ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತಿನ ಸಮರ ಆಯ್ತು-ಇಂದು ಮತ ಸಮರ

By * ಚಿದು, ಮಂಗಳೂರು
|
Google Oneindia Kannada News

ಹದಿನೈದನೇ ಲೋಕಸಭೆಯನ್ನು ಕರ್ನಾಟಕದಿಂದ ಯಾರು ಪ್ರವೇಶಿಸಬೇಕೆಂದು ನಿರ್ಧರಿಸಲು ಇಂದು ಮತದಾರರಿಗೆ ದೊಡ್ಡ ಅವಕಾಶ ಸಿಕ್ಕಿದೆ. ಮುಂದಿನ ಐದು ವರ್ಷಗಳವರೆಗೆ ಕೇಳಿದರೂ ಸಿಗದು ಮತ್ತೊಂದು ಅವಕಾಶ. ನಿಮಗಿರುವ ಪ್ರೀತಿ, ಸಿಟ್ಟು, ಆಕ್ರೋಷವನ್ನು ಅಭಿವ್ಯಕ್ತಿಸಲು ಇರುವುದಿದೊಂದೇ ಅಸ್ತ್ರ.

ಎರಡನೇ ಹಂತದ ಹನ್ನೊಂದು ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಹಲವು ಮಂದಿಯ ರಾಜಕೀಯ ಭವಿಷ್ಯ ಅಡಗಿದೆ. ಕಾಂಗ್ರೆಸ್ ಪಕ್ಷದ ಎಸ್.ಬಂಗಾರಪ್ಪ, ಬಿ.ಜನಾರ್ಧನ ಪೂಜಾರಿ, ಚಿತ್ರ ನಟ ಅಂಬರೀಷ್, ಕೆ.ಜಯಪ್ರಕಾಶ್ ಹೆಗ್ಡೆ ಅವರ ಕಡೆಯ ಇನ್ನಿಂಗ್ಸ್ ಅಂದುಕೊಳ್ಳಬಹುದು. ಇವರೆಲ್ಲರಿಗೂ ರಾಜಕೀಯ ಜಿದ್ದು ಇದ್ದರೂ ಮತದಾರರು ಮತ್ತೊಮ್ಮೆ ಇವರನ್ನೇ ಬಯಸುತ್ತಾರೆಂದು ಹೇಳಲಾಗದು. ಜೊತೆಗೆ ಇವರಿಗೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂಬ ಛಲ ಇರುತ್ತದೆಂದು ಹೇಳಲಾಗದು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತೆ ಕಣಕ್ಕಿಳಿದಿರುವುದೂ ಕೂಡಾ ದೂರದೃಷ್ಟಿ ಇಟ್ಟುಕೊಂಡೇ. ತೃತೀಯ ರಂಗ ಹುಟ್ಟಲು ಕಾರಣರಾಗಿರುವ ಗೌಡರು ಸುಮ್ಮನೆ ಕಣಕ್ಕಿಳಿದಿಲ್ಲ. ಅವರ ಯೋಚನಾ ಲಹರಿ ಎಲ್ಲರ ಕಲ್ಪನೆಗೂ ಮೀರಿದ್ದು. ಹಾಸನದಲ್ಲಿ ಗೌಡರು ಸ್ಪರ್ಧೆ ಮಾಡಿರುವುದರಿಂದ ಆ ಕಣಕ್ಕೂ ರಂಗು ಬಂದಿದೆ.

