ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಕ್ಕು ಚಲಾಯಿಸಿದ ಕನ್ನಡದ ತಾರೆಯರು

By Staff
|
Google Oneindia Kannada News

Ramesh Aravind and other film stars cast vote
ಬೆಂಗಳೂರು, ಏ. 23 : ಇಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಕನ್ನಡ ಚಿತ್ರರಂಗದ ಪ್ರಮುಖರಾದ ವಿಷ್ಣುವರ್ಧನ್ ದಂಪತಿಗಳು, ರಮೇಶ್ ಅರವಿಂದ, ಉಪೇಂದ್ರ ದಂಪತಿಗಳು, ನಟ ವಿಜಯ, ನಟಿ ರಕ್ಷಿತಾ ಸೇರಿದಂತೆ ಅನೇಕ ಹಿರಿತೆರೆ, ಕಿರುತೆರೆ ನಟ-ನಟಿಯರು ತಮ್ಮ ಮತ ಚಲಾಯಿಸಿದರು. ಆದರೆ, ನಟಿ ರಮ್ಯ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದ ಕಾರಣ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ತೀವ್ರ ಬೇಸರದಿಂದ ಹೊರನಡೆದ ಘಟನೆ ಸದಾಶಿವನಗರದಲ್ಲಿ ನಡೆಯಿತು.

ಮತ ಚಲಾಯಿಸಿದ ನಂತರ ನಟ-ನಟಿ ಹೇಳಿದ್ದೇನು

ರಮೇಶ ಅರವಿಂದ್ : ದೇಶದ ಅಭಿವೃದ್ದಿಗೆ ಎಲ್ಲರೂ ಮತ ನೀಡಬೇಕು. ಅದು ನಮ್ಮ ಹಕ್ಕು ಮತ್ತು ಕರ್ತವ್ಯ. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪ್ರಮುಖ ಹುರಿಯಾಳುಗಳು ಉತ್ತಮ ನಾಯಕರೇ ಆಗಿದ್ದಾರೆ. ಇವರಲ್ಲಿ ಯಾರಿಗೆ ಮತ ನೀಡಬೇಕು ಎನ್ನುವುದು ಗೊಂದಲ ಸಂಗತಿಯಾಗಿತ್ತು. ಈ ಎಲ್ಲದರ ನಡುವೆ ಯೋಗ್ಯ, ಅಭಿವೃದ್ಧಿ ಪರ ಇರುವ ವ್ಯಕ್ತಿಗೆ ನನ್ನ ಮತ ನೀಡಿರುವೆ ಎಂದು ನಟ ರಮೇಶ್ ಅರವಿಂದ್ ಹೇಳಿದರು.

ಉಪೇಂದ್ರ : ರಿಯಲ್ ಸ್ಟಾರ್ ಉಪೇಂದ್ರ ರಿಯಲ್ ಆಗಿ ಮಾತನಾಡಿದರು. ಚುನಾವಣೆಗಾಗಿ ಜನಸಾಮಾನ್ಯರಿಗೆ ಸೇರಬೇಕಾಗಿರುವ ಕೋಟ್ಯಂತರ ರುಪಾಯಿ ಹಣ ವೆಚ್ಚ ಮಾಡುತ್ತಿರುವುದು ಬೇಸರದ ಸಂಗತಿ. ಭಾರತವನ್ನು ಕಟ್ಟುವ ಶಕ್ತಿ ಇರುವ ಈ ಮತವನ್ನು ಚಲಾಯಿಸಬೇಕು. ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿರುವ ನಾವುಗಳು ಮತದಾನ ಮಾಡಲೇಬೇಕು. ಇದ್ದುದರಲ್ಲಿ ಉತ್ತಮರಿಗೆ ಮತ ನೀಡಿರುವೆ. ಕರ್ನಾಟಕದ ಎಲ್ಲರೂ ಕೂಡಾ ನಿಮ್ಮ ಹಕ್ಕು ತಪ್ಪದೇ ಚಲಾಯಿಸಿ ಎಂದು ಜನತೆಗೆ ಮನವಿ ಮಾಡಿಕೊಂಡರು.

ವಿಷ್ಣುವರ್ಧನ್ : ಜಯನಗರದ ನಾಲ್ಕನೇ ಹಂತದ ಮತಗಟ್ಟೆಯೊಂದರಲ್ಲಿ ಪತ್ನಿ ಭಾರತಿ ವಿಷ್ಣುವರ್ಧನ್ ಜೊತೆ ಆಗಮಿಸಿದ ಸಾಹಸಸಿಂಹ ತಮ್ಮ ಮತ ಚಲಾಯಿಸಿದರು. ಮತದಾನ ಶ್ರೇಷ್ಠ ಕೆಲಸ. ಇಂತಹ ಸುಸಮಯವನ್ನು ಯಾರೂ ಕಳೆದುಕೊಳ್ಳಬಾರದು. ನಮ್ಮನ್ನಾಳುವ ನಾಯಕರನ್ನು ಮತಗಳ ಮೂಲಕ ಆಯ್ಕೆ ಮಾಡಬೇಕು. ಅಭಿವೃದ್ಧಿ ಪರ ಹಾಗೂ ದೇಶದ ಹಿತ ಕಾಯುವ ಪಕ್ಷಕ್ಕೆ ಮತ ನೀಡಿರುವುದಾಗಿ ಹೇಳಿದರು.

ರಕ್ಷಿತಾ ಜಯನಗರದ ನಾಲ್ಕನೇ ಹಂತದಲ್ಲಿ ಮತ ಚಲಾಯಿಸಿ ಎಲ್ಲರೂ ಮತದಾನ ಮಾಡಬೇಕು ಎಂದು ಮನವಿ ಮಾಡಿಕೊಂಡರು. ಆದರೆ, ನಟಿ ರಮ್ಯ ಅವರು ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಸದಾಶಿವನಗರ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಮಾಯವಾಗಿದ್ದರಿಂದ ಬೇಸರದಿಂದ ಮನೆ ಕಡೆಗೆ ಹೆಜ್ಜೆ ಹಾಕಿದೆ ಎಂದು ರಮ್ಯ ಬೇಸರದಿಂದ ಹೇಳಿದರು.

(ದಟ್ಸ್ ಕನ್ನಡ ಸಿನಿಮಾ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X