ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ-ಚುನಾವಣೆ ನಿಷೇಧಿಸಬೇಕೆ?

By * ಬಿಜಿ ಮಹೇಶ್
|
Google Oneindia Kannada News

Election Commission of India
ಇನ್ಮುಂದೆ ಭಾರತದಲ್ಲಿ ಉಪ-ಚುನಾವಣೆಗಳನ್ನು ನಿಷೇಧಿಸಬೇಕೆ? ಈ ಪ್ರಶ್ನೆಗೆ ನಾವು, ನಮ್ಮ ಪ್ರತಿನಿಧಿಗಳು ಮತ್ತು ಚುನಾವಣಾ ಆಯೋಗ ಕೂಡಲೆ ಉತ್ತರ ಕಂಡುಕೊಳ್ಳದಿದ್ದರೆ ಪ್ರಜಾತಂತ್ರಕ್ಕೆ ಅರ್ಥವಿರುವುದಿಲ್ಲ ಮತ್ತು ಮತದಾರನ ಒಂದೊಂದು ಮತಕ್ಕೆ ಕವಡೆಕಾಸಿನ ಕಿಮ್ಮತ್ತಿರುವುದಿಲ್ಲ.

ಈ ಪ್ರಶ್ನೆ ಖಂಡಿತ ಚರ್ಚೆಯಲ್ಲಿದೆ ಮತ್ತು ಚರ್ಚೆಯಲ್ಲಿಯೇ ಇದೆ. ಭಾರತದ ಅರ್ಥವ್ಯವಸ್ಥೆ, ಸದ್ಯದ ಆರ್ಥಿಕ ಬಿಕ್ಕಟ್ಟು, ಚುನಾವಣೆಯಲ್ಲಿ ನಡೆಯುವ ಹಣ-ಹೆಂಡದ ಹೊಳೆ, ಭ್ರಷ್ಟಾಚಾರವನ್ನು ಗಮನದಲ್ಲಿಸಿರಿಕೊಂಡರೆ ಮೇಲಿನ ಪ್ರಶ್ನೆಗೆ ತಾನೇ ಉತ್ತರ ಹೊಳೆಯುತ್ತದೆ.

ಅಸಲಿಗೆ, ಉಪ-ಚುನಾವಣೆಗಳು ಯಾರಿಗೂ ಬೇಕಾಗಿರುವುದಿಲ್ಲ. ಆದರೆ, ನಡೆಸದೆ ಗತ್ಯಂತರವಿಲ್ಲ ಎಂಬ ಪರಿಸ್ಥಿತಿ ಭಾರತದಲ್ಲಿ ನಿರ್ಮಾಣವಾಗಿದೆ. ಚುನಾವಣಾ ಪ್ರಕ್ರಿಯೆ ಆಯೋಗಕ್ಕೆ ಭಾರೀ ಖರ್ಚಿನ ಬಾಬತ್ತು. ಮತದಾರ ಮತ್ತೆ ಸಾಲಲ್ಲಿ ನಿಂತು ಮತ ನೀಡುವ ಪ್ರಮೇಯ. ರಾಜಕಾರಣಿಗಳಿಗೆ ಮತ್ತೆ ಮತ್ತೆ ಮತದಾರನ ಮುಂದೆ ಕೈಯೊಡ್ಡುವ ಅಪಸವ್ಯ. ಇವಕ್ಕೆಲ್ಲ ಕೊನೆ ಹಾಡಬೇಕೆಂದರೆ ಉಪ-ಚುನಾವಣೆಗಳನ್ನು ನಿಷೇಧಿಸಲೇಬೇಕು.

ಮೊತ್ತಮೊದಲ ಮಹಾಚುನಾವಣೆಯಲ್ಲಿ ಎಲ್ಲ ಸೇರಿ ಅಂದಾಜು 10 ಕೋಟಿ ರು. ಖರ್ಚಾಗಿತ್ತು. 15ನೇ ಲೋಕಸಭೆ ಚುನಾವಣೆಯಲ್ಲಿ ಅದರ ಪ್ರಮಾಣ 10 ಸಾವಿರ ಕೋಟಿ ರು.ಗೆ ಬಂದು ತಲುಪಿದೆ. ಇದರಲ್ಲಿ ಚುನಾವಣಾ ಆಯೋಗದಿಂದ ಶೇ.15ರಷ್ಟು ಮಾತ್ರ ಖರ್ಚಾಗುತ್ತದೆ. ಉಳಿದದ್ದು, ಪ್ರಚಾರಕ್ಕೆ. ಕರ್ನಾಟಕದಲ್ಲಿ ಕಳೆದ ಡಿಸೆಂಬರಲ್ಲಿ 8 ಕ್ಷೇತ್ರಗಳಿಗೆ ನಡೆದ ಉಪ-ಚುನಾವಣೆಯಲ್ಲಿ ಒಬ್ಬೊಬ್ಬ ಅಭ್ಯರ್ಥಿಗೆ ಅಂದಾಜು 25 ಕೋಟಿ ರು. ಖರ್ಚಾಗಿದೆ ಎನ್ನಲಾಗಿದೆ.

ಉಪ-ಚುನಾವಣೆಗಳು ಏತಕ್ಕೆ ಬರುತ್ತವೆಂಬುದನ್ನು ಗಮನಿಸೋಣ. ಜನ ನೀಡಿದ ಮತಗಳ ಸಹಾಯದಿಂದ ಆಯ್ಕೆಯಾದ ಶಾಸಕ 'ಆಪರೇಷನ್ನಿಗೆ' ಒಳಗಾಗಿ ಇನ್ನಾವುದೋ ಪಕ್ಷ ಸೇರಿದರೆ ಅಲ್ಲೊಂದು ಉಪ-ಚುನಾವಣೆ. ಪ್ರತಿನಿಧಿ ಸತ್ತರೆ ಉಪ-ಚುನಾವಣೆ. ಎರಡೆರಡು ಕ್ಷೇತ್ರಗಳಲ್ಲಿ ನಿಂತು ಒಂದರಲ್ಲಿ ಗೆದ್ದು ಇನ್ನೊಂದಕ್ಕೆ ತರ್ಪಣ ಬಿಟ್ಟರೆ ಉಪ-ಚುನಾವಣೆ. ಕೆಲ ವಿಧಾನಸಭೆ ಸದಸ್ಯರೂ ಲೋಕಸಭೆ ಚುನಾವಣೆಗೆ ನಿಲ್ಲುತ್ತಾರೆ. ಅಲ್ಲಿ ಗೆದ್ದರೆ ಇದನ್ನು ತ್ಯಜಿಸಬೇಕಾಗುತ್ತದೆ, ಆಗ ಮತ್ತೊಂದು ಉಪ-ಚುನಾವಣೆ.

ಇದೆಲ್ಲದರ ಬದಲಾಗಿ, ಗೆದ್ದ ಶಾಸಕ ಪಕ್ಷಾಂತರ ಮಾಡಿದರೆ, ಆ ಕ್ಷೇತ್ರದಲ್ಲಿ ಎರಡನೆಯ ಸ್ಥಾನದಲ್ಲಿದ್ದ ಅಭ್ಯರ್ಥಿಯನ್ನು ವಿಜಯಿಶಾಲಿಯನ್ನಾಗಿಸಬೇಕು. ಕಳೆದ ಉಪ-ಚುನಾವಣೆಯನ್ನೇ ಗಮನಿಸಿದರೆ, ಒಂದು ಕ್ಷೇತ್ರದ ಹೊರತಾಗಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಉಪ-ಚುನಾವಣೆ ಉದ್ಭವಿಸಿದ್ದು 'ಆಪರೇಷನ್ ಕಮಲ'ದಿಂದಾಗಿ. ಆಗ, ಮೊದಲನೆಯವರಾಗಿ ಸೋತ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದರೆ ಉಪ-ಚುನಾವಣೆಯ ಪ್ರಮೇಯವೇ ಉದ್ಭವಿಸುತ್ತಿರಲಿಲ್ಲ. ಈ ನಿಟ್ಟಿನಲ್ಲಿ, ಪಕ್ಷಾಂತರ ಕಾಯ್ದೆಯನ್ನು ಇನ್ನಷ್ಟು ಬಿಗಿಯಾಗಿಸುವ ಅವಶ್ಯಕತೆಯಿದೆ. ಎರಡೆರಡು ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ಲಲು ಅವಕಾಶವನ್ನೂ ನೀಡಬಾರದು. ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಚಿಂತಿಸುವ ಮತ್ತು ಕಾರ್ಯಪ್ರವೃತ್ತರಾಗಬೇಕಾದ ಅಗತ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X