ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಘು ಗೆಲುವಿಗೆ ಸಿದ್ಧವಾಗಿರುವ ಪಟಾಕಿ, ಸ್ವೀಟು

By * ಶಿ.ಜು. ಪಾಶಾ
|
Google Oneindia Kannada News

BY Raghavendra, BJP candidate
ಶಿವಮೊಗ್ಗ, ಮೇ 15 : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಮುಂದಿನ ಭವಿಷ್ಯವನ್ನು ನಿರ್ಧರಿಸಲಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆಂಬ ಲೆಕ್ಕಾಚಾರಗಳು ಒಂದು ಕಡೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಬೆಟ್ಟಿಂಗ್ ರಾಜಾರೋಷವಾಗಿ ನಡೆಯುತ್ತಿದೆ.

ಬಿ.ವೈ.ರಾಘವೇಂದ್ರ ಬಿಜೆಪಿಯನ್ನು ಗೆಲ್ಲಿಸುತ್ತಾರೋ? ಬಿಜೆಪಿ ಬಿ.ವೈ. ರಾಘವೇಂದ್ರರನ್ನು ಗೆಲ್ಲಿಸುತ್ತದೆಯೋ? ಅಥವಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಮಗನ ಮೂಲಕ ಬಿಜೆಪಿಯನ್ನು ಗೆಲ್ಲಿಸಿಕೊಂಡು ತಮ್ಮ ರಾಜಕೀಯ ಭವಿಷ್ಯವನ್ನು ತೊಂದರೆ ಇಲ್ಲದಂತೆ ಮಾಡಿಕೊಳ್ಳುತ್ತಾರೋ? ಈ ಪ್ರಶ್ನೆಗಳಿಗೆಲ್ಲಾ ಒಂದಿಷ್ಟು ಗಂಟೆಗಳಲ್ಲಿ ಮತಯಂತ್ರದಲ್ಲಿ ಮತದಾರ ಮುಚ್ಚಿಟ್ಟಿರುವ ಫಲಿತಾಂಶ ಹೊರಬೀಳಲಿದೆ. ಈ ಫಲಿತಾಂಶದ ಆಧಾರದ ಮೇಲೆ ರಾಘವೇಂದ್ರರ ಭವಿಷ್ಯ ನಿಂತಿದೆ. ರಾಘವೇಂದ್ರರವರ ಗೆಲುವು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿರುವ ಬಿಜೆಪಿಯ ಮಾನ ಉಳಿಸಲಿದೆ.

ತಮ್ಮ ಮಗ ಗೆದ್ದರೆ ಅಷ್ಟೇ ನಿರಾತಂಕವಾಗಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಆದರೆ, ಫಲಿತಾಂಶವೇನಾದರು ರಾಘವೇಂದ್ರ ವಿರುದ್ಧ ಬಂದರೆ ಬಿಜೆಪಿ ತನ್ನ ಮೀಸೆಯನ್ನು ಮಣ್ಣಾಗಿಸಿಕೊಳ್ಳಲಿದೆ. ಜೊತೆಗೆ ಮುಖ್ಯಮಂತ್ರಿಗಳ ಪ್ರಭಾವಕ್ಕೆ ಬಿದ್ದು ಯುವ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಬಿಜೆಪಿ ಹೈಕಮಾಂಡ್ ದೊಡ್ಡದೊಂದು ಯೋಚನೆಯಲ್ಲಿಯೂ ಬೀಳುವ ಸಾಧ್ಯತೆ ಇದೆ. ಅಂತೆಯೇ, ಯಡಿಯೂರಪ್ಪರವರ ಮುಖ್ಯಮಂತ್ರಿ ಸ್ಥಾನಕ್ಕೂ ತೊಂದರೆಯಾಗುವುದರಲ್ಲಿ ಅನುಮಾನಗಳಿಲ್ಲ.

ಈಗಾಗಲೇ ಬಿಜೆಪಿಯ ಅಭ್ಯರ್ಥಿ ರಾಘವೇಂದ್ರ ಗೆದ್ದೇ ಬಿಟ್ಟಿದ್ದಾರೆಂಬ ಸಂತೋಷದಲ್ಲಿದ್ದಾರೆ ಬಿಜೆಪಿ ಕಾರ್ಯಕರ್ತರು. ಶಿವಮೊಗ್ಗ ಲೋಕಸಭಾ ಕ್ಷೇತ್ರದಾದ್ಯಂತ ಪಟಾಕಿ ಸಿಡಿಸುವ ಸಂತೋಷದಲ್ಲಿಯೂ ಇದ್ದಾರೆ. ಶಿವಮೊಗ್ಗದಲ್ಲಿ ಎರಡು ಲೋಡುಗಳಷ್ಟು ಪಟಾಕಿ ಸಿಡಿಯಲು ಸಿದ್ಧವಾಗಿ ನಿಂತಿದೆ. ಈ ಪಟಾಕಿ ಸಿಡಿಯಬೇಕೆಂದರೆ ರಾಘವೇಂದ್ರ ಗೆಲ್ಲಲೇಬೇಕು. ಇಲ್ಲದಿದ್ದಲ್ಲಿ ಟುಸ್ ಪಟಾಕಿ! ಪಟಾಕಿಯ ಜೊತೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಾದ್ಯಂತ ಬೂತ್ ಮಟ್ಟದಲ್ಲಿ ಸಿಹಿ ಹಂಚುವ ಕಾರ್ಯಕ್ರಮಕ್ಕೂ ಸಿದ್ಧತೆಗಳು ನಡೆದಿವೆ.

ಬೈಂದೂರು ಕ್ಷೇತ್ರದಲ್ಲಿ ರಾಘವೇಂದ್ರ ಕಾಂಗ್ರೆಸ್‌ನ ಬಂಗಾರಪ್ಪರವರಿಗಿಂತ ಹೆಚ್ಚಿನ ಮತಗಳನ್ನು ಪಡೆಯುತ್ತಾರೆಂದು 5 ಸಾವಿರದಿಂದ 1 ಲಕ್ಷ ರೂ.ಗಳ ವರೆಗೆ ಬೆಟ್ಟಿಂಗ್ ಕಟ್ಟಲಾಗಿದೆ. ಅಂತೆಯೇ, ಸೊರಬ ಮತ್ತು ಸಾಗರದಲ್ಲಿ ಎಸ್.ಬಂಗಾರಪ್ಪ ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆಂದು ಬೆಟ್ಟಿಂಗ್‌ನ ಸುರಿಮಳೆಯಾಗಿದೆ. ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳನ್ನು ರಾಘವೇಂದ್ರ ಪಡೆಯುತ್ತಾರೆ ಎಂದು ದೊಡ್ಡ ಮೊತ್ತದ ಬೆಟ್ಟಿಂಗ್‌ಗಳು ನಡೆದಿರುವುದು ತಿಳಿದುಬಂದಿದೆ. ಈ ಬೆಟ್ಟಿಂಗ್‌ಗಳೆಲ್ಲಾ ಶನಿವಾರ ಮಧ್ಯಾಹ್ನದ ವೇಳೆಗೆ ಒಂದು ಗತಿ ಕಂಡಿರುತ್ತವೆ. ಯಾರು ಎಷ್ಟು ಗಳಿಸಿದ್ದಾರೆ, ಯಾರು ಎಷ್ಟು ಕಳೆದುಕೊಂಡಿದ್ದಾರೆ ಎಂಬುದನ್ನು ತಿಳಿಯಲು ನಾವೂ ಸಹ ನಾಳೆ ಮಧ್ಯಾಹ್ನದವರೆಗೆ ಕಾಯಲೇ ಬೇಕಾಗಿದೆ.

ಕಾಂಗ್ರೆಸ್‌ನ ಮಟ್ಟಿಗೆ ಹೇಳಬೇಕಾದರೆ, ಹಣವೇ ಇಲ್ಲದೆ ಚುನಾವಣೆ ನಡೆದಿದ್ದರಿಂದ ಎಸ್.ಬಂಗಾರಪ್ಪ ಗೆದ್ದರೆ ಮತದಾರರೇ ಪಟಾಕಿ ಸಿಡಿಸಿಕೊಳ್ಳಬೇಕು ಮತ್ತು ಸಿಹಿ ಹಂಚಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಎಸ್.ಬಂಗಾರಪ್ಪ ಗೆಲ್ಲುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಆದರೆ, ಕಾಂಗ್ರೆಸ್ ಮಾತ್ರ ಎಸ್.ಬಂಗಾರಪ್ಪರವರ ಗೆಲುವಿನ ಮೇಲೆಯೇ ಶಿವಮೊಗ್ಗದಲ್ಲಿ ಉಳಿಯಲು ಸಾಧ್ಯ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X