ಮೊದಲ ಹಂತದಲ್ಲಿ ಕಡಿಮೆ ಮತದಾನವಾಗಿರುವುದು ಆತಂಕಕಾರಿ ಬೆಳವಣಿಗೆ. ಈ ಕಾರಣಕ್ಕೆ ಎರಡನೇ ಹಂತದಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಉತ್ಸಾಹ ತೋರುತ್ತಾರೆಂಬ ನಂಬಿಕೆ. ಅತಂತ್ರ ವಿಧಾನಸಭೆ, ಲೋಕಸಭೆ ನಿರ್ಮಾಣವಾಗುವುದಕ್ಕೆ ಮತದಾರರೇ ಕಾರಣರು ಎನ್ನುವ ಆರೋಪವಿದೆ. ಯಾರು ಗೆದ್ದು ಬಂದರೇನಂತೆ? ಎನ್ನುವ ನಿರ್ಲಕ್ಷ್ಯದ ಕಾರಣದಿಂದಾಗಿಯೇ ಮತಗಟ್ಟೆಗೆ ಹೋಗದೆ ದೂರ ಉಳಿದು ನಂತರ ಆರಿಸಿಬಂದವರನ್ನು ದೂಷಿಸುವುದು ಸರಿಯಲ್ಲ. ಇಂದು ಮತಗಟ್ಟೆಗೆ ಹೋಗಿ ನಿಮಗೆ ಯಾರು ಬೇಕು ಆಯ್ಕೆ ಮಾಡಿ.

ಕಳೆದ ಲೋಕಸಭಾ ಚುನಾವಣೆ ಕಾಲಕ್ಕೆ ಒಂದು ಕೆ.ಜಿ ಅಕ್ಕಿಗೆ ಹತ್ತು ರುಪಾಯಿ ಇತ್ತು. ಈದಿನ ಕೆ.ಜಿ ಅಕ್ಕಿಗೆ 35 ರುಪಾಯಿ ಆಗಿದೆ. ಹಣ್ಣು ತರಕಾರಿಗಳ ಬೆಲೆಯಲ್ಲೂ ಗರಿಷ್ಟ ಏರಿಕೆಯಾಗಿದೆ. ಆರ್ಥಿಕ ಹಿಂಜರಿತದಿಂದ ದೇಶ ಮೊದಲೇ ತತ್ತರಿಸಿದೆ. ಭಯೋತ್ಪಾದನೆ ಪೆಡಂಭೂತವಾಗಿ ಕಾಡುತ್ತಿದೆ. ನಿಮ್ಮ ಮನೆಯಂಗಳದಲ್ಲೇ ಬಾಂಬ್ ಸಿಡಿಯಬಹುದಾದಂಥ ಸ್ಥಿತಿ ನಿರ್ಮಾಣವಾಗಿದೆ.

ಪಬ್ ದಾಳಿ ಸಹಿತ ಕಳೆದ ಒಂದು ವರ್ಷದಲ್ಲಿ ನಡೆದಿರುವ ಅನೇಕ ದಾಳಿಗಳು, ಗೋವಿನ ರಕ್ಷಣೆಗೆ ನಡೆದಿರುವ ಕಾರ್ಯಾಚರಣೆಗಳು, ಗೋವುಗಳನ್ನು ಸಾಗಾಟ ಮಾಡಲು ಬಳಸುತ್ತಿರುವ ತಂತ್ರಗಳು ಇವೆಲ್ಲವೂ ನೀವು ಮತಗಟ್ಟೆಗೆ ಹೋಗುವ ಮೊದಲು ಯೋಚಿಸಬೇಕಾದ ವಿಷಯಗಳು.

ಇವಿಷ್ಟೇ ಸಂಗತಿಗಳೆಂದುಕೊಳ್ಳಬೇಡಿ. ನಿಮ್ಮ ಮುಂದಿನ ದಿನಗಳು ಹೇಗಿರಬೇಕು? ಯಾರು ಆರಿಸಿಬಂದರೆ ಯಾರಿಗೆಷ್ಟು ಲಾಭ? ಸಮಾಜಕ್ಕೆಷ್ಟು ಪ್ರಯೋಜನ ಎನ್ನುವುದನ್ನು ಚಿಂತನೆ ಮಾಡಿ ಮತಾಸ್ತ್ರ ಬಳಕೆ ಮಾಡಿ, ಗುಡ್ ಲಕ್. ನಿಮ್ಮ ಆಯ್ಕೆ ನಿಮ್ಮ ಹಿತಕ್ಕಾಗಿ ಇರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X