ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ರಾಜಕಾರಣಿಗಳು ಎಂಥವರೆಂದರೆ...

By Staff
|
Google Oneindia Kannada News

These are our politicians!
ಚುನಾವಣೆ ಬಂತೆಂದರೆ ಸಾಕು, 'ದಾಸನ ಮಾಡಿಕೊ ಎನ್ನ, ಸ್ವಾಮಿ, ಸಾಸಿರ ನಾಮದ ಪ್ರಿಯ ಮತದಾರ', ಎಂದು ಮತದಾರನನ್ನು ಪ್ರಾರ್ಥಿಸುವ ಇವರು ಚುನಾವಣೆ ಮುಗಿದ ಬೆನ್ನಿಗೇ, 'ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ವೋಟಿನ ಬಲವೊಂದ್ ಸಿಕ್ತಲ್ಲ, ಸಾಕೋ', ಎಂದು ಮತದಾರನಿಗೆ ಬೆನ್ನುಹಾಕಿ ತಮ್ಮ ದಂತಗೋಪುರಗಳೆಡೆಗೆ ಹೊರಟುಹೋಗುತ್ತಾರೆ.

* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ಅವನೊಬ್ಬ ವ್ಯಾಪಾರಿ. ಭಾರೀ ಶ್ರೀಮಂತ. ಆದರೂ ತೀರದ ಧನದಾಹ. ವರದಕ್ಷಿಣೆ ವಿಷಯದಲ್ಲಿ ಸೊಸೆಯೊಡನೆ ಜಟಾಪಟಿಗಿಳಿದ ಆತ ಅದೊಂದು ದಿನ ಮಗನೊಡಗೂಡಿ ಸೀಮೆಎಣ್ಣೆ ಸುರಿದು ಸೊಸೆಯನ್ನು ಸುಟ್ಟುಹಾಕಿಬಿಟ್ಟ. ಕಾನೂನಿನ ಕೈಗೆ ತಾವಿಬ್ಬರು ಸಿಕ್ಕಿಬೀಳದಂತೆ ಎಲ್ಲ ಏರ್ಪಾಡುಗಳನ್ನೂ ಮಾಡಿದ. ಆದರೆ ಆ ಊರಿನ ಮಹಿಳಾ ಸಂಘಟನೆಗಳವರು ಅವನ ವಿರುದ್ಧ ಸಿಡಿದೆದ್ದರು. ಅವನ ಅಂಗಡಿಯ ಮುಂದೆ ಪ್ರತಿದಿನ ಧರಣಿ ಕೂತು ಅವನ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು. ಅವನ ಬಣ್ಣ ಬಯಲಿಗೆಳೆಯುವಂಥ ಭಿತ್ತಿಪತ್ರಗಳನ್ನು ಪ್ರದರ್ಶಿಸತೊಡಗಿದರು. ಅವನ ಅಂಗಡಿಯೆದುರೇ ಸಾರ್ವಜನಿಕವಾಗಿ ಅವನಿಗೆ ಛೀಮಾರಿ ಹಾಕತೊಡಗಿದರು.

ಅಂಗಡಿಯೊಳಗೆ ತಣ್ಣಗೆ ಕೂತು ಇವೆಲ್ಲವನ್ನೂ ಗಮನಿಸುತ್ತಿದ್ದ ಆ ವ್ಯಾಪಾರಿ ಅದೊಂದು ದಿನ ಹೊರಗೆ ಬಂದು ತನ್ನ ಅಂಗಡಿಯ ಕಟ್ಟೆಯಮೇಲೆ ಕುರ್ಚಿ ಹಾಕಿಕೊಂಡು ಈ ಪ್ರತಿಭಟನಕಾರರ ಎದುರೇ ಕೂತುಬಿಟ್ಟ. ಮಹಿಳೆಯರ ಪ್ರತಿಭಟನೆ ಕಾವೇರಿತು. ಈತ ನೋಡುತ್ತ ತಣ್ಣಗೆ ಕುಳಿತಿದ್ದ. ಹೀಗೇ ಹಲವು ದಿನಗಳು ಕಳೆದವು. ಮೊದಮೊದಲು ಕುತೂಹಲದಿಂದ ಅಂಗಡಿಯೆದುರು ಜಮಾಯಿಸುತ್ತಿದ್ದ ದಾರಿಹೋಕರು ಕ್ರಮೇಣ ಈ ಪ್ರತಿಭಟನೆಯೊಂದು ನಿತ್ಯವಿಧಿ ಎಂಬ ಧೋರಣೆಹೊಂದಿ ಆ ಕಡೆಗೆ ತಿರುಗಿಯೂ ನೋಡದೆ ತಮ್ಮ ಪಾಡಿಗೆ ತಾವು ಹೋಗತೊಡಗಿದರು. ಆ ಕೊಲೆಗಡುಕ ವ್ಯಾಪಾರಿ ಮಾತ್ರ ನಿತ್ಯವೂ ಪ್ರತಿಭಟನಕಾರರೆದುರು ಕುರ್ಚಿ ಹಾಕಿಕೊಂಡು ಕೂತು ಅವರ ಪ್ರತಿಭಟನೆಯನ್ನು ಎಂಜಾಯ್ ಮಾಡತೊಡಗಿದ.

ಮುಂದೇನಾಯಿತೆಂಬುದನ್ನು ಯಾರೂ ಊಹಿಸಬಹುದು. ದಿನಗಳೆದಂತೆ ಪ್ರತಿಭಟನೆಯ ಕಾವು ಇಳಿಯತೊಡಗಿತು. ಆ ವ್ಯಾಪಾರಿಯ ಭಂಡತನದೆದುರು ಪ್ರತಿಭಟನಕಾರರು ಸೋತುಹೋದರು. ಪ್ರತಿಭಟನೆ ಸ್ಥಗಿತಗೊಂಡಿತು. ಅದಾದ ಕೆಲವೇ ತಿಂಗಳುಗಳಲ್ಲಿ ಆ ಧೂರ್ತ ತನ್ನ ಮಗನಿಗೆ ಇನ್ನೊಂದು ಮದುವೆ ಮಾಡಿದ! ಭರ್ಜರಿ ವರದಕ್ಷಿಣೆ ಪೀಕಿದ. ಈಗಾತ ಆರಾಮಾಗಿದ್ದಾನೆ. ಇದು ಉತ್ತರ ಭಾರತದ ನಗರವೊಂದರಲ್ಲಿ ಕೆಲ ವರ್ಷಗಳ ಕೆಳಗೆ ನಡೆದ ಘಟನೆ. ನಮ್ಮ ಇಂದಿನ ರಾಜಕೀಯ ರಂಗವನ್ನು ಈ ಘಟನೆಗೆ ಪಸಂದಾಗಿ ಹೋಲಿಸಬಹುದು.

ನಮ್ಮ ರಾಜಕಾರಣಿಗಳು ಇಂದು ಪ್ರಜಾಪ್ರಭುತ್ವವನ್ನು ಸುಟ್ಟುಹಾಕುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಆಮಿಷವೆಂಬ ಸೀಮೆಎಣ್ಣೆ ಸುರಿದು ಪ್ರಚೋದನೆಯೆಂಬ ಬೆಂಕಿ ಹಚ್ಚಿ ಪ್ರಜೆಯ ಪ್ರಭುತ್ವವನ್ನು ದಹಿಸಿ ಆ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಂಡು ತಿಂದು ತೇಗುತ್ತಿದ್ದಾರೆ. ಅಧಿಕಾರ, ಕಾನೂನು ಮತ್ತು ವ್ಯವಸ್ಥೆಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡ ಅವರೆದುರು ಬಡಪಾಯಿ ಪ್ರಜೆಗಳ ಪ್ರತಿಭಟನೆಯೆಂಬುದು ಅರಣ್ಯರೋದನವಾಗುತ್ತಿದೆ. ಕೂಗಿ ಕೂಗಿ ಗಂಟಲು ಸೋತು ಸುಮ್ಮನಾಗುವುದೇ ಪ್ರಜೆಯ ಗತಿಯಾಗಿದೆ.

ಪ್ರತಿಭಟನಕಾರರೆದುರು ಭಂಡನಂತೆ ಕೂತು ಎಂಜಾಯ್ ಮಾಡುವ ಮೂಲಕ ಪ್ರತಿಭಟನೆಯ ಸೊಲ್ಲಡಗಿಸಿ ಕೊಲೆಯ ಕೃತ್ಯವನ್ನು ಗಪ್ ಮಾಡಿದ ಆ ದುಷ್ಟ ವ್ಯಾಪಾರಿಯಂತೆ ನಮ್ಮೀ ಭ್ರಷ್ಟ ರಾಜಕಾರಣಿಗಳು ಚುನಾವಣೆಯ ವೇಳೆ ಮತದಾರರೆದುರು ಜಗಭಂಡರಾಗಿ ನಿಂತು ಅದ್ಭುತವಾಗಿ ನಾಟಕವಾಡಿ ಮತ್ತು ಅಮಾಯಕ ಮತದಾರರನ್ನು ನಾನಾ ಆಮಿಷಗಳಿಗೆ ಬಲಿಯಾಗಿಸಿ ಗೆಲುವು ಸಾಧಿಸುವ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆಗೈದು ಅಧಿಕಾರಕ್ಕೇರುತ್ತಾರೆ.

ಇವರ ನಾಟಕ ಎಂಥ ಅದ್ಭುತ. ಬೇರೆ ಸಮಯದಲ್ಲಿ 'ಮೋಡಗಳ ಮಹಾಮಹಿಮ'ರಂತಾಡುವ ಇವರು ಚುನಾವಣೆಯ ಸಂದರ್ಭದಲ್ಲಿ 'ಧರೆಗಿಳಿದ ದಿವ್ಯತೇಜ'ರ ಪೋಸು ಕೊಡುತ್ತಾರೆ. ಜನಸಾಮಾನ್ಯರಿಂದ ದೂರವಾಗಿ ಸದಾಕಾಲ ದಂತಗೋಪುರಗಳಲ್ಲಿ ವಾಸಿಸುವ ಇವರು ಚುನಾವಣೆ ಘೋಷಿತವಾದಕೂಡಲೇ ಕೊಳೆಗೇರಿಗಳಿಗೆ ನುಗ್ಗಿ ಗುಡಿಸಲುಗಳ ಒಳಹೊಕ್ಕು ಬಡವರ ಸುಖಕಷ್ಟ ವಿಚಾರಿಸತೊಡಗುತ್ತಾರೆ. ಮನೆಯಲ್ಲಿ ತಮ್ಮ ಮಕ್ಕಳನ್ನೇ ಎತ್ತಿಕೊಳ್ಳದವರು ಕೊಳೆಗೇರಿಯಲ್ಲಿ ಹಸುಗೂಸುಗಳನ್ನು ಎತ್ತಿ ಮುದ್ದಾಡುತ್ತಾರೆ! ಸದಾಕಾಲ ಅಟ್ಟಹಾಸದಿಂದ ಮೆರೆಯುವ ಇವರು ಚುನಾವಣೆ ಬಂತೆಂದರೆ ಸಾಕು, ಕಂಡಕಂಡ ವೃದ್ಧರ ಕಾಲುಗಳಿಗೆ ಬೀಳುತ್ತಾರೆ. ಮನದೊಳಗೆ ಗಾಢವಾದ ಜಾತಿಭಾವವನ್ನೂ ಮತಮತ್ಸರವನ್ನೂ ಇಟ್ಟುಕೊಂಡು ಇವರು ಹೊರಗೆ ಜಾತ್ಯತೀತರ ಪೋಸು ಕೊಡುತ್ತಾರೆ, ಮತೀಯ ಸೌಹಾರ್ದದ ಉಪದೇಶ ನೀಡುತ್ತಾರೆ. ತಮ್ಮ ಮಠಮಂದಿರ ಮಸೀದಿ ಚರ್ಚುಗಳಲ್ಲೇ ಜಾತಿ, ಉಪಜಾತಿ, ವರ್ಗ, ಇತ್ಯಾದಿ ಆಧಾರದಲ್ಲಿ ವಿಂಗಡಣೆ ಮಾಡುವ ಇವರು ಚುನಾವಣೆಯ ಸಂದರ್ಭದಲ್ಲಿ ಎಲ್ಲರೂ ಎಲ್ಲ ಮಠಮಂದಿರ ಮಸೀದಿ ಚರ್ಚು ಎಲ್ಲವಕ್ಕೂ ಹೋಗಿ ಭಕ್ತಿಯ ಪರಾಕಾಷ್ಠೆಯನ್ನು ಮೆರೆಯುತ್ತಾರೆ.

(ಸಿಕ್ಕಿದ್ದು ಬಿಟ್ಟಿದ್ದಕ್ಕೆಲ್ಲ ಫತ್ವಾ ಹೊರಡಿಸುವ ಮುಸ್ಲಿಂ 'ಧರ್ಮಿಷ್ಠ'ರು ಚುನಾವಣೆ ವೇಳೆ ತಮ್ಮ ಕೋಮಿನ (ಜಮೀರ್ ಅಹಮದ್‌ನಂಥ) ರಾಜಕಾರಣಿ ಹಿಂದು ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸಿದರೂ ಸುಮ್ಮನಿರುತ್ತಾರೆ, ಹೋಮ ಹವನ ಮಾಡಿದರೂ ಸುಮ್ಮನಿರುತ್ತಾರೆ!)

ಈ ರಾಜಕಾರಣಿಗಳ ಚುನಾವಣಾ ಪ್ರಚಾರ ಭಾಷಣ ಅದು ಇನ್ನೊಂದು ಮಹಾನಾಟ. ಸುಳ್ಳು ಆವೇಶ, ಪೊಳ್ಳು ಭರವಸೆ ಮತ್ತು ಕಳ್ಳ ಕಣ್ಣೀರಿನ ಮೂಲಕ ಇವರದು ಅತ್ಯದ್ಭುತ ಅಭಿನಯ. ಅದನ್ನು ನಿಜವೆಂದು ನಂಬಿದ ಮುಗ್ಧ ಮತದಾರನಿಗೆ ಮಕ್ಮಲ್ ಟೋಪಿ! ತನ್ಮೂಲಕ ಮತದ ಅಪಹರಣ, ಪ್ರಜಾಪ್ರಭುತ್ವದ ಕೊಲೆ. (ಈ ಅಪಹರಣ ಸಾಲದೆಂಬಂತೆ ಮತದಾನದ ದಿನ ನಕಲಿ ಮತದಾನ ಬೇರೆ!)

ಇನ್ನು, ಇವರ ಚುನಾವಣಾ ಪ್ರಚಾರ ಭಾಷಣವನ್ನೊಂದಿಷ್ಟು ಗಮನಿಸಿ. ತಮ್ಮ ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯಾಗಲೀ ತಮ್ಮ ನಿರ್ದಿಷ್ಟ ಯೋಜನೆಗಳ ಬಗೆಗಾಗಲೀ ಈ ನೇತಾರರು ಜನರಿಗೆ ಏನಾದರೂ ಸ್ಪಷ್ಟ ಚಿತ್ರಣ ನೀಡುತ್ತಾರೆಯೇ? ಇಲ್ಲವೇ ಇಲ್ಲ. ಸ್ವರ್ಗವನ್ನೇ ನಿಮ್ಮೆದುರು ತಂದಿಕ್ಕುತ್ತೇವೆಂದು ಒಂದು ಬುರುಡೆ ಒಗಾಯಿಸಿ ಮಿಕ್ಕಂತೆ ವಿರೋಧ ಪಕ್ಷಗಳ ಜನ್ಮ ಜಾಲಾಡುವುದರಲ್ಲೇ ಸಮಯ ಕಳೆಯುತ್ತಾರೆ. ತಾನೆಂಥವನು, ತನ್ನ ಸಾಮರ್ಥ್ಯ ಎಂಥದು ಎಂಬುದನ್ನು ಮತದಾರರಿಗೆ ಮನದಟ್ಟು ಮಾಡಿಕೊಡುವ ಬದಲು ಹೈಕಮಾಂಡ್‌ನ ಗುಣಗಾನದಲ್ಲೇ ಮುಳುಗೇಳುತ್ತಾರೆ. ನಾವು ವೋಟು ಹಾಕಬೇಕಾದುದು ಈ ಅಭ್ಯರ್ಥಿಗೋ ಅಥವಾ ಸೋನಿಯಾ, ರಾಹುಲ್, ಅಡ್ವಾಣಿ, ದೇವೇಗೌಡ, ಕುಮಾರಸ್ವಾಮಿ ಇವರಲ್ಲೊಬ್ಬರಿಗೋ ಎಂದು ನಮಗೇ ಒಮ್ಮೊಮ್ಮೆ ಅನುಮಾನ ಬರುತ್ತದೆ. ಹೈಕಮಾಂಡ್ ವೀರರ ಭಾಷಣ ಇನ್ನೂ ಅಧ್ವಾನ. ಆವೇಶಭರಿತ ಕೆಸರೆರಚುವಿಕೆ ಬಿಟ್ಟು ಆ ಭಾಷಣದಲ್ಲಿ ಇನ್ನೇನೂ ಇರುವುದಿಲ್ಲ.

ತಮ್ಮ ವಿರೋಧಿಗಳನ್ನು ಜರಿಯುವ ಈ ಪುಢಾರಿಗಳ ಮಾತೆಲ್ಲ ನಿಜವೆಂದಾದರೆ ಆಗ ಎಲ್ಲ ಪಕ್ಷಗಳ ಎಲ್ಲ ರಾಜಕಾರಣಿಗಳೂ ಭ್ರಷ್ಟರು, ದುಷ್ಟರು, ವಂಚಕರು ಮತ್ತು ಜೈಲು ಸೇರಬೇಕಾದ ಅಪರಾಧಿಗಳು ಎಂದಾಯಿತು. ಆದರೆ ಜೈಲು ಸೇರಬೇಕಾದ ಇವರು ಲೋಕಸಭೆ ಮತ್ತು ವಿಧಾನಸಭೆ ಸೇರುತ್ತಾರೆ. ಇದು ಪ್ರಜಾಪ್ರಭುತ್ವದ ಅಣಕವಲ್ಲದೆ ಮತ್ತೇನು? ಪ್ರಜಾಪ್ರಭುತ್ವವೆನ್ನುವುದು ಈ ನಮ್ಮ ರಾಜಕಾರಣಿಗಳಿಗೆ ಆಟದ ವಸ್ತುವಾಗಿದೆ. ನಾಟಕದ ಡೈಲಾಗ್ ಆಗಿದೆ. ವೋಟಿನ ಸಾಧನವಾಗಿದೆ. ಸೀಟಿನ ಲೈಸೆನ್ಸ್ ಆಗಿದೆ.

ಎಂದೇ, ಚುನಾವಣೆ ಬಂತೆಂದರೆ ಸಾಕು, 'ದಾಸನ ಮಾಡಿಕೊ ಎನ್ನ, ಸ್ವಾಮಿ, ಸಾಸಿರ ನಾಮದ ಪ್ರಿಯ ಮತದಾರ', ಎಂದು ಮತದಾರನನ್ನು ಪ್ರಾರ್ಥಿಸುವ ಇವರು ಚುನಾವಣೆ ಮುಗಿದ ಬೆನ್ನಿಗೇ, 'ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ವೋಟಿನ ಬಲವೊಂದ್ ಸಿಕ್ತಲ್ಲ, ಸಾಕೋ', ಎಂದು ಮತದಾರನಿಗೆ ಬೆನ್ನುಹಾಕಿ ತಮ್ಮ ದಂತಗೋಪುರಗಳೆಡೆಗೆ ಹೊರಟುಹೋಗುತ್ತಾರೆ. ರಾಜಕಾರಣಿಗಳೇನೋ ಇಂಥವರು; ಆದರೆ ಮತದಾರ ಎಂಥವನು? ಅದು ಬೇರೆಯೇ ಕಥೆ.

<strong>ಲೇಖನದ ಮುಂದಿನ ಭಾಗ : ಮತದಾರ ಎಂಥವನು?</strong>ಲೇಖನದ ಮುಂದಿನ ಭಾಗ : ಮತದಾರ ಎಂಥವನು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X