ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವ ಉದ್ಯಮಿಗಳಲ್ಲಿ ಕನಸು ಬಿತ್ತಲಿರುವ ಎನ್ಆರ್ಎನ್

By Staff
|
Google Oneindia Kannada News

NR Narayana Murthy to start venture capital fund
ನವದೆಹಲಿ, ಏ. 18 : 28 ವರ್ಷಗಳ ಹಿಂದೆ ಕೇವಲ 10 ಸಾವಿರ ರು.ಗಳನ್ನು ತಮ್ಮ ಹೆಂಡತಿ ಸುಧಾ ಮೂರ್ತಿಯಿಂದಲೇ ಎರವಲು ಪಡೆದು ಇನ್ಫೋಸಿಸ್ ಸ್ಥಾಪಿಸಿ ಅದನ್ನು ಭಾರತದ ಎರಡನೇ ಅತೀ ದೊಡ್ಡ ಸಾಫ್ಟ್ ವೇರ್ ರಫ್ತು ಕಂಪನಿಯಾಗಿ ಪರಿವರ್ತಿಸಿದ ಎನ್ಆರ್ ನಾರಾಯಣ ಮೂರ್ತಿಯವರು ಯುವ ಉದ್ಯಮಿಗಳಲ್ಲಿ ಕನಸನ್ನು ಬಿತ್ತುವ ಕೈಂಕರ್ಯಕ್ಕೆ ಮುಂದಾಗಿದ್ದಾರೆ.

ಹತ್ತು ಸಾವಿರದಿಂದ 1.8 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯರಾಗಿರುವ ನಾರಾಯಣ ಮೂರ್ತಿಯವರು 'ಕೆರೆಯ ನೀರನು ಕೆರೆಗೆ ಚೆಲ್ಲಿ' ಎಂಬಂತೆ ಹೊಸ ವಿಚಾರಧಾರೆ ಹೊಂದಿರುವ ಕಂಪನಿಗಳಲ್ಲಿ ಹಣ ಹೂಡುವ ಸಲುವಾಗಿ ನಿಧಿಯನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ.

ಎಕಾನಾಮಿಕ್ಸ್ ಟೈಮ್ಸ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ, ಕಂಪ್ಯೂಟರ್ ಮತ್ತು ಹೈಟೆಕ್ ಉದ್ಯಮದ ಹೊರತಾಗಿಯೂ ಅನೇಕ ಉದ್ಯಮಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಪತ್ತೆಹಚ್ಚಿ ಅವುಗಳಲ್ಲಿ ತೊಡಗಿಕೊಳ್ಳಲು ಯುವಕರಿಗೆ ಉತ್ತೇಜನ ನೀಡುವ ಕಾರ್ಯ ಆಗಬೇಕು ಎಂದು ಹೇಳಿದ್ದಾರೆ. ಗ್ರಾಮೀಣ ಕ್ಷೇತ್ರವನ್ನು ಉದ್ಧಾರ ಮಾಡುವಂಥ ಯೋಜನೆಗಳಿಗೆ ಪ್ರೋತ್ಸಾಹ ನೀಡಬೇಕು ಮತ್ತು ನಗರದ ಬಡ ಯುವಕರಿಗೆ ಮಾರ್ಗದರ್ಶಿಯಾಗಿ ಸರಿಯಾದ ಉದ್ಯಮದಲ್ಲಿ ಬಂಡವಾಳ ಹೂಡುವಂತಾಗಬೇಕು ಎಂದು ತಿಳಿಸಿದ್ದಾರೆ.

ಇಂದಿನ ಯುವಪಡೆಯಲ್ಲಿ ಕನಸುಗಳಿಗೆ, ಅವುಗಳನ್ನು ಸಾಕಾರ ಮಾಡಿಕೊಳ್ಳಲು ಅಗತ್ಯವಿರುವ ಮನೋಸ್ಥೈರ್ಯವಿದೆ ಮತ್ತು ಕಾರ್ಯದಕ್ಷತೆಯನ್ನು ಸದುಪಯೋಗಪಡಿಸಿ ಉತ್ಪಾದನೆ ಹೆಚ್ಚಿಸುವ ಸಾಮರ್ಥ್ಯವಿದೆ. ಅಂಥವರಿಗೆ ಸಹಾಯಹಸ್ತ ಚಾಚಿ ಅವರನ್ನು ಯಶಸ್ವಿ ಉದ್ಯಮಿಗಳನ್ನಾಗಿ ಪರಿವರ್ತಿಸಲು ಸಿದ್ಧನಿದ್ದೇನೆ ಎಂದು ಯುವಜನತೆಯಲ್ಲಿ ಕನಸನ್ನು ಬಿತ್ತಿದ್ದಾರೆ. ಈ ಹಣಹೂಡಿಕೆ ನಿಧಿಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ.

ತಮ್ಮ ಮಕ್ಕಳಾದ ರೋಹನ್ ಮತ್ತು ಅಕ್ಷತಾ ಅವರು ಕೂಡ ಇನ್ಫೋಸಿಸ್ ಸೇರುವ ಸಾಧ್ಯತೆಯನ್ನು ಮೂರ್ತಿ ತಳ್ಳಿಹಾಕಲಿಲ್ಲ. ಅಕ್ಷತಾ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪಡೆದಿದ್ದಾರೆ. ರೋಹನ್ ಹಾರ್ವರ್ಡ್ ನಲ್ಲಿ ಪಿಎಚ್ ಡಿ ಮಾಡುತ್ತಿದ್ದಾರೆ. ಅವರಿಬ್ಬರೂ ಶೈಕ್ಷಣಿಕವಾಗಿ ಸಾಕಷ್ಟು ಸಾಧಿಸಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

ಸದ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ಸಂಕಷ್ಟಮಯ 2009ರ ಮುಗಿದ ಮೇಲೆ 2010ರ ಮಾರ್ಚ್ ನಂತರ ಭಾರತ ಆರ್ಥಿಕ ಪರಿಸ್ಥಿತಿ, ಅದರಲ್ಲೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಅಲ್ಲಿಯತನಕ ಹೊಸ ಕಂಪನಿಗಳಲ್ಲಿ ಬಂಡವಾಳ ಹೂಡುವ ನೂತನ ಯೋಜನೆಗೆ ಮೂರ್ತರೂಪ ದೊರೆಯಲಿದೆ.

ನಾರಾಯಣ ಮೂರ್ತಿಯವರಲ್ಲದೆ, ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ ಜಿ, ಮೂರ್ತಿಯವರ ಮಾಜಿ ಸಹೋದ್ಯೋಗಿ ಎನ್ಎಸ್ ರಾಘವನ್, ಸನ್ ಮೈಕ್ರೋಸಿಸ್ಟಂಸ್ ಸ್ಥಾಪಿಸಿರುವ ಭಾರತೀಯ ವಿನೋದ್ ಖೋಸ್ಲಾ ಕೂಡ ವೆಂಚರ್ ಫಂಡ್ ಸ್ಥಾಪಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X