲ್ಲುಗಳ ತಡೆಗೋಡೆ ಕಟ್ಟಲಾಗಿದೆ. ಈ ಕಲ್ಲಿಗೆ ಅಲೆಗಳು ಅಪ್ಪಳಿಸುವಾಗ ಹತ್ತಿರದಲ್ಲಿ ಧೈರ್ಯದಿಂದ ನೀವೇನಾದರು ನಿಂತರೆ ನಿಂತಲ್ಲೇ ಸಮುದ್ರ ಸ್ನಾನ. ಕಾರಂಜಿಯಲ್ಲಿ ಮಿಂದ ಅನುಭವ ಆಗುತ್ತದೆ. ಒಂದು ವೇಳೆ ಅಲೆಗಳು ಅಪ್ಪಳಿಸಿದ ರಭಸಕ್ಕೆ ಎದೆಗುಂದಿದರೆ ಅಪಾಯಖಂಡಿತ.

Beautiful sun set at Maravanthe
ಮರವಂತೆಯಲ್ಲಿ ಸೂರ್ಯಾಸ್ತಮಾನ ವೀಕ್ಷಣೆಗೆಂದೇ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಸಮುದ್ರ ಮತ್ತು ನದಿಯನ್ನು ಎಡಬಲದಲ್ಲಿ ನೋಡಲು ಇಲ್ಲಿ ಮಾತ್ರ ಸಾಧ್ಯ. ಕಲ್ಲುಹಾಸಿನಮೇಲೆ ಹಾಯಾಗಿ ಕುಳಿತು ನೋಡುತ್ತಿದ್ದರೆ ಪಶ್ಚಿಮದಲ್ಲಿ ವಿಶಾಲವಾದ ಸಾಗರ, ಪೂರ್ವದಲ್ಲಿ ಸೌಪರ್ಣಿಕಾನದಿಯ ದಡದಲ್ಲಿ ಕಂಗೊಳಿಸುವ ಹಚ್ಚಹಸಿರು, ತೆಂಗಿನತೋಟಗಳ ಸೊಬಗು ಅವರ್ಣನೀಯ.

ಮರವಂತೆಯಲ್ಲಿ ಮುಸ್ಸಂಜೆ ಹೊತ್ತು ಸೂರ್ಯನನ್ನು ಕಾಣುತ್ತಿದ್ದರೆ ಮುಳುಗುವ ಪ್ರತಿಕ್ಷಣದಲ್ಲೂ ಸೂರ್ಯನಲ್ಲಾಗುವ ಬಣ್ಣಗಳೆಷ್ಟು ಎನ್ನುವುದನ್ನು ಕಲ್ಪಿಸುವುದಕ್ಕೂ ಅಸಾಧ್ಯ. ಯಾಕೆಂದರೆ ಬೆಂಕಿ ಚೆಂಡಿನಂತಿರುವ ಸೂರ್ಯ ಮುಸ್ಸಂಜೆ ವೇಳೆಗೆ ತಂಪಾಗಿ ಕಿತ್ತಳೆಹಣ್ಣಿನಂತೆ ಕಾಣುತ್ತಾನೆ, ಮತ್ತೊಂದು ಕ್ಷಣದಲ್ಲಿ ಹೊನ್ನಿನಬಣ್ಣಕ್ಕೆ ತಿರುಗುತ್ತಾನೆ. ಸಮುದ್ರದೊಳಕ್ಕೆ ಸ್ನಾನಕ್ಕೆ ಇಳಿದು ಸ್ವಲ್ಪ ಸ್ವಲ್ಪವೇ ಮುಳುಗುತ್ತಾ ನೋಡುನೋಡುತ್ತಿದ್ದಂತೆಯೇ ಸೂರ್ಯಸಮುದ್ರದಲ್ಲಿ ಪೂರ್ಣಮುಳುಗುತ್ತಾನೆ. ಮರುಕ್ಷಣವೇ ಸುತ್ತಲೂ ಕತ್ತಲು ಆವರಿಸುತ್ತದೆ. ಸಮುದ್ರದ ಅಲೆಗಳ ನೊರೆ ಮಾತ್ರ ಬಿಳಿ, ಅದಷ್ಟೇ ಆ ಕ್ಷಣಕ್ಕೆ ಬೆಳಕು.

ಈ ಸುಂದರ ದೃಶ್ಯಗಳನ್ನು ನೋಡಿ ಆನಂದಿಸಿದ ಮೇಲೆ ವಾಸ್ತವಕ್ಕೇನು ಅಂತ ಚಿಂತೆಯೇ? ಇಲ್ಲಿಯೇ ಪಕ್ಕದಲ್ಲಿ ಖಾಸಗಿಯವರ ಕಾಟೇಜ್‌ಗಳಿವೆ, ತಂಗಲು ಅವಕಾಶವಿದೆ. ಆದರೆ ನೀವು ಬಯಸುವ ಐಶಾರಾಮಿ ವ್ಯವಸ್ಥೆಗಳಿಲ್ಲ, ಇದು ಬಹುದೊಡ್ಡ ಕೊರಗು ದೂರದಿಂದ ಬರುವ ಪ್ರವಾಸಿಗರಿಗೆ. ಇಲ್ಲಿರುವ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಬರುವವರಿಗೆ ಅನುಕೂಲವಾಗಲೆಂದು ಸುಮಾರ ಎರಡು ಎಕರೆ ಪ್ರದೇಶದಲ್ಲಿ ಗಾರ್ಡನ್ ಮಾಡಲಾಗಿತ್ತು. ಇಲ್ಲಿ ಕುಳಿತು ಸೂರ್ಯಾಸ್ತವನ್ನು ನೋಡುವುದೇ ಒಂದು ವಿನೂತನ ಅನುಭವ. ಆದರೆ ಇದರ ಮೈಂಟೇನಸ್ ಇಲ್ಲದೆ ಗಾರ್ಡನ್ ಪಾಳುಬಿತ್ತು. ಕುಂದಾಪುರ ತಾಲೂಕು ಪಂಚಾಯತ್ ವತಿಯಿಂದ ವಸತಿಗೃಹಗಳ ನಿರ್ವಹಣೆ ಇತ್ತು. ಇದು ರಾಜಕೀಯ ಪುಢಾರಿಗಳು, ಅಧಿಕಾರಿಗಳಿಗಷ್ಟೇ ಮೀಸಲಾಗಿತ್ತು. ಇಸ್ಪೀಟ್, ಕುಡಿತ ಇತ್ಯಾದಿ...ಇತ್ಯಾದಿಗಳಿಗೆ ದುರ್ಬಳಕೆಯಾಗುತ್ತಿತ್ತು. ಇದರ ಉಸಾಬರಿಯೇ ಬೇಡವೆಂದು ತಾಲೂಕು ಪಂಚಾಯತ್ ಖಾಸಗಿಯವರ ಸುಪರ್ದಿಗೆ ಒಪ್ಪಿಸಿತು. ಈಗ ಖಾಸಗಿಯವರ ವಶದಲ್ಲಿರುವುದರಿಂದ ಸೇಫ್.

ಆದರೆ ಪ್ರವಾಸೋದ್ಯಮ ಇಲಾಖೆಯ ಕೊಡುಗೆ ಇಲ್ಲಿಗೇನು? ಇಲ್ಲಿಗೆ ಬರುವ ಪ್ರವಾಸಿಗರು ಬಯಸಿದಂಥ ಸೌಲಭ್ಯಗಳು ಸಿಗುವಂಥ ವ್ಯವಸ್ಥೆಯಾಗಬೇಕು. ಮುಖ್ಯವಾಗಿ ವಿದೇಶಿ ಪ್ರವಾಸಿಗರು ಕೂಡಾ ಇಲ್ಲಿಗೆ ಬರುತ್ತಾರೆ, ಆದರೆ ಅವರಿಗೆ ಬೇಕಾದ ಸೌಲಭ್ಯಗಳಿಲ್ಲ. ಸಿನಿಮಾಗಳು, ಧಾರಾವಾಹಿಗಳು ಕೂಡಾ ಇಲ್ಲಿ ಚಿತ್ರೀಕರಣವಾಗುತ್ತವೆ ಅಂದಮೇಲೆ ಲೊಕೇಶನ್ ಸೂಪರ್ ಇರಲೇಬೇಕು ಅಲ್ವೇ?

ಪಾಳುಬಿದ್ದಿರುವ ಗಾರ್ಡನ್‌ಗೆ ಪ್ರವಾಸೋದ್ಯಮ ಇಲಾಖೆ ಮೊದಲು ಕಾಯಕಲ್ಪ ನೀಡಬೇಕು. ಸೌಪರ್ಣಿಕಾ ನದಿಯಲ್ಲಿ ಬೋಟಿಂಗ್ ಸೌಲಭ್ಯ ಉತ್ತಮವಾಗಬೇಕು. ಬಂಡವಾಳ ಹೂಡಿದರೆ ಖಂಡಿತಕ್ಕೂ ಬಂಡವಾಳ ವಾಪಸ್ ಪಡೆಯಬಹುದು. ಇಂಥ ತಾಣ ಮರವಂತೆ, ಒಮ್ಮೆ ಭೇಟಿಕೊಡಿ ಗೊತ್ತಾಗುತ್ತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X