ಜಂಬೋ ಆರ್ಭಟಕ್ಕೆ ಮಂಕಾದ ರಾಂಚಿ ರ‌್ಯಾಂಬೋ
ಜೋಹಾನ್ಸಬರ್ಗ್, ಮೇ 24 : ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6ವಿಕೆಟ್‌ಗಳಿಂದ ಬಗ್ಗುಬಡಿದ ಬೆಂಗಳೂರು ರಾಯಲ್ ಚಾಲೆಂಜರ್‍ಸ್ ತಂಡ ಎರಡನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯಲ್ಲಿ ಫೈನಲ್‌ಗೆ ಲಗ್ಗೆ ಹಾಕಿದೆ. ಫೈನಲ್ಸ್ ನಲ್ಲಿ ಹೈದರಾಬಾದ್ ನ ಡೆಕ್ಕನ್ ಚಾರ್ಚರ್ಸ್ ತಂಡದ ವಿರುದ್ಧ ಬೆಂಗಳೂರು ತಂಡ ಸೆಣಸಲಿದೆ.
ನ್ಯೂ ವಾಂಡರರ್‍ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್‌ಗಳಿಸಿತು. ಸಾಧಾರಣ ಮೊತ್ತವನ್ನು ಬೆಂಬತ್ತಿ ಬೆಂಗಳೂರು ರಾಯಲ್ ಚಾಲೆಂಜರ್‍ಸ್ ತಂಡ 4 ವಿಕೆಟ್ ಕಳೆದು ಕೊಂಡು 8 ಎಸೆತಗಳು ಬಾಕಿ ಇರು ವಂತೆಯೇ ಸುಲಭ ಜಯ ಸಾಧಿಸಿತು.
ಮನಿಶ್ ಪಾಂಡೆ (48) ಮತ್ತು ರಾಹುಲ್ ದ್ರಾವಿಡ್ (44) ಮೂರನೇ ವಿಕೆಟ್‌ಗೆ 72 ರನ್ ಕಲೆ ಹಾಕಿ ತಂಡವನ್ನು ಮುನ್ನಡೆಸಿದರು. ಅಂತಿಮ ಹಂತದಲ್ಲಿ
ರಾಸ್ ಟೇಲರ್ (ಅಜೇಯ 17) ಮತ್ತು ವಿರಾಟ್ ಕೊಹ್ಲಿ (ಅಜೇಯ 24) ತಂಡವನ್ನು ಗೆಲುವಿನ ದಡ ಸೇರಿಸಿದರು.
ವಿಜಯ್ ಮಲ್ಯ: ತಮ್ಮ ರಾಯಲ್ ಚಾಲೆಂಜರ್ಸ್ ತಂಡವನ್ನು ಹುರಿದುಂಬಿಸಲು ಮಾಂಟೆಕಾರ್ಲೋ ಎಫ್ ಎಂ ಕಾರ್ ರೇಸ್ ಗ್ಯಾಲರಿಯಿಂದ ಕ್ರಿಕೆಟ್ ಡಗ್ ಔಟ್ ಗೆ ಬಂದು ಕುಳಿತಿದ್ದ ಡಾ. ವಿಜಯ ಮಲ್ಯ ಸಂಭ್ರಮದಿಂದ ಕುಣಿದಾಡಿದರು. ಮಲ್ಯ ಹಾಗೂ ಕತ್ರೀನಾ ಕೈಫ್ ಬೆಂಬಲಕ್ಕೆ ನಿಂತ ಪಂದ್ಯವನ್ನು ರಾಯಲ್ಸ್ ಸೋತಿಲ್ಲ. ಫೈನಲ್ಸ್ ಕೂಡ ನಮ್ಮ ಪಾಲಾಗಲಿದೆ ಎಂದು ಮಲ್ಯ ನುಡಿದರು.
(ದಟ್ಸ್ ಕ್ರಿಕೆಟ್ ವಾರ್ತೆ)