ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾದುಕಾಸ್ತ್ರ ಪ್ರಯೋಗ ಪುರಾಣ

By Staff
|
Google Oneindia Kannada News

Chappal hurling is spreading like epidemic
ಭಾರತದಲ್ಲಿ ಗಣ್ಯರ ಮೇಲೆ ಚಪ್ಪಲಿ ಎಸೆಯುವ ಚಾಳಿ ಅಂಟುರೋಗದಂತೆ ಎಲ್ಲೆಡೆ ಹಬ್ಬುತ್ತಿರುವುದ ನೋಡಿದರೆ, ಇದೇನ ಸಭ್ಯತೆ ಇದೇನ ಸಂಸ್ಕೃತಿ ಹಾಡು ಪದೇಪದೇ ನೆನಪಿಗೆ ಬರುತ್ತದೆ. ಇಂದು ಒಬ್ಬನ ಮೇಲೆ ನಾಳೆ ಇನ್ನೊಬ್ಬನ ಮೇಲೆ. ಇಂಥವರಿಗೆ ಕ್ಷಮಾದಾನ ಮಾಡುವ 'ಸಭ್ಯತೆ' ಕೂಡ ಅಸಭ್ಯತೆಗೆ ದಾರಿ ಮಾಡಿಕೊಡುತ್ತಿದೆ. ಇಂಥ ಕೆಟ್ಟ ಸಂಪ್ರದಾಯಕ್ಕೆ ಪೂರ್ಣವಿರಾಮ ಹಾಕುವ ಮಾರ್ಗವಾದರೂ ಯಾವುದು?

* ಚಿದಂಬರ ಬೈಕಂಪಾಡಿ, ಮಂಗಳೂರು

ಗಣ್ಯ ವ್ಯಕ್ತಿಗಳ ಮೇಲೆ ಚಪ್ಪಲಿ ಎಸೆಯುವಂಥ ಕೆಟ್ಟ ಪರಂಪರೆ ಕರ್ನಾಟಕಕ್ಕೂ ಕಾಲಿಟ್ಟಿರುವುದು ದುರಾದೃಷ್ಟಕರ. ವೈಯಕ್ತಿಕವಾಗಿ ಒಲವು-ನಿಲುವು ಭಿನ್ನವಾಗಿರಬಹುದು. ಅಂಥ ನಿಲುವುಗಳನ್ನು ವ್ಯಕ್ತಪಡಿಸಲು ಪ್ರತಿಯೊಬ್ಬರೂ ಸ್ವತಂತ್ರರು. ಆದರೆ ಸಾರ್ವಜನಿಕವಾಗಿ ಚಪ್ಪಲಿ ಎಸೆದು ಸುದ್ದಿಯಾಗುವವರು ಕೊಡುವ ಸಂದೇಶವಾದರೂ ಏನು ಎನ್ನುವುದನ್ನು ಚಿಂತಿಸಬೇಕು.

ಚೆನ್ನರಾಯಪಟ್ಟಣದಲ್ಲಿ ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಯುವಕ ಆಕ್ರೋಷಿತನಾಗಿ ಚಪ್ಪಲಿ ಎಸೆದಿರುವುದು ಸಾರ್ವತ್ರಿಕವಾಗಿ ಖಂಡಿಸಲು ಯೋಗ್ಯ. ಚಪ್ಪಲಿ ಎಸೆದಿರುವ ಯುವಕ ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರಿದವನು ಎನ್ನುವ ಕಾರಣಕ್ಕೆ ಇದನ್ನು ಖಂಡಿಸಬೇಕೆಂದು ಹೇಳುತ್ತಿಲ್ಲ. ಯಡಿಯೂರಪ್ಪ ಅವರ ಮಾತುಗಳನ್ನು ಆ ಯುವಕನಂತೆಯೇ ಅನೇಕರು ಒಪ್ಪದಿರಬಹುದು. ಆದರೆ ಅವರ ಮಾತಿಗೆ ಚಪ್ಪಲಿ ಎಸೆದು ಪ್ರತಿಕ್ರಿಯಿಸಿರುವುದು ಆ ಯುವಕನ ಪಕ್ಷಕ್ಕೆ ಮತ್ತು ಅವನಿಗೆ ಶೋಭೆ ತರುವಂಥದ್ದಲ್ಲ.

ಕೇಂದ್ರ ಸಚಿವ ಚಿದಂಬರಂ ಅವರ ಮೇಲೆ ಪತ್ರಿಕಾಗೋಷ್ಠಿಯಲ್ಲಿ ಜರ್ನೈಲ್ ಸಿಂಗ್ ಎಂಬ ಪತ್ರಕರ್ತನೇ ಶೂ ಎಸೆದು ಹಾಕಿಕೊಟ್ಟ ಕೆಟ್ಟ ಸಂಪ್ರದಾಯ ಪ್ರಧಾನಿ ಡಾ.ಮನಮೋಹನ್ ಸಿಂಗ್, ಎಲ್.ಕೆ.ಅಡ್ವಾಣಿ ಅವರ ಮೇಲೂ ಪಾದುಕಾಸ್ತ್ರ ಪ್ರಯೋಗಿಸುವುದಕ್ಕೆ ನಾಂದಿಯಾಯಿತು. ಹಿರಿಯಣ್ಣ'ನಿಗೆ ಮೊದಲ ಪಾದುಕಾಸ್ತ್ರ ಪ್ರಯೋಗವಾಯ್ತು, ಅದು ಒತ್ತಟ್ಟಿಗಿರಲಿ.

ರಾಜಕೀಯ ಕಾರಣಗಳಿಗಾಗಿ ಚಿದಂಬರಂ, ಡಾ.ಮನಮೋಹನ್ ಸಿಂಗ್, ಅಡ್ವಾಣಿ ಪಾದುಕೆಗಳನ್ನು ಎಸೆದವರಿಗೆ ಕ್ಷಮೆ ದಯಪಾಲಿಸಿದರು. ಇದರ ಪರಿಣಾಮವಾಗಿ ಕೆಟ್ಟ ಕೆಲಸ ಮಾಡಿದವರು ಮಾಧ್ಯಮಗಳ ಬೆಳಕಿನಲ್ಲಿ ಹೊಳೆದರು. ಇದರ ಮುಂದುವರಿದ ಭಾಗವಾಗಿ ಚೆನ್ನರಾಯಪಟ್ಟಣದಲ್ಲಿ ಮುಖ್ಯಮಂತ್ರಿಗಳ ಮೇಲೆ ಚಪ್ಪಲಿ ಎಸೆಯಲಾಗಿದೆ. ಯುವಕನನ್ನು ಕ್ಷಮಿಸಬೇಕೆ? ಬೇಡವೇ? ಎನ್ನುವುದು ಅವರವರ ವೈಯಕ್ತಿಕ ವಿಚಾರವೆಂದು ಕೈಕಟ್ಟಿ ಕುಳಿತುಕೊಳ್ಳುವುದು ಸರಿಯಲ್ಲ.

ಅಂಗರಕ್ಷಕನೇ ಇಂದಿರಾ ಗಾಂಧಿಯನ್ನು ಕೊಲೆ ಮಾಡಿದ ಮೇಲೆ, ಪರ್ತಕರ್ತನ ಸೋಗಿನಲ್ಲಿ ಬಂದು ರಾಜೀವ್ ಗಾಂಧಿಯವರನ್ನು ಹತ್ಯೆಮಾಡಿದ ಘಟನೆ ನಂತರ ಆಗಿರುವ ರಕ್ಷಣಾ ಕಾರ್ಯಾಚರಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸ್ವಂತ ಅಂಗರಕ್ಷಕರನ್ನೂ ನಂಬುವಂತಿಲ್ಲ. ಪ್ರಜಾಪ್ರಭುತ್ವದ ಕಾವಲುಗಾರ ಎಂದೇ ಕರೆಯಲಾಗುತ್ತಿರುವ ಪತ್ರಿಕೋದ್ಯಮದಲ್ಲಿ ವರದಿಗಾರಿಕೆಯಲ್ಲಿರುವ ಮಂದಿಯ ಮೇಲೂ ಹದ್ದಿನ ಕಣ್ಣಿಡಲಾಗುತ್ತಿದೆ. ಚಿದು ಮೇಲೆ ಪತ್ರಕರ್ತ ಶೂ ಎಸೆದ ಮೇಲಂತೂ ಪತ್ರಕರ್ತರೇ ಹೇಸಿಗೆಪಟ್ಟುಕೊಳ್ಳುವಂತಾಗಿದೆ.

ಯಾಕೆ ಹೀಗಾಗುತ್ತಿದೆ ಅಂದರೆ ಇಂಥ ಕೆಟ್ಟ ಕೆಲಸ ಮಾಡಿದವರನ್ನು ಸುಲಭವಾಗಿ ಕ್ಷಮಿಸುವುದರಿಂದ ಮತ್ತು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಗೋಸುಂಬೆಗಳಾಗುವುದರಿಂದ. ಗಣ್ಯರ ಮೇಲೆ ಈಗಾಗಲೇ ಆಗಿರುವ ಪಾದುಕಾಸ್ತ್ರ ಪ್ರಯೋಗಗಳಾಗುತ್ತಿರುವುದರಿಂದ ಗಣ್ಯರು ಭಾಗವಹಿಸುವ ಸಭೆ, ಸಮಾರಂಭಗಳಿಗೆ ಚಪ್ಪಲಿ ಅಥವಾ ಶೂಧರಿಸಿ ಬರುವಂತಿಲ್ಲ ಅಂತೇನಾದರೂ ಹುಕುಂ ಹೊರಡಿಸಿದರೆ?

ಒಂದು ಘಟನೆ ಅನೇಕ ಪಾಠ ಕಲಿಸುತ್ತದೆ. ಆದರೆ ಪಾಠ ಕಲಿಯದಿದ್ದರೆ ಅದರಿಂದ ಆಗುವ ಅನಾಹುತಗಳು ಮತ್ತೂ ಅಪಾಯಕಾರಿ. ಕ್ಷಮೆ ಎನ್ನುವುದಕ್ಕೆ ಅರ್ಥವೇ ಇಲ್ಲವಾಗಿದೆ ಈಗ. ಕ್ಷಮಿಸುವಂಥ ಘಟನೆಗಳನ್ನು ಉದ್ದಕ್ಕೆ ಬೆಳೆಸುವ ರಾಜಕಾರಣಿಗಳು ಕಠಿಣ ಕ್ರಮ ಕೈಗೊಳ್ಳಬೇಕಾದಲ್ಲಿ ಹಸ್ತಕ್ಷೇಪ ಮಾಡುವುದು ರೂಢಿಯಾಗಿದೆ. ಆದ್ದರಿಂದಲೇ ಪಾದುಕಾಸ್ತ್ರಪ್ರಯೋಗವೂ ಮಜಾ ತೆಗೆದುಕೊಳ್ಳುವ ಸಂಗತಿಯಾಗಿದೆ. ಹೆತ್ತವರಿಗೆ ಚಪ್ಪಲಿಯಿಂದ ಹೊಡೆದರೆ ಸಹಿಸಿಕೊಳ್ಳುವುದು ಸಾಧ್ಯವೇ? ನಮ್ಮ ಮೇಲೆಯೇ ಪಾದುಕಾಸ್ತ್ರಪ್ರಯೋಗ ಮಾಡಿದರೆ ಸುಮ್ಮನಿರುತ್ತೇವೆಯೇ? ಹಾಗಾದರೆ ಸಾರ್ವಜನಿಕವಾಗಿ ಇಂಥ ಘಟನೆಗಳು ನಡೆದಾಗ ನಾವು ಉದಾರಿಗಳಾಗುವುದು ಎಷ್ಟು ಸರಿ? ಏನು ಮಾಡಬೇಕು ನೀವೇ ಯೋಚಿಸಿ. ಇದು ಸಾರ್ವಜನಿಕವಾಗಿ ಚರ್ಚೆಯಾಗಿ ಶಾಶ್ವತ ಪರಿಹಾರಕ್ಕೆ ನಾಂದಿಯಾಗಲಿ.

ಪೂರಕ ಓದಿಗೆ

'ಉಡುಗೊರೆ'ಯಾಗಿ ಬಂದ ಚಪ್ಪಲಿಗೆ ಮ್ಯೂಸಿಯಂ!'ಉಡುಗೊರೆ'ಯಾಗಿ ಬಂದ ಚಪ್ಪಲಿಗೆ ಮ್ಯೂಸಿಯಂ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X