For Daily Alerts
ವರುಣ್ ಗಾಂಧಿಗೆ ಜೈಲಿನಲ್ಲಿ ಮನೆಯೂಟ
ಪಿಲಿಭಿತ್, ಮಾ.29: ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ವರುಣ್ ಗಾಂಧಿಗೆ ಜೈಲಿನಲ್ಲಿ ಯಾವುದೇ ವಿಐಪಿ ಸೌಲಭ್ಯಗಳನ್ನು ನೀಡಿಲ್ಲ. ಆದರೆ ಮಾರ್ಚ್ 28ರ ಶನಿವಾರ ರಾತ್ರಿ ಊಟಕ್ಕೆ ಮನೆಯೂಟವನ್ನು ಮಾಡಲು ಅನುಮತಿ ನೀಡಲಾಯಿತು.
ಈ ಕುರಿತು ಮಾಹಿತಿ ನೀಡಿದ ಬಂಧಿಖಾನೆಯ ಮೇಲ್ವಿಚಾರಕ ಮುಖೇಶ್ ಅರೋರಾ, ಭದ್ರತೆಯ ದೃಷ್ಟಿಯಿಂದ ವರುಣ್ ಗಾಂಧಿಯನ್ನು ಪ್ರತ್ಯೇಕ ಬಂಧಿಖಾನೆಯಲ್ಲಿಡಲಾಗಿದೆ. ಮನೆಯೂಟವನ್ನು ಹೊರತುಪಡಿಸಿ ಬೇರೆ ಯಾವುದೇ ವಿಶೇಷ ಸೌಲಭ್ಯಗಳನ್ನು ಅವರಿಗೆ ನೀಡುತ್ತಿಲ್ಲ ಎಂದು ತಿಳಿಸಿದರು.
ಪಿಲಿಭಿತ್ ನಲ್ಲಿ ಚುನಾವಣೆ ಪ್ರಚಾರದ ವೇಳೆ ಮುಸ್ಲಿಂರ ಕುರಿತು ವರುಣ್ ಗಾಂಧಿ ಪ್ರಚೋದನಕಾರಿ ಭಾಷಣ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯ ವರುಣ್ ರನ್ನು ಮಾರ್ಚ್ 30ರವರೆಗೂ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ಪಿಲಿಭಿತ್ ನ್ಯಾಯಾಲಯದಲ್ಲಿ ವರುಣ್ ಶರಣಾದಾಗ ಬಿಜೆಪಿ ಕಾರ್ಯಕರ್ತರು ಅರಾಜಕತೆ ಸೃಷ್ಟಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ 50ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಮುಸ್ಲಿಂರ ವಿರುದ್ಧ ವರುಣ್ ಉದ್ರೇಕಕಾರಿ ಭಾಷಣ ಮಾಡಿರುವ ಸಂಬಂಧ ಭಾರತೀಯ ಚುನಾವಣಾ ಆಯೋಗ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿರ್ಧರಿಸಿದೆ.
(ಏಜೆನ್ಸೀಸ್)
ಜನಜಾತ್ರೆ ನಡುವೆ ವರುಣ್ ನ್ಯಾಯಾಂಗ ಬಂಧನಕ್ಕೆ