ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾವಳಿಯಲ್ಲಿ ರೈಲು ಬಿಡುತ್ತಿರುವ ರಾಜಕಾರಣಿಗಳು!

By Staff
|
Google Oneindia Kannada News

Chidambar Baikampady, Mangaluru
ಮಹಾಸಮರದ ಕೊನೆಯ ದಿನಗಳು ಸಮೀಪಿಸುತ್ತಿವೆ. ರಾಜಕೀಯ ಪಕ್ಷಗಳು ಮತದಾರರ ಮನಗೆಲ್ಲಲು ಕಸರತ್ತಿನಲ್ಲಿ ನಿರತರಾಗಿದ್ದಾರೆ. ಆದರೆ ಮತದಾರರು ಬುದ್ದಿವಂತರು ಎನ್ನುವ ಸಾಮಾನ್ಯ ಸಂಗತಿಯನ್ನು ರಾಜಕಾರಣಿಗಳು ಮರೆತಿದ್ದಾರೆ. ಐದು ವರ್ಷಕ್ಕೊಮ್ಮೆ ಚುನಾವಣೆಯ ಸಂದರ್ಭದಲ್ಲಿ ಏನಾದರೊಂದು ಭರವಸೆ ಕೊಟ್ಟು ವೋಟು ಗಿಟ್ಟಿಸಿಕೊಂಡರೆ ಆಯ್ತು, ಅವರಿಗೆ ಮತ್ತೊಂದು ಚುನಾವಣೆ ಹೊತ್ತಿಗೆ ಹಿಂದಿನ ಚುನಾವಣೆಯಲ್ಲಿ ಕೊಟ್ಟ ಭರವಸೆ ಮರೆತು ಹೋಗಿರುತ್ತೆ ಅಂದುಕೊಂಡಿದ್ದಾರೆ. ಆದರೆ ಈಗಿನ ಮತದಾರರು ಅಷ್ಟುಸುಲಭವಾಗಿ ಮರೆಯುವವರಲ್ಲ ಎನ್ನುವುದು ಇವರಿಗೆ ಗೊತ್ತಿಲ್ಲ.

* ಚಿದಂಬರ ಬೈಕಂಪಾಡಿ, ಮಂಗಳೂರು

ನಾಲ್ಕು ಲೋಕಸಭಾ ಚುನಾವಣೆಗಳು ಕಳೆದವು ಮಂಗಳೂರು-ಬೆಂಗಳೂರು ಬ್ರಾಡ್‌ಗೇಜ್ ರೈಲು ಹಳಿಪರಿವರ್ತನೆ ಕಾಮಗಾರಿ ಆರಂಭವಾದಮೇಲೆ. ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದರು, ಕೇಂದ್ರದಲ್ಲಿ ಸುರೇಶ್ ಕಲ್ಮಾಡಿ ರೈಲ್ವೇ ಮಂತ್ರಿಯಾಗಿದ್ದರು ಈ ಕಾಮಗಾರಿಗೆ ಶಿಲಾನ್ಯಾಸ ಮಾಡಿದಾಗ. ದೇವೇಗೌಡರು ಈ ದೇಶದ ಪ್ರಧಾನ ಮಂತ್ರಿಹುದ್ದೆ ಅನುಭವಿಸಿ ಇಳಿದರು. ಆಮೇಲೆ ಅನೇಕಮಂದಿ ಪ್ರಧಾನ ಮಂತ್ರಿಯಾದರು, ಮುಖ್ಯ ಮಂತ್ರಿಯಾದರು, ಆದರೆ ಮಂಗಳೂರು-ಬೆಂಗಳೂರು ಬ್ರಾಡ್‌ಗೇಜ್ ಕಾಮಗಾರಿ ಪೂರ್ಣವಾಗಿಲ್ಲ. ರಾತ್ರಿ ರೈಲು ಈ ಮಾರ್ಗದಲ್ಲಿ ಓಡುತ್ತಿದೆ, ಹಗಲು ಹೊತ್ತು ಗೂಡ್ಸ್ ರೈಲು ಸಂಚರಿಸುತ್ತಿವೆ. ಆದರೆ ಹಗಲು ಹೊತ್ತು ಪ್ರಯಾಣಿಕರ ರೈಲು ಸಂಚರಿಸಲು ಸಾಧ್ಯವಿಲ್ಲ, ಯಾಕೆಂದರೆ ಹಳಿಗಳು ಹಗಲು ರೈಲು ಸಂಚಾರಕ್ಕೆ ಸುರಕ್ಷಿತವಲ್ಲಂತೆ!

ಎಂಥ ದಡ್ಡರು ಜನರು ಮತ್ತು ಅದೆಂಥ ಜಾಣರು ಇಂಥ ರಿಪೋರ್ಟ್ ಕೊಟ್ಟ ಅಧಿಕಾರಿಗಳು ಅನ್ನಿಸುವುದಿಲ್ಲವೇ? ನಿಜಕ್ಕೂ ಇದು ವಾಸ್ತವ ಸತ್ಯ. ಇಂಥ ವರದಿ ಕೊಟ್ಟು ಕರಾವಳಿಯ ಬುದ್ದಿವಂಥ ಜನರನ್ನು ನಂಬಿಸಿದ್ದಾರೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ಕೂಡಾ ನಂಬಿದಂತೆ ನಟಿಸುತ್ತಿದ್ದಾರೆ. ರಾತ್ರಿ ರೈಲು ಇದೇ ಹಳಿಗಳ ಮೇಲೆ ಸಂಚರಿಸುತ್ತದೆ, ಹಗಲು ಹೊತ್ತು ಮೈನ್ಸ್ ಹೊತ್ತು ಗೂಡ್ಸ್ ಚಲಿಸುತ್ತವೆ, ಆದರೆ ಹಗಲು ರೈಲು ಸಂಚರಿಸಲು ಸುರಕ್ಷಿತವಲ್ಲ ಎನ್ನುವ ವರದಿಯನ್ನು ನಂಬಿ ಕುಳಿತಿರುವಂತೆ ಮಾಡಿರುವ ಅಧಿಕಾರಿಗಳ ಹಿಂದೆ ರಾಜಕಾರಣಿಗಳಿದ್ದಾರೆ ಎನ್ನುವ ಗುಮಾನಿ ಸುಳ್ಳಲ್ಲ.

