ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತಿನ ಭಾರಕ್ಕೆ ಕುಸಿದ ಬಿಜೆಪಿ!

By Staff
|
Google Oneindia Kannada News

Advani, the lost opportunity
ಪ್ರಧಾನಿಯಾಗುವ ಕನಸುಗಳನ್ನು ಕಟ್ಟಿಕೊಂಡಿದ್ದ ಲಾಲ್ ಕೃಷ್ಣ ಅಡ್ವಾಣಿಯವರ ಮುಂದಾಳತ್ವದಲ್ಲಿ ಭಾರತೀಯ ಜನತಾ ಪಕ್ಷ ವೋಟುಗಳನ್ನು ಗಿಟ್ಟಿಸುವಲ್ಲಿ ಮುಗ್ಗರಿಸಿದ್ದೆಲ್ಲಿ? ಕಾರಣಗಳು ಅನೇಕವಿದ್ದರೂ, ಮೂಲದಲ್ಲಿ ಎಡವಿದ್ದು ಮಾತುಗಾರಿಕೆಯಲ್ಲಿ. ಮಾತುಗಾರಿಕೆಯಲ್ಲಿ ಕೂಡ ಯುಪಿಎ ವೈಫಲ್ಯವನ್ನು ಬಿಂಬಿಸಲು ವಿಫಲವಾಗಿದೆ. ಮಾತು ಮನೆ ಕೆಡಿಸಿತು, ಕೋತಿ ವನ ಕೆಡಿಸಿತು ಎಂಬ ಗಾದೆ ಮಾತಿಗೆ ಬಿಜೆಪಿ ಕಿವಿಗೊಡಬೇಕು. ಮಾತಿಗಿಂತ ಕೃತಿಯೇ ಮೇಲು ಎಂಬುದನ್ನು ಬಿಜೆಪಿ ಈಗಲಾದರೂ ಅರಿಯುವುದು ಒಳಿತು.

* ಎಚ್. ಆನಂದರಾಮ ಶಾಸ್ತ್ರೀ

ತನ್ನ ಮಾತಿನ ಭಾರಕ್ಕೆ ತಾನೇ ಕುಸಿದಿದೆ ಬಿಜೆಪಿ! ದೇಶದಲ್ಲಿ ಬಿಜೆಪಿಯ ಅಧಃಪತನದ ಒಟ್ಟಾರೆ ಸ್ಥಿತಿನೋಟ ಇದು.

ರಾಮಮಂದಿರ ಕಟ್ಟುತ್ತೇವೆಂದಿತು. ಮಂದಿರದ ಬದಲು ಮಾತಿನ ಮಹಲ್ ಕಟ್ಟಿತು. ಮತಾಂತರ ವಿರೋಧಿಸಲು ಯುವಕರಿಗೆ ಪ್ರಚೋದನೆ ನೀಡಿತು. ಯುವಕರು ಮುನ್ನುಗ್ಗಿದಾಗ ಸೂಕ್ತವಾಗಿ ನಿಯಂತ್ರಿಸಲಿಲ್ಲ, ಬದಲಿಗೆ, ಹಿಂಸಾಚಾರಗಳಾದಾಗ ಜಾರಿಕೊಳ್ಳುವ ಜಾಣ್ಮೆ ಮೆರೆಯಿತು. ಉಗ್ರರ ದಮನದ ಬಗ್ಗೆ ಆವೇಶದ ಮಾತುಗಳನ್ನಾಡಿತು. ದೇಶದೊಳಗೆ ಉಗ್ರರು ಸೊಕ್ಕಿ ಮೆರೆಯುತ್ತಿರುವಾಗ ದೇಶಾದ್ಯಂತ ಕಾನೂನುಬದ್ಧ ಹಾಗೂ ಅಹಿಂಸಾತ್ಮಕ ಚಳವಳಿ ರೂಪಿಸುವ ಯೋಜನೆ ಹಾಕಿಕೊಳ್ಳಲಿಲ್ಲ. ಅಲ್ಲಲ್ಲಿ ರಕ್ತಪಾತವಾದಂತೆಲ್ಲ ಹೇಳಿಕೆಗಳನ್ನು ನೀಡಿ ತಣ್ಣಗಾಗುವ ಪ್ರವೃತ್ತಿ ಮೆರೆಯಿತು. ಬಾಬ್ರಿ ಮಸೀದಿ ಧ್ವಂಸದ ವಿಷಯದಲ್ಲಂತೂ ಕೈತೊಳೆದುಕೊಳ್ಳುವ ಕೆಲಸ ಮಾಡಿತು!

ಬಿಜೆಪಿಯು ಕೆಲಸ ಮಾಡಲಿಲ್ಲ. ಬರಿದೆ ಮಾತು..ಮಾತು..ಮಾತೇ ಅಡಿತು ಅಷ್ಟೆ. ಕೆಲಸಗಾರಿಕೆ ತೋರಿಸಲು ಅಧಿಕಾರವೇ ಬೇಕೆಂದೇನೂ ಇಲ್ಲ. ಜನರ ನಿರೀಕ್ಷೆಗಳನ್ನು ಅರಿತು ಅದರಂತೆ ನಡೆಯುವ ಕಲೆ ಗೊತ್ತಿರಬೇಕು. ಕಾಂಗ್ರೆಸ್‌ನ ಮತ್ತು ಕೆಲವು ಮಾಧ್ಯಮಗಳ ವ್ಯವಸ್ಥಿತ ಅಪಪ್ರಚಾರದ ಬಗ್ಗೆ ದೇಶದ ಜನರಲ್ಲಿ ಸೂಕ್ತ ತಿಳಿವಳಿಕೆ ನೀಡುವ ಕಾರ್ಯವನ್ನಂತೂ ಬಿಜೆಪಿ ಮಾಡಲೇ ಇಲ್ಲ.

ಅದೇ, ಕಾಂಗ್ರೆಸ್ ನೋಡಿ, ಕಮ್ಯುನಿಸ್ಟರಿಗಿಂತ ಒಂದು 'ಕೈ' ಮೇಲಾಗಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುವುದರ ಜತೆಗೆ ಬಹಳ ವ್ಯವಸ್ಥಿತವಾಗಿ ರಾಹುಲ್ ಗಾಂಧಿ ಎಂಬ ಯುವಕ(?)ನನ್ನು ಜನರೊಳಗೆ ಛೂಬಿಟ್ಟಿತು. ಯುವ ಸೌಂದರ್ಯದ ಮುಂದೆ ಮೋದಿಯ ಮೋಡಿ ಮತ್ತು ಜ್ಞಾನವೃದ್ಧ-ವಯೋವೃದ್ಧ ಅಡ್ವಾಣಿಯ ಆಕರ್ಷಣೆ ಇವೆರಡೂ ಕಳೆಗುಂದಿದವು.

ಅತ್ತ, ವಾಜಪೇಯಿಗಿದ್ದ ಸಂತನ ಸಮಾನವಾದ ಜನಪ್ರಿಯತೆಯೂ ಇಲ್ಲ, ಇತ್ತ, ರಾಹುಲನೆದುರು ವಯಸ್ಸಿನ ಆಕರ್ಷಣೆಯೂ ಇಲ್ಲ. ಹೀಗಾಗಿ ಅಡ್ವಾಣಿಯು ವೋಟುಗಳನ್ನು ಒಟ್ಟುಮಾಡುವಲ್ಲಿ ನಿರೀಕ್ಷಿತ ಮಟ್ಟ ತಲುಪಲಾಗಲಿಲ್ಲ.

ಆವೇಶದ ಮಾತುಗಳಾಗಲೀ ಘೋಷಣೆಗಳಾಗಲೀ ಕೆಲಸ ಮಾಡುವುದಿಲ್ಲವೆಂಬುದನ್ನು ಬಿಜೆಪಿಯು ಇನ್ನಾದರೂ ಅರಿಯಬೇಕು. ದೇಶದಲ್ಲಿಂದು ಬಹುಸಂಖ್ಯಾತರಾಗಿರುವ ಯುವಕರು ಕಾರ್ಯಸಾಧನೆಯನ್ನು ನಿರೀಕ್ಷಿಸುತ್ತಾರೆ ಮತ್ತು ಯುವಶಕ್ತಿಯೆಡೆಗೆ ಹೆಚ್ಚಿನ ಒಲವು ತೋರುತ್ತಾರೆ. ಈ ವಾಸ್ತವದ ಅರಿವು ಬಿಜೆಪಿಗೆ ಸದಾ ಇರಬೇಕು.

ಭಾರತದ ಯುವ ಜನತೆಯಲ್ಲಿ ರಾಷ್ಟ್ರಪ್ರೇಮ ಮತ್ತು ದೇಶಾಭಿಮಾನ ತೃಪ್ತಿಕರ ಮಟ್ಟದಲ್ಲಿದೆ; ನಿರಾಶೆಯ ಅಗತ್ಯವಿಲ್ಲ. ಆದರೆ ಆ ಗುಣಗಳನ್ನು ದೇಶ ಕಟ್ಟಲಿಕ್ಕಾಗಿ ದುಡಿಸಿಕೊಳ್ಳುವ ನೇತಾರರ ಅಗತ್ಯವಿದೆ. ಇದನ್ನು ಬಿಜೆಪಿ ಅರಿತು ಮುಂದಡಿಯಿಡಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X