• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಂದರ ಕಾಪು ಬೀಚ್ ಕಾಯುತ್ತಿದೆ ಕಾಯಕಲ್ಪಕ್ಕಾಗಿ

By * ಚಿದಂಬರ ಬೈಕಂಪಾಡಿ, ಮಂಗಳೂರು
|

ಕರ್ನಾಟಕದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಅಧಿಕಾರಕ್ಕೆ ಬರುವ ಸರ್ಕಾರಗಳು ಯೋಜನೆ ರೂಪಿಸುತ್ತವೆಯೇ ಹೊರತು ಅನುಷ್ಠಾನ ಮಾಡುವುದಿಲ್ಲ. ಆದ್ದರಿಂದಲೇ ಅವಕಾಶವಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸೋದ್ಯಮ ಬೆಳೆದಿಲ್ಲ. ಅದರಲ್ಲೂ ಮುಖ್ಯವಾಗಿ ಕರಾವಳಿ ತೀರಗಳನ್ನು ಪ್ರವಾಸೋದ್ಯಮಕ್ಕೆ ಅಣಿಗೊಳಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ.

ಪಡುವಣಕಡಲಿನ ತೀರದಲ್ಲಿ ಹತ್ತಾರು ಸುಂದರ ಬೀಚ್‌ಗಳಿದ್ದರೂ ಅವುಗಳು ಅಭಿವೃದ್ದಿ ಕಾಣದೆ ಹಿಂದುಳಿದಿವೆ. ಇಂಥ ಬೀಚ್‌ಗಳ ಪೈಕಿ ಉಡುಪಿ ಜಿಲ್ಲೆಯಲ್ಲಿರುವ ಕಾಪು ಕೂಡಾ ಒಂದು.ಮಂಗಳೂರಿನಿಂದ ಸುಮಾರು 45 ಕಿ.ಮೀ ಮತ್ತು ಉಡುಪಿಯಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. ಮಂಗಳೂರು-ಗೋವಾ ರಾಷ್ಟ್ರೀಯ ಹೆದ್ದಾರಿ 17ರಲ್ಲಿದೆ ಕಾಪು. ಕಾಪು ಪೇಟೆಯಲ್ಲಿಳಿದು ಪಶ್ಚಿಮಕ್ಕೆ ನಡೆದು ಹೋದರೆ ಕಣ್ತುಂಬಿಕೊಳ್ಳುವಷ್ಟು ನೀರಿನ ವಿಶಾಲ ಸಮುದ್ರ ಕಾಣುತ್ತದೆ. ಅದೇ ನೀವು ನೋಡದಿರುವ ಕಾಪು ಬೀಚ್ ಮತ್ತು ದೀಪಸ್ತಂಭ.

ಈ ಹಿಂದೆ ಪ್ರಾಥಮಿಕ ಶಾಲಾ ಪಠ್ಯಗಳಲ್ಲಿ ಕಾಪು ದೀಪಸ್ತಂಭದ ಕುರಿತು ಪಾಠವಿತ್ತು. ಅರಬ್ಬಿ ಸಮುದ್ರದ ಭಾಗವಾಗಿರುವ ಈ ಬೀಚ್ ಪ್ರಕೃತಿದತ್ತವಾಗಿ ರೂಪುಗೊಂಡದ್ದು. ಕಲ್ಲು ಬಂಡೆಗಳು, ಅವುಗಳ ಸುತ್ತಲೂ ಸಮುದ್ರದ ನೀರು ಅಲೆ ಅಲೆಗಳಾಗಿ ರಭಸದಿಂದ ಕಲ್ಲುಬಂಡೆಗಳಿಗೆ ಅಪ್ಪಳಿಸಿದಾಗ ದಂಡೆಯಲ್ಲಿದ್ದವರು ಬಂಡೆಕಲ್ಲುಗಳಿಗೆ ಅಪ್ಪಳಿಸಿದ ನೀರಿನಿಂದ ಒದ್ದೆಯಾಗುವುದು ವರ್ಣನಾತೀತ.

ಮುಸ್ಸಂಜೆಯಾಗುವುದನ್ನೇ ತವಕಿಸುತ್ತಾ ನಿಲ್ಲುವವರಿದ್ದಾರೆ. ಯಾಕೆಂದರೆ ಇಲ್ಲಿ ನಿಂತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು. ಅರಬ್ಬಿ ಸಮುದ್ರದ ನೀರಿನೊಳಕ್ಕೆ ಸೂರ್ಯ ನುಸುಳಿ ಅವಿತು ಕುಳಿತಂಥ ಅನುಭವ ಅವುಭವಿಸಬೇಕಾದರೆ ನಿಜಕ್ಕೂ ಇಂಥ ಬೀಚ್‌ಗಳ ತೀರಕ್ಕೆ ಬರಬೇಕು. ಸಮುದ್ರದ ನೀರಿಗಿಳಿದು ಆಟವಾಡುವುದು ಮಕ್ಕಳಿಗೆ ಅದೆಷ್ಟು ಖುಶಿಕೊಡುವ ಸಂಗತಿ ಎನ್ನುವುದನ್ನು ಮನೆ ಮಂದಿ ಮಕ್ಕಳೊಂದಿಗೆ ಇಲ್ಲಿಗೆ ಬಂದು ವಿಹರಿಸುವುದನ್ನು ಕಂಡರೆ ಅರಿವಾಗುತ್ತದೆ. ತೆಂಗಿನ ಮರಗಳ ಹಸಿರು ಕಂಗೊಳಿಸುವ ಸುಂದರ ತಾಣ ಕೂಡಾ.

ಸೌಕರ್ಯ ವಂಚಿತ ಬೀಚ್

ಕಾಪು ನೋಡಲು ಸುಂದರ ಬೀಚ್ ನಿಜ. ಆದರೆ ಈ ಸೌಂದರ್ಯವನ್ನು ಕಾಪಾಡುವಲ್ಲಿ ಪ್ರವಾಸೋದ್ಯಮ ಇಲಾಖೆ ವಿಫಲವಾಗಿದೆ. ಇಲ್ಲಿ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ದೂರ ಸಮುದ್ರದಲ್ಲಿ ಸಾಗುವ ಹಡಗುಗಳಿಗೆ ಕಡಲತೀರವೆಂಬ ಸಂದೇಶ ನೀಡುವ ದೀಪಸ್ತಂಭ ಹೊರತುಪಡಿಸಿದರೆ ಬೇರೇನೂ ಇಲ್ಲಿಲ್ಲ. ಆದರೆ ಕೇರಳದ ಸಮುದ್ರತೀರಗಳನ್ನು ಅಲ್ಲಿನ ಸರ್ಕಾರ ಹೇಗೆ ಅಭಿವೃದ್ದಿಪಡಿಸಿದೆ ಎನ್ನುವುದನ್ನು ನೋಡಿದವರಿಗೆ ಕಾಪು ಬೀಚ್ ಪಾಳುಬಿದ್ದಂತೆ ಕಂಡುಬಂದರೆ ಅಚ್ಚರಿಯಿಲ್ಲ.

ನಿತ್ಯವೂ ಸುಮಾರು ಇನ್ನೂರರಿಂದ ಮುನ್ನೂರು ಮಂದಿ ಪ್ರವಾಸಿಗರಿರುತ್ತಾರೆ. ಶನಿವಾರ, ಭಾನುವಾರ ಮತ್ತು ರಜಾ ದಿನಗಳಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಸಾವಿರ ದಾಟುತ್ತದೆ. ಆದರೆ ಇಂಥ ಪ್ರವಾಸಿ ತಾಣವನ್ನು ಸರ್ಕಾರ ಯಾವ ಕಾರಣಕ್ಕೆ ಅಭಿವೃದ್ದಿಪಡಿಸಿಲ್ಲ ಎನ್ನುವುದು ಮಾತ್ರ ನಿಗೂಢ. ಕುಡಿಯುವ ನೀರು ಬೇಕಾದರೂ ಪ್ರವಾಸಿಗರು ಜೊತೆಗೆ ತಂದಿರಬೇಕು.

ಕಾಪು ಸುಂದರ ಬೀಚ್ ಪ್ರಸ್ತುತ ಮುಸ್ಸಂಜೆ ಆಯಿತೆಂದರೆ ಕೆಟ್ಟಕೆಲಸಕ್ಕೆ ಬಳಕೆಯಾಗುವುದೇ ಹೆಚ್ಚು. ಪುಂಡು ಪೋಕರಿಗಳಿಗೆ, ಸೋಮಾರಿಗಳಿಗೆ ಆಶ್ರಯತಾಣವಾಗಿರುವುದೂ ನಿಜ. ಅನೈತಿಕ ಚಟುವಟಿಕೆಗೂ ರಾತ್ರಿಹೊತ್ತು ಈ ಬೀಚ್ ಆಸರೆಯಾಗುತ್ತಿದೆ ಎನ್ನುವುದು ದುರಾದೃಷ್ಟಕರ. ಇಂಥ ದುಸ್ಥಿತಿಗೆ ಪ್ರವಾಸೋದ್ಯಮ ಇಲಾಖೆಯೇ ಕಾರಣ. ಈ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ಆದಾಯ ತಂದುಕೊಡಬಹುದಾದ ಕಾಪು ಬೀಚ್ ನಿರುಯುಕ್ತವಾಗುತ್ತಿದೆ. ಕಾಪು ಪೊಲೀಸರಿಗೆ ಈ ಬೀಚ್‌ನಲ್ಲಾಗುವ ಅನೈತಿಕ ಚಟುವಟಿಕೆ ತಡೆಯಲು ಕಾಯುವುದು ಹೆಚ್ಚುವರಿ ಕಾಯಕ.

ಸಮುದ್ರ ಸ್ನಾನ ಮಾಡುವ ಮೂಲಕ ತಮ್ಮ ಪಾಪ ಕಳೆದುಕೊಳ್ಳುವುದಕ್ಕೆಂದೇ ಇಲ್ಲಿಗೆ ಬರುವವರೂ ಬಹುಸಂಖ್ಯೆಯಲ್ಲಿದ್ದಾರೆ. ಇಂಥವರು ಸುರಕ್ಷಿತವಾಗಿ ಸ್ನಾನ ಮಾಡಲು ಸೌಲಭ್ಯ ಕಲ್ಪಿಸಬೇಕು. ಯಾಕೆಂದರೆ ಇಲ್ಲಿ ಸಮುದ್ರ ಸ್ನಾನ ಮಾಡುವುದು ಅಷ್ಟು ಸುರಕ್ಷಿತವಲ್ಲ. ಕಲ್ಲು ಬಂಡೆಗಳಿರುವ ಈ ಪ್ರದೇಶದಲ್ಲಿ ನೀರಿನ ಸುಳಿಗಳಿವೆ. ಗೊತ್ತಿಲ್ಲದವರು ಸ್ನಾನಕ್ಕಿಳಿದು ಜೀವಕಳೆದುಕೊಂಡವರ ಸಂಖ್ಯೆ ಕಡಿಮೆಯಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಇಲ್ಲಿಗೆ ಬರುವವರಿದ್ದಾರೆ. ಇಂಥ ದುಸ್ಸಾಹಸಗಳಿಗೆ ಕೈಹಾಕುವವರನ್ನು ಬದುಕಿಸಲು ಜೀವರಕ್ಷಕ ದಳ ಕಾಪು ಬೀಚ್‌ನಲ್ಲಿ ಇಲ್ಲದಿರುವುದು ಆತಂಕಪಡುವ ಸಂಗತಿ.

ಏನು ಮಾಡಬಹುದು?

ಇಲ್ಲಿನ ಪರಿಸರಕ್ಕೆ ಪೂರಕವಾಗಿ ಯೋಜನೆ ರೂಪಿಸಿದರೆ ನಿಜಕ್ಕೂ ಗಣನೀಯ ಆದಾಯ ನಿರೀಕ್ಷಿಸಬಹುದು. ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವುದು ಮೊದಲ ಆದ್ಯತೆಯಾಗಬೇಕು. ಕುಡಿಯುವ ನೀರು, ಶೌಚಾಲಯ, ಕ್ಯಾಂಟಿನ್, ವಿಶ್ರಾಂತಿ ಪಡೆಯಲು ಚಿಕ್ಕಚಿಕ್ಕ ಕುಠೀರಗಳು, ಮಕ್ಕಳಿಗೆ ಆಟವಾಡಲು ರಬ್ಬರ್ ಬೋಟ್ ಹಾಗೂ ಇವುಗಳನ್ನು ನಿರ್ವಹಿಸಬಲ್ಲ ಪರಿಣತ ಸಿಬ್ಬಂದಿಗಳು, ಜೀವರಕ್ಷಕ ತಂಡ, ತುರ್ತುಚಿಕಿತ್ಸಾ ವ್ಯವಸ್ಥೆ ಇತಾದಿಗಳಿರಬೇಕು.

ಈ ಎಲ್ಲ ಸೌಲಭ್ಯಗಳಿಗ ಶುಲ್ಕ ವಸೂಲಿ ಮಾಡಲು ಅವಕಾಶವಿದೆ. ಖಾಸಗಿ ಸಹಭಾಗಿತ್ವದಲ್ಲಾದರೂ ಸರಿ ಈ ಬೀಚ್ ಅಭಿವೃದ್ದಿಪಡಿಸಿದರೆ ಹೂಡಿಕೆಯಾಗುವ ಬಂಡವಾಳ ಹಿಂದಕ್ಕೆ ಪಡೆಯುವುದು ಕಷ್ಟವಲ್ಲ. ಆದ್ದರಿಂದ ಸರ್ಕಾರ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸುವುದಾಗಿ ಕೇವಲ ಸುದ್ದಿ ಮಾಡಿ, ಯೋಜನೆ ಪ್ರಕಟಿಸಿ ನೆಮ್ಮದಿಪಟ್ಟುಕೊಳ್ಳುವ ಬದಲು ಅನುಷ್ಟಾನಕ್ಕೆ ತಂದರೆ ಬೀಚ್‌ಗೆ ಬರುವವರಿಗೂ ಖುಶಿ, ಸರ್ಕಾರಕ್ಕೂ ಒಳ್ಳೆಯ ಹೆಸರು, ಕಾದು ನೋಡಬೇಕು ಹೈಟೆಕ್ ಪ್ರವಾಸೊದ್ಯಮ ಸಚಿವ ಗಾಲಿ ಜನಾರ್ಧನ ರೆಡ್ಡಿಯವರು ಏನು ಮಾಡುತ್ತಾರೆಂದು?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more