ಇಷ್ಟಕ್ಕೂ ಇಂಥ ಆತ್ಮವಂಚನೆಯನ್ನು ಯಾಕೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ಮಾಡುತ್ತಿದ್ದಾರೆ ಎನ್ನುವುದು ಸುಲಭವಾಗಿ ಅರಿವಿಗೆ ಬರುವುದಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಈ ರೈಲಿನ ವಿಷಯವನ್ನೇ ಕೈಗೆತ್ತಿಕೊಂಡು ಧರಣಿ ಮಾಡಿವೆ, ರೈಲ್ ರೋಕೋ ಮಾಡಿವೆ, ಮುಂದೆಯೂ ಮಾಡುತ್ತವೆ ಸಂಶಯ ಬೇಡ.

ಕೇವಲ ಇವರ ಹೋರಾಟಕ್ಕಾಗಿಯೇ ಈ ಯೋಜನೆ ಹೀಗೆಯೇ ಇರಬೇಕೇ? ಎನ್ನುವುದು ಪ್ರಶ್ನೆ. ಹಾಸನದ ಮುಖ್ಯ ಬಸ್ ನಿಲ್ದಾಣದಲ್ಲಿ ಐದು ನಿಮಿಷ ಮೂಗು ಬಿಟ್ಟು ನಿಲ್ಲಲು ಆಗುತ್ತಿರಲಿಲ್ಲ 1995ರಲ್ಲಿ. ಅಂತೆಯೇ ಹೊಳೇನರಸೀಪುರ ಹೇಗಿತ್ತು ಆಗ ಎನ್ನುವುದನ್ನು ಊಹಿಸಿಕೊಳ್ಳಿ. ಆದರೆ ಈಗ ಹಾಸನ, ಹೊಳೇನರಸೀಪುರ ಬೆಂಗಳೂರು ಸಿಟಿಗಿಂತ ಕಡಿಮೆಯೇ? ದೇವೇಗೌಡರು ಅಥವಾ ಅವರ ಮಕ್ಕಳು ತವರು ಜಿಲ್ಲೆಯನ್ನು ಅಭಿವೃದ್ದಿಪಡಿಸಿರುವುದಕ್ಕೆ ಮತ್ಸರಪಡುವುದಲ್ಲ. ಆದರೆ ಉಳಿದ ಹಳ್ಳಿಗಳ ಬಗ್ಗೆಯೂ ಗೌಡರಿಗೆ ಕಾಳಜಿ ಇರಬೇಕಿತ್ತು. ದೇವೇಗೌಡರು ಮಂಗಳೂರು-ಬೆಂಗಳೂರು ರೈಲ್ವೇ ಯೋಜನೆಗೆ ಮೀಸಲಿರಿಸಿದ್ದ ಹಣವನ್ನು ಪ್ರಧಾನ ಮಂತ್ರಿಯಾಗಿದ್ದಾಗ ಹಾಸನಕ್ಕೆ ವರ್ಗಾಯಿಸಿದ್ದರು ಎನ್ನುವ ಆರೋಪವಿದೆ.

ಆದರೆ ಕರಾವಳಿ ಭಾಗದ ರಾಜಕಾರಣಿಗಳು ಕಮಿಟ್‌ಮೆಂಟ್ ಕಳೆದುಕೊಂಡಿದ್ದಾರೆ. ಗೆಲ್ಲುವುದೇ ಪರಮಗುರಿ ಇವರಿಗೆ. ಆದರೆ ಲೋಕಸಭೆ ಪ್ರವೇಶಿಸಿ ಮಾಡಿದ ಸಾಧನೆ ಏನು ಎನ್ನುವುದನ್ನು ಇವರು ಬಹಿರಂಗವಾಗಿ ಹೇಳಿ ಮತಯಾಚನೆ ಮಾಡಬೇಕು. ಅಂಥ ಎದೆಗಾರಿಕೆ ತೋರಿಸುವ ರಾಜಕಾರಣಿಗಳ ಅಗತ್ಯವಿದೆ ಕರಾವಳಿಗೆ. ಇದು ಸ್ಪರ್ಧಾತ್ಮಕವಾದ ಯುಗ. ಒಂದು ಕ್ಷಣ ಯಾಮಾರಿದರೂ ಸಾಕು ಒಂದು ದಶಕದಷ್ಟು ಹಿಂದಕ್ಕೆ ತಳ್ಳಿ ಓಡುತ್ತಾರೆ ಮತಿಯಿದ್ದವರು.

ಏನೇ ಆದರೂ ಮತ್ತೊಂದು ಮಹಾಚುನಾವಣೆಗೂ ಮಂಗಳೂರು-ಬೆಂಗಳೂರು ರೈಲು ಚರ್ಚೆಗೆ ವಿಷಯವಾಗದಿರಲಿ ಎನ್ನುವುದು ರಾಜಕಾರಣಿಗಳಿಲ್ಲಿ ಮತ್ತು ಚುನಾಯಿಸುವ ಮತದಾರರಲ್ಲಿ ಕೋರಿಕೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X