ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಟನಿ ಪಿಎಂ ಮಾಡಿದರೆ ಎಡಪಕ್ಷಗಳ ಬೆಂಬಲ

By Staff
|
Google Oneindia Kannada News

AK Antony
ನವದೆಹಲಿ, ಮೇ. 14 : ದೆಹಲಿಯಲ್ಲಿರುವ ಪ್ರತಿ ರಾಜಕೀಯ ಪಕ್ಷಗಳ ಕಚೇರಿಗಳಲ್ಲಿ ಸರಕಾರ ರಚನೆಗೆ ಕುರಿತಂತೆ ಬಿರುಸಿನ ಚಟುವಟಿಕೆಗಳ ಆರಂಭವಾಗಿವೆ. ಚುನಾವಣೋತ್ತರ ಫಲಿತಾಂಶ ಬಂದ ನಂತರವಂತೂ ಚರ್ಚೆಗೆ ಇನ್ನಷ್ಟು ಇಂಬು ದೊರೆತಿದೆ. ಎಡಪಕ್ಷಗಳ ಕಚೇರಿಯಲ್ಲಿ ಮಹತ್ವದ ವಿಷಯದ ಬಗ್ಗೆ ಚರ್ಚೆ ನಡೆದಿದ್ದು, ಕೇಂದ್ರದ ರಕ್ಷಣಾ ಸಚಿವ ಎ ಕೆ ಎಂಟನಿ ಅವರನ್ನು ಪ್ರಧಾನಮಂತ್ರಿ ಮಾಡಿದರೆ ಯುಪಿಎ ಬೆಂಬಲ ನೀಡುವ ಕುರಿತು ಎಡಪಕ್ಷಗಳ ಮುಖಂಡರು ಒಲವು ತೋರಿಸಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ.

ಚುನಾವಣೋತ್ತರ ಫಲಿತಾಂಶದ ಆಧಾರದ ಮೇಲೆ ಯಾವುದೇ ಒಂದು ಪಕ್ಷಕ್ಕೆ ಬಹುಮತ ಬರುವುದು ಅಸಾಧ್ಯ ಎಂಬ ಅಂಶದ ಬೆನ್ನಲ್ಲೇ ಎಡಪಕ್ಷಗಳು ಕೂಡಾ ತೃತೀಯ ರಂಗದೊಂದಿಗೆ ಸರಕಾರ ರಚಿಸಬೇಕೇ, ಕಾಂಗ್ರೆಸ್ ನೇತೃತ್ವ ಯುಪಿಎಯೊಂದಿಗೆ ಮತ್ತೆ ಕೈಜೋಡಿಸಬೇಕೇ ಎನ್ನುವ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಅಮೆರಿಕದೊಂದಿಗೆ ಮನಮೋಹನ್ ಸಿಂಗ್ ನೇತೃತ್ವದ ಸರಕಾರ ಮಾಡಿಕೊಂಡಿರುವ ನಾಗರಿಕ ಪರಮಾಣು ಒಪ್ಪಂದ ರದ್ದುಗೊಳಿಸಬೇಕು. ಹಾಗೂ ಕೇರಳದ ಹಿರಿಯ ಕಾಂಗ್ರೆಸ್ ಮುಖಂಡ ಎ ಕೆ ಎಂಟನಿ ಅವರನ್ನು ಪ್ರಧಾನಿ ಮಾಡಬೇಕು. ಈ ಎರಡು ಷರತ್ತಿಗೆ ಸೋನಿಯಾ ಗಾಂಧಿ ಒಪ್ಪಿಕೊಂಡರೆ ಯುಪಿಎ ಸರಕಾರಕ್ಕೆ ಬಾಹ್ಯ ಬೆಂಬಲ ನೀಡುವ ಕುರಿತು ಎಡಪಕ್ಷಗಳ ಮುಖಂಡರು ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಎಂಟನಿ ಅವರು ಕಾಂಗ್ರೆಸ್ ಪಕ್ಷ ಹಾಗೂ ಎಡಪಕ್ಷಗಳ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕೇರಳದ ಕಾಂಗ್ರೆಸ್ಸಿಗರಲ್ಲಿ ಎಂಟನಿ ಪ್ರಧಾನಿಯಾಗುವುದಕ್ಕೆ ಸಂಪೂರ್ಣ ಸಹಮತವಿದೆ. ಆದರೆ, ಎಡಪಕ್ಷಗಳಲ್ಲಿ ಎಲ್ಲ ನಾಯಕರಿಗೂ ಇದಕ್ಕೆ ಸಹಮತವಿಲ್ಲ. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಕಾಂಗ್ರೆಸ್ ಪಕ್ಷದ ಸಹವಾಸವೇ ಬೇಡ ಎನ್ನುತ್ತಿದ್ದರೆ, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ಎ ಕೆ ಎಂಟನಿ ಪ್ರಧಾನಿ ಮಾಡಿದರೆ ಬಾಹ್ಯ ಬೆಂಬಲ ನೀಡಲು ಅಡ್ಡಿಯಿಲ್ಲ ಎಂದಿದ್ದಾರೆ.

ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನಾವು ನಮ್ಮ ಕೆಲ ನಿರ್ಧಾರಗಳನ್ನು ರಾಜೀ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ ಎಂದು ಮೂಲಗಳ ತಿಳಿಸಿವೆ. ಒಟ್ಟಿನಲ್ಲಿ ಕೇರಳದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಎಐಸಿಸಿಯಲ್ಲಿ ಹಲವು ಉನ್ನತ ಹುದ್ದೆಗಳನ್ನು ನಿರ್ವಹಿಸಿದ ಅನುಭವವಿರುವ ಎಂಟನಿ ಅವರಿಗೆ ಪ್ರಧಾನಿ ಆಗುವ ಯೋಗ ಬಂದರೆ ಅಚ್ಚರಿಯಿಲ್ಲ.

(ಏಜನ್ಸೀಸ್)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X