• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಹುಲ್ ಗಾಂಧಿಯತ್ತ ಕಾಂಗ್ರೆಸ್ ಚಿತ್ತ

By Staff
|

ಕಾಂಗ್ರೆಸ್ ಪಕ್ಷದಲ್ಲಿ ಡಾ.ಸಿಂಗ್ ಹೊರತುಪಡಿಸಿದರೆ ಎಲ್ಲರೂ ಒಪ್ಪುವ ನಾಯಕ ಅಂತಾದರೆ ಸೋನಿಯಾರನ್ನು ಬಿಟ್ಟರೆ ರಾಹುಲ್ ಗಾಂಧಿ ಮಾತ್ರ. ಇಂಥ ಪರಿಸ್ಥಿತಿ ಫಲಿತಾಂಶದ ಬಳಿಕ ನಿರ್ಮಾಣವಾದರೆ ಅಚ್ಚರಿ ಪಡಬೇಕಾಗಿಲ್ಲ. ಡಾ.ಸಿಂಗ್ ಪ್ರಧಾನಿಯಾದರೆ ಬೆಂಬಲವಿಲ್ಲ, ಅವರಲ್ಲದ ನಾಯಕ ಆದರೆ ಓಕೆ ಅಂತ ಎಡರಂಗ ಕ್ಯಾತೆ ತೆಗೆದರೆ ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಹೆಸರು ತೇಲಿಬರವುದು ಗ್ಯಾರಂಟಿ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ಸಿನಲ್ಲಿಯೇ ಸಾಕಷ್ಟು ಬೆಳವಣಿಗೆಗಳಾಗುತ್ತಿವೆ.

* ಚಿದಂಬರ ಬೈಕಂಪಾಡಿ, ಮಂಗಳೂರು

ಹದಿನೈದನೇ ಲೋಕಸಭೆಗೆ ಕೊನೆಯ ಹಂತದ ಮತದಾನ ಸಮೀಪಿಸುತ್ತಿರುವಂತೆಯೇ ರಾಜಕೀಯ ಪಕ್ಷಗಳಿಗೆ ದಿಗಿಲಾವರಿಸುತ್ತಿದೆ. ಎನ್‌ಡಿಎ, ಯುಪಿಎ ಮತ್ತು ತೃತೀಯರಂಗ ತಮ್ಮ ಬಲವರ್ಧನೆಗೆ ಕಸರತ್ತು ನಡೆಸಿವೆ. ಮೇ ಹದಿನಾರರಂದು ಹೊರಬರುವ ಫಲಿತಾಂಶ ಈ ರಾಜಕೀಯ ಪಕ್ಷಗಳಿಗೆ ಬಹುತೇಕ ಗೊತ್ತಾದಂತಿದೆ. ಯಾವುದೇ ಪಕ್ಷಕ್ಕೂ ನಿಚ್ಚಳ ಬಹುಮತ ಸಿಗದು. ಮತ್ತೆ ಕಿಚಡಿ ಸರ್ಕಾರ ಎನುವುದು ಖಾತ್ರಿ. ತಾವಿದ್ದ ನೆಲೆಗಳನ್ನು ಭದ್ರಪಡಿಸುವ ನಿಟ್ಟಿನಲ್ಲಿ ಪಕ್ಷಗಳೇ ಪಕ್ಷಾಂತರ ಮಾಡುತ್ತಿವೆ ಅಥವಾ ನಿಷ್ಠೆಯನ್ನು ಬದಲಿಸುತ್ತಿವೆ.

ಎನ್‌ಡಿಎ ಮ್ಯಾಜಿಕ್ ಸಂಖ್ಯೆ ಕ್ರೋಢೀಕರಿಸಿಕೊಂಡರೆ ಪ್ರಧಾನಿ ಹುದ್ದೆಗೆ ಆಡ್ವಾಣಿ ಏರಬಲ್ಲರು ಅಥವಾ ಅವರನ್ನು ಆ ಹುದ್ದೆಗೆ ಕುಳ್ಳಿರಿಸಲು ಆ ಪಕ್ಷ ಯಶಸ್ಸು ಕಂಡುಕೊಳ್ಳಬಹುದು. ಆದರೆ ಯುಪಿಎ ಮತ್ತು ತೃತೀಯರಂಗದಲ್ಲಿ ಹೊಸತಲ್ಲಣಗಳು ಕಾಣಿಸಲಿವೆ. ಯಾಕೆಂದರೆ ಈಗಿನ ಕಾಂಗ್ರೆಸ್ ಪಕ್ಷದೊಳಗಿನ ನಡೆಗಳು ಅಂಥ ಸೂಚನೆಗಳನ್ನು ಕೊಡುತ್ತಿದೆ.

ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ಮಟ್ಟಿಗೆ ಪ್ರಧಾನಿ ಹುದ್ದೆ ಅಭ್ಯರ್ಥಿಯಲ್ಲಿ ಗೊಂದಲ ಇರಲಿಲ್ಲ, ಡಾ.ಮನನೋಹನ್ ಸಿಂಗ್ ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿ ಮಟ್ಟಿಗೆ ಏಕೈಕ ಆಯ್ಕೆ. ನಾಲ್ಕನೇ ಹಂತದ ಚುನಾವಣೆ ಮುಗಿಯುವ ಮುನ್ನವೇ ಕಾಂಗ್ರೆಸ್ ಪಾಳೆಯದೊಳಗೆ ಗುಸುಗುಸು ಕೇಳತೊಡಗಿತು. ಸ್ವತಃ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮಾತನಾಡಲು ತೊಡಗಿದರು. ತೃತೀಯರಂಗದಲ್ಲೂ ತಮ್ಮ ನಾಯಕನ ಆಯ್ಕೆಯ ಕುರಿತು ಮಾತುಗಳು ಕೇಳಿಸತೊಡಗಿದವು. ಇವಿಷ್ಟೇ ಆಗಿದ್ದರೆ ಸುಮ್ಮವಿರಬಹುದಿತ್ತು.

ರಾಹುಲ್ ಗಾಂಧಿ ಮನಬಿಚ್ಚಿ ಮಾತನಾಡುತ್ತಾ ಎಡಪಕ್ಷಗಳನ್ನು ಮೆಚ್ಚಿದ್ದಾರೆ, ಚಂದ್ರಬಾಬು ನಾಯ್ಡು ಅವರನ್ನೂ ಹೊಗಳಿದ್ದಾರೆ. ಡಾ.ಮನಮೋಹನ್ ಸಿಂಗ್ ಅವರಿಗೂ ರಾಹುಲ್ ಪ್ರಬುದ್ಧ ಆಗುತ್ತಿರುವುದು ಗೋಚರವಾಗುತ್ತಿದೆ. ತಾಯಿ ಸೋನಿಯಾರಿಗೂ ತೃಪ್ತಿ ಇದೆ. ಸಹೋದರನ ಬಗ್ಗೆ ಪ್ರಿಯಾಂಕಾಗೂ ಭರವಸೆ ಮೂಡುತ್ತಿದೆ. ಎಲ್ಲಾ ದಿಕ್ಕುಗಳಲ್ಲೂ ಕಾಂಗ್ರೆಸ್ ಮಟ್ಟಿಗೆ ಶುಭಸೂಚನೆಗಳೇ ಗೋಚರಿಸುತ್ತಿವೆ.

ಚುನಾವಣಾ ಫಲಿತಾಂಶ ಹೊರಬಿದ್ದ ಮೇಲೆ ಬಲಾಬಲ ಆಧರಿಸಿ ಹೊಸ ಸಮೀಕರಣಗಳು ನಡೆಯುವ ಅನಿವಾರ್ಯತೆ ಬರಲಿದೆ. ಎನ್‌ಡಿಎಯನ್ನು ಅಧಿಕಾರದ ಗದ್ದುಗೆಯಿಂದ ದೂರಸರಿಸಲು ಕಾಂಗ್ರೆಸ್ ಮಾಡುವಷ್ಟೇ ಪ್ರಯತ್ನವನ್ನು ತೃತೀಯರಂಗವೂ ಮಾಡಲಿದೆ. ನಾಲ್ಕನೇ ರಂಗದ ಆಶಯವೂ ಎನ್‌ಡಿಎ ಅಧಿಕಾರ ಹಿಡಿಯಬೇಕೆಂದು ಇರಲು ಸಾಧ್ಯವಿಲ್ಲ. ಇಂಥ ಸನ್ನಿವೇಶ ನಿರ್ಮಾಣವಾದರೆ ಕಾಂಗ್ರೆಸ್ ನಾಯಕತ್ವದ ಯುಪಿಎಗೆ ಹಾದಿ ಸುಗಮವಾಗಲಿದೆ.

ಎಡಪಕ್ಷಗಳಿಗೆ ಇರುವ ಮುನಿಸು ಸೋನಿಯಾರ ಮೇಲೆ ಎನ್ನುವುದಕ್ಕಿಂತಲೂ ಡಾ.ಮನಮೋಹನ್ ಸಿಂಗ್ ಮೇಲೆ ಎನ್ನುವುದು ಗುರುತಿಸಬೇಕಾದ ಮುಖ್ಯ ಸಂಗತಿ. ಅಣು ಒಪ್ಪಂದಕ್ಕೆ ಸಹಿ ಬೀಳಲು ಡಾ.ಮನಮೋಹನ್ ಸಿಂಗ್ ಅವರೊಳಗಿನ ಅಧಿಕಾರಶಾಹಿ ಗುಣ ಕಾರಣ ಎನ್ನುವುದನ್ನು ಎಡಪಕ್ಷಗಳು ಅರಿತಿವೆ. ಈ ಕಾರಣದಿಂದಲೇ ಆ ಪಕ್ಷಗಳು ಕಾಂಗ್ರೆಸ್ ಪಕ್ಷವನ್ನು ಒಟ್ಟಾಗಿ ವಿರೋಧಿಸುತ್ತಿವೆ ಎನ್ನುವುದಕ್ಕಿಂತಲೂ ಡಾ.ಸಿಂಗ್ ಅವರ ನಾಯಕತ್ವವನ್ನು ವಿರೋಧಿಸುತ್ತಿವೆ ಅಂದುಕೊಳ್ಳವುದು ಸೂಕ್ತ. ಈ ಕಾರಣದಿಂದ ಫಲಿತಾಂಶದ ಬಳಿಕ ಉಂಟಾಗುವ ಹೊಸ ಸಮೀಕರಣದಲ್ಲಿ ಎಡಪಕ್ಷಗಳು ಅಧಿಕಾರಕ್ಕೆ ಯಾರು ಬರಬೇಕು ಮತ್ತು ಯಾರು ಪ್ರಧಾನಿಯಾಗಬೇಕು ಎನ್ನುವುದನ್ನು ನಿರ್ಣಯಿಸುವಂತಾದರೆ ತಲ್ಲಣಗಳು ಏಳುತ್ತವೆ.

ಕಾಂಗ್ರೆಸ್ ಪಕ್ಷದಲ್ಲಿ ಡಾ.ಸಿಂಗ್ ಹೊರತುಪಡಿಸಿದರೆ ಎಲ್ಲರೂ ಒಪ್ಪುವ ನಾಯಕ ಅಂತಾದರೆ ಸೋನಿಯಾರನ್ನು ಬಿಟ್ಟರೆ ರಾಹುಲ್ ಗಾಂಧಿ ಮಾತ್ರ. ಇಂಥ ಪರಿಸ್ಥಿತಿ ಫಲಿತಾಂಶದ ಬಳಿಕ ನಿರ್ಮಾಣವಾದರೆ ಅಚ್ಚರಿ ಪಡಬೇಕಾಗಿಲ್ಲ. ಈ ಹಂತದಲ್ಲಿ ಎಡಪಕ್ಷಗಳು ಪಟ್ಟು ಹಾಕುತ್ತವೆ. ಡಾ.ಸಿಂಗ್ ಪ್ರಧಾನಿಯಾದರೆ ಬೆಂಬಲವಿಲ್ಲ, ಅವರಲ್ಲದ ನಾಯಕ ಆದರೆ ಓಕೆ ಅಂದರೆ ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಹೆಸರು ತೇಲಿಬರಲಿದೆ. ಎಡಪಕ್ಷಗಳು ಕೂಡಾ ಈ ಹೆಸರಿಗೆ ವಿರೋಧ ಸೂಚಿಸಲಾರವು. ಹೊಸಪೀಳಿಗೆಗೆ ಅವಕಾಶ ಮಾಡಿಕೊಡಲು ಕಾಂಗ್ರೆಸ್ ಮುಂದಾದರೆ ಎಡಪಕ್ಷಗಳು ಮುಕ್ತಮನಸ್ಸಿಂದ ಬೆಂಬಲಿಸಬಹುದು.

ಹೀಗೆಯೇ ಆದರೆ ಡಾ.ಸಿಂಗ್ ಕೂಡಾ ಸಹಮತ ಸೂಚಿಸಬಹುದು. ಇಂಥ ರಾಜಕೀಯ ನಡೆಗಳ ಸಾಧ್ಯತೆಯೇ ಗೋಚರಿಸುತ್ತಿದೆ. ರಾಹುಲ್ ಎಳಸು ಅಂದುಕೊಂಡರೂ ಪ್ರಣಬ್ ಅವರಂಥ ಹಿರಿಯರು ನೆಹರೂ ಕುಡಿಯನ್ನು ಪೋಷಿಸದಿರಲು ಹೇಗೆ ಸಾಧ್ಯ? ಕೊನೆಗೆ ಹೇಳುವ ಮಾತೆಂದರೆ-ಯಾರಿಗೂ ಬಹುಮತ ಬರದ ಕಾರಣ, ಮತ್ತೊಂದು ಚುನಾವಣೆ ಹೊರೆಯಿಂದ ಜನರನ್ನು ಮುಕ್ತರಾಗಿಸಲು ಹೊಸ ಸಮೀಕರಣಕ್ಕೆ ಒಗ್ಗಿಕೊಳ್ಳಬೇಕಾಯಿತು. ಈ ಮೂಲಕ ದೇಶದ ಚರಿತ್ರೆಯಲ್ಲಿ ಹೊಸ ಅಧ್ಯಾಯ ಆರಂಭವಾಗದು ಎನ್ನುವುದಕ್ಕೆ ಏನು ಗ್ಯಾರಂಟಿ?

ರಾಜಕೀಯದಲ್ಲಿ ಇಂಥ ನಡೆಗಳು ಸಹಜ. ಆದ್ದರಿಂದಲೇ ರಾಜಕೀಯ ನಿಂತ ನೀರಲ್ಲ ಅನ್ನುವುದು.

ವಿಡಂಬನೆ

ಮಹಾನ್ ಭಾರತಕ್ಕೆ ಎಷ್ಟೊಂದು ಪ್ರಧಾನಿಗಳು